ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ವಾಕ್‌ ಸ್ವಾತಂತ್ರ್ಯ: ವಿಚಾರಣೆ ಸಂವಿಧಾನ ಪೀಠಕ್ಕೆ

ಸಚಿವರಿಗೆ ವೈಯಕ್ತಿಕ ಅಭಿಪ್ರಾಯ ಮಂಡನೆ ಹಕ್ಕು ಇಲ್ಲವೇ?
Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರದ ಪ್ರತಿನಿಧಿಗಳಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕವಾಗಿ ವೈಯಕ್ತಿಕ ಅಭಿಪ್ರಾಯ ಮಂಡಿಸುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಇದೆಯೇ ಅಥವಾ ಇಲ್ಲವೇ ಎಂಬುದರ ವಿಚಾರಣೆ ಇದೀಗ ಸಂವಿಧಾನ ಪೀಠಕ್ಕೆ ವರ್ಗಾವಣೆಯಾಗಿದೆ.

ತನಿಖಾ ಹಂತದಲ್ಲಿರುವ ಅಪರಾಧ ಪ್ರಕರಣ ಹಾಗೂ ಇನ್ನಿತರ ಸೂಕ್ಷ್ಮವಿಷಯಗಳ ಬಗ್ಗೆ ಸರ್ಕಾರಿ ಅಧಿಕಾರಿಗಳು ಇಲ್ಲವೇ ಜನಪ್ರತಿನಿಧಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆಯೇ ಎಂಬ ಪ್ರಶ್ನೆಯನ್ನು ಹಿರಿಯ ವಕೀಲರಾದ ಹರೀಶ್‌ ಸಾಳ್ವೆ ಮತ್ತು ಫಾಲಿ ಎಸ್‌. ನಾರಿಮನ್‌ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ಎತ್ತಿದರು.

ಅವರ ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ, ಈ ವಿಷಯವನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ಶಿಫಾರಸು ಮಾಡಿತು. ಇದೇ ವೇಳೆ, ಹೆಚ್ಚುತ್ತಿರುವ ಸಾಮಾಜಿಕ ಜಾಲತಾಣಗಳ ದುರ್ಬಳಕೆಯ ಬಗ್ಗೆಯೂ ಪೀಠ ಕಳವಳ ವ್ಯಕ್ತಪಡಿಸಿತು.

‘ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಸುಳ್ಳು ಮಾಹಿತಿ ಮತ್ತು ಅವಾಚ್ಯ ಶಬ್ದಗಳ ನಿಂದನೆಗಳು ಅಸಹ್ಯ ಎನಿಸುವಷ್ಟು ವಿಜೃಂಭಿಸುತ್ತಿವೆ. ಸಾಮಾಜಿಕ ಜಾಲತಾಣ ನೋಡುವುದನ್ನೇ ಬಿಟ್ಟಿದ್ದೇನೆ’ ಎಂದು ನಾರಿಮನ್‌ ಹೇಳಿದರು.‘ನಾನು ಕೂಡ ಟ್ವಿಟರ್‌ ಖಾತೆ ತೆಗೆದು ಹಾಕಿದ್ದೇನೆ’ ಎಂದು ಸಾಳ್ವೆ ತಿಳಿಸಿದರು.

ಪ್ರಕರಣ ಹಿನ್ನೆಲೆ: ಉತ್ತರ ಪ್ರದೇಶದ ಬುಲಂದ್‌ಶಹರ್‌ ಬಳಿಯ ಹೆದ್ದಾರಿಯಲ್ಲಿ ಕಳೆದ ಜುಲೈನಲ್ಲಿ ತನ್ನ ಪತ್ನಿ ಮತ್ತು ಪುತ್ರಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರರಕಣವನ್ನು ದೆಹಲಿಗೆ ವರ್ಗಾಯಿಸುವಂತೆ ಕೋರಿ ನೋಯ್ಡಾ ನಿವಾಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಈ ವಿಷಯ ಚರ್ಚೆಗೆ ಬಂದಿತು.

ಈ ಅತ್ಯಾಚಾರ ಪ್ರಕರಣವನ್ನು ‘ರಾಜಕೀಯ ಸಂಚು’ ಎಂದು ಹೇಳಿದ್ದ ಉತ್ತರ ಪ್ರದೇಶದ ಅಂದಿನ ಸಚಿವ ಅಜಂ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಿರ್ದೇಶನ ನೀಡುವಂತೆಯೂ ಅರ್ಜಿದಾರರು ಕೋರಿದ್ದರು.

ಕಳೆದ ವರ್ಷ ಜುಲೈ 29ರಂದು ಹೆದ್ದಾರಿಯಲ್ಲಿ ಕಾರನ್ನು ತಡೆದ ದರೋಡೆಕೋರರ ತಂಡ ಬಂದೂಕಿನಿಂದ ಬೆದರಿಸಿ ಕಾರಿನಲ್ಲಿದ್ದ ಮಹಿಳೆ ಮತ್ತು ಆಕೆಯ ಪುತ್ರಿಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.

ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ ಅಜಂ ಖಾನ್‌ ತಮ್ಮ ಹೇಳಿಕೆಯ ಬಗ್ಗೆ ಬೇಷರತ್‌ ಕ್ಷಮೆ ಯಾಚಿಸಿದ್ದರು. ಅದನ್ನು ಸುಪ್ರೀಂ ಕೋರ್ಟ್ ಕೂಡ ಮನ್ನಿಸಿತ್ತು.

ವೈಯಕ್ತಿಕ ಅಭಿಪ್ರಾಯಕ್ಕೆ ಅವಕಾಶ ಇಲ್ಲ: ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಚಿವರು ಸರ್ಕಾರದ ಪ್ರತಿನಿಧಿಗಳು. ಹೀಗಾಗಿ ಅವರು ಸಾರ್ವಜನಿಕ ವಿಷಯಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಿಲ್ಲ. ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಸರ್ಕಾರದ ಅಭಿಪ್ರಾಯ ಅಥವಾ ನಿಲುವು ಎಂದು ಪರಿಗಣಿತವಾಗುತ್ತವೆ ಎಂದು ಸಾಳ್ವೆ ತಮ್ಮ ಅಭಿಪ್ರಾಯ ತಿಳಿಸಿದರು.

**

ವೈಯಕ್ತಿಕ ಅಭಿಪ್ರಾಯಕ್ಕೆ ಅವಕಾಶ ಇಲ್ಲ:

ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಚಿವರು ಸರ್ಕಾರದ ಪ್ರತಿನಿಧಿಗಳು. ಹೀಗಾಗಿ ಅವರು ಸಾರ್ವಜನಿಕ ವಿಷಯಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಿಲ್ಲ. ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಸರ್ಕಾರದ ಅಭಿಪ್ರಾಯ ಅಥವಾ ನಿಲುವು ಎಂದು ಪರಿಗಣಿತವಾಗುತ್ತವೆ ಎಂದು ಸಾಳ್ವೆ ತಮ್ಮ ಅಭಿಪ್ರಾಯ ತಿಳಿಸಿದರು.

*

ಸಂವಿಧಾನದತ್ತ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವು ಸಭ್ಯತೆ ಮತ್ತು ನೈತಿಕತೆಯ ಚೌಕಟ್ಟನ್ನು ಮೀರದಂತೆ ಇರಲಿ
– ದೀಪಕ್‌ ಮಿಶ್ರಾ, ಮುಖ್ಯ ನ್ಯಾಯಮೂರ್ತಿ
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT