ಮಂಗಳವಾರ, ಮೇ 17, 2022
29 °C

ಇಂಗ್ಲಿಷ್‌ ಕಾದಂಬರಿಕಾರ ಇಷಿಗುರೊಗೆ ‘ನೊಬೆಲ್‌’ ಮೆರುಗು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಇಂಗ್ಲಿಷ್‌ ಕಾದಂಬರಿಕಾರ ಇಷಿಗುರೊಗೆ ‘ನೊಬೆಲ್‌’ ಮೆರುಗು

ಸ್ಟಾಕ್‌ಹೋಮ್‌: ಬ್ರಿಟನ್‌ನ ಕಾದಂಬರಿಕಾರ ಕಜುವೊ ಇಷಿಗುರೊ (62) ಅವರಿಗೆ ಈ ಬಾರಿಯ ಸಾಹಿತ್ಯದ ನೊಬೆಲ್‌ ಪುರಸ್ಕಾರ ಘೋಷಣೆಯಾಗಿದೆ. ಅಮೆರಿಕದ ಗಾಯಕ ಮತ್ತು ಕವಿ ಬಾಬ್‌ ಡಿಲಾನ್‌ಗೆ ಕಳೆದ ವರ್ಷ ನೊಬೆಲ್‌ ಪ್ರಶಸ್ತಿ ನೀಡಿದ್ದು ವಿವಾದ ಸೃಷ್ಟಿಸಿತ್ತು. ಈ ಬಾರಿ ‘ಅತ್ಯುತ್ತಮ ಕಾದಂಬರಿಕಾರ’ನನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ನೊಬೆಲ್‌ ಪ್ರಶಸ್ತಿ ನೀಡುವ ಸ್ವೀಡಿಷ್‌ ಅಕಾಡೆಮಿ ಹೇಳಿದೆ.

ಇಷಿಗುರೊ ಹುಟ್ಟಿದ್ದು ಜಪಾನ್‌ನ ನಾಗಸಾಕಿಯಲ್ಲಾದರೆ ಬೆಳೆದದ್ದು ಬ್ರಿಟನ್‌ನಲ್ಲಿ. ಅವರ ‘ರಿಮೈನ್ಸ್‌ ಆಫ್‌ ದ ಡೇ’ ಎಂಬ ಕಾದಂಬರಿ 1989ರಲ್ಲಿ ಮ್ಯಾನ್‌ ಬೂಕರ್‌ ಪ್ರಶಸ್ತಿಗೆ ಪಾತ್ರವಾಗಿತ್ತು. ಎರಡನೇ ಮಹಾಯುದ್ಧದ ಬಳಿಕದ ಬ್ರಿಟನ್‌ನಲ್ಲಿ ಜೀವಿಸಿದ್ದ ಸೂಕ್ಷ್ಮ ಮನಸ್ಥಿತಿಯ ದಮನಕ್ಕೊಳಗಾದ ಬಾಣಸಿಗನೊಬ್ಬನ ಕತೆ ಹೇಳುವ ಈ ಕಾದಂಬರಿ ಅದೇ ಹೆಸರಿನಲ್ಲಿ ಸಿನಿಮಾ ಆಗಿತ್ತು. ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿದ್ದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿಯೂ ಭಾರಿ ಗಳಿಕೆ ದಾಖಲಿಸಿತ್ತು.

‘ಅವರೊಬ್ಬ ಅತ್ಯುತ್ತಮ ಕಾದಂಬರಿಕಾರ. ಕಾದಂಬರಿಕಾರರಾದ ಜೇನ್‌ ಆಸ್ಟಿನ್‌ ಮತ್ತು ಫ್ರಾಂಜ್‌ ಕಾಫ್ಕಾ ಅವರನ್ನು ಒಂದಾಗಿಸಿದರೆ ನಿಮಗೆ ಇಷಿಗುರೊ ಸಿಗುತ್ತಾರೆ’ ಎಂದು ಸ್ವೀಡಿಷ್‌ ಅಕಾಡೆಮಿಯ ಕಾಯಂ ಕಾರ್ಯದರ್ಶಿ ಸಾರಾ ಡೇನಿಯಸ್‌ ಹೇಳಿದ್ದಾರೆ.

‘ಜಗತ್ತಿನೊಂದಿಗಿನ ನಂಟಿನ ಬಗ್ಗೆ ಮನುಷ್ಯ ಹೊಂದಿರುವ ಭ್ರಾಮಕ ಭಾವದ ಹಿಂದಿನ ಅಗಾಧ ಆಳಕ್ಕೆ ಅವರು ಬೆಳಕು ಚೆಲ್ಲಿದ್ದಾರೆ. ಅವರ ಕಾದಂಬರಿಗಳಲ್ಲಿ ಅಪಾರವಾದ ಭಾವನಾತ್ಮಕ ಚೈತನ್ಯ ಇದೆ’ ಎಂದು ಇಷಿಗುರೊ ಅವರನ್ನು ಅಕಾಡೆಮಿ ಹೊಗಳಿದೆ.

‘ನನ್ನ ಕಾದಂಬರಿಯ ಪಾತ್ರಗಳು ತಮ್ಮ ನಡವಳಿಕೆ ಬಗ್ಗೆ ಬಳಿಕ ವಿಷಾದಿಸುತ್ತವೆ ಎಂಬುದರ ಬಗ್ಗೆ ನನಗೆ ಆಸಕ್ತಿಯಿಲ್ಲ. ಆದರೆ ಈ ವಿಷಾದವನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ನನಗೆ ಮುಖ್ಯ’ ಎಂದು ‘ದ ರಿಮೈನ್ಸ್‌ ಆಫ್‌ ದ ಡೇ’ ಕಾದಂಬರಿ ಬಿಡುಗಡೆಯಾದಾಗ ಅವರು ಹೇಳಿದ್ದರು.

ಇಷಿಗುರೊ ಅವರು ಸೂಕ್ಷ್ಮ ರಾಜಕೀಯ ಪ್ರಜ್ಞೆ ಹೊಂದಿರುವ ಲೇಖಕ. ಐರೋಪ್ಯ ಒಕ್ಕೂಟದಿಂದ ಹೊರಗೆ ಬರುವುದರ ಪರ ಬ್ರಿಟನ್‌ನ ಜನರು ಮತ ಹಾಕಿದ ಬಳಿಕ ಅಲ್ಲಿ ವಲಸಿಗರ ಬಗ್ಗೆ ಅಸಹನೆ ಹೆಚ್ಚುತ್ತಿದೆ ಎಂದು ಹೇಳಿ ಅವರು ವಿವಾದ ಸೃಷ್ಟಿಸಿದ್ದರು.

ಬರೆಯುವುದೇ ಬದುಕು

ಇಷಿಗುರೊ ಐದು ವರ್ಷದ ಬಾಲಕನಾಗಿದ್ದಾಗ ಹೆತ್ತವರು ಬ್ರಿಟನ್‌ಗೆ ವಲಸೆ ಹೋದರು. ಇಷಿಗುರೊ ಅವರು ಈಸ್ಟ್‌ ಆ್ಯಂಗ್ಲಿಯಾ ವಿಶ್ವವಿದ್ಯಾಲಯದಲ್ಲಿ ಸೃಜನಶೀಲ ಬರವಣಿಗೆಯನ್ನು ಅಭ್ಯಾಸ ಮಾಡಿದ್ದಾರೆ. 1982ರಲ್ಲಿ ಅವರ ಮೊದಲ ಕಾದಂಬರಿ ‘ಎ ಪೇಲ್‌ ವ್ಯೂ ಆಫ್‌ ದ ಹಿಲ್ಸ್‌’ ಪ್ರಕಟವಾಯಿತು. ಬಳಿಕ ಅವರು ಬರವಣಿಗೆಯನ್ನೇ ವೃತ್ತಿಯಾಗಿ ಮಾಡಿಕೊಂಡರು. ‌

10 ಲಕ್ಷಕ್ಕೂ ಹೆಚ್ಚು ಪ್ರತಿ ಮಾರಾಟ

ದ ರಿಮೈನ್ಸ್‌ ಆಫ್‌ ದ ಡೇ ಮತ್ತು ನೆವರ್‌ ಲೆಟ್‌ ಮಿ ಗೊ ಇಷಿಗುರೊ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳು. ಈ ಎರಡೂ ಕೃತಿಗಳ ಹತ್ತು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇಷಿಗುರೊ ಕವಿಯೂ ಹೌದು. ಜತೆಗೆ ಸಿನಿಮಾಗಳಿಗೆ ಚಿತ್ರಕತೆ ಬರೆದಿದ್ದಾರೆ

**

ಕಳೆದು ಹೋದ ಕಾಲವನ್ನು ಅರ್ಥ ಮಾಡಿಕೊಳ್ಳುವುದು ಇಷಿಗುರೊ ಅವರ ಆಸಕ್ತಿಯ ವಿಷಯ. ವ್ಯಕ್ತಿ ಅಥವಾ ಸಮಾಜ ತನ್ನ ಅಸ್ತಿತ್ವಕ್ಕಾಗಿ ಏನನ್ನು ಮರೆಯಬೇಕಾಗುತ್ತದೆಯೋ ಅದನ್ನು ಅವರು ಶೋಧಿಸುತ್ತಾರೆ.

–ಸಾರಾ ಡೇನಿಯಸ್‌,

ಸ್ವೀಡಿಷ್‌ ಅಕಾಡೆಮಿಯ ಕಾಯಂ ಕಾರ್ಯದರ್ಶಿ

**

ಜಗತ್ತು ಬಹಳ ಅನಿಶ್ಚಿತವಾಗಿದೆ. ಎಲ್ಲ ನೊಬೆಲ್‌ ಪ್ರಶಸ್ತಿಗಳ ಶಕ್ತಿ ಈ ಅನಿಶ್ಚಿತ ಸ್ಥಿತಿಯನ್ನು ಸಕಾರಾತ್ಮಕವಾಗಿ ಪರಿವರ್ತಿಸಲು ನೆರವಾಗಲಿ ಎಂದು ಆಶಿಸುತ್ತೇನೆ.

–ಕಜುವೊ ಇಷಿಗುರೊ

**

ಒಷಿಗುರೊ ಅವರ ಕಾದಂಬರಿಗಳು

ಎ ಪೇಲ್‌ ವ್ಯೂ ಆಫ್‌ ಹಿಲ್ಸ್‌ (1982)

ಎನ್‌ ಆರ್ಟಿಸ್ಟ್‌ ಆಫ್‌ ದಿ ಫ್ಲೋಟಿಂಗ್‌ ವರ್ಲ್ಡ್‌ (1986)

ದ ರಿಮೈನ್ಸ್‌ ಆಫ್‌ ದ ಡೇ (1989)

ದ ಅನ್‌ಕನ್ಸೋಲ್ಡ್‌ (1995)

ವೆನ್‌ ವಿ ವೆರ್‌ ಆರ್ಫನ್ಸ್‌ (2000)

ನೆವರ್‌ ಲೆಟ್‌ ಮಿ ಗೊ (2005)

ದ ಬರೀಡ್‌ ಜೈಂಟ್‌ (2015)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.