ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇ-ಹಾಸ್ಪಿಟಲ್’ಗಳಿಗೆ ಉಪಕರಣ ಖರೀದಿಯಲ್ಲಿ ಅಕ್ರಮದ ವಾಸನೆ?

ದುಪ್ಪಟ್ಟು ದರಕ್ಕೆ ಖರೀದಿ
Last Updated 5 ಅಕ್ಟೋಬರ್ 2017, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ‘ಶಿಸ್ತು ಮತ್ತು ಪಾರದರ್ಶಕತೆ’ ತರಲು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಜಾರಿಗೊಳಿಸುತ್ತಿರುವ ‘ಇ –ಹಾಸ್ಪಿಟಲ್’ ಗಳಿಗೆ ಅಗತ್ಯ ಉಪಕರಣಗಳ ಖರೀದಿ ಹಾಗೂ ಯೋಜನೆ ಅನುಷ್ಠಾನದಲ್ಲಿ ಅವ್ಯವಹಾರ  ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದರ ನೀಡಿ ಉಪಕರಣಗಳನ್ನು ಖರೀದಿಸಿರುವುದು, ಟೆಂಡರ್ ಮತ್ತು ಕಾರ್ಯಾ ದೇಶ ನೀಡುವಲ್ಲಿ ಅವಸರ ತೋರಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಸಾರ್ವತ್ರಿಕ ಆರೋಗ್ಯ ಕಾರ್ಡ್ ನೀಡುವ ಟೆಂಡರ್ ನಲ್ಲಿ ಅವ್ಯವಹಾರ ನಡೆದಿರುವುದು ಬಯಲಿಗೆ ಬಂದ ಬೆನ್ನಲ್ಲೇ, ಮತ್ತೊಂದು ಹಗರಣ ನಡೆದಿದೆ ಎನ್ನಲಾದ ದಾಖಲೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ರಾಜ್ಯದ ಎಲ್ಲ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಇ- ಹಾಸ್ಪಿಟಲ್ ಗಳನ್ನು ಆರಂಭಿಸುವ ಪೂರ್ಣ ಜವಾಬ್ದಾರಿಯನ್ನು ಬೆಂಗಳೂರಿನ ‘ವ್ಯಾಲ್ಯೂ ಪಾಯಿಂಟ್ ಸಿಸ್ಟಂ ಪ್ರೈವೇಟ್ ಲಿಮಿಟೆಡ್’ ಗೆ ಇದೇ ವರ್ಷದ ಮಾರ್ಚ್ 28ರಂದು ಆರೋಗ್ಯ ಇಲಾಖೆ ವಹಿಸಿದೆ. ₹34.35 ಕೋಟಿ ಮೊತ್ತಕ್ಕೆ ನೀಡಿದ ಕಾರ್ಯಾದೇಶದಲ್ಲಿ 67 ವಿವಿಧ ಶೀರ್ಷಿಕೆಯಡಿ ಖರ್ಚುಗಳನ್ನು ಹಂಚಿಕೆ ಮಾಡಲಾಗಿದೆ. ಮಾರುಕಟ್ಟೆ ದರದಲ್ಲಿ ಖರೀದಿಸಿ, ಯೋಜನೆ ಅನುಷ್ಠಾನ ಮಾಡಿದ್ದರೆ ಅಂದಾಜು ₹20 ಕೋಟಿಯಿಂದ ₹ 22 ಕೋಟಿ ಖರ್ಚಾಗುತ್ತಿತ್ತು. ಸರ್ಕಾರಕ್ಕೆ ಕನಿಷ್ಠ ₹10 ಕೋಟಿ ಉಳಿತಾಯವಾಗುತ್ತಿತ್ತು ಎಂದು ಈ ಕ್ಷೇತ್ರದ ತಜ್ಞರು ವಿವರಿಸುತ್ತಾರೆ.

ದುಪ್ಪಟ್ಟು ದರ: ಈಗಿನ ಕಾಲದಲ್ಲಿ  ಟ್ಯಾಬ್ಲೆಟ್‌ಗಳು ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತವೆ. ಸಗಟು ಖರೀದಿಯನ್ನು ಇನ್ನಷ್ಟು ಕಡಿಮೆ ದರದಲ್ಲಿ ಪೂರೈಕೆ ಮಾಡಲು ತಯಾರಿಕಾ ಸಂಸ್ಥೆಗಳೇ ಮುಂದೆ ಬರುತ್ತವೆ. ಹಾಗಿದ್ದರೂ, ದುಪ್ಪಟ್ಟು ದರ ನೀಡಿ ಖರೀದಿ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂಬುದು ತಜ್ಞರ ಅಭಿಪ್ರಾಯ.

ಇ-ಹಾಸ್ಪಿಟಲ್‌ಗಾಗಿ ‘ಎಸ್ಎಂ-ಟಿ 355’ ಮಾದರಿಯ 350 ಟ್ಯಾಬ್ಲೆಟ್‌ಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಇದರ ಮಾರುಕಟ್ಟೆ ದರ  ಒಂದಕ್ಕೆ ₹16,000 ಇದ್ದರೆ, ₹29,427 ದರದಲ್ಲಿ ಖರೀದಿಸಲು ಆದೇಶ ನೀಡಲಾಗಿದೆ. ಇದಕ್ಕಾಗಿ ₹ 1.02 ಕೋಟಿ ಖರ್ಚು ಮಾಡಲಿದೆ.

‘ಎಚ್ ಪಿ ಸ್ಕ್ಯಾನ್ ಜೆಟ್ ಪ್ರೊ 2500 ಎಫ್ 1’ ಮಾದರಿಯ 47 ಸ್ಕ್ಯಾನರ್ ಗಳನ್ನು ಖರೀದಿಸಲು ಕಾರ್ಯಾ ದೇಶ ನೀಡಲಾಗಿದೆ. ಇದರ ಮಾರುಕಟ್ಟೆ ದರ ಒಂದಕ್ಕೆ ₹30,000 ಇದ್ದರೆ, ಇಲಾಖೆ ₹46,000 ನೀಡಲು ಮುಂದಾಗಿದೆ. ಇದಕ್ಕಾಗಿ ₹ 21.62 ಲಕ್ಷ ವ್ಯಯವಾಗಲಿದೆ.

ಎಲ್ಲ ಇ–ಹಾಸ್ಪಿಟಲ್‌ಗಳಿಗೆ 60 ನಿಮಿಷ ಬ್ಯಾಕ್ ಅಪ್ ಇರುವ ಬ್ಯಾಟರಿ ಸಹಿತ 1,200 ಯುಪಿಎಸ್ ಪೂರೈಸಲು ಆದೇಶ ನೀಡಲಾಗಿದೆ. ‘ಟಿಪಿಎಸ್ 1000’ ಮಾದರಿಯ ಯುಪಿಎಸ್ ಮಾರುಕಟ್ಟೆ ದರ ₹26,000 ದಿಂದ ₹29,000 ಇದ್ದು, ₹59,761 ನಮೂದಿಸಿದ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. ಇದಕ್ಕಾಗಿ ₹7.17 ಕೋಟಿ ಖರ್ಚಾಗಲಿದೆ.

ಅವಸರದಲ್ಲಿ ಪ್ರಕ್ರಿಯೆ: ಇ-ಹಾಸ್ಪಿಟಲ್ ಗಳಿಗೆ ಬೇಕಾದ ಉಪಕರಣಗಳ ಪೂರೈಕೆ, ಅಳವಡಿಕೆ ಹಾಗೂ ಅನುಷ್ಠಾನ ಮಾಡಲು ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಅಂಡ್ ವೇರ್ ಹೌಸಿಂಗ್ ಸೊಸೈಟಿ 2017ರ ಫೆಬ್ರುವರಿ 14ರಂದು ಟೆಂಡರ್‌ ಕರೆದಿತ್ತು.

ರಂಧ್ರ ಕೊರೆಯಲು, ಗುಂಡಿ ತೋಡಲು ₹ 30 ಲಕ್ಷ ಇ–ಹಾಸ್ಪಿಟಲ್ ಗಳಲ್ಲಿ ಉಪಕರಣಗಳನ್ನು ಅಳವಡಿಸಲು ಗೋಡೆಗೆ ರಂಧ್ರ ಕೊರೆಯಲು, ಗಟ್ಟಿ ಮಣ್ಣನ್ನು ಅಗೆದು ಗುಂಡಿ ತೋಡಲು ವ್ಯಾಲ್ಯೂ ಪಾಯಿಂಟ್‌ ಸಂಸ್ಥೆ ಭಾರಿ ‘ಮೌಲ್ಯ’ವನ್ನೇ ನಿಗದಿ ಮಾಡಿದೆ.

1,485 ರಂಧ್ರಗಳನ್ನು ಕೊರೆಯಲು ತಲಾ ಒಂದಕ್ಕೆ ₹ 147.92 ರಂತೆ ಒಟ್ಟು ₹2.19 ಲಕ್ಷ, 12,150  ಗುಂಡಿಗಳನ್ನು ತೋಡಲು ತಲಾ ಒಂದಕ್ಕೆ ₹229.33ರಂತೆ ₹ 27.86 ಲಕ್ಷ  ನಮೂದಿಸಿದೆ. ಅದಕ್ಕೂ ಇಲಾಖೆ ಸಮ್ಮತಿ ಸೂಚಿಸಿದೆ. ಇದೇ ರೀತಿ ವಿವಿಧ ಕಾಮಗಾರಿಗಳಿಗೆ ಸಾಮಾನ್ಯ ಕೂಲಿ ಕಾರ್ಮಿಕರು ಪಡೆಯದಷ್ಟು ಮೊತ್ತವನ್ನು ಆರೋಗ್ಯ ಇಲಾಖೆ ಸಂಸ್ಥೆಗೆ ನೀಡಿರುವುದು ಸಂಶಯಕ್ಕೆ ಎಡೆ ಮಾಡಿದೆ.

ಸ್ಥಳ ಸಮೀಕ್ಷೆ, ವಿನ್ಯಾಸ ಮಾಡಲು ₹ 6.73 ಲಕ್ಷ ನೀಡಲಾಗಿದೆ.

ಏನಿದು ಇ–ಹಾಸ್ಪಿಟಲ್‌?

ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುತ್ತಿರುವ ರೋಗಿಗಳ ವಿವರ ಹಾಗೂ ಚಿಕಿತ್ಸಾ ವಿವರದ ‘ಹಳದಿ ಪುಸ್ತಕ’ದ ಬದಲು ವಿಶಿಷ್ಟ ಸಂಖ್ಯೆಯನ್ನು ನೀಡಿ, ರೋಗಿಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸಂಗ್ರಹಿಸಿಡುವ ಯೋಜನೆ ಇ–ಹಾಸ್ಪಿಟಲ್‌.

ರೋಗಿ ಆಸ್ಪತ್ರೆಗೆ ಭೇಟಿ ನೀಡುತ್ತಲೇ ಅವರಿಂದ ₹5 ಪಡೆದು, ಅವರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ಪಡೆದು ದಾಖಲೆ ಪತ್ರ ನೀಡಲಾಗುತ್ತದೆ. ರೋಗಿಯ ಪೂರ್ಣ ವಿವರ, ಚಿಕಿತ್ಸೆ, ನೀಡಿದ ಔಷಧದ ಮಾಹಿತಿಯನ್ನು ವೈದ್ಯರು ಡಿಜಿಟಲ್ ರೂಪದಲ್ಲಿ ನಮೂದು ಮಾಡುತ್ತಾರೆ. ಮತ್ತೊಮ್ಮೆ ಆಸ್ಪತ್ರೆಗೆ ಹೋದಾಗ ರೋಗಿಯು ಮೊಬೈಲ್ ಸಂಖ್ಯೆ ಅಥವಾ ಹೆಸರು ನೀಡಿದರೆ ಚಿಕಿತ್ಸೆಯ ಪೂರ್ಣ ಇತಿಹಾಸ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT