ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗುಂಡಿ ಮುಚ್ಚುವ ಕಾಮಗಾರಿ ಅವೈಜ್ಞಾನಿಕ

ಭಾರತೀಯ ರಸ್ತೆ ಕಾಂಗ್ರೆಸ್‌ನ ಮಾರ್ಗಸೂಚಿ ಪಾಲಿಸದ ಬಿಬಿಎಂಪಿ
Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆ ಗುಂಡಿಗಳನ್ನು ಮುಚ್ಚುವಾಗ ನಿಯಮಾವಳಿಗಳನ್ನು ಗಾಳಿಗೆ ತೂರಲಾಗುತ್ತಿದೆ.

ಭಾರತೀಯ ರಸ್ತೆ ಕಾಂಗ್ರೆಸ್‌ (ಐಆರ್‌ಸಿ) ರೂಪಿಸಿರುವ ಮಾರ್ಗಸೂಚಿ ಅನುಸಾರವೇ ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆಯನ್ನು ಮಾಡಬೇಕು. ಐಆರ್‌ಸಿಯ ನಿಯಮಾವಳಿಗಳನ್ನೇ ಲೋಕೋಪಯೋಗಿ ಇಲಾಖೆ ಹಾಗೂ ಬಿಬಿಎಂಪಿಯೂ ಪಾಲಿಸಬೇಕು.

ಗುಂಡಿ ಬಿದ್ದ ಜಾಗದ ಸುತ್ತಲೂ ಒಂದು ಅಡಿ ಬಿಟ್ಟು ಚೌಕಾಕಾರದಲ್ಲಿ ಓರೆಯಾಗಿ ಕತ್ತರಿಸಬೇಕು. ಅಲ್ಲಿನ ಜಲ್ಲಿ, ಡಾಂಬರು ಹಾಗೂ ಮಣ್ಣನ್ನು ತೆಗೆಯಬೇಕು. ಬಳಿಕ, ವಯರ್‌ ಬ್ರಷ್‌ನಲ್ಲಿ ಸ್ವಚ್ಛಗೊಳಿಸಬೇಕು. ಆ ಸ್ಥಳದಲ್ಲಿ ತೇವಾಂಶ ಇಲ್ಲದಂತೆ ನೋಡಿಕೊಳ್ಳಬೇಕು. ಎಮಲ್ಷನ್‌ ಸ್ಪ್ರೇ ಮಾಡಿ, ಜಲ್ಲಿ, ಡಾಂಬರು ಮಿಶ್ರಣವನ್ನು ಹಾಕಿ ಸಮತಟ್ಟು ಮಾಡಬೇಕು. ಈ ಸಂದರ್ಭದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮೂಲ ರಸ್ತೆಗೆ ಬಳಸಿದ್ದ ಡಾಂಬರಿಗಿಂತ ಗುಣಮಟ್ಟದ ಡಾಂಬರು ಬಳಸಬೇಕು.

‘ಹೊಸದಾಗಿ ರಸ್ತೆ ನಿರ್ಮಿಸುವಾಗ ಒಂದು ಅಥವಾ ಎರಡು ಪದರ ಡಾಂಬರು ಹಾಕಲಾಗುತ್ತದೆ. ಒಂದು ಪದರ ಒಂದೂವರೆ ಇಂಚು ಇರುತ್ತದೆ. ರಸ್ತೆ ಗುಂಡಿ ಬಿದ್ದಾಗ ಅದನ್ನು ವೈಜ್ಞಾನಿಕವಾಗಿ ಮುಚ್ಚಬೇಕು. ಗುಂಡಿಯ ಸುತ್ತಲೂ ದುರ್ಬಲಗೊಂಡಿರುವ ಡಾಂಬರನ್ನು ಸಂಪೂರ್ಣವಾಗಿ ತೆಗೆಯಬೇಕು. ಆದರೆ, ಗುತ್ತಿಗೆದಾರರು ಮಾರ್ಗಸೂಚಿ ಪ್ರಕಾರ ಗುಂಡಿಗಳನ್ನು ಮುಚ್ಚುತ್ತಿಲ್ಲ. ರಸ್ತೆಯನ್ನು ಕತ್ತರಿಸಿ ಡಾಂಬರು ಹಾಕುವ ದೃಶ್ಯ ಎಲ್ಲೂ ಕಂಡುಬರುವುದಿಲ್ಲ. ಆತುರಾತುರವಾಗಿ ಡಾಂಬರು ಮಿಶ್ರಣವನ್ನು ತಂದು ಗುಂಡಿ ಮುಚ್ಚುತ್ತಾರೆ’ ಎಂದು ಬಿಬಿಎಂಪಿ ಅಧಿಕಾರಿ ದೂರಿದರು.

‘ರಸ್ತೆಯಲ್ಲಿ ಈ ಹಿಂದೆ ಗುಂಡಿ ಇತ್ತು ಎಂಬುದು ಗೊತ್ತಾಗದ ಹಾಗೆ ಮುಚ್ಚಬೇಕು. ಆದರೆ, ಡಾಂಬರು ಪದರವು ಈಗಿರುವ ರಸ್ತೆಗಿಂತ ಒಂದೆರಡು ಇಂಚು ಮೇಲೆ ಇರುತ್ತದೆ. ಅದೂ ಉಬ್ಬು ತಗ್ಗುಗಳಿಂದ ಕೂಡಿರುತ್ತದೆ. ಸರಿಯಾಗಿ ಸಮತಟ್ಟು ಮಾಡುವುದಿಲ್ಲ. ಇದರ ಮೇಲೆ ನೀರು ನಿಂತರೆ ಪುನಃ ಗುಂಡಿ ಬೀಳಲಿದೆ’ ಎಂದು ಹೇಳಿದರು.

‘ರಸ್ತೆ ಹಂಪ್‌ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ಹಂಪ್‌ ಇರುವ ಕಡೆ ನೀರು ಸರಾಗವಾಗಿ ಹರಿದು ಹೋಗುವಂತೆ ವಿನ್ಯಾಸ ಮಾಡಬೇಕು. ಆದರೆ, ಬಹಳಷ್ಟು ರಸ್ತೆಗಳಲ್ಲಿ ಹಾಕಿರುವ ಹಂಪ್‌ಗಳಲ್ಲಿ ನೀರು ನಿಲ್ಲುತ್ತಿದೆ. ಇದರಿಂದ ರಸ್ತೆ ಬೇಗ ಹಾಳಾಗುತ್ತಿದೆ’ ಎಂದರು.

ಟೆಂಡರ್‌ ಶ್ಯೂರ್‌ ರಸ್ತೆ: ‘ನಗರದ ವಿವಿಧೆಡೆ ಟೆಂಡರ್‌ ಶ್ಯೂರ್‌ ರಸ್ತೆಗಳನ್ನು ನಿರ್ಮಿಸಿ 2–3 ವರ್ಷಗಳು ಕಳೆದಿವೆ. ಈ ರಸ್ತೆಗಳಲ್ಲಿ ಗುಂಡಿಗಳು ಬಿದ್ದ ಉದಾಹರಣೆ ಕಡಿಮೆ. ಈ ರಸ್ತೆಗಳಿಗೆ ಒಂದು ಪದರ ಡಾಂಬರು ಮಾತ್ರ ಹಾಕಲಾಗಿದೆ. ಗುಂಡಿ ಬೀಳದಿರಲು ಪ್ರಮುಖ ಕಾರಣವೇ ರಸ್ತೆಯ ವಿನ್ಯಾಸ. ನೀರು ನಿಲ್ಲದೇ ಇರುವುದರಿಂದ ರಸ್ತೆಗಳು ಬೇಗ ಹಾಳಾಗುವುದಿಲ್ಲ’ ಎಂದು ತಿಳಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ: ‘ಪ್ರಮುಖ ರಸ್ತೆಗಳಿಗೆ ಪ್ರತ್ಯೇಕವಾಗಿ ಮುಖ್ಯ ಎಂಜಿನಿಯರ್‌, ಸೂಪರಿಂಟೆಂಡಿಂಗ್‌ ಎಂಜಿನಿಯರ್‌, ಕಾರ್ಯಪಾಲಕ ಎಂಜಿನಿಯರ್‌ಗಳು ಇರುತ್ತಾರೆ. 198 ವಾರ್ಡ್‌ಗಳಿಗೂ ಸಹಾಯಕ ಎಂಜಿನಿಯರ್‌ಗಳು, 3–4 ವಾರ್ಡ್‌ಗಳಿಗೆ ಒಬ್ಬ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಇರುತ್ತಾರೆ. 6–7 ವಾರ್ಡ್‌ಗಳಿಗೆ ಒಬ್ಬ ಕಾರ್ಯಪಾಲಕ ಎಂಜಿನಿಯರ್‌ ಇರುತ್ತಾರೆ. ಪ್ರತಿ ವಲಯಕ್ಕೆ ಒಬ್ಬ ಮುಖ್ಯ ಎಂಜಿನಿಯರ್‌ ಇರುತ್ತಾರೆ. ಇವರು ರಸ್ತೆಗಳಿಗೆ ಸಂಬಂಧಿಸಿದಂತೆ ನಿಗಾವಹಿಸದೆ ಇರುವುದರಿಂದಲೇ ಪರಿಸ್ಥಿತಿ ಹೀಗಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪೈಥಾನ್‌ ಯಂತ್ರದಲ್ಲಿ ಸೌಲಭ್ಯ ಇಲ್ಲ: ಗುಂಡಿ ಬಿದ್ದ ಜಾಗವನ್ನು ಚೌಕಾಕಾರವಾಗಿ ಕತ್ತರಿಸಿ, ಡಾಂಬರು ಹಾಕುವ ಸೌಲಭ್ಯ ಪೈಥಾನ್‌ ಯಂತ್ರದಲ್ಲೂ ಇಲ್ಲ. ಇದು ಗುಂಡಿಯನ್ನು ಸ್ವಚ್ಛಗೊಳಿಸಿ ಅದರ ಮೇಲೆ ಡಾಂಬರು ಹಾಕುತ್ತದೆ.

‘ಚೌಕಾಕಾರವಾಗಿ ಕತ್ತರಿಸಲು ಸಮಯ ಹಿಡಿಯುತ್ತದೆ. ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ತ್ವರಿತಗತಿಯಲ್ಲಿ ಕಾಮಗಾರಿ ನಡೆಸಬೇಕಿರುತ್ತದೆ. ಹೀಗಾಗಿ, ರಸ್ತೆಯನ್ನು ಸ್ವಚ್ಛಗೊಳಿಸಿ ಡಾಂಬರು ಹಾಕಲಾಗುತ್ತಿದೆ’ ಎಂದು ಬಿಬಿಎಂಪಿ ಟ್ರಾಫಿಕ್‌ ಎಂಜಿನಿಯರಿಂಗ್‌ ಕೋಶದ ಸಹಾಯಕ ಎಂಜಿನಿಯರ್‌ ಸುಂದರೇಶ್‌ ತಿಳಿಸಿದರು.

**

ಎಮಲ್ಷನ್‌ ಬಳಕೆ ನಿಲ್ಲಿಸಿದ ಬಿಬಿಎಂಪಿ

‘ಮಳೆಗಾಲದಲ್ಲಿ ರಸ್ತೆ ಗುಂಡಿ ಮುಚ್ಚುವಾಗ ಡಾಂಬರಿನ ಮತ್ತೊಂದು ವಿಧವಾದ ಎಮಲ್ಷನ್‌ ಬಳಸಲಾಗುತ್ತಿತ್ತು. ಇದು ಸ್ವಲ್ಪ ದ್ರವರೂಪದಲ್ಲಿದ್ದು, ಜಲ್ಲಿ, ಮರಳು ಜತೆ ಸೇರಿಸಲಾಗುತ್ತದೆ. ಇದರಿಂದ ರಸ್ತೆಗೆ ಡಾಂಬರು ಚೆನ್ನಾಗಿ ಹಿಡಿದುಕೊಳ್ಳುತ್ತದೆ. ಬಿಬಿಎಂಪಿಯು ಮುಂಗಾರು ಪೂರ್ವದಲ್ಲೇ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ನಿಂದ ಎಮಲ್ಷನ್‌ ಖರೀದಿಸಿ ಪ್ರತಿ ವಲಯಕ್ಕೆ ಪೂರೈಕೆ ಮಾಡುತ್ತಿತ್ತು. ಅದನ್ನು ಜಲ್ಲಿ ಜತೆಗೆ ಮಿಶ್ರಣ ಮಾಡಿ ಗುಂಡಿ ಮುಚ್ಚಲಾಗುತ್ತಿತ್ತು. ಆದರೆ, ಮೂರು ವರ್ಷಗಳಿಂದ ಎಮಲ್ಷನ್‌ ಹಾಕುವುದನ್ನೇ ನಿಲ್ಲಿಸಲಾಗಿದೆ. ಇದರ ಬದಲಾಗಿ ಬಿಟಮಿನ್‌ ಹಾಕಲಾಗುತ್ತಿದೆ. ಮಳೆಗಾಲದಲ್ಲಿ ಬಿಟಮಿನ್‌ ಬಳಕೆ ಸರಿಯಲ್ಲ. ಇದರಿಂದ ಡಾಂಬರು ಕಿತ್ತುಬರುತ್ತದೆ’ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದರು.

‘ಗುತ್ತಿಗೆದಾರರೇ ಎಮಲ್ಷನ್‌ ಖರೀದಿಸಿ, ಬಳಕೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಇದರ ದಾಖಲೆಗಳು ಅವರ ಬಳಿ ಇಲ್ಲ’ ಎಂ‌ದರು.

**

ಗುಂಡಿ ಬಿದ್ದ ಜಾಗವನ್ನು ಚೌಕಾಕಾರವಾಗಿ ಕತ್ತರಿಸಿ, ಡಾಂಬರು ಹಾಕುವ ಸೌಲಭ್ಯ ಪೈಥಾನ್‌ ಯಂತ್ರದಲ್ಲೂ ಇಲ್ಲ. ಇದು ಗುಂಡಿಯನ್ನು ಸ್ವಚ್ಛಗೊಳಿಸಿ ಅದರ ಮೇಲೆ ಡಾಂಬರು ಹಾಕುತ್ತದೆ.

‘ಚೌಕಾಕಾರವಾಗಿ ಕತ್ತರಿಸಲು ಸಮಯ ಹಿಡಿಯುತ್ತದೆ. ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ತ್ವರಿತಗತಿಯಲ್ಲಿ ಕಾಮಗಾರಿ ನಡೆಸಬೇಕಿರುತ್ತದೆ. ಹೀಗಾಗಿ, ರಸ್ತೆಯನ್ನು ಸ್ವಚ್ಛಗೊಳಿಸಿ ಡಾಂಬರು ಹಾಕಲಾಗುತ್ತಿದೆ’ ಎಂದು ಬಿಬಿಎಂಪಿ ಟ್ರಾಫಿಕ್‌ ಎಂಜಿನಿಯರಿಂಗ್‌ ಕೋಶದ ಸಹಾಯಕ ಎಂಜಿನಿಯರ್‌ ಸುಂದರೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT