ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು, ಗುಲ್ಬರ್ಗ ವಿ.ವಿಗೆ ಮುನ್ನಡೆ

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾನಿಲಯಗಳ ಕೊಕ್ಕೊ ಟೂರ್ನಿ
Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಉಮಾದೇವಿ ತೋರಿದ ಚಾಣಾಕ್ಷ ಆಟದ ನೆರವಿನಿಂದ ಕಲಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾನಿಲಯ ತಂಡದವರು ದಕ್ಷಿಣ ಭಾರತ ಅಂತರ ವಿ.ವಿ ಮಹಿಳೆಯರ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ತಲುಪಿದರು.

ಮೈಸೂರು ವಿ.ವಿ ಆಶ್ರಯದಲ್ಲಿ ಗುರುವಾರ ನಡೆದ ಈ ಪಂದ್ಯದಲ್ಲಿ ಗುಲ್ಬರ್ಗ ವಿ.ವಿ ತಂಡದವರು 4–3 ಪಾಯಿಂಟ್‌ಗಳಿಂದ ವಿಶಾಖಪಟ್ಟಣದ ಆಂಧ್ರ ವಿ.ವಿ ತಂಡವನ್ನು ಪರಾಭವಗೊಳಿಸಿದರು.

ಈ ಪೈಪೋಟಿ ಆರಂಭದಿಂದಲೂ ಕುತೂಹಲ ಕೆರಳಿಸಿತ್ತು. 8 ನಿಮಿಷ ಆಟವಾಡಿಸಿದ ಉಮಾದೇವಿ ಅವರು ಎದುರಾಳಿ ತಂಡದ ಮೂವರು ಆಟಗಾರ್ತಿಯರನ್ನು ಔಟ್‌ ಮಾಡಿದರು.

ಮೂರನೇ ಸುತ್ತಿನ ಪಂದ್ಯದಲ್ಲಿ ಧಾರವಾಡದ ಕರ್ನಾಟಕ ವಿ.ವಿ ತಂಡದವರು ನಿರಾಸೆ ಅನುಭವಿಸಿದರು. ಮದ್ರಾಸ್‌ ವಿ.ವಿ ತಂಡದವರು 13–4 ಪಾಯಿಂಟ್‌ಗಳಿಂದ ಆಘಾತ ನೀಡಿದರು.

ಬೆಂಗಳೂರು ವಿ.ವಿ ತಂಡದವರು ಇನಿಂಗ್ಸ್‌ ಹಾಗೂ 9 ಪಾಯಿಂಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದರು. 11–2 ಪಾಯಿಂಟ್‌ಗಳಿಂದ ಕಾಕಿನಾಡಿನ ಜೆಎನ್‌ಟಿಯು ತಂಡವನ್ನು ಸೋಲಿಸಿದರು.‌ ಈ ಪಂದ್ಯ ಬಹುತೇಕ ಏಕಮುಖಿಯಾಗಿತ್ತು.‌

ಮದುರೈ ಕಾಮರಾಜ ವಿ.ವಿ ತಂಡದವರು 13–5 ಪಾಯಿಂಟ್‌ಗಳಿಂದ ಶಿವಮೊಗ್ಗದ ಕುವೆಂಪು ವಿ.ವಿ ತಂಡಕ್ಕೆ ಆಘಾತ ನೀಡಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ತಂಡದವರು 10–7 ಪಾಯಿಂಟ್‌ಗಳಿಂದ ಕಡಪದ ಯೋಗಿ ವಿ.ವಿ ಎದುರು ಗೆದ್ದು 16ರ ಘಟ್ಟ ತಲುಪಿದರು. ಈಗಾಗಲೇ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಮಂಗಳೂರು ವಿ.ವಿಗೆ ಮತ್ತೊಂದು ಗೆಲುವು ಒಲಿಯಿತು. 18–2 ಪಾಯಿಂಟ್‌ಗಳಿಂದ ರಾಜಮಂಡ್ರಿ ವಿ.ವಿ ಎದುರು ಗೆದ್ದರು.

ಎರಡನೇ ಸುತ್ತಿನ ಪಂದ್ಯಗಳಲ್ಲಿ ಆಂಧ್ರ ವಿ.ವಿ 13–10 ಪಾಯಿಂಟ್‌ಗಳಿಂದ ತುಮಕೂರು ವಿ.ವಿ ಎದುರೂ, ಸೇಲಂನ ಪೆರಿಯಾರ್‌ ವಿ.ವಿ 12–11 ಪಾಯಿಂಟ್‌ಗಳಿಂದ ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ ವಿರುದ್ಧವೂ, ಮದುರೈ ಕಾಮರಾಜ ವಿ.ವಿ 13–7 ಪಾಯಿಂಟ್‌ಗಳಿಂದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ.ವಿ ಮೇಲೂ ಗೆದ್ದವು.

ಕುವೆಂಪು ವಿ.ವಿ 16–2 ಪಾಯಿಂಟ್‌ಗಳಿಂದ ಬೆಂಗಳೂರಿನ ಕ್ರೈಸ್ಟ್‌ ವಿ.ವಿ ಎದುರೂ, ಕರ್ನಾಟಕ ವಿ.ವಿ 9–8ಪಾಯಿಂಟ್‌ಗಳಿಂದ ಅಳಗಪ್ಪ ವಿ.ವಿ ವಿರುದ್ಧವೂ, ಗುಲ್ಬರ್ಗ ವಿ.ವಿ 8–4 ಪಾಯಿಂಟ್‌ಗಳಿಂದ ವೆಲ್ಲೂರಿನ ತಿರುವಳ್ಳವರ್‌ ವಿ.ವಿ ಮೇಲೂ ಹಾಗೂ ಬೆಂಗಳೂರು ವಿ.ವಿ 14–8 ಪಾಯಿಂಟ್‌ಗಳಿಂದ ಪುದುಚೇರಿ ವಿ.ವಿ ಎದುರೂ ಗೆಲುವು ಸಾಧಿಸಿದವು.

ಪಂದ್ಯಗಳಿಗೆ ಮಳೆ ಅಡ್ಡಿ

ಮೈಸೂರು: ಕೊಕ್ಕೊ ಟೂರ್ನಿಯ ಮಧ್ಯಾಹ್ನದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿತು. ಹೀಗಾಗಿ, ನಾಲ್ಕು ಪಂದ್ಯಗಳನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಗುರುವಾರ ಮಧ್ಯಾಹ್ನ ಬಿರುಸಿನ ಮಳೆಯಾಯಿತು. ಇದರಿಂದಾಗಿ ಸ್ಪೋರ್ಟ್ಸ್‌ ಪೆವಿಲಿಯನ್‌ನ ಕೊಕ್ಕೊ ಅಂಕಣದಲ್ಲಿ ಆಡಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT