ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯುಕ್ತಾಗೆ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ

Last Updated 5 ಅಕ್ಟೋಬರ್ 2017, 19:34 IST
ಅಕ್ಷರ ಗಾತ್ರ

ಧಾರವಾಡ: ಮೊದಲ ಸೆಟ್‌ನಲ್ಲಿ ನಿರಾಸೆ ಅನುಭವಿಸಿದ ನಂತರ ತಿರುಗೇಟು ನೀಡಿದ ಬೆಂಗಳೂರಿನ ಜಿಎಂಟಿಟಿ ಅಕಾಡೆಮಿಯ ಎ. ಸಂಯುಕ್ತಾ ಇಲ್ಲಿ ನಡೆಯುತ್ತಿರುವ ರಾಜ್ಯ ರ‍್ಯಾಂಕಿಂಗ್‌ ಟೇಬಲ್‌ ಟೆನಿಸ್‌ ಟೂರ್ನಿಯ ಮಹಿಳಾ ವಿಭಾಗದಲ್ಲಿ ಋತುವಿನ ಮೊದಲ ಪ್ರಶಸ್ತಿಯ ಆಸೆ ಈಡೇರಿಸಿಕೊಂಡರು.

ಕಾಸ್ಮಸ್‌ ಕ್ಲಬ್‌ನಲ್ಲಿ ಬುಧವಾರ ಆರಂಭವಾದ ಐದು ದಿನಗಳ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕದ ಸಂಯುಕ್ತಾ 8–11, 11–7, 12–10, 11–9, 11–8ರಲ್ಲಿ ಬೆಂಗಳೂರಿನ ಬಿ. ಅಪೂರ್ವಾ ಎದುರು ಗೆದ್ದರು.

ಬೆಂಗಳೂರಿನ ಜೈನ್‌ ಕಾಲೇಜಿನಲ್ಲಿ ಬಿ.ಕಾಂ. ಓದುತ್ತಿರುವ ಸಂಯುಕ್ತಾ ಈ ಋತುವಿನಲ್ಲಿ ಪಡೆದ ಚೊಚ್ಚಲ ಪ್ರಶಸ್ತಿ ಇದು. ಒಟ್ಟು ಎಂಟು ಟೂರ್ನಿಗಳಲ್ಲಿ ಆಡಿರುವ ಅವರು ಮಹಿಳಾ ಸಿಂಗಲ್ಸ್‌ನಲ್ಲಿ ಐದು ಸಲ ರನ್ನರ್ ಅಪ್‌ ಆಗಿದ್ದಾರೆ. ಎರಡು ಸಲ ಸೆಮಿಫೈನಲ್‌ನಲ್ಲಿ ಸೋತಿದ್ದರು.

‘ಹೋದ ವರ್ಷ ಧಾರವಾಡದಲ್ಲಿ ಮಹಿಳೆಯರ ಮತ್ತು ಯೂತ್‌ ವಿಭಾಗ ದಲ್ಲಿ ಪ್ರಶಸ್ತಿ ಜಯಿಸಿದ್ದೆ. ಆದ್ದರಿಂದ ಈ ಊರು ಯಾವಾಗಲೂ ಖುಷಿ ಕೊಡು ತ್ತದೆ. ಮುಂದಿನ ವಾರ ಬೆಂಗಳೂರಿನಲ್ಲಿ ನಡೆಯಲಿರುವ ರ‍್ಯಾಂಕಿಂಗ್‌ ಟೂರ್ನಿ ಯಲ್ಲಿ ಉತ್ತಮ ಆಟವಾಡಲು ಇಲ್ಲಿ ಜಯಿಸಿದ ಪ್ರಶಸ್ತಿ ಸ್ಫೂರ್ತಿಯಾಗಿದೆ’ ಎಂದು ಸಂಯುಕ್ತಾ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು. ಸೆಮಿಫೈನಲ್‌ ಪಂದ್ಯಗಳಲ್ಲಿ ಸಂಯುಕ್ತಾ 4–2ರಲ್ಲಿ ಕೌಮುದಿ ಪಟ್ನಾಕರ್‌ ಮೇಲೂ, ಅಪೂರ್ವಾ 4–0ಯಲ್ಲಿ ಎಸ್‌. ಕಾವ್ಯಾ ವಿರುದ್ಧವೂ ಜಯಿಸಿದರು.

ಸೆಮಿಫೈನಲ್‌ಗೆ ಸಮರ್ಥ್‌: ಕಾಸ್ಮಸ್ ಕ್ಲಬ್‌ನ ಸಮರ್ಥ್‌ ಕುರಡಿಕೇರಿ ಅವರು ಪುರುಷರ ವಿಭಾಗದ ಸೆಮಿಫೈನಲ್‌ ಪ್ರವೇಶಿಸಿದರು. ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ ಸೆಣಸಾಟದಲ್ಲಿ ಅವರು 4–2ರಲ್ಲಿ ಟೂರ್ನಿಯ ಪ್ರಮುಖ ಆಟಗಾರ ನೀರಜ್‌ ರಾಜ್ ಅವರನ್ನು ಮಣಿಸಿದರು. ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಸುಷ್ಮಿತ್‌ ಬಾರಿಗಿಡದ್‌ 4–1ರಲ್ಲಿ ನಿಹಾಲ್ ನೇಸರ್‌ ಮೇಲೂ, ಸೌಮ್ಯಾದ್ರಿ ಭಟ್ಟಾಚಾರ್ಯ 4–1ರಲ್ಲಿ ರತಿನ್ ಕೊಲಾಸೆ ವಿರುದ್ಧವೂ ಗೆಲುವು ಪಡೆದರು.

ಆಘಾತ: ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿದ್ದ ಅಗ್ರ ಶ್ರೇಯಾಂಕದ ದಿನಕರ್‌ ನಾಯ್ಡು ಕ್ವಾರ್ಟರ್‌ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಚುರುಕಿನ ಹೋರಾಟ ಮತ್ತು ಮರುಹೋರಾಟಕ್ಕೆ ಸಾಕ್ಷಿಯಾದ ಪಂದ್ಯದಲ್ಲಿ ಅವರು 3–4 ಸೆಟ್‌ಗಳಿಂದ ಸುಚೇತ್‌ ಶೆಣೈ ವಿರುದ್ಧ ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT