ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ಪ್ರಮಾಣ ಶೇ 70ಕ್ಕೆ ಹೆಚ್ಚಿಸಲು ಬದ್ಧ

ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
Last Updated 5 ಅಕ್ಟೋಬರ್ 2017, 20:26 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಹಿಂದುಳಿದ ವರ್ಗದವರ ಒಟ್ಟಾರೆ ಮೀಸಲಾತಿ ಮಿತಿಯನ್ನು ಶೇ 50ರಿಂದ ಶೇ 70ಕ್ಕೆ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣ, ತಪೋವನ ಉದ್ಘಾಟನೆ ಹಾಗೂ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಗಣತಿ) ತಯಾರಿಸಲಾಗಿದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಶೀಘ್ರದಲ್ಲಿಯೇ  ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಆ ಬಳಿಕ ಪ್ರತಿ ಜಾತಿಯ ಸ್ಥಿತಿಗತಿ ತಿಳಿದು ಮೀಸಲಾತಿ ಪ್ರಮಾಣವನ್ನು ಶೇ 70ಕ್ಕೆ ಹೆಚ್ಚಿಸುವ ಮೂಲಕ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಶಿಫಾರಸು ಕಳುಹಿಸಲಾಗುವುದು ಎಂದರು.

ಪರಿಶಿಷ್ಟ ಜಾತಿ ಮತ್ತು ವರ್ಗದವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗುತ್ತಿಲ್ಲ. ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದೆ. ಆದರೆ, ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಇದೆ. ರಾಜ್ಯದಲ್ಲೂ ಅದೇ ಮಾದರಿ ಜಾರಿ ಮಾಡಲಾಗುವುದು. ಪರಿಶಿಷ್ಟ ಜಾತಿಯವರಿಗೆ ಶೇ 15ರಷ್ಟು ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 7.5ರಷ್ಟು ಮೀಸಲಾತಿ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.

‘ವಾಲ್ಮೀಕಿ ಸಮುದಾಯದ ಅನೇಕ ಬೇಡಿಕೆಗಳಿವೆ. ಅವೆಲ್ಲವುಗಳಿಗೂ ಉತ್ತರ ಕೊಡಬೇಕು ಎಂದಿದ್ದೆ. ಆದರೆ, ಮಳೆ ಅಡ್ಡಿಯಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಲ್ಲಿ ಎಲ್ಲದಕ್ಕೂ  ಉತ್ತರ ನೀಡುತ್ತೇನೆ’ ಎಂದು ಅವರು ಹೇಳಿದರು.

ಮಹರ್ಷಿ ವಾಲ್ಮೀಕಿ ಪುತ್ಥಳಿಯನ್ನು ಶಾಸಕರ ಭವನ ಮುಂಭಾಗ ನಿರ್ಮಿಸಲು ನಿರ್ಧರಿಸಿ, 2.5 ಎಕರೆ ಜಾಗವನ್ನೂ ಒದಗಿಸಲಾಯಿತು.  ಈಗ ಆ  ಜಾಗಕ್ಕೆ 'ವಾಲ್ಮೀಕಿ  ತಪೋವನ' ಎಂದು ನಾಮಕರಣ ಮಾಡಲಾಗಿದ್ದು, ವಾಲ್ಮೀಕಿ ಪ್ರತಿಮೆ ಅನಾವರಣ ಮಾಡಿರುವುದು ಸಂತಸ ತಂದಿದೆ
ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಹಿಂದೆ ವಾಲ್ಮೀಕಿ ಸಮುದಾಯದಿಂದ ಮೂರ್ನಾಲ್ಕು ಶಾಸಕರು  ಆಯ್ಕೆಯಾಗುತ್ತಿದ್ದರು. ಆ ಸಮುದಾಯಕ್ಕೆ ರಾಜಕೀಯದಲ್ಲಿ ಶೇ 7ರಷ್ಟು ಮೀಸಲಾತಿ ದೊರೆತಿರುವುದರಿಂದ ಈಗ 15ರಿಂದ 18 ಶಾಸಕರು ಬರುತ್ತಿದ್ದಾರೆ. ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರೇ ಇದಕ್ಕೆ ಕಾರಣ ಎಂದರು.

ಮಹರ್ಷಿ ವಾಲ್ಮೀಕಿ ಅಧ್ಯಯನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರಕ್ಕೆ 10 ಎಕರೆ ಜಾಗ ಮಂಜೂರು ಮಾಡಲಾಗಿದೆ. ಇಲ್ಲಿ ಭವ್ಯ ಮಂದಿರ ನಿರ್ಮಿಸುವುದರ ಜೊತೆಗೆ ಅಧ್ಯಯನ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ತಿಪ್ಪೇಸ್ವಾಮಿ ಅವರಿಗೆ ‘ಮಹರ್ಷಿ ವಾಲ್ಮೀಕಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಭವನದ ಆವರಣದಲ್ಲಿ ನಿರ್ಮಿಸಿರುವ ವಾಲ್ಮೀಕಿ ಪ್ರತಿಮೆಯನ್ನು ಅನಾವರಣ ಮಾಡಿ, ತಪೋವನ ಉದ್ಘಾಟಿಸಿದರು. ಸ್ವಾತಂತ್ರ್ಯ ಉದ್ಯಾನದಿಂದ ವಿಧಾನಸೌಧದವರೆಗೆ ಕಲಾಮೇಳಗಳ ಬೃಹತ್‌ ಮೆರವಣಿಗೆ ನಡೆಯಿತು.

ಮಳೆಯಲ್ಲಿ ಹೈರಾಣಾದ ಗ್ರಾಮೀಣ ಜನ

ಬೆಂಗಳೂರು: ಕುಳಿತುಕೊಳ್ಳಬೇಕಾಗಿದ್ದ ಕುರ್ಚಿಗಳೇ ತಲೆಗೆ ಆಸರೆಯಾಗಿದ್ದವು. ಮಳೆಯಲ್ಲಿ ನನೆಯದಂತೆ ತಪ್ಪಿಸಿಕೊಳ್ಳಲು ನಾಯಕರು ಶುಭ ಕೋರಿರುವ ಫ್ಲೆಕ್ಸ್‌ಗಳು ರಕ್ಷಣೆಯಾದವು. ದೂರದ ಊರುಗಳಿಂದ ಬಂದಿದ್ದ ವಾಲ್ಮೀಕಿ ಸಮುದಾಯದ ಜನ ಚಳಿಯಲ್ಲಿ ನಡಕಿಕೊಂಡೇ ಬಿಸಿಬೇಳೆ ಬಾತ್‌, ಮೊಸರನ್ನ ತಿನ್ನಬೇಕಾಯಿತು.

ಇದು ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಂಡ ದೃಶ್ಯಗಳು. ಪೂರ್ವ ದ್ವಾರದ ಬಳಿಯ ಬಯಲಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಜಿಲ್ಲೆಗಳಿಂದ ಬಂದಿದ್ದ ಜನರು ತೊಯ್ದು ತೊಪ್ಪೆಯಾದರು. ವಿಧಾನಸೌಧದ ಮುಂಭಾಗ ಅದ್ದೂರಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದ ನಾಯಕರಿಗೆ ಮಳೆ ನಿರಾಸೆ ಮೂಡಿಸಿತು.

ಶಾಸಕರ ಭವನದ ಆವರಣದಲ್ಲಿ ನಿರ್ಮಿಸಿರುವ ವಾಲ್ಮೀಕಿ ಪ್ರತಿಮೆ ಅನಾವರಣ ಬೆಳಿಗ್ಗೆ 10.30ಕ್ಕೆ ಮತ್ತು ವೇದಿಕೆ ಕಾರ್ಯಕ್ರಮ 11ಕ್ಕೆ ನಿಗದಿಯಾಗಿತ್ತು. ಆದರೆ, ಕಲಾ ಮೇಳಗಳ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದಾಗಿ ಕಾರ್ಯಕ್ರಮ ಆರಂಭವಾಗುವುದರೊಳಗೆ 12.30 ಆಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಆರಂಭಿಸುವ ಮೊದಲೇ ಮಳೆ ಆರಂಭವಾಯಿತು. ಜನರೆಲ್ಲ ದಿಕ್ಕಾಪಾಲಾದರು. ಮಳೆ ನಿಲ್ಲಬಹುದು ಎಂದು ಗಣ್ಯರು ಸುಮಾರು ಅರ್ಧತಾಸು ವೇದಿಕೆ ಮೇಲೆಯೇ ಕಾದು ಕುಳಿತಿದ್ದರಾದರೂ, ರಭಸ ಇನ್ನಷ್ಟು ಜೋರಾದಾಗ ವರ್ಷಧಾರೆಯ ಮಧ್ಯೆಯೇ ಸಿದ್ದರಾಮಯ್ಯ ಮಾತು ಮುಗಿಸಿದರು.

ಮಧ್ಯಾಹ್ನ 1.15ರ ಸುಮಾರಿಗೆ ಆರಂಭವಾದ ಧಾರಾಕಾರ ಮಳೆ ಸಂಜೆ 4 ರವರೆಗೂ ಮುಂದುವರಿದಿತ್ತು. ಮಳೆ ಬರುತ್ತಿದ್ದಂತೆ ಜನರು ಕುಳಿತಿದ್ದ ಕುರ್ಚಿಯನ್ನೇ ತಲೆಯ ಮೇಲೆ ಇಟ್ಟುಕೊಂಡು ರಕ್ಷಣೆ ಪಡೆದರು. ವೇದಿಕೆ ಸುತ್ತಮುತ್ತ ಇದ್ದ ಫ್ಲೆಕ್ಸ್‌
ಗಳನ್ನು ಹರಿದು ಕೊಡೆ ರೀತಿ ಬಳಸಿ ರಕ್ಷಣೆ ಪಡೆದರು. ಮಹಿಳೆಯರು, ಮಕ್ಕಳನ್ನು ಎತ್ತಿಕೊಂಡು ಬಂದವರು, ವೃದ್ಧರು ವಿಧಾನಸೌಧದ ಆವರಣದಲ್ಲಿ ಯಾವ ಕಡೆ ಹೋಗಬೇಕು ಎಂದು ಗೊತ್ತಾಗದೆ ಪರದಾಡಿದರು.

ಇಂದು ಸರ್ಕಾರಿ ರಜಾ ದಿನವಾದ್ದರಿಂದ ವಿಧಾನಸೌಧ ಪ್ರವೇಶ ದ್ವಾರಗಳಿಗೂ ಪೊಲೀಸರು ಬೀಗ ಹಾಕಿದ್ದರು. ಅತ್ತ ವಿಕಾಸಸೌಧದ ದ್ವಾರಗಳು ಮತ್ತು ವಾಹನ ನಿಲ್ಲಿಸುವ ನೆಲಹಡಿಯನ್ನೂ ಮುಚ್ಚಲಾಗಿತ್ತು. ಜನ ಕೇಳಿಕೊಂಡರೂ ಬಾಗಿಲು ತೆಗೆದು ಮಳೆಗೆ ಆಶ್ರಯ ನೀಡಲಿಲ್ಲ. ಕೆಲ ಯುವಕರು ತಂತಿ ಬೇಲಿ ದಾಟಿಕೊಂಡು ವಿಧಾನಸೌಧ ಮೊದಲ ಮಹಡಿಯ ಮೊಗಸಾಲೆಯಲ್ಲಿ ಕೆಲವೊತ್ತು ಆಶ್ರಯ ಪಡೆದರು. ಆದರೆ, ಇದು ಎಲ್ಲರಿಗೂ ಸಾಧ್ಯವಾಗಲಿಲ್ಲ. ಗುಡುಗು, ಮಿಂಚಿನ ಆರ್ಭಟಕ್ಕೆ ಗ್ರಾಮೀಣ ಜನ ಕೇಕೆ, ಸಿಳ್ಳೆ ಹಾಕಿ ಸಂಭ್ರಮಿಸಿದ್ದೂ ಕಂಡುಬಂತು.

ವಿಧಾನಸೌಧದ ಹಿಂಭಾಗ ಊಟದ ವ್ಯವಸ್ಥೆ ಮಾಡಲಾಗಿತ್ತಾದರೂ ಅಲ್ಲೆಲ್ಲಾ ಮಳೆ ನೀರು ನಿಂತು ನೆಮ್ಮದಿಯಿಂದ ಊಟ ಮಾಡುವುದಕ್ಕೂ ಸಾಧ್ಯವಾಗದಂತಿತ್ತು.

ಬಸ್ ಹುಡುಕಲೂ ಪರದಾಟ:  ಜನರನ್ನು ಕರೆತಂದಿದ್ದ ಬಸ್‌ಗಳನ್ನು ಅರಮನೆ ಆವರಣದಲ್ಲಿ ನಿಲ್ಲಿಸಲಾಗಿತ್ತು. ಬೆಳಿಗ್ಗೆ ಅಲ್ಲಿಂದ ನಡೆದುಕೊಂಡು ವಿಧಾನಸೌಧಕ್ಕೆ ಬಂದಿದ್ದ ಜನರಿಗೆ ಮಧ್ಯಾಹ್ನ ಎತ್ತಹೋಗಬೇಕು, ತಾವು ಬಂದಿರುವ ಬಸ್ ಎಲ್ಲಿದೆ ಎಂದು ಗೊತ್ತಾಗದೆ ಗೊಂದಲಕ್ಕೊಳ‌ಗಾದ  ದೃಶ್ಯ ಶಾಸಕರ ಭವನದ ಮುಂಭಾಗ ಕಂಡುಬಂತು. ಕೆಲವರು ತಲೆ ಮೇಲೆ ಕುರ್ಚಿ ಇಟ್ಟುಕೊಂಡೇ ಅರಮನೆ ಮೈದಾನದತ್ತ ಓಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT