ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯ ವಂಚಿತ ಚಿಟಗಿನಹಾಳು

Last Updated 6 ಅಕ್ಟೋಬರ್ 2017, 5:31 IST
ಅಕ್ಷರ ಗಾತ್ರ

ಕುರುಗೋಡು: ಪ್ರತಿ ಚುನಾವಣೆಯಲ್ಲೂ ಶೇ 100 ಮತದಾನ ನಡೆಯುವ ಹೆಗ್ಗಳಿಕೆಯುಳ್ಳ ಇಲ್ಲಿಗೆ ಸಮೀಪದ ಚಿಟಗಿನಹಾಳು ಗ್ರಾಮವು ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಬಳಲುತ್ತಿದೆ. ಎಚ್‌.ವೀರಾಪುರ ಪಂಚಾಯಿತಿಗೆ ಸೇರಿದ ಈ ಗ್ರಾಮದಲ್ಲಿ ಇಬ್ಬರು ಸದಸ್ಯರಿದ್ದರೂ ಸಮಸ್ಯೆಗಳು ಮುಂದುವರಿದಿವೆ.

ಕಲುಷಿತ ನೀರು ರಸ್ತೆಯಲ್ಲಿ ಸಂಗ್ರಹವಾಗಿದ್ದು, ಸ್ವಚ್ಛತೆ ನಿರ್ವಹಣೆ ಮರೀಚಿಕೆಯಾಗಿದೆ. ಗ್ರಾಮಸ್ಥರು ಸೊಳ್ಳೆ ಕಡಿತದಿಂದ ಬರುವ ಡೆಂಗಿ, ಚಿಕುನ್ ಗುನ್ಯ, ಮಲೇರಿಯಾ ರೋಗಭೀತಿಯಲ್ಲಿ ಬದುಕುತ್ತಿದ್ದಾರೆ.

ಚರಂಡಿ, ವಿದ್ಯುತ್, ಆರೋಗ್ಯ, ರಸ್ತೆ, ಗ್ರಾಮ ನೈರ್ಮಲ್ಯ, ಶಿಕ್ಷಣ ಸೌಕರ್ಯಗಳಿಂದ ವಂಚಿತವಾಗಿರುವ ಈ ಚಿಕ್ಕ ಗ್ರಾಮ ಸಮಸ್ಯೆಗಳ ಸರಮಾಲೆಯನ್ನೇ ಹೊಂದಿದೆ.
120 ಮನೆ ಹಾಗೂ 1250 ಜನಸಂಖ್ಯೆಯುಳ್ಳ ಗ್ರಾಮದಲ್ಲಿ 500 ಮತದಾರರಿದ್ದಾರೆ.

‘ಸ್ವಚ್ಛ ಗ್ರಾಮ ಯೋಜನೆಯಲ್ಲಿ ನಿರ್ಮಿಸಿರುವ ಕಾಂಕ್ರಿಟ್‌ ರಸ್ತೆಯಲ್ಲಿ ಮಳೆ ಮತ್ತು ಚರಂಡಿ ನೀರು ಹರಿಯುತ್ತಿದೆ. ಚರಂಡಿ ನಿರ್ಮಾಣ ಗ್ರಾಮದ ಮುಖ್ಯ ರಸ್ತೆಗೆ ಮಾತ್ರ ಸೀಮಿತವಾಗಿದೆ. ಗ್ರಾಮದ ಉಳಿದ ಭಾಗದಲ್ಲಿ ಚರಂಡಿ ನಿರ್ಮಿಸಿಲ್ಲ.

ಗ್ರಾಮದ ಪ್ರತಿ ಓಣಿ ರಸ್ತೆಯಲ್ಲಿ ತಗ್ಗು, ಗುಂಡಿಗಳು ತುಂಬಿವೆ. ಮಳೆಗಾಲದಲ್ಲಿ ನೀರು ಸಂಗ್ರಹವಾಗಿ ಜನ ಜಾನುವಾರು ಸಂಚರಿಸುವುದು ದೊಡ್ಡ ಸಮಸ್ಯೆಯಾಗಿದೆ’ ಎಂದು ಗ್ರಾಮದ ನಿವಾಸಿ ವೆಂಕಟೇಶ್ ತಿಳಿಸಿದರು.

‘ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳಲ್ಲಿ ಸದಾ ಗಂಜಲ, ಮಳೆ ನೀರು ಸಂಗ್ರಹವಾಗಿ ದುರ್ವಾಸನೆ ಬೀರುತ್ತಿರುತ್ತದೆ. ಜನರು ಇದೇ ದುರ್ಗಮ ರಸ್ತೆಯಲ್ಲಿ ಓಡಾಡಬೇಕು’ ಎಂದು ದೊಡ್ಡಬಸಪ್ಪ ವಿಷಾದಿಸಿದರು.

‘ಮಳೆಗಾಲದಲ್ಲಿ ಗ್ರಾಮದಲ್ಲಿ ತಲೆದೋರುವ ಸಮಸ್ಯೆಗಳ ಬಗ್ಗೆ ಪಂಚಾಯ್ತಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಕ್ರಮಕೈಗೊಳ್ಳದಿದ್ದರೆ ಹೋರಾಟದ ಹಾದಿ ಹಿಡಿಯುತ್ತೇವೆ’ ಎಂದು ದೊಡ್ಡಬಸಪ್ಪ ಹೇಳಿದರು.

‘ಸೂರ್ಯನಾರಾಯಣ ರೆಡ್ಡಿ ಶಾಸಕರಾಗಿದ್ದ ಅವಧಿಯಲ್ಲಿ ಗ್ರಾಮಕ್ಕೆ ₹ 24 ಲಕ್ಷ ವೆಚ್ಚದಲ್ಲಿ ಸ್ವಚ್ಛಗ್ರಾಮ ಯೋಜನೆ ಜಾರಿಗೊಳಿಸಲಾಗಿತ್ತು. ಯೋಜನೆ ಜಾರಿಗೊಳಿಸುವ ಮುಂಚೆ ಗ್ರಾಮ ಸ್ವಚ್ಛವಾಗಿತ್ತು. ಆದರೆ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಳ್ಳದೆ ಇನ್ನಷ್ಟು ಹದಗೆಟ್ಟಿದೆ’ ಎಂಬುದು ಗ್ರಾಮದ ಯುವಕ ನಾಗಲಿಂಗ ಅವರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT