ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ₹28 ಕೋಟಿ ಬೆಳೆ ಹಾನಿ

Last Updated 6 ಅಕ್ಟೋಬರ್ 2017, 5:41 IST
ಅಕ್ಷರ ಗಾತ್ರ

ಚಾಮರಾಜನಗರ: ಪೂರ್ವ ಮುಂಗಾರು ಮತ್ತು ಮುಂಗಾರು ಕೊರತೆಯಿಂದ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 42,208 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು, ಒಟ್ಟು ₹28.7 ಕೋಟಿ ನಷ್ಟವಾಗಿದೆ. ಕಂದಾಯ ಇಲಾಖೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ತಂಡ ಏಪ್ರಿಲ್‌ನಿಂದ ಜುಲೈ ಅಂತ್ಯದವರೆಗೆ ಉಂಟಾದ ಬೆಳೆ ನಷ್ಟದ ಅಧ್ಯಯನ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು, ಅದನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಉಂಟಾದ ಅನಾವೃಷ್ಟಿಯಿಂದ ಪೂರ್ವಮುಂಗಾರು ಬೆಳೆಗೆ ಉಂಟಾದ ಹಾನಿಯನ್ನು ಅಂದಾಜು ಮಾಡಲು ತಂಡ ರಚಿಸಲಾಗಿತ್ತು. ಜಿಲ್ಲೆಯ ನಾಲ್ಕೂ ತಾಲ್ಲೂಕುಗಳಲ್ಲಿ ಅಧ್ಯಯನ ನಡೆಸಿದ ತಂಡ, ಗ್ರಾಮ ಲೆಕ್ಕಿಗರು ಮತ್ತು ಕೃಷಿ ಸಹಾಯಕರ ನೆರವಿನಿಂದ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿತ್ತು.

ಅರ್ಧದಷ್ಟು ಬೆಳೆ ಹಾನಿ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅವಧಿಯಲ್ಲಿ ಒಟ್ಟು 1.56 ಲಕ್ಷ ಹೆಕ್ಟೇರ್‌ ಬಿತ್ತನೆಯ ಗುರಿ ಹೊಂದಲಾಗಿತ್ತು. ಈ ಪೈಕಿ 92,278 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗಿದ್ದು, ಒಟ್ಟು 52,688 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. 42,208 ಹೆಕ್ಟೇರ್‌ನಲ್ಲಿ ಶೇ 33ಕ್ಕಿಂತ ಅಧಿಕ ಬೆಳೆ ಹಾನಿಯಾಗಿದೆ.

ಬಿತ್ತನೆ ಪ್ರಮಾಣ ಹೆಚ್ಚಿರುವ ಗುಂಡ್ಲುಪೇಟೆಯಲ್ಲಿ ಹಾನಿ ಪ್ರಮಾಣವೂ ಹೆಚ್ಚು. ಕೊಳ್ಳೇಗಾಲ ತಾಲ್ಲೂಕಿನಲ್ಲಿ ನಷ್ಟದ ಪ್ರಮಾಣ ಕಡಿಮೆ. ಜಿಲ್ಲೆಯ ಸುಮಾರು 59,000 ರೈತರ ಬೆಳೆಗಳಿಗೆ ಹಾನಿಯಾಗಿದೆ.

ಜೋಳ, ಸೂರ್ಯಕಾಂತಿ ನಷ್ಟ: ಖಾರಿಫ್‌ ಅವಧಿಯಲ್ಲಿ ಜೋಳ, ಮೆಕ್ಕೆಜೋಳ, ರಾಗಿ, ಸೂರ್ಯಕಾಂತಿ, ಶೇಂಗಾ ಮತ್ತು ಹತ್ತಿ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ. ಬಿತ್ತನೆಯಾದ 92,278 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ 41,703 ಹೆಕ್ಟೇರ್‌ ಭೂಮಿಯಲ್ಲಿನ ಬೆಳೆ ಶೇ 50ಕ್ಕಿಂತ ಹೆಚ್ಚು ಹಾನಿಗೊಳಗಾಗಿದ್ದರೆ, 505 ಎಕರೆ ಪ್ರದೇಶದಲ್ಲಿ ನೀರಿಲ್ಲದೆ ಶೇ 33ಕ್ಕಿಂತ ಅಧಿಕ ಪ್ರಮಾಣದ ಬೆಳೆ ನಾಶವಾಗಿದೆ.

24,398 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಜೋಳದಲ್ಲಿ 17,134 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ಇದರಲ್ಲಿ 17,057 ಹೆಕ್ಟೇರ್‌ ಬೆಳೆ ಶೇ 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಹಾನಿಗೊಳಗಾಗಿದೆ.

8,349 ಹೆ. ಭೂಮಿಯಲ್ಲಿ ಸೂರ್ಯಕಾಂತಿ ಬೆಳೆಯಲಾಗಿದ್ದು, 6,177 ಹೆ. ಪ್ರದೇಶದ ಬೆಳೆ ಶೇ 50ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನಾಶವಾಗಿದೆ. ಹುರುಳಿ, ಉದ್ದು, ಹೆಸರು, ಅಲಸಂದೆ, ಅವರೆ, ಎಳ್ಳು, ತೊಗರಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT