ಕೆಸರು ಗದ್ದೆಯಾದ ಚೀಡಚಿಕ್ಕನಹಳ್ಳಿ ರಸ್ತೆ

ಸೋಮವಾರ, ಜೂನ್ 17, 2019
22 °C

ಕೆಸರು ಗದ್ದೆಯಾದ ಚೀಡಚಿಕ್ಕನಹಳ್ಳಿ ರಸ್ತೆ

Published:
Updated:
ಕೆಸರು ಗದ್ದೆಯಾದ ಚೀಡಚಿಕ್ಕನಹಳ್ಳಿ ರಸ್ತೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಿಂದ ಚೀಡಚಿಕ್ಕನಹಳ್ಳಿ ಮಾರ್ಗವಾಗಿ ಮೇಲೂರು ಸಂಪರ್ಕಿಸುವ ರಸ್ತೆಯು ಕಳೆದ 20 ವರ್ಷಗಳಿಂದ ಟಾರು ಕಾಣದೆ ಅಧ್ವಾನಗೊಂಡು ಹೋಗಿದೆ. ಸದ್ಯ ಸ್ವಲ್ಪ ಮಳೆ ಸುರಿದರೂ ಚೀಡಚಿಕ್ಕನಹಳ್ಳಿಯಲ್ಲಿ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತ, ಹತ್ತಾರು ಹಳ್ಳಿಗಳ ಜನರು ನೆಮ್ಮದಿ ಕೆಡಿಸುತ್ತಿದೆ.

ಚೀಡಚಿಕ್ಕನಹಳ್ಳಿ ಮಾತ್ರವಲ್ಲದೆ ಚಿಕ್ಕಕಾಡಿಗಾನಹಳ್ಳಿ, ಶ್ರೀರಾಮಪುರ, ನಕ್ಕಲು ಬಚ್ಚಳ್ಳಿ, ತಿಮ್ಮನಹಳ್ಳಿ, ತೌಡನಹಳ್ಳಿ ಗಡಿ, ಕೊಂಡೇನಹಳ್ಳಿ, ಗಂಗನಹಳ್ಳಿಯ ಸಂಪರ್ಕ ಬೆಸೆದಿರುವ ಈ ರಸ್ತೆ ಮೂಲಕ ಜನರು ಕೋಲಾರ, ವಿಜಯಪುರಕ್ಕೂ ಪ್ರಯಾಣಿಸುತ್ತಾರೆ. ಜಿಲ್ಲಾ ಕೇಂದ್ರದ ಸಮೀಪದಲ್ಲಿಯೇ ಇರುವ ರಸ್ತೆ ಹಳ್ಳ, ಕೊಳ್ಳಗಳಿಂದ ಕೆಸರು ಗದ್ದೆಯಾಗಿ ಕುಗ್ರಾಮದ ರಸ್ತೆಯನ್ನು ನಾಚಿಸುವಷ್ಟು ಹದಗೆಟ್ಟು ಹೋಗಿದೆ.

‘ಲೋಕೋಪಯೋಗಿ ಇಲಾಖೆಯಿಂದ (ಪಿಡಬ್ಲ್ಯೂಡಿ) ಚೀಡಚಿಕ್ಕನಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಈಗಾಗಲೇ ₹ 6 ಕೋಟಿ ಮಂಜೂರಾಗಿದ್ದು, ಜನಪ್ರತಿನಿಧಿಗಳು ಹೆಚ್ಚಿನ ಕಮಿಷನ್‌ಗೆ ಬೇಡಿಕೆ ಇಡುತ್ತಿದ್ದಾರೆ ಎಂಬ ಕಾರಣಕ್ಕೆ ಗುತ್ತಿಗೆದಾರರು ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ರಸ್ತೆ ಅಭಿವೃದ್ಧಿಗೆ ಸಹಕರಿಸಬೇಕಾದ ಜನಪ್ರತಿನಿಧಿಗಳೇ ಕಮಿಷನ್‌ಗಾಗಿ ಅಭಿವೃದ್ಧಿ ಕಾಮಗಾರಿಗೆ ಕಲ್ಲು ಹಾಕುತ್ತಿದ್ದಾರೆ ಎಂದು ಊರೆಲ್ಲ ಮಾತನಾಡಿಕೊಳ್ಳುತ್ತಿದೆ’ ಎಂದು ಚೀಡಚಿಕ್ಕನಹಳ್ಳಿ ನಿವಾಸಿ ಪ್ರಕಾಶ್‌ ಹೇಳಿದರು.

‘ಕಳೆದ ಚುನಾವಣೆಯಲ್ಲಿ ಶಾಸಕರಿಗೆ ಈ ಭಾಗದಿಂದ ಹೆಚ್ಚಿನ ಮತಗಳು ಸಿಕ್ಕಿಲ್ಲ ಎಂಬ ಕಾರಣಕ್ಕೆ ಈ ಭಾಗಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ತೋಟಗಳಿಗೆ ಸಾಗಬೇಕು. ಮಕ್ಕಳನ್ನು ಮನೆಯಿಂದ ಹೊರಗೆ ಬಿಡದ ಸ್ಥಿತಿ ನಿರ್ಮಾಣವಾಗಿದೆ. ನಿಂತ ನೀರಿನಲ್ಲಿ ಸೊಳ್ಳೆ ಕಾಟ ಮಿತಿಮೀರಿದೆ. ಅರಣ್ಯ ಪ್ರದೇಶದ ನೀರೆಲ್ಲಾ ಊರಿಗೆ ನುಗ್ಗಿ, ಮನೆಗಳ ತುಂಬಾ ನೀರು ನಿಲ್ಲುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜಕಾರಣಿಗಳು ಬೇಕಾದರೆ ರಾಜಕೀಯ ಮಾಡಿಕೊಳ್ಳಲಿ. ಆದರೆ ನಮಗೆ ನಮ್ಮ ಊರಿನ ರಸ್ತೆ ಅಭಿವೃದ್ಧಿಯಾಗುವುದು ಮುಖ್ಯ. ಈ ಭಾಗದ ಜನರು ಪ್ರತಿಯೊಂದಕ್ಕೂ ಚಿಕ್ಕಬಳ್ಳಾಪುರ ಅವಲಂಬಿಸಿದ್ದಾರೆ. ಆದರೆ ರಸ್ತೆ ಮಾತ್ರ ದಿನೇ ದಿನೇ ಸಂಚರಿಸಲಾಗದಷ್ಟು ಹದಗೆಡುತ್ತಿದೆ. ಶಾಸಕರು ಇನ್ನು ಯಾವ ಮುಖ ಇಟ್ಟುಕೊಂಡು ಈ ಭಾಗದ ಕಡೆ ಬರುತ್ತಾರೋ ಕಾಯ್ದು ನೋಡುತ್ತಿದ್ದೇವೆ’ ಎಂದು ಹೇಳಿದರು.

‘ಇದೇ ರಸ್ತೆಯಲ್ಲಿ ನಿತ್ಯ ಚಿಕ್ಕಬಳ್ಳಾಪುರಕ್ಕೆ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಮಾರುಕಟ್ಟೆಗೆ ರೈತರು ಸೇರಿದಂತೆ ನೂರಾರು ಜನರು ಪ್ರಯಾಣಿಸುತ್ತಾರೆ. ರಸ್ತೆ ಟಾರು ಕಾಣದೆ 20 ವರ್ಷಗಳಾದರೂ ಯಾರೊಬ್ಬರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೊಸದಾಗಿ ಮೋರಿ ಹಾಕಿಸುತ್ತೇವೆ ಎಂದು ಇದ್ದ ಚರಂಡಿಗಳನ್ನು ಕಿತ್ತಾಕಿ, ಹೊಂದವರೂ ಈವರೆಗೆ ವಾಪಸ್‌ ಬಂದಿಲ್ಲ. ಬಾಯಲ್ಲೇ ಅಭಿವೃದ್ಧಿ ಮಾಡಲು ಹೊರಟಿರುವ ಶಾಸಕರು ಮೊದಲು ಈ ರಸ್ತೆ ಅಭಿವೃದ್ಧಿ ಮಾಡಲಿ’ ಎಂದು ಚೀಡಚಿಕ್ಕನಹಳ್ಳಿ ನಿವಾಸಿ ಚಂದ್ರಮ್ಮ ಆಕ್ರೋಶ ವ್ಯಕ್ತಪಡಿಸಿದರು.

‘ರಸ್ತೆ ಅಭಿವೃದ್ಧಿಯಾದರೆ ಗ್ರಾಮೀಣ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದರೆ ಇವತ್ತು ಜನಪ್ರತಿನಿಧಿಗಳು ಮತದಾರರ ಅನುಕೂಲಕ್ಕಿಂತ ತಮ್ಮ ಅನುಕೂಲಕ್ಕೆ ಹೆಚ್ಚು ಆದ್ಯತೆ ನೀಡುತ್ತ, ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸುತ್ತಿದ್ದಾರೆ. ಅದಕ್ಕೆ ಈ ರಸ್ತೆಯೇ ತಾಜಾ ಉದಾಹರಣೆ’ ಎಂದು ತಿಳಿಸಿದರು.

ಗುರುವಾರ ‘ಪ್ರಜಾವಾಣಿ’ಯೊಂದಿಗೆ ಅಳಲುತೋಡಿಕೊಳ್ಳುತ್ತಿದ್ದ ಚೀಡಚಿಕ್ಕನಹಳ್ಳಿ ಗ್ರಾಮಸ್ಥರು ಸ್ಥಳದಲ್ಲಿಯೇ ಇದ್ದ ಚೀಡಚಿಕ್ಕನಹಳ್ಳಿಗ್ರಾಮ ಪಂಚಾಯಿತಿ ಸದಸ್ಯೆ ರತ್ಮಮ್ಮ ಅವರನ್ನು, ‘ರಸ್ತೆ ಯಾವಾಗ ಅಭಿವೃದ್ಧಿ ಮಾಡಿಸುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು. ಈ ವೇಳೆ ರತ್ನಮ್ಮ, ‘ರಸ್ತೆ ಎಲ್ಲರ ಆಸ್ತಿ. ಅದು ಎಲ್ಲರಿಗೂ ಬೇಕು. ಮುಂದಿನ ದಿನಗಳಲ್ಲಿ ಶಾಸಕರು ರಸ್ತೆ ಅಭಿವೃದ್ಧಿ ಮಾಡಿಸಲಿದ್ದಾರೆ’ ಎಂದು ಹೇಳಿ ಹೊರಟರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry