ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈನಿಕ ಹುಳುಗಳ ನಿಯಂತ್ರಿಸಲು ಮುಂದಾಗಿ

Last Updated 6 ಅಕ್ಟೋಬರ್ 2017, 5:52 IST
ಅಕ್ಷರ ಗಾತ್ರ

ಗೌರಿಬಿದನೂರು: ‘ಮುಸುಕಿನ ಜೋಳ, ರಾಗಿ ಬೆಳೆಗಳಿಗೆ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿದ್ದು, ರೈತರು ಈ ಹುಳುಗಳ ನಿಯಂತ್ರಣಕ್ಕೆ ವಿಷ ಪಾಷಾಣ ಸಿಂಪಡಿಸಬೇಕು’ ಎಂದು ಕೃಷಿ ಇಲಾಖೆ ಉಪ ನಿರ್ದೇಶಕಿ ಅನುರೂಪ್‌ ಹೇಳಿದರು.

ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿ ಹನುಮಂತಪುರ ಗ್ರಾಮದಲ್ಲಿ ಸೈನಿಕ ಹುಳುಗಳ ಕಾಟಕ್ಕೆ ತುತ್ತಾದ ರೈತ ವೆಂಕಟೇಶ್ ಗೌಡ ಅವರ ಮುಸುಕಿನ ಜೋಳದ ಬೆಳೆಯನ್ನು ವೀಕ್ಷಿಸಿದ ಅವರು ರೈತರಿಗೆ ಸಲಹೆ ನೀಡಿದರು.

‘ತಾಲ್ಲೂಕಿನ ಹೊಸೂರು ಹೋಬಳಿ ಬೊಮ್ಮಶೆಟ್ಟಿಹಳ್ಳಿ, ಮರಳೂರು,ರಮಾಪುರ, ಜಾಲಹಳ್ಳಿ ಗ್ರಾಮಗಳ ರೈತರು ಬೆಳೆದಿರುವ ಮುಸುಕಿನ ಜೋಳದ ಹೊಲಗಳಿಗೆ ಹಾಗೂ ರಾಗಿ ಬೆಳೆಗಳಿಗೆ ಈ ಸೈನಿಕ ಹುಳುಗಳ ಕಾಟ ಹೆಚ್ಚಾಗಿ ಕಂಡುಬಂದಿದೆ. ಈ ಹುಳುಗಳು ಹಗಲಿನಲ್ಲಿ ಜೋಳದ ದಂಟಿನ ಗರಿಗಳ ಮಧ್ಯ ಸೇರಿಕೊಂಡು ರಾತ್ರಿ ಸಮಯದಲ್ಲಿ ಗರಿಗಳನ್ನು ತಿನ್ನುತ್ತವೆ. ಕೆಲ ಹೊಲಗಳಲ್ಲಿ ಮುಸುಕಿನ ಜೋಳದ ಗರಿಗಳನ್ನು ಪೂರ್ತಿ ತಿಂದು ದಂಟುಗಳಷ್ಟೇ ಗಿಡದಲ್ಲಿ ಉಳಿದಿವೆ. ಈ ಹುಳುಗಳು ಒಂದು ರಾತ್ರಿಗೆ ಒಂದು ಎಕರೆಯಷ್ಟು ಜೋಳದ ಗರಿಗಳನ್ನು ತಿಂದುಬಿಡುತ್ತವೆ’ ಎಂದರು.

ಕೃಷಿ ವಿಜ್ಞಾನ ಮಂಜುನಾಥ್ ಮಾತನಾಡಿ, ‘ಮುಸುಕಿನ ಜೋಳ ಇಲ್ಲವೇ ರಾಗಿ ಬೆಳೆಗೆ ಸೈನಿಕ ಹುಳುಗಳ ಕಾಟ ಹೆಚ್ಚಾಗಿ ಕಂಡುಬರುತ್ತಿದ್ದು, ಒಂದು ಲೀಟರ್ ನೀರಿಗೆ ಒಂದು ಎಂಎಲ್ ಪ್ರೋನೋಪಾಸ್ ಔಷಧಿ ಬೆರೆಸಿ ಎರಡು ಮೂರು ಅಡಿಗಳಷ್ಟು ಎತ್ತರವಿರುವ ಬೆಳೆಗಳಿಗೆ ಸಿಂಪಡಿಸಬೇಕು. ಬೆಳೆ ಎತ್ತರಕ್ಕೆ ಬೆಳೆದು ಔಷಧಿ ಸಿಂಪಡಿಸಲು ಸಾಧ್ಯವಿಲ್ಲ ಎನ್ನುವುದಾದರೆ ವಿಷ ಪಾಷಾಣ ತಯಾರಿಸಿಕೊಂಡು ಬಳಸಬೇಕು’ ಎಂದು ತಿಳಿಸಿದರು.

ಮಂಚೇನಹಳ್ಳಿ ಹೋಬಳಿ ವರವಣ, ಹನುಮಂತಪುರ ಗ್ರಾಮಗಳ ಕೆಲ ರೈತರ ಬೆಳೆಗಳಿಗೆ ಸೈನಿಕ ಹುಳುಗಳ ಕಾಟ ಹೆಚ್ಚಾಗಿದೆ, ರೈತರು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಪರಿಹಾರ ಹಾಗೂ ಹತೋಟಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದರು.

ಪಾಷಾಣ ತಯಾರಿಸುವ ವಿಧಾನ: 15 ಕೆ.ಜಿ.ಅಕ್ಕಿ ತೌಡಿಗೆ 2 ಕೆ.ಜಿ. ಬೆಲ್ಲವನ್ನು 5 ಲೀಟರ್ ನೀರಿನಲ್ಲಿ ಬೆರೆಸಿ ಒಂದು ದಿನ ನೆನೆಸಿ ಮಾರನೇ ದಿನ ಪ್ರೋನೋಪಾಸ್ ಮಿಶ್ರಣ ಮಾಡಿ ಹೊಲದ ಸುತ್ತಲು ಸಿಂಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT