ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಘಟ್ಟ ಯೋಜನೆ ಮಂಜೂರಾಗುವವರೆಗೂ ಹೋರಾಟ

Last Updated 6 ಅಕ್ಟೋಬರ್ 2017, 6:33 IST
ಅಕ್ಷರ ಗಾತ್ರ

ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೇಬೀಡು, ಮಾದಿಹಳ್ಳಿ ಮತ್ತು ಜಾವಗಲ್‌ ಹೋಬಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವಂತೆ ಇಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಕಾವೇರಿ ಮತ್ತು ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಬಂದು ಮಾತುಕತೆ ನಡೆಸಿದರು.

ಸ್ವಾಮೀಜಿಯವರೊಂದಿಗೆ ನಡೆಸಿದ ಮಾತುಕತೆ ವಿಫಲವಾದ ಕಾರಣ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಪುಷ್ಪಗಿರಿಯ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಉಪವಾಸ ಸತ್ಯಾಗ್ರಹವನ್ನು 2ನೇ ದಿನವೂ ಮುಂದುವರಿಸಿದರು. ಐವರು ಸ್ವಾಮೀಜಿಗಳು ಮಾತ್ರ ಪ್ರತಿಭಟನೆಯಲ್ಲಿ ಇದ್ದರು.

ಸರ್ಕಾರದ ಪ್ರತಿನಿಧಿಗಳಾಗಿ ಪ್ರತಿಭಟನಾ ಸ್ಥಳಕ್ಕೆ ಬಂದ ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್‌, ‘ಎತ್ತಿನಹೊಳೆ ಯೋಜನೆ ಹಾದು ಹೋಗುವ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸಬೇಕೆಂಬುದು ಮೂಲ ಯೋಜನೆಯಲ್ಲಿಯೇ ಸೇರ್ಪಡೆಯಾಗಿದೆ. ಬೇಲೂರು ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಪ್ರಸ್ತಾಪ ಯೋಜನೆಯಲ್ಲಿಲ್ಲ. ಜಾವಗಲ್‌ ಹೋಬಳಿಯ ಆರು ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ.

ಬೇಲೂರು ತಾಲ್ಲೂಕಿನ 39 ಕೆರೆಗಳಿಗೆ ನೀರು ಹರಿಸುವ ಸಂಬಂಧ ಮೂರು ತಿಂಗಳಲ್ಲಿ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. 1 ವರ್ಷದಲ್ಲಿ ಎತ್ತಿನಹೊಳೆಯಿಂದ ನೀರು ಮೇಲೆತ್ತುವ ಕಾಮಗಾರಿ ಆರಂಭವಾಗಲಿದೆ. ಆ ವೇಳೆ ಮೊದಲ ಹಂತವಾಗಿ ಬೇಲೂರು ತಾಲ್ಲೂಕಿನ ಅರೇಹಳ್ಳಿ, ಬಿಕ್ಕೋಡು, ಹಳೇಬೀಡು, ಮಾದಿಹಳ್ಳಿಗೆ ಕುಡಿಯುವ ನೀರು ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‌, ‘ಯಗಚಿ ಜಲಾಶಯದಿಂದ ಹಳೇಬೀಡು–ಮಾದಿಹಳ್ಳಿ ಹೋಬಳಿಗೆ ನೀರು ಹರಿಸುವ ಕಾಮಗಾರಿಗೆ ಅರಣ್ಯ ಭೂಮಿ ಸಮಸ್ಯೆ ಸೇರಿದಂತೆ ಇತರ ಅಡ್ಡಿಗಳು ಬಗೆಹರಿದಿವೆ. ಬಲನಾಲೆ ನಿರ್ಮಾಣ ಮತ್ತು ಲೈನಿಂಗ್‌ ಕಾಮಗಾರಿಗೆ ಸರ್ಕಾರ ₹ 11.50 ಕೋಟಿ ಹಣ ಬಿಡುಗಡೆ ಮಾಡಿದೆ. ಎರಡು ತಿಂಗಳಲ್ಲಿ ನಾಲೆ ತೋಡುವ ಕಾಮಗಾರಿ ಪೂರ್ಣಗೊಳಿಸಲಾಗುವುದು. ನಂತರ ಲೈನಿಂಗ್‌ ಕಾಮಗಾರಿ ಮಾಡಿ 4 ತಿಂಗಳೊಳಗೆ ನೀರು ಹರಿಸಲಾಗುವುದು. ಸ್ವಾಮೀಜಿ ಅವರ ಅಭಿಪ್ರಾಯದಂತೆ ನಾಲೆ ಬದಲು ಪೈಪ್‌ ಲೈನ್‌ ಮೂಲಕ ನೀರು ಹರಿಸಲು ತಕ್ಷಣವೇ ಸರ್ವೆ ಕಾರ್ಯ ನಡೆಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು.

ದೂರವಾಣಿ ಕರೆ: ಇದೇ ಸಂದರ್ಭದಲ್ಲಿ ಪುಷ್ಪಗಿರಿ ಸ್ವಾಮೀಜಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ ಜಲಸಂಪನ್ಮೂಲ ಇಲಾಖೆ ಸಚಿವ ಎಂ.ಬಿ.ಪಾಟೀಲ್ ತಾವು ಹೊರ ರಾಜ್ಯದ ಪ್ರವಾಸದಲ್ಲಿರುವುದರಿಂದ ಪ್ರತಿಭಟನಾ ಸ್ಥಳಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಪ್ರತಿನಿಧಿಗಳನ್ನಾಗಿ ಎರಡೂ ನಿಗಮಗಳ ಎಂ.ಡಿ. ಗಳನ್ನು ಕಳುಹಿಸಲಾಗಿದೆ. ಯಾವ ರೀತಿಯಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕೆಂಬ ಪ್ರಸ್ತಾವ ಸಲ್ಲಿಸಿದರೆ, ಅದಕ್ಕೆ ಮಂಜೂರಾತಿ ನೀಡಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ಎಂ.ಡಿ.ಗಳಿಬ್ಬರ ಭೇಟಿ ಮತ್ತು ಸಚಿವರ ಭರವಸೆಯ ಕಾರಣ ಪ್ರತಿಭಟನೆ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಇತರ ಸ್ವಾಮೀಜಿಗಳು ಹಾಗೂ ರೈತ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಯಿತು. ಕೊನೆಗೆ ಪ್ರತಿಭಟನಾಕಾರರು ರಣಘಟ್ಟ ಯೋಜನೆಗೆ ಮಂಜೂರಾತಿ ದೊರಕುವವರೆಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು.

ಗುರುವಾರ ನಡೆದ ಪ್ರತಿಭಟನೆಯಲ್ಲಿ ಕೋಳಗುಂದ ಕೇದಿಗೆ ಮಠದ ಜಯಚಂದ್ರಶೇಖರ ಸ್ವಾಮೀಜಿ, ಮನಗುಂಡಿ ಶಿವಪುರ ಮಠದ ಬಸವಾನಂದ ಸ್ವಾಮೀಜಿ, ಶಿವಪುರ ಮಠದ ಸಿದ್ದರಾಮ ಸ್ವಾಮೀಜಿ, ವಿರಕ್ತಮಠದ ಪ್ರಭು ಚನ್ನಬಸವಾನಂದ ಸ್ವಾಮೀಜಿ, ಜಿ.ಪಂ. ಸದಸ್ಯ ಎಚ್‌.ಎಂ.ಮಂಜಪ್ಪ, ರೈತ ಸಂಘದ ಮುಖಂಡರಾದ ಕೆ.ಪಿ.ಕುಮಾರ್‌, ಸ್ವಾಮಿಗೌಡ, ಭೋಗಮಲ್ಲೇಶ್‌, ವಿಶ್ವನಾಥ್‌, ಮುಖಂಡರಾದ ಕೆ.ಎಸ್‌.ಲಿಂಗೇಶ್‌, ಗ್ರಾನೈಟ್‌ ರಾಜಶೇಖರ್‌, ಎಚ್‌.ಎಂ.ದಯಾನಂದ್‌ ಇದ್ದರು.

ಬಿಜೆಪಿ ಬೆಂಬಲ: ಸ್ವಾಮೀಜಿಗಳು ಮತ್ತು ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಮುಖಂಡರು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಶಾಸಕರಾದ ಬಸವರಾಜ್‌ ಬೊಮ್ಮಾಯಿ, ಸಿ.ಟಿ.ರವಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್‌, ತಾಲ್ಲೂಕು ಘಟಕ ಅಧ್ಯಕ್ಷ ಕೊರಟಿಕೆರೆ ಪ್ರಕಾಶ್‌ ಮುಖಂಡರಾದ ಹುಲ್ಲಹಳ್ಳಿ ಸುರೇಶ್‌, ರೇಣುಕುಮಾರ್‌, ಅಮಿತ್‌ ಶೆಟ್ಟಿ, ಎ.ಎಸ್‌.ಬಸವರಾಜು, ಇ.ಎಚ್‌.ಲಕ್ಷ್ಮಣ್‌ ಧರಣಿಯಲ್ಲಿ ಭಾಗವಹಿಸಿ ನೀರಾವರಿ ಹೋರಾಟಕ್ಕೆ ಬೆಂಬಲ ಘೋಷಿಸಿದರು.

ಸಾಲುಮರದ ತಿಮ್ಮಕ್ಕ ಸಾಥ್‌: ಸ್ವಾಮೀಜಿಗಳು ಮತ್ತು ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಾಲುಮರದ ತಿಮ್ಮಕ್ಕ ಮತ್ತು ಅವರ ಸಾಕುಪುತ್ರ ಬಳ್ಳೂರು ಉಮೇಶ್‌ ಸಾಥ್‌ ನೀಡಿದ್ದರು. ‘ನೀರಾವರಿ ವಿಚಾರದಲ್ಲಿ ಬೇಲೂರು ತಾಲ್ಲೂಕಿಗೆ ತೀವ್ರ ಅನ್ಯಾಯ ಆಗಿದೆ. ಅದನ್ನು ಸರಿಪಡಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT