ನೀರಾವರಿ ಯೋಜನೆಗೆ ವಿರೋಧವಿಲ್ಲ

ಭಾನುವಾರ, ಮೇ 26, 2019
28 °C

ನೀರಾವರಿ ಯೋಜನೆಗೆ ವಿರೋಧವಿಲ್ಲ

Published:
Updated:
ನೀರಾವರಿ ಯೋಜನೆಗೆ ವಿರೋಧವಿಲ್ಲ

ಹಾಸನ: ಜಿಲ್ಲೆಯಲ್ಲಿ ನೀರಾವರಿ ಯೋಜನೆ ಹಿನ್ನಡೆಗೆ ಕಾಂಗ್ರೆಸ್‌ ಮತ್ತು ಬಿಜೆಪಿಯೇ ಕಾರಣ ಎಂದು ಆರೋಪಿಸಿರುವ ಶಾಸಕ ಎಚ್‌.ಡಿ.ರೇವಣ್ಣ, ಜನಪರ ಯೋಜನೆಗಳಿಗೆ ಜೆಡಿಎಸ್‌ ವಿರೋಧ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದರು.

ಬೇಲೂರು ವಿಧಾನಸಭಾ ಕ್ಷೇತ್ರದ ಹಳೇಬೀಡು, ಮಾದಿಹಳ್ಳಿ ಮತ್ತು ಜಾವಗಲ್‌ ಹೋಬಳಿಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಮಠಾಧೀಶರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ನಮ್ಮ ಬೆಂಬಲ ಇದ್ದು, ಅ. 6ರಿಂದ ಜೆಡಿಎಸ್‌ ಮುಖಂಡರು ಭಾಗವಹಿಸಲಿದ್ದಾರೆ. 14 ವರ್ಷ ಬಿಜೆಪಿ ಮತ್ತು ಕಾಂಗ್ರೆಸ್‌ನವರೇ ಜಲಸಂಪನ್ಮೂಲ ಸಚಿವರಾಗಿದ್ದರು. ಯೋಜನೆಗೆ ಅನುಷ್ಠಾನಕ್ಕೆ ರಾಷ್ಟ್ರೀಯ ಪಕ್ಷಗಳ ನಾಯಕರು ಗಮನ ಹರಿಸಲಿಲ್ಲ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ಯಗಚಿ ಅಣೆಕಟ್ಟು ನಿರ್ಮಾಣಕ್ಕೆ ದೇವೇಗೌಡರು ಬರಬೇಕಾಯಿತು. 1986 ರಲ್ಲಿ ಕೆಲಸ ಆರಂಭಗೊಂಡು, ನಂತರ ಸ್ಥಗಿತಗೊಂಡಿತು. ಮತ್ತೆ ರೈತನ ಮಗ ಮುಖ್ಯಮಂತ್ರಿಯಾದಾಗಲೇ ಕೆಲಸ ಆರಂಭವಾಗಿದ್ದು ಎಂಬುದನ್ನು ಮರೆಯಬಾರದು. ಜಲಾಶಯದ ನೀರನ್ನು ಹಾಸನ, ಬೇಲೂರಿಗೆ ಬಳಸಲಾಗುತ್ತಿದೆ. ಹೊಳೆನರಸೀಪುರಕ್ಕೆ ನೀರು ಬರುತ್ತಿಲ್ಲ.

ಒಂದು ವೇಳೆ ನೀರು ಬಂದರೆ ನಿಲ್ಲಿಸಲಿ. ಅದಕ್ಕೆ ತಗುಲುವ ವೆಚ್ಚವನ್ನು ನೀಡುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೇಳಿಕೆ ನೀಡುವ ಮುನ್ನ, ಯಾರ ಅವಧಿಯಲ್ಲಿ ಹಳೇಬೀಡು, ಮಾದಿಹಳ್ಳಿಗೆ ಏತ ನೀರಾವರಿ ಆಗುವುದಿಲ್ಲ ಎಂದು ಬರೆಯಲಾಗಿತ್ತು ಎಂಬುದನ್ನು ಕಡತ ತೆಗೆಸಿ ನೋಡಲಿ. ನೀರಿನ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಸಚಿವರಿಗೆ ತಿರುಗೇಟು ನೀಡಿದರು.

ಶ್ರೀರಾಮದೇವರ ನಾಲೆಯಲ್ಲಿ ನೀರು ಇಲ್ಲದೆ ಮೂರು ವರ್ಷಗಳಿಂದ ಬೆಳೆ ಬೆಳೆದಿಲ್ಲ. ಕಳೆದ ವರ್ಷ 23 ಟಿಎಂಸಿ ನೀರನ್ನು ಹೇಮಾವತಿಯಿಂದ ಬಿಟ್ಟು, ಜಿಲ್ಲೆಯ ಜನರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದರು. ಈ ವರ್ಷ ಎ.ಟಿ.ರಾಮಸ್ವಾಮಿ ಅರಕಲಗೂಡಿನಲ್ಲಿ ಧರಣಿ ನಡೆಸದಿದ್ದರೆ ಕೆರೆ, ಕಟ್ಟೆಗಳಿಗೆ ನೀರು ಬಿಡುತ್ತಿರಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರಕ್ಕೆ ಕೇಂದ್ರವೂ ಅನುದಾನ ನೀಡಬೇಕು ಎಂಬ ಕಾನೂನು ತಂದರು ಎಂದು ವಿವರಿಸಿದರು.

‘ಮತಕ್ಕಾಗಿ ಏನು ಬೇಕಾದರೂ ಮಾತನಾಡಬಹುದು ಅಂದುಕೊಂಡಿದ್ದರೆ ತಪ್ಪು. ಅಧಿಕಾರ ಇದೆ ಅಂದುಕೊಂಡು ಮಜಾ ಮಾಡಬೇಡಿ. ಜನರ ಕಲ್ಯಾಣಕ್ಕೆ ಉಪಯೋಗಿಸಿ’ ಎಂದು ಸಚಿವ ಮಂಜುಗೆ ಸಲಹೆ ನೀಡಿದರು.

ಚನ್ನಪಟ್ಟಣ ಕೆರೆ ಜಾಗದಲ್ಲಿ ರೈಲ್ವೆ ನಿಲ್ದಾಣಕ್ಕೆ ₹ 50 ಕೋಟಿ ಮಂಜೂರಾಗಿತ್ತು. ಆಗ ಕೆಲವರು ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಅವಧಿಯಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಯಿತು. ಅಲ್ಲಿ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಹಿತಿ ದಿ.ದೇ.ಜವರೇಗೌಡರ ಸಲಹೆ ಮೇರೆಗೆ ಜಿಲ್ಲೆಯಲ್ಲಿ ಐಐಟಿ ಸ್ಥಾಪನೆಗೆ 1 ಸಾವಿರ ಎಕರೆ ಮೀಸಲಿಡಲಾಯಿತು. ಈ ಸಂಬಂಧ ದೇವೇಗೌಡರು ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಪ್ರಧಾನಿ ಮೋದಿ ಅವರು ಧಾರವಾಡ ಮತ್ತು ರಾಯಚೂರಿಗೆ ಮಂಜೂರು ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಮಂಜು ಅವರು ಪ್ರಸ್ತಾವ ಸಲ್ಲಿಸಲಿಲ್ಲ ಎಂದರು. ಗೋಷ್ಠಿಯಲ್ಲಿ ಎಚ್‌ಡಿಸಿಸಿ ಅಧ್ಯಕ್ಷ ಸತೀಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry