ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗಾಲದ ಬಳಿಕ ಭಾರಿ ಮಳೆ: ಹಾನಿ

Last Updated 6 ಅಕ್ಟೋಬರ್ 2017, 6:39 IST
ಅಕ್ಷರ ಗಾತ್ರ

ಹಾವೇರಿ: ಕಳೆದ ಮೂರು ವರ್ಷಗಳಿಂದ ಈ ಆಗಸ್ಟ್‌ ಆರಂಭದ ತನಕ ತೀವ್ರ ಬರಕ್ಕೆ ತುತ್ತಾಗಿದ್ದ ಜಿಲ್ಲೆಯಲ್ಲಿ ಈಗ ಮಳೆಯ ಅಬ್ಬರ. ಸೆಪ್ಟೆಂಬರ್ ತಿಂಗಳಲ್ಲೇ 189.79 ಮಿ.ಮೀ. ಮಳೆ ಸುರಿದಿದ್ದು, ವಾಡಿಕೆಯ ಶೇ 190.88 ಮಳೆಯಾಗಿದೆ.

ಈ ವರ್ಷದ ಮಳೆಗೆ 8,975 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. 298 ಮನೆಗಳು ಭಾಗಶಃ ಕುಸಿತಗೊಂಡಿವೆ. ಸಿಡಿಲು, ಮಳೆಯ ಕಾರಣದಿಂದ 7 ಮಂದಿ ಮೃತಪಟ್ಟರೆ, 8 ಜಾನುವಾರುಗಳು ಸತ್ತಿವೆ. ಜಿಲ್ಲಾಡಳಿತವು ಈ ತನಕ ₹6.58 ಕೋಟಿ ನಷ್ಟ ಅಂದಾಜಿಸಿದೆ.

ಮಳೆ ಕೊರತೆ: ಜಿಲ್ಲೆಯಲ್ಲಿ ಮುಂಗಾರು ಪೂರ್ವದ ಮೇ ಅಂತ್ಯದ ತನಕ ವಾಡಿಕೆಯ 126.29 ಮಿ.ಮೀ. ಪೈಕಿ ಕೇವಲ 97.63 ಮಿ.ಮೀ. ಮಾತ್ರ ಮಳೆಯಾಗಿತ್ತು. ಶೇ 77.3 ಮಳೆಯಾಗಿದ್ದು, ರೈತರು ಮುಂಗಾರು ನಿರೀಕ್ಷೆಯಲ್ಲಿದ್ದರು.ಆದರೆ, ಮುಂಗಾರು ಆರಂಭದ ಜೂನ್‌ ತಿಂಗಳಲ್ಲೇ ಬರದ ತೀವ್ರತೆ ಹೆಚ್ಚಿತ್ತು. ಜೂನ್‌ ನಲ್ಲಿ 114.86 ಮಿ.ಮೀ ಪೈಕಿ 47.5 ಮಿ.ಮೀ. ಮಳೆಯಾಗಿದೆ. ಕೇವಲ ಶೇ 41.3 ಮಳೆಯು ಆತಂಕ ಹೆಚ್ಚಿಸಿತ್ತು. ಜುಲೈ ವಾಡಿಕೆಯ 170 ಮಿ.ಮೀ. ಮಳೆಯ ಪೈಕಿ ಶೇ 73.34 ಮಾತ್ರ ಮಳೆ ಸುರಿದಿತ್ತು. ಆಗಸ್ಟ್‌ನಲ್ಲಿ ವಾಡಿಕೆಯ 111,29 ಮಿ.ಮೀ. ಪೈಕಿ ಶೇ 67.54 ಮಾತ್ರ ಮಳೆಯಾಗಿತ್ತು.

ಜಿಲ್ಲಾಡಳಿತವು 4 ಗ್ರಾಮಗಳಿಗೆ ಟ್ಯಾಂಕರ್ ನೀರು, ಬಾಡಿಗೆ ಕೊಳವೆ ಬಾವಿ, ಕೊಳವೆಬಾವಿಯಿಂದ ಬಹುಗ್ರಾಮ ಯೋಜನೆಗಳಿಗೆ ಕುಡಿಯುಲು ನೀರು ಪೂರೈಸುವ ಸ್ಥಿತಿ ಬಂದಿತ್ತು.

ಬರ ನೀಗಿಸಿದ ವರುಣ: ಆದರೆ, ಸೆಪ್ಟೆಂಬರ್‌ ನಲ್ಲಿ ಶೇ 190.88 ಮಳೆಯಾಗಿದ್ದು, ಕೆರೆ ಕಟ್ಟೆಗಳು ತುಂಬಿ ಕೊಳ್ಳಲು ಆರಂಭಿಸಿವೆ. ಹಲವೆಡೆ ಬತ್ತಿದ ಕೊಳವೆ ಬಾವಿಗಳು ಪುನಶ್ಚೇತನಗೊಂಡಿವೆ. ಗುತ್ತಲ ಮತ್ತಿತರೆಡೆಗಳಲ್ಲಿ ಕೊಳವೆಬಾವಿ ಮೇಲ್ಮಟ್ಟ ತನಕ ನೀರು ಬಂದಿದೆ.

ಮುಂಗಾರು ಆರಂಭದಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಮಳೆಯಾದ ಕಾರಣ ಜಿಲ್ಲೆಯ ತುಂಗಭದ್ರಾ ಮತ್ತು ವರದಾ ನದಿಯಲ್ಲಿ ನೀರಿನ ಹರಿವು ಶುರುವಾಗಿತ್ತು. ಆದರೆ, ಧರ್ಮಾ ಮತ್ತು ಕುಮುದ್ವತಿಯಲ್ಲಿ ಹರಿವು ಇರಲಿಲ್ಲ. ಜಿಲ್ಲೆಯ ಕೆರೆಗಳಿಗೆ ಬಿಡುತ್ತಿದ್ದ ತುಂಗಾಮೇಲ್ದಂಡೆ ಯೋಜನೆಯ ನೀರನ್ನೇ ಕುಮುದ್ವತಿ ನೀರಿನ ಹೊಂಡಗಳಿಗೆ ಹಾಯಿಸಿದ ರೈತರು, ಹೊಲಕ್ಕೆ ಬಳಸಿಕೊಂಡಿದ್ದರು. ಆದರೆ, ಸೆಪ್ಟೆಂಬರ್ ಮಳೆಯು ಎಲ್ಲ ನದಿಗಳಲ್ಲಿ ನೀರು ಹರಿಯುವಂತೆ ಮಾಡಿದೆ. ಹಳ್ಳ ಕೊಳ್ಳಗಳಲ್ಲೂ ತಕ್ಕಮಟ್ಟಿಗೆ ನೀರು ತುಂಬಿಕೊಂಡಿದೆ. ‘ವರುಣನ ಕರುಣೆ ಹಾಗೂಮೋಡ ಬಿತ್ತನೆಯ ಕಾರಣ ಮಳೆ ಸುರಿದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಮತ್ತಿತರರು ಪ್ರತಿಕ್ರಿಯಿಸಿದ್ದರು.

ಅನಾವೃಷ್ಟಿ– ಅತಿವೃಷ್ಟಿ: ಆಗಸ್ಟ್‌ ತನಕ ಅನಾವೃಷ್ಟಿ ಕಾಡಿದ್ದರೆ, ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ಅತಿವೃಷ್ಟಿಯಾಗಿದೆ. ಇತರ ಜಿಲ್ಲೆಗಳಂತೆ ಭಾರಿ ಹಾನಿ ಸಂಭವಿಸದಿದ್ದರೂ, ಬತ್ತಿ ಹೋಗಿದ್ದ ಭೂಮಿ ತಂಪಾಗಿದೆ. ಆದರೆ, ಒಂದೆಡೆ ಮಳೆ ರಭಸಕ್ಕೆ ಬೆಳೆಹಾನಿಯಾಗಿದೆ. ಇನ್ನೊಂದೆಡೆ ಲದ್ದಿ ಹುಳು ಕಾಟ ಹೆಚ್ಚಾಗಿ ರೈತರು ಮತ್ತೆ ಸಮಸ್ಯೆಗೆ ಸಿಲುಕಿದ್ದಾರೆ.

‘ಮಳೆ ಸಕಾಲಕ್ಕೆ ಸುರಿದರೆ ಮಾತ್ರ ಉತ್ತಮ ಬೆಳೆ ಸಾಧ್ಯ. ಆದರೆ, ಜಿಲ್ಲೆಯಲ್ಲಿ ಮುಂಗಾರು ಆರಂಭದಲ್ಲಿ ಉತ್ತಮ ಮಳೆ ಬರಲಿಲ್ಲ. ಅಂತ್ಯದಲ್ಲಿ ಅತಿಯಾಗಿ ಸುರಿಯಿತು. ಹೀಗಾಗಿ ಈ ಬಾರಿ ನಮಗೆ ನಷ್ಟವೇ ಹೆಚ್ಚು’ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ. ‘ಪರಿಸರ ಸಂರಕ್ಷಣೆ ಮೂಲಕ ಸಸ್ಯ ಸಂಕುಲ ಹೆಚ್ಚಳದಿಂದ ಮಾತ್ರ ಸಮತೋಲನ ಕಾಯಬಹುದು ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT