ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿದ ಗುತ್ತಲದ ದೊಡ್ಡಕೆರೆ

Last Updated 6 ಅಕ್ಟೋಬರ್ 2017, 6:43 IST
ಅಕ್ಷರ ಗಾತ್ರ

ಗುತ್ತಲ: ಪಟ್ಟಣದ ಐತಿಹಾಸಿಕ ದೊಡ್ಡ ಕೆರೆಗೆ ಕಳೆದೆರಡು ತಿಂಗಳಿಂದ ತುಂಗಾ ಮೇಲ್ದಂಡೆ ಕಾಲುವೆ ನೀರು ಹರಿಸಲಾಗುತ್ತಿದ್ದು, 25 ವರ್ಷಗಳ ಬಳಿಕ ಕೋಡಿ ಬಿದ್ದಿದೆ. ಇದೇ 10 ರಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಪಂಚಾಯತ್‌ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್‌ ಬಾಗಿನ ಅರ್ಪಿಸಲಿದ್ದಾರೆ.

ಕೆರೆ ಸಂಪೂರ್ಣ ಭರ್ತಿಯಾಗಿದ್ದು, ಈ ಭಾಗದಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಿ ಸುಮಾರು 600ಕ್ಕೂ ಹೆಚ್ಚು ಕೊಳವೆಬಾವಿಗಳು ಪುನಃಶ್ಚೇತನಗೊಂಡಿವೆ. ಇದರಿಂದ ರೈತರು, ಕುರಿಗಾಹಿಗಳು, ಹೈನುಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ಮೂರು ವರ್ಷಗಳಿಂದ ಸತತ ಬರ ಕಾಡಿದ ಪರಿಣಾಮ ಜೂನ್ ತಿಂಗಳಲ್ಲೇ ಗುತ್ತಲ ಭಾಗದಲ್ಲಿ ನೀರಿನ ಕೊರತ ತೀವ್ರವಾಗಿ ಕಾಡಿತ್ತು. ಆದರೆ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಮೂಲಕ ಕಳೆದ 2 ತಿಂಗಳು ಕೆರೆಗೆ ನೀರು ಸತತವಾಗಿ ಹರಿದು ಬಂದಿದ್ದು, 189 ಎಕರೆ ವಿಸ್ತೀರ್ಣದ ದೊಡ್ಡ ಕೆರೆ ಸಂಪೂರ್ಣ ಭರ್ತಿಯಾಗಿದೆ.

ಕೆರೆ ಸಂಪೂರ್ಣ ತುಂಬಿದ್ದರೆ, ಬೇಸಿಗೆ ಕಾಲದಲ್ಲಿ ನೀರಿನ ಯಾವುದೇ ತೊಂದೆರೆ ಬರುವುದಿಲ್ಲ. ಅಂತರ್ಜಲ ವೃದ್ಧಿಯಾಗುವ ಕಾರಣ ಸುತ್ತಲಿನ ಗ್ರಾಮಗಳ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತದೆ.

‘ಸತತ ಬರದ ಕಾರಣ ಈ ಹಿಂದೆ ಬತ್ತಿ ಹೋಗಿದ್ದ ಕೊಳವೆ ಬಾವಿಗಳು ಮತ್ತೆ ಪುನಃಶ್ಚೇತನಗೊಂಡಿವೆ. ಈಗ ನೀರು ಸಿಗುತ್ತಿದೆ’ ಎಂದು ಹನುಮಂತಪ್ಪ ಲಮಾಣಿ ತಿಳಿಸಿದರು.
1992ರ ನವೆಂಬರ್‌ನಲ್ಲಿ ಐದು ದಿನಗಳ ಕಾಲ ಸತತ ಮಳೆಗೆ ಕೆರೆ ಭರ್ತಿಯಾಗಿತ್ತು. ಅಂದಿನಿಂದ ಈವರೆಗೂ ಕೆರೆಯಲ್ಲಿ ನೀರು ಇರಲಿಲ್ಲ. 25 ವರ್ಷಗಳ ಬಳಿಕ ಕೆರೆ ತುಂಬಿದ್ದು, ಇದರ ನೋಡಲು ಜನರು ಬರುತ್ತಿದ್ದಾರೆ.

‘ಮೂರು ವರ್ಷದಿಂದ ಭೀಕರ ಬರಗಾಲದಿಂದ ತತ್ತರಿಸಿದ ಗುತ್ತಲ ಪಟ್ಟಣದ ಜನ ಈಗ ನಿರಾಳರಾಗಿದ್ದಾರೆ. ಈ ಬಾರಿ ಬೇಸಿಗೆಯಲ್ಲೂ ಉತ್ತಮ ಬೆಳೆ ತೆಗೆಯಬಹುದು’ ಎನ್ನುತ್ತಾರೆ ರೈತ ಮುಖಂಡ ಸಿದ್ದಪ್ಪ ಚಿಂದಿ.

‘ಕೇವಲ ಎರಡು ತಿಂಗಳ ಹಿಂದೆ ಕಾಡಿದ್ದ ಭೀಕರ ಬರದ ಸಂದರ್ಭದಲ್ಲಿ ಬೆಳೆ ಉಳಿಸಲು 4 ಕೊಳವೆ ಬಾವಿ ಕೊರೆಯಿಸಿದ್ದೆ.‌ 400 ಅಡಿಗಿಂತ ಆಳ ಹೋದರೂ ನೀರು ಸಿಕ್ಕಿರಲಿಲ್ಲ. ಕೆರೆ ತುಂಬಿದ ಬಳಿಕ ಅದೇ ಕೊಳವೆಬಾವಿಗಳಲ್ಲಿ ನೀರು ಬಂದಿದೆ. ಈಚಿನ ಮಳೆಯ ಬಳಿಕ ನೀರಿನ ಮಟ್ಟವೂ ಹೆಚ್ಚಿದೆ’ ಎಂದೂ ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT