ಗುರುವಾರ , ಸೆಪ್ಟೆಂಬರ್ 19, 2019
29 °C

ಜಾತ್ರೆಗೆ ಹರಿದು ಬಂದ ಭಕ್ತಸಾಗರ

Published:
Updated:

ಚಿತ್ತಾಪುರ: ಪಟ್ಟಣದ ಹೊರವಲಯದಲ್ಲಿರುವ ಕ್ಷೇತ್ರ ನಾಗಾವಿಯಲ್ಲಿರುವ ಶಕ್ತಿದೇವತೆ ಯಲ್ಲಮ್ಮ ದೇವಿಯ ಜಾತ್ರೆ ಅಂಗವಾಗಿ ಸರಾಫ್ ಲಚ್ಚಪ್ಪ ನಾಯಕ ಮನೆಯಿಂದ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು.

ಲಚ್ಚಪ್ಪ ನಾಯಕ ಅವರ ಮನೆಯಲ್ಲಿ ತಹಶೀಲ್ದಾರ್ ಮಲ್ಲೇಶಾ ತಂಗಾ ಅವರು ದೇವಿಯ ಪೂಜೆ, ಗಣಪತಿ ಪೂಜೆ, ಪಲ್ಲಕ್ಕಿ ಪೂಜೆ ನೆರವೇರಿಸಿ ಪಲ್ಲಕ್ಕಿ ಹೊತ್ತುಕೊಂಡು ಹೆಜ್ಜೆ ಹಾಕುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಸಚಿವ ಪ್ರಿಯಾಂಕ್ ಎಂ. ಖರ್ಗೆ ದೇವಿಯ ದರ್ಶನ ಪಡೆದರು. ಪೂಜಾ ಕಾರ್ಯಕ್ರಮದಲ್ಲಿ ಚಂದ್ರಶೇಖರ ಅವಂಟಿ, ಕಣ್ವ ನಾಯಕ, ಈರಪ್ಪ ಭೋವಿ, ಸುರೇಶ ಅಳ್ಳೊಳ್ಳಿ, ಬಸವರಾಜ ಚಿನ್ನಮಳ್ಳಿ ಇದ್ದರು.

ಮೆರವಣಿಗೆ: ದೇವಿಯ ಪೂಜೆಯ ನಂತರ ಶುರುವಾದ ಪಲ್ಲಕ್ಕಿ ಮೆರವಣಿಗೆ ಡೊಳ್ಳು, ಹಲಿಗೆ ವಾದನ, ಭಜನೆ, ನೋಡುಗರ ಗಮನ ಸೆಳೆಯಿತು. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದರು.

ದೇವಸ್ಥಾನದ ಪರಿಸರದಲ್ಲಿನ ಬಯಲಿನಲ್ಲಿ, ಪುರಾತನ ಗುಡಿ, ಗುಂಡಾರಗಳಲ್ಲಿ, ಗಿಡಮರಗಳ ಆಸರೆಯಲ್ಲಿ ಜನರು ನೈವೇದ್ಯದ ಅಡುಗೆ ಮಾಡುವುದು ಕಂಡು ಬಂತು. ಕೆಲವಡೆ ಅನ್ನದಾಸೋಹ ನಡೆಯಿತು. ಸರ್ಕಲ್ ಇನ್‌ಸ್ಪೆಕ್ಟರ್‌ ಶಂಕರಗೌಡ ಪಾಟೀಲ್, ಪಿಎಸ್ಐ ಜಗದೇವಪ್ಪ ಪಾಳಾ ಅವರು ಭದ್ರತೆ ಒದಗಿಸಿದ್ದರು.

Post Comments (+)