ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾವಣಿ ತುಂಬ ತರಹೇವಾರಿ ತರಕಾರಿ

Last Updated 6 ಅಕ್ಟೋಬರ್ 2017, 6:56 IST
ಅಕ್ಷರ ಗಾತ್ರ

ವಿರಾಜಪೇಟೆ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ದುಬಾರಿಯಾಗಿದೆ. ಮನೆಯ ಸುತ್ತಮುತ್ತ ಕೊಂಚ ಜಾಗವಿದ್ದಿದ್ದರೆ ಮನೆಬಳಕೆಗೆ ಬೇಕಾದ, ರಾಸಾಯನಿಕ ಮುಕ್ತ ತರಕಾರಿ ಬೆಳೆಸಬಹುದಾಗಿತ್ತು... ಎನ್ನುವ ಇಂಗಿತ ಪಟ್ಟಣ ಹಾಗೂ ನಗರದಲ್ಲಿ ಮನೆ ಮಾಡಿಕೊಂಡವರನ್ನು ಕಾಡುವುದು ಸಹಜ.

ದಿನ ಬಳಕೆಗೆ ಬೇಕಾದಷ್ಟು ತರಕಾರಿಯನ್ನು ಕಾಂಕ್ರೀಟ್‌ ಕಾಡಿನಲ್ಲೂ ಬೆಳೆಸಿ ಕೃಷಿ ಪ್ರೀತಿ ಮೆರೆಯುತ್ತಿರುವ ಶಿಕ್ಷಕರೊಬ್ಬರು ಇಲ್ಲಿದ್ದಾರೆ. ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿರುವ ಜೆಫ್ರಿ ಡಿಸಿಲ್ವ ಮನೆಯ ಚಾವಣಿಯನ್ನೇ ತರಕಾರಿ ತೋಟವನ್ನಾಗಿಸಿಕೊಂಡಿದ್ದಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಬೆಳೆ ತೆಗೆಯುವ ಅವರ ಶ್ರಮ ಯಶಸ್ವಿಯಾಗುತ್ತಿದೆ.ಪಟ್ಟಣದ ವಿಜಯನಗರ ಬಡಾವಣೆಯಲ್ಲಿ 3 ವರ್ಷದ ಹಿಂದೆ ಮನೆ ಕಟ್ಟಿಸಿರುವ ಜೆಫ್ರಿ ಡಿಸಿಲ್ವ ಮನೆಯ ಎರಡನೇ ಅಂತಸ್ತಿನ ಮೇಲೆ ವಿವಿಧ ಬಗೆಯ ತರಕಾರಿ ಬೆಳೆಯುತ್ತಿದ್ದಾರೆ.

ಬೆಳೆಯುವ ವಿಧಾನ: ಮನೆಯ ಮೇಲ್ಭಾಗದಲ್ಲಿ ಸುಮಾರು 10 ಅಡಿ ದೂರಕ್ಕೆ ಒಂದರಂತೆ ಇಟ್ಟಿಗೆಗಳನ್ನು ಇಟ್ಟು ಅದರ ಮೇಲೆ ಪೈಪ್, ಬಿದಿರನ್ನು ಸಮನಾಂತವಾಗಿ ಜೋಡಿಸಿದ್ದಾರೆ. ಅದರ ಮೇಲ್ಭಾಗದಲ್ಲಿ ಫಲವತ್ತತೆಯಿಂದ ಕೂಡಿದ ಮಣ್ಣನ್ನು ಚೀಲದಲ್ಲಿ ತುಂಬಿ ಇಡಲಾಗುತ್ತದೆ.

ಚೀಲದ ಮಣ್ಣಿನಲ್ಲಿ ಬಗೆಬಗೆಯ ತರಕಾರಿಗಳನ್ನು ಬೆಳೆಸಿದ್ದಾರೆ. ಬಳ್ಳಿಗಳಲ್ಲಿ ಬೆಳೆಯುವ ಗಿಡಗಳ ಅವಲಂಬನೆಗಾಗಿ ತಂತಿ ಹಾಗೂ ಹಗ್ಗಗಳನ್ನು ಬಳಸಿ ಚಪ್ಪರ ನಿರ್ಮಿಸಿದ್ದಾರೆ. ಮಣ್ಣನ್ನು ತುಂಬಲು ಕಟ್ಟಡಗಳ ನಿರ್ಮಾಣಕ್ಕೆ ಬಳಸಿ ನಿರುಪಯೋಗಿಯಾದ ಸಿಮೆಂಟ್ ಚೀಲಗಳನ್ನು ಬಳಸಿದ್ದಾರೆ. ಸುಮಾರ 200ರಷ್ಟು ತರಕಾರಿ ಗಿಡಗಳನ್ನು ಬೆಳೆಯುವ ಅವರು ದಿನವೊಂದಕ್ಕೆ ಗಿಡಗಳಿಗೆ 200 ಲೀ. ನಷ್ಟು ನೀರು ಬೇಕಾಗುತ್ತದೆ ಎನ್ನುತ್ತಾರೆ.

ಪ್ರತಿ ಗಿಡಕ್ಕೂ ಒಂದೇ ಬಾರಿ ನೀರನ್ನು ಹಾಕುವುದಕ್ಕಿಂತಲೂ ತಲಾ ಅರ್ಧ ಲೀಟರ್‌ನಂತೆ ಎರಡೆರಡು ಬಾರಿ ನೀರನ್ನು ಹಾಕುವುದು ಉತ್ತಮ. ಶೇ 95ರಷ್ಟು ಭಾಗ ಸಾವಯವ ಗೊಬ್ಬರವನ್ನು ಬಳಸುತ್ತಿದ್ದಾರೆ. ಮನೆಯ ಸುತ್ತಮುತ್ತ ದೊರೆಯುವ ಸಗಣಿಯನ್ನು ಗೊಬ್ಬರವಾಗಿ ಬಳಸಲಾಗುತ್ತದೆ.

ಆರ್‌ಸಿಸಿ ಯ ಮೇಲ್ಭಾಗದಲ್ಲಿ ಗಿಡಗಳನ್ನು ಬೆಳೆದು ನೀರನ್ನು ಹಾಕುತ್ತಿದ್ದರೆ ಆರ್‌ಸಿಸಿ ಶಿಥಿಲವಾಗಿ ಮನೆಯ ಒಳಭಾಗದಲ್ಲಿ ನೀರು ಸೋರುತ್ತದೆ ಎನ್ನುವ ಭಯ ಹಲವರನ್ನು ಕಾಡುತ್ತದೆ. ಆದರೆ ಮಣ್ಣಿನ ಚೀಲವನ್ನು ನೇರವಾಗಿ ಆರ್‌ಸಿಸಿಯ ಮೇಲಿರಿಸದೆ ಕೊಂಚ ಎತ್ತರದಲ್ಲಿ ಇಟ್ಟಿಗೆಯ ಮೇಲಿನ ಪೈಪ್‌ಗಳ ಮೇಲಿರಿಸುವುದರಿಂದ ಆರ್‌ಸಿಸಿಯ ಮೇಲೆ ಚೆಲ್ಲಿದ ನೀರು ಒಣಗುತ್ತದೆ. ಇದರಿಂದ ಮನೆಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುತ್ತಾರೆ.

ಚಾವಣಿಯ ಶೇ 70ರಷ್ಟು ಭಾಗವನ್ನು ತರಕಾರಿ ಬೆಳೆಯಲು ಬಳಸಿಕೊಂಡಿರುವ ಅವರು ವಾರ್ಷಿಕವಾಗಿ ಸುಮಾರು 600 ರಿಂದ 800 ಕೆ.ಜಿ ಯಷ್ಟು ತರಕಾರಿ ಬೆಳೆಯುತ್ತಿದ್ದಾರೆ. ಬಳಸಿ ಮಿಕ್ಕ ತರಕಾರಯನ್ನು ಸ್ನೇಹಿತರು, ಬಂಧುಗಳು ಹಾಗೂ ನೆರೆಹೊರೆಯವರಿಗೆ ಕೊಡುತ್ತಾರೆ. ಮಾರಾಟ ಮಾಡುವುದಿಲ್ಲ. ಮಳೆಗಾಲದ ಕೆಲವು ದಿನಗಳನ್ನು ಹೊರತುಪಡಿಸಿದರೆ ಮಾರುಕಟ್ಟೆಯಿಂದ ತರಕಾರಿ ಖರೀದಿಸುವುದಿಲ್ಲ.

ಬೀನ್ಸ್, ಟೊಮೆಟೊ, ಆಲೂಗೆಡ್ಡೆ, ಮಂಗಳೂರು ಬೆಂಡೆ, ತೊಂಡೆಕಾಯಿ, ಬದನೆ, ಹೀರೆಕಾಯಿ, ಸೋರೆಕಾಯಿ, ಅಲಸಂದೆ, ಬೂದು ಕುಂಬಳ, ಸಿಹಿ ಕುಂಬಳ, ಮೆಣಸು, ಅವರೆ, ಬಸಳೆ, ಕೀರೆಸೊಪ್ಪು ಸೇರಿದಂತೆ ಕಲ್ಲಂಗಡಿ ಹಣ್ಣೂ ಅವರ ಮಹಡಿ ತೋಟದಲ್ಲಿವೆ.

ಮನೆಯ ಮೇಲ್ಭಾಗದಲ್ಲಿ ತರಕಾರಿ ಬೆಳೆಯುವುದರಿಂದ ಬೇಸಿಗೆಯಲ್ಲಿ ಮನೆಯ ಒಳಗೆ ತಂಪಿರುತ್ತದೆ. ಗಿಡಗಳ ನೆರಳಿನಲ್ಲಿ ಕಾಲ ಕಳೆಯಬಹುದು. ಬಿಡುವಿನ ವೇಳೆಯನ್ನು ಕಳೆಯಲು ಇದು ಉತ್ತಮ ವಿಧಾನ ಎನ್ನುವುದು ಜೆಫ್ರಿ ಡಿಸಿಲ್ವ ಅವರ ಸಮಾಧಾನ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT