ಹಸಿವು, ಹಗರಣ ಮುಕ್ತ ಕರ್ನಾಟಕ ನಿರ್ಮಾಣ –ಡಾ.ಜಿ.ಪರಮೇಶ್ವರ

ಶುಕ್ರವಾರ, ಮೇ 24, 2019
24 °C

ಹಸಿವು, ಹಗರಣ ಮುಕ್ತ ಕರ್ನಾಟಕ ನಿರ್ಮಾಣ –ಡಾ.ಜಿ.ಪರಮೇಶ್ವರ

Published:
Updated:

ಕೆ.ಆರ್.ಪೇಟೆ: ‘ಕಾಂಗ್ರೆಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ಹಗರಣ ಮುಕ್ತ ಹಾಗೂ ಹಸಿವು ಮುಕ್ತ ಕರ್ನಾಟಕವನ್ನು ನಿರ್ಮಿಸಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಹೇಳಿದರು. ಪಟ್ಟಣದ ಖಾಸಿಂಖಾನ್ ಸಮುದಾಯ ಭವನದ ಆವರಣದಲ್ಲಿ ನಡೆದ ತಾಲ್ಲೂಕು ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮನೆ–ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಚುನಾವಣೆಯ ಸಂದರ್ಭದಲ್ಲಿ ಪಕ್ಷ ನೀಡಿದ್ದ 165 ಆಶ್ವಾಸನೆಗಳ ಪೈಕಿ 150 ಭರವಸೆಗಳನ್ನು ಈಡೇರಿಸಲಾಗಿದೆ. ಪಕ್ಷದ ಈ ಸಾಧನೆಗಳನ್ನು ಕಾರ್ಯಕರ್ತರು ಮನೆ–ಮನೆಗೆ ತಲುಪಿಸುವ ಕೆಲಸ ಮಾಡಬೇಕು. ವಿಪಕ್ಷಗಳ ಸುಳ್ಳು ಆರೋಪಗಳಿಗೆ ದಿಟ್ಟ ಉತ್ತರ ನೀಡಬೇಕಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಮುಂದಿನ ಸಿ ಎಂ ಯಾರು ಎಂದು ಗೊಂದಲ ಬೇಡ. ಅದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು ಅಧಿಕಾರಕ್ಕೆ ಬರುವ ಬಿಜೆಪಿ ದುರಾಲೋಚನೆ ಭಗ್ನಗೊಳಿಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ಮಾಡಿದರು.

‘ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದು ಶುಭ ಸಂದೇಶವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಗೆಲವು ಸಾದಿಸುತ್ತದೆ ಎಂಬುದಕ್ಕೆ ಇದು ಸೂಚನೆ’ ಎಂದರು. ಕೇಂದ್ರದ ಮಾಜಿಸಚಿವ ಕೆ.ರೆಹಮಾನ್ ಖಾನ್ ಮಾತನಾಡಿ ‘ಜಿಲ್ಲೆಯಲ್ಲಿಯೇ ಕೆ.ಆರ್. ಪೇಟೆ ತಾಲ್ಲೂಕು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಧಿಸಿ ತೋರಿಸಬೇಕು’ ಎಂದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಕೆಪಿಸಿಸಿ ವೀಕ್ಷಕರಾದ ಎನ್.ಸಂಪಂಗಿ, ವಿಷ್ಣುನಂದನ್, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ಕೆಪಿಸಿಸಿ ಕಾರ್ಯದರ್ಶಿ ಬಲರಾಮು, ಮನ್ಸೂರ್ ಅಲಿಖಾನ್, ಕೆ.ಯು.ಐ.ಡಿ.ಎಫ್.ಸಿ. ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಜಿ.ಪಂ ಸದಸ್ಯ ಕೆ. ದೇವರಾಜು ಹಾಜರಿದ್ದರು.

ನಿಗದಿತ ಸಮಯಕ್ಕಿಂತ 3 ಗಂಟೆ ತಡವಾಗಿ ಆರಂಭವಾಯಿತು. ಮಳೆಯಲ್ಲೂ ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸಿದ್ದರು. ಸನ್ಮಾನಿಸಿ ನೀಡಿದ ಬೆಳ್ಳಿಗದೆಯನ್ನು ಸ್ವೀಕರಿಸಲು ಪರಮೇಶ್ವರ್ ಹಿಂದೇಟು ಹಾಕಿದರಾದರೂ ಕಾರ್ಯಕರ್ತರು ಹಾಗೂ ಕೆ.ಬಿ.ಚಂದ್ರಶೇಖರ್ ಅವರ ಪ್ರೀತಿಗೆ ಮಣಿದು ಬೆಳ್ಳಿಗದೆಯನ್ನು ಎತ್ತಿಹಿಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry