ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟ ವಿಜಯಶಂಕರ್

Last Updated 6 ಅಕ್ಟೋಬರ್ 2017, 7:26 IST
ಅಕ್ಷರ ಗಾತ್ರ

ಮೈಸೂರು: ಬಿಜೆಪಿ ಹಿರಿಯ ಮುಖಂಡ ಸಿ.ಎಚ್.ವಿಜಯಶಂಕರ್ ಪಕ್ಷ ತೊರೆಯಲು ಮುಂದಾಗಿದ್ದಾರೆ. ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಸಂಸದ, ಸಚಿವರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಹಿರಿಯ ಮುಖಂಡರಾಗಿದ್ದು, ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿರುವುದು ಬಿಜೆಪಿ ಪಾಳಯದಲ್ಲಿ ಪ್ರಮುಖವಾಗಿ ಚರ್ಚೆಯಾಗುತ್ತಿದೆ.

ಪಕ್ಷದ ಆಂತರಿಕ ವಲಯದಲ್ಲಿ ಉದ್ಭವಿಸಿರುವ ಅಡ್ಡಿ ಆತಂಕಗಳು ಹಾಗೂ ಪಿರಿಯಾಪಟ್ಟಣ ಕ್ಷೇತ್ರದಲ್ಲಿನ ಬೆಳವಣಿಗೆಯಿಂದಾಗಿ ಪಕ್ಷ ಬಿಡುವ ಆಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದು, ರೈತ ಮೋರ್ಚಾ ಘಟಕದ ಅಧ್ಯಕ್ಷರಾಗಿದ್ದರೂ ನಿರ್ಲಕ್ಷಿಸಲಾಗುತ್ತಿದೆ. ಪಿರಿಯಾಪಟ್ಟಣ ಕ್ಷೇತ್ರದಿಂದ ಮುಂದಿನ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದು, ಅವಕಾಶ ಸಿಗುವ ಸಾಧ್ಯತೆಗಳು ಕಡಿಮೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದಾರೆ.

ಬೆಂಗಳೂರು ಉದ್ಯಮಿ ಎಸ್.ಮಂಜುನಾಥ್ ಅವರು ಪಿರಿಯಾಪಟ್ಟಣದಲ್ಲಿ ಕಚೇರಿ ತೆರೆದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಿಸಲಾಗಿದೆ. ಅಭಿಮಾನಿಗಳ ಹೆಸರಿನಲ್ಲಿ ಕಚೇರಿ ಆರಂಭಿಸಿ ಸಮಾಜ ಸೇವೆ ನೆಪದಲ್ಲಿ ಪ್ರಚಾರ ನಡೆದಿದೆ. ಇತ್ತೀಚೆಗೆ ತಾಲ್ಲೂಕಿನ ಕಂಪಲಾಪುರದಲ್ಲಿ ನಡೆದ ಯುವ ಮೋರ್ಚಾ ಕಾರ್ಯಕಾರಣಿಗೆ ಬಂದ ಮಂಜುನಾಥ್ ವಿರುದ್ಧ ವಿಜಯಶಂಕರ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು.

ಕಾರ್ಯಕಾರಣಿಗೆ ಆಹ್ವಾನ ನೀಡಿಲ್ಲ ಎಂದು ಹೇಳಿ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡದೆ ವಾಪಸ್ ಕಳುಹಿಸಿದ್ದರು. ನಂತರದ ದಿನಗಳಲ್ಲಿ ಭಿನ್ನಮತ ದೊಡ್ಡ ಸ್ವರೂಪ ಪಡೆದುಕೊಂಡಿತು ಎಂದು ಮೂಲಗಳು ತಿಳಿಸಿವೆ.

ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನಡೆಯುತ್ತಿರುವ ಪಕ್ಷದ ಚಟುವಟಿಕೆಗಳು, ಆಂತರಿಕ ಗೊಂದಲಗಳು ಬಿಜೆಪಿಯಿಂದ ದೂರ ಸರಿಯುವಂತೆ ಮಾಡಿವೆ ಎಂದು ಹೇಳಲಾಗುತ್ತಿದೆ.
ಪಕ್ಷ ತೊರೆಯುವ ವಿಚಾರ ಹೊಗೆಯಾಡುತ್ತಿದ್ದಂತೆ ಜಿಲ್ಲೆಯ ಬಿಜೆಪಿ ಮುಖಂಡರು ವಿಜಯಶಂಕರ್ ಅವರನ್ನು ನಗರದ ಮನೆಯಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸುಮಾರು ಮೂರು ಗಂಟೆ ನಡೆದ ಸುದೀರ್ಘ ಮಾತುಕತೆಯಲ್ಲಿ ಮನವೊಲಿಸುವ ಪ್ರಯತ್ನ ನಡೆಯಿತು ಎನ್ನಲಾಗಿದೆ.

‘ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದೇನೆ. ಈಗ ಉದ್ಭವಿಸಿರುವ ಗೊಂದಲ, ಸಮಸ್ಯೆಗಳನ್ನು ಪರಿಹರಿಸಬೇಕು. ಆಗ ಮಾತ್ರ ಬಿಜೆಪಿಯಲ್ಲಿ ಉಳಿಯುವ ಬಗ್ಗೆ ಚಿಂತಿಸುತ್ತೇನೆ. ತಕ್ಷಣಕ್ಕೆ ಸಮಸ್ಯೆ ಬಗೆಹರಿಯದಿದ್ದರೆ ನನ್ನ ದಾರಿ ನಾನು ನೋಡಿಕೊಳ್ಳಬೇಕಾಗುತ್ತದೆ’ ಎಂದು ತಮ್ಮನ್ನು ಭೇಟಿಮಾಡಿದ ಮುಖಂಡರಿಗೆ ಹೇಳಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಿಂದ ಬಿಜೆಪಿಗೆ: ವಿಜಯಶಂಕರ್‌ ಅವರ ರಾಜಕೀಯ ಜೀವನ ಆರಂಭವಾಗಿದ್ದೇ ಕಾಂಗ್ರೆಸ್‌ ಪಕ್ಷದಿಂದ. ನಂತರದ ದಿನಗಳಲ್ಲಿ ಕಾಂಗ್ರೆಸ್‌ ತೊರೆದ ಬಿಜೆಪಿ ಅಭ್ಯರ್ಥಿಯಾಗಿ ಹುಣಸೂರು ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು.

2010ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದ ಅವರು ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕೆಲ ಕಾಲ ಕಾರ್ಯನಿರ್ವಹಿಸಿದ್ದರು.
1998, 2004ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1999 ಹಾಗೂ 2009ರಲ್ಲಿ ಸೋಲು ಕಂಡಿದ್ದರು. 2014ರಲ್ಲಿ ಮೈಸೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ, ಬದಲಾದ ವಿದ್ಯಮಾನದಲ್ಲಿ ಅವರು ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕಾಯಿತು. ಎಚ್‌.ಡಿ.ದೇವೇಗೌಡ ಎದುರು ಸೋಲು ಕಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT