ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ

Last Updated 6 ಅಕ್ಟೋಬರ್ 2017, 8:26 IST
ಅಕ್ಷರ ಗಾತ್ರ

ಸಿಂಧನೂರು: ಸದ್ಯ ಕೆರೆಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದ್ದು, ಇಂದಿನಿಂದ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಗೆ ಆರು ದಿನಕ್ಕೊಮ್ಮೆ ನೀರು ಬಿಡಲು ನಿರ್ಧರಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ ತಿಳಿಸಿದರು. ನಗರಸಭೆ ಕಚೇರಿಯಲ್ಲಿ ಗುರುವಾರ ಸದಸ್ಯರ ಹಾಗೂ ಅಧಿಕಾರಿಗಳ ತುರ್ತುಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಂಟು ಮೀಟರ್‌ ಸಾಮರ್ಥ್ಯವಿರುವ ದೊಡ್ಡ ಕೆರೆಯಲ್ಲಿ 6 ಮೀಟರ್‌ ಮತ್ತು 4 ಮೀಟರ್‌ ಸಾಮರ್ಥ್ಯವಿರುವ ಸಣ್ಣ ಕೆರೆಯಲ್ಲಿ 3 ಮೀಟರ್‌ ನೀರು ಪ್ರಸ್ತುತ ಲಭ್ಯವಿದೆ. ನಗರದ 31 ವಾರ್ಡುಗಳಿಗೆ ಒಂದೇ ಬಾರಿಗೆ 35 ಎಂಎಲ್ ನೀರನ್ನು ಬಿಡಲಾಗುತ್ತಿದ್ದು, ಹೀಗೆ ನವೆಂಬರ್ 1ರ ವರೆಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬಹುದು.

ನಂತರ ಕೆರೆಯಲ್ಲಿ ನೀರು ಖಾಲಿಯಾಗುವ 15 ದಿನಗಳ ಮುಂಚೆಯೇ ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ನೀರು ಬಿಡಿಸಿ ಆ ಮೂಲಕ ಕೆರೆಗಳನ್ನು ತುಂಬಿಸಿಕೊಳ್ಳಲಾಗುವುದು. ಸಾರ್ವಜನಿಕರು ನೀರನ್ನು ವಿನಾಕಾರಣ ಪೋಲು ಮಾಡದೆ ಮಿತವಾಗಿ ಬಳಸಬೇಕು. ಜೊತೆಗೆ ನೀರನ್ನು ಕಾಯಿಸಿ, ಆರಿಸಿ, ಸೋಸಿ ಕುಡಿಯುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ವಿರೂಪಾಕ್ಷಿಮೂರ್ತಿ ಮಾತನಾಡಿ, ನಗರದಲ್ಲಿ 8500 ಸಕ್ರಮ ನಳಗಳಿವೆ. ಅದರಂತೆ ಈಗಾಗಲೇ ನಗರಸಭೆಯ ಏಳು ಜನ ಬಿಲ್ ಕಲೆಕ್ಟರ್‌ಗಳು ನಗರದ 15 ವಾರ್ಡುಗಳಲ್ಲಿ ಸರ್ವೆ ನಡೆಸಿ 560 ಅಕ್ರಮ ನಳಗಳಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನೂ ಉಳಿದ 16 ವಾರ್ಡುಗಳಲ್ಲಿ ಸರ್ವೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ನಂತರ ನಗರಸಭೆ ನಿಗದಿ ಪಡಿಸಿದ ದಿನಾಂಕದೊಳಗೆ ₹3,160 ಶುಲ್ಕ ಭರಿಸಿ ಸಕ್ರಮ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮಾಲೀಕರಿಗೆ ದಂಡ ವಿಧಿಸಿ, ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರದ ವಿವಿಧ ಬಡಾವಣೆಗಳ 48 ಖಾಲಿ ನಿವೇಶನಗಳಲ್ಲಿ ಮಳೆ ಮತ್ತು ಚರಂಡಿ ನೀರು ಸಂಗ್ರಹಗೊಂಡು ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿವೆ. ಇದರಿಂದ ಡೆಂಗಿ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಕೂಡಲೇ ಖಾಲಿ ನಿವೇಶನಗಳಲ್ಲಿ ಮುರಂ ಹಾಕಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ನಿವೇಶನದ ಖಾತಾ ರದ್ದು ಪಡಿಸುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.

ಇಲ್ಲಿಯ ಮುಖ್ಯರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿಯಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಜೊತೆಗೆ ಅಪಘಾತ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಸಂಬಂಧಿಸಿದ ಮಾಲೀಕರು ತಮ್ಮ ದನಗಳನ್ನು ಬೇರೆಗೆ ಸ್ಥಳಾಂತರ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸರ ಇಲಾಖೆಯ ಸಹಕಾರದೊಂದಿಗೆ ನಗರಸಭೆಯು ದನಗಳನ್ನು ಗೋಶಾಲೆ ಕಳುಹಿಸಿ ಕೊಡಬೇಕಾಗುತ್ತದೆ. ನಂತರ ದನಗಳು ತಮ್ಮದೆಂದು ಬರುವವರ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ವಿರೂಪಾಕ್ಷಿಮೂರ್ತಿ ಎಚ್ಚರಿಕೆ ನೀಡಿದರು.

ನಗರಸಭೆ ಉಪಾಧ್ಯಕ್ಷೆ ಅನ್ವರಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ನಬೀಸಾಬ, ನಗರಸಭೆ ಸದಸ್ಯರಾದ ಲಿಂಗರಾಜ ಹೂಗಾರ, ಶರಣಬಸವ ನಟೇಕಲ್, ಸಹಾಯಕ ಕಾರ್ಯಪಾಲಕ ಎಂಜನಿಯರ್ ಶ್ಯಾಮಲಾ, ಸಿಬ್ಬಂದಿ ಮೂರ್ತಿ, ಶೇಖರಪ್ಪ, ಮುಖಂಡರಾದ ಅಲಿಸಾಬ ಮೇಸ್ತ್ರಿ, ಶಾಮೀದ್, ನನ್ನುಸಾಬ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT