ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾವೃತವಾದ ಹೆದ್ದಾರಿ: ಪರದಾಟ

Last Updated 6 ಅಕ್ಟೋಬರ್ 2017, 8:40 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯ ಗುಬ್ಬಿ, ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಬುಧವಾರ ರಾತ್ರಿಯಿಂದ ಬೆಳಗ್ಗಿನವರೆಗೆ ಮಳೆ ಸುರಿದಿದೆ. ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಕೆರೆ ಕೋಡಿ ಬಿದ್ದು ನೀರು ಹರಿಯುತ್ತಿದೆ. ಈ ನೀರು ಬುಕ್ಕಾಪಟ್ಟಣ–ಶಿರಾ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹರಿಯುತ್ತಿರುವುದರಿಂದ ಸಂಚಾರ ಬಂದ್ ಆಗಿದೆ. ಹುಳಿಯಾರಿನಲ್ಲಿ 1, ದಸೂಡಿ ಗ್ರಾಮದಲ್ಲಿ 5, ಗಾಣದಾಳ ಗ್ರಾಮದಲ್ಲಿ 4 ಮನೆಗಳು ಭಾಗಶಃ ಕುಸಿದುಬಿದ್ದಿವೆ. ಹುಳಿಯಾರು ಸಮೀಪದ ರಂಗನಕೆರೆ ಕೆರೆಯು ತುಂಬಿ ಧುಮ್ಮಿಕ್ಕುತ್ತಿದೆ.

ಹುಳಿಯಾರು ಹೋಬಳಿ ವ್ಯಾಪ್ತಿಯ ಗಾಣಧಾಳು, ದಸೂಡಿ ಹಾಗೂ ಹೊಯ್ಸಳ ಕಟ್ಟೆ ಗ್ರಾಮಗಳ ಸುತ್ತಮುತ್ತಲ ಗ್ರಾಮಗಳಲ್ಲಿ ಬುಧವಾರ ಸಂಜೆಯಿಂದ ತಡರಾತ್ರಿಯವರೆಗೆ ಉತ್ತಮ ಮಳೆಯಾಗಿದೆ. ಹೋಬಳಿಯ ಸೋಮನಹಳ್ಳಿ, ದಸೂಡಿ, ನುಲೇನೂರು, ಕಲ್ಲೇನಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಬುಧವಾರ ಸಂಜೆ ಗಾಣಧಾಳು ಸಮೀಪದ ಗ್ಯಾರಂಟಿಪಾಳ್ಯ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿತ್ತು.

ಉಳಿದಂತೆ ಸೋಮನಹಳ್ಳಿ, ರಂಗನಕೆರೆ ಸುತ್ತಮುತ್ತ ಸುರಿದ ಮಳೆಗೆ ದಸೂಡಿ–ಸೋಮನಹಳ್ಳಿ ಕಟ್ಟೆ ಕೋಡಿ ಹರಿದು ವಾಹನಗಳ ಸಂಚಾರಕ್ಕೆ ಆಡಚಣೆಯಾಯಿತು.
ಸೋಮನಹಳ್ಳಿ–ಗುರುವಾಪುರ ರಸ್ತೆಯಲ್ಲಿ ನೀರು ಹರಿದು ಸಂಚಾರಕ್ಕೆ ತೊಂದರೆಯಾಗಿತ್ತು.ಕಳೆದ 15 ವರ್ಷದಿಂದ ನೀರು ಕಾಣದ ಸೋಮನಹಳ್ಳಿ ಕೆರೆಗೆ ಸ್ವಲ್ಪ ನೀರು ಬಂದಿದೆ.

ಮನೆಗಳಿಗೆ ಹಾನಿ: ನುಲೇನೂರು ಗ್ರಾಮದ ಬಳಿಯ ತೋಟಗಳಲ್ಲಿ ಬಹಳ ವರ್ಷಗಳ ಹಿಂದೆ ನಿರ್ಮಿಸಿದ್ದ ಅಣೆಗಳಿಗೆ ಹಾನಿಯಾಗಿದೆ. 

ಜಲಾವೃತ
ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ ಸಮೀಪದಲ್ಲಿ ಹರಿಯುವ ಪಂಕಿಟಂಕಿ ಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದೆ. ಇದರಿಂದ ಗುರುವಾರ ರಾಷ್ಟ್ರೀಯ ಹೆದ್ದಾರಿ 234 ಸಂಪೂರ್ಣ ಜಲಾವೃತವಾಗಿ ವಾಹನ ಸಂಚಾರ ಅಸ್ತವ್ಯಸ್ಥವಾಯಿತು. ಬುಕ್ಕಾಪಟ್ಟಣದ ಕೆರೆಗೆ ಕಳೆದ ಮೂರು ದಿನಗಳ ಹಿಂದೆ ಕೋಡಿ ಬಿದ್ದಿದ್ದು, ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಕೋಡಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಬಸ್, ಲಾರಿ ಸೇರಿದಂತೆ ಬಾರಿ ವಾಹನಗಳು, ಕಾರು ಮತ್ತು ದ್ವಿಚಕ್ರವಾಹನಗಳು ನೀರು ಕಡಿಮೆಯಾಗುವುದಕ್ಕಾಗಿ ಕಾದು ಕುಳಿತುಕೊಳ್ಳುವಂತಾಯಿತು.

ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು ಬೆಳಿಗ್ಗೆ 11 ಗಂಟೆಯ ನಂತರ ನೀರಿನ ಪ್ರಮಾಣ ಕಡಿಮೆಯಾದ ನಂತರ ವಾಹನಗಳು ರಸ್ತೆ ದಾಟುವಂತಾಯಿತು.
ಜಲಾವೃತವಾದ ರಸ್ತೆಯನ್ನು ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು ಮತ್ತೆ ಕೆಲವರು ನೀರಿನಲ್ಲಿ ಈಜಾಡುವ ಮೂಲಕ ಹರ್ಷ ವ್ಯಕ್ತ ಪಡಿಸುತ್ತಿದ್ದರು.

ವಾಹನ ಸವಾರ ವೆಂಕಟೇಶ್ ಪ್ರಜಾವಾಣಿಯೊಂದಿಗೆ ಮಾತನಾಡಿ ’ರಸ್ತೆ ಜಲಾವೃತವಾದ ಕಾರಣ ರಸ್ತೆ ದಾಟಲಾಗದೆ ತುರ್ತು ಕೆಲಸದ ಮೇಲೆ ತೆರಳಬೇಕಾದರು ಚಡಪಡಿಸುವಂತಾಗಿದೆ. ಮತ್ತೆ ಕೆಲವರು ರಾಮಲಿಂಗಾಪುರದ ಮೂಲಕ ಸಾಕ್ಷಿಹಳ್ಳಿ ಮಾರ್ಗವಾಗಿ ಹುಯಿಲ್ ದೊರೆ ಮೂಲಕ ಶಿರಾ ರಸ್ತೆ ತಲುಪಿ ಸುತ್ತಿಬಳಸಿ ಬರುವಂತಾಗಿದೆ' ಎಂದು ಹೇಳಿದರು.

ಮಳೆ ಪ್ರಮಾಣ: ತಾಲ್ಲೂಕಿನಲ್ಲಿ ಬುಧವಾರ ಉತ್ತಮ ಮಳೆಯಾಗಿದೆ. ಶಿರಾ 28 ಮಿ.ಮೀ, ಚಿಕ್ಕನಹಳ್ಳಿ 13 ಮಿ.ಮೀ, ಚಿಕ್ಕನಹಳ್ಳಿ ಐಎಂಡಿ 16 ಮಿ.ಮೀ, ಕಳ್ಳಂಬೆಳ್ಳ 26.40 ಮಿ.ಮೀ, ಬುಕ್ಕಾಪಟ್ಟಣ 19 ಮಿ.ಮೀ, ತಾವರೆಕೆರೆ 30 ಮಿ.ಮೀ, ಬರಗೂರು 48.40 ಮಿ.ಮೀ, ಹುಣಸೇಹಳ್ಳಿ 61.40 ಮಿ.ಮೀ, ಸೇರಿದಂತೆ ಒಟ್ಟು 242.20 ಮಿ.ಮೀ ಮಳೆಯಾಗಿದ್ದು ಸರಾಸರಿ 30.28 ರಷ್ಟು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT