ಸಟ್ವಾಡಿ: ನಿವೇಶನಕ್ಕಾಗಿ ದಲಿತರ ಹಕ್ಕೊತ್ತಾಯ

ಶುಕ್ರವಾರ, ಮೇ 24, 2019
29 °C

ಸಟ್ವಾಡಿ: ನಿವೇಶನಕ್ಕಾಗಿ ದಲಿತರ ಹಕ್ಕೊತ್ತಾಯ

Published:
Updated:
ಸಟ್ವಾಡಿ: ನಿವೇಶನಕ್ಕಾಗಿ ದಲಿತರ ಹಕ್ಕೊತ್ತಾಯ

ಕುಂದಾಪುರ: ಸರ್ಕಾರಿ ಭೂಮಿಗೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ನಡೆದ ಹಕ್ಕೊತ್ತಾಯದ ಚರ್ಚೆ ವಿಕೋಪಕ್ಕೆ ತಿರುಗುವುದನ್ನು ತಡೆಯಲು ಮುಂದಾದ ಕಂದಾಯ ಹಾಗೂ ಪೊಲೀಸ್‌ ಇಲಾಖೆಗಳ ಪ್ರಯತ್ನದಿಂದ ಸಮಸ್ಯೆಗೆ ತಾತ್ಕಾಲಿಕ ವಿರಾಮ ದೊರಕಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಘಟನೆಯ ವಿವರ: ಇಲ್ಲಿಗೆ ಸಮೀಪದ ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಟ್ವಾಡಿ ಎಂಬಲ್ಲಿನ ಸರ್ವೇ ನಂಬರ್‌152/2ರಲ್ಲಿ ಇರುವ 24 ಎಕರೆ ಖಾಲಿ ಜಾಗದಲ್ಲಿ ನಿವೇಶನಕ್ಕೆ ಅವಕಾಶ ನೀಡಿ ಎಂದು ದಲಿತ ಸಮು ದಾಯದವರು ಬುಧವಾರ ಟೆಂಟ್‌ ನಿರ್ಮಿಸಿ ಭೂಮಿಗಾಗಿ ಹಕ್ಕೊತ್ತಾಯ ಮಾಡಿದ್ದರು.

‘ಮೂಡ್ಲಕಟ್ಟೆ ರೈಲ್ವೆ ಸ್ಟೇಶನ್ ಬಳಿ ಇರುವ ಈ ಜಾಗಕ್ಕಾಗಿ ಆಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದೇವೆ’ ಎನ್ನುವ ಕೆಲವರು ಈ ಕ್ರಮದ ಕುರಿತು ಆಕ್ಷೇಪ ವ್ಯಕ್ತಪಡಿ ಸಿದ್ದರು. ಬುಧವಾರ ಮಧ್ಯಾಹ್ನದ ಬಳಿಕ ಎರಡು ಕಡೆಯವರ ನಡುವೆ ಹಕ್ಕೊತ್ತಾಯದ ಕುರಿತು ನಡೆದ ಚರ್ಚೆ ಹಾಗೂ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಿಳಿದ ಕುಂದಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದರು.

ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಡಿವೈಎಸ್‌ಪಿ ಪ್ರವೀಣ್‌ ಎಚ್‌. ನಾಯಕ್‌ ಅವರ ಸೂಚನೆಯಂತೆ ಕಂದಾಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ರಾತ್ರಿ ಸ್ಥಳಕ್ಕೆ ಬಂದ ತಹಶೀಲ್ದಾರ್‌ ಜಿ.ಎಂ.ಬೋರ್ಕರ್‌ ಎರಡು ಕಡೆಯವರ ಅಹವಾಲು ಆಲಿಸಿ ಸಮಸ್ಯೆಯ ಕುರಿತು ಪರಿಹಾರ ನೀಡುವ ಭರವಸೆ ವ್ಯಕ್ತಪಡಿಸಿ, ಯಥಾ ಸ್ಥಿತಿ ಕಾಯ್ದುಕೊಳ್ಳಲು ಮನವೂಲಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ.

ಪೊಲೀಸ್‌ ಇಲಾಖೆ ಮುಂಜಾ ಗ್ರತ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್‌ ಪಹರೆ ನಿಯೋಜಿಸಿದೆ. ಕೆಲ ದಿನಗಳ ಹಿಂದೆ ಈ ಸರ್ಕಾರಿ ಈ ಜಾಗದಲ್ಲಿ ದಲಿತರು ಬಂದು ಕೂರುತ್ತಾರೆ ಎನ್ನುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಗಳು ತೆಂಗು, ಬಾಳೆ ನಾಟಿ ಮಾಡಿದ್ದರು. ಹಕ್ಕೊತ್ತಾಯಕ್ಕಾಗಿ ಬಂದಿದ್ದವರು ಈ ಸ್ಥಳದಲ್ಲಿಯೇ ಶೆಡ್ ನಿರ್ಮಿಸಿದ್ದರು.

ಹಿಂದೆ ಕೋಣಿ ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಇದ್ದ ಈ ಜಾಗದಲ್ಲಿ ನಿವೇಶನಕ್ಕಾಗಿ ಸಾಕಷ್ಟು ಜನ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂ ಡಿರಲಿಲ್ಲ. ಹೊಸದಾಗಿ ಉದಯಿಸಿದ ಕಂದಾವರ ಪಂಚಾಯಿತಿ ವ್ಯಾಪ್ತಿಗೆ ಈ ಜಾಗ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಕೆಲ ದಿನದ ಹಿಂದೆ 70 ಜನ ನಿವೇಶನ ರಹಿತರು ಕಂದಾವರ ಗ್ರಾಮ ಪಂಚಾ ಯಿತಿಗೆ ಅರ್ಜಿ ಸಲ್ಲಿಸಿದ್ದರು.

‘ತಲೆತಲಾಂತರದಿಂದ ಜೀತದಾಳು ಗಳಾಗಿ ದುಡಿಯುತ್ತಿದ್ದ ದಲಿತ ವರ್ಗಕ್ಕೆ ಸ್ವಂತ ಜಾಗವಿಲ್ಲ. ವ್ಯವಸ್ಥೆ ಉಳ್ಳವರ ಪರವಾಗಿ ನಿಲ್ಲುತ್ತದೆ. ಸರ್ಕಾರಿ ಖಾಲಿ ಭೂಮಿಯಲ್ಲಿ ನಿವೇಶನ ನೀಡಲು ಅರ್ಜಿ ಸಲ್ಲಿಸಿದ್ದರೂ, ಸಕಾಲಿಕ ಕ್ರಮ ವಾಗದ ಹಿನ್ನೆಲೆಯಲ್ಲಿ ದಲಿತರು ಸರ್ಕಾರಿ ಜಾಗದಲ್ಲಿ ಅತಿಕ್ರಮಣ ಮಾಡಿ ಕೂರು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದ್ದಾರೆ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ)ಯ ಸಂಚಾಲಕ ಉದಯ್‌ ಕುಮಾರ ತಲ್ಲೂರ್‌. ‘ಅಧಿಕಾರಿಗಳು ಸರ್ಕಾರಿ ಜಾಗದಲ್ಲಿ ಸೈಟ್‌ ಮಾಡಿ ವಿತರಣೆ ಮಾಡುವ ಕುರಿತು ಭರವಸೆ ವ್ಯಕ್ತಪಡಿಸಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry