ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಸುಗ್ಗಿ ಆರಂಭ; 2 ಲಕ್ಷ ಲೀಟರ್ ಸಂಗ್ರಹದ ಗುರಿ

Last Updated 6 ಅಕ್ಟೋಬರ್ 2017, 8:47 IST
ಅಕ್ಷರ ಗಾತ್ರ

ವಿಜಯಪುರ: ಅಕ್ಟೋಬರ್‌ ಆರಂಭದೊಂದಿಗೆ ಹಾಲಿನ ಸುಗ್ಗಿಯೂ ಆರಂಭಗೊಂಡಿದ್ದು, ಅವಿಭಜಿತ ವಿಜಯಪುರ–ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಪ್ರಸ್ತುತ ಹಂಗಾಮಿನಲ್ಲಿ 2 ಲಕ್ಷ ಲೀಟರ್‌ ಹಾಲು ಸಂಗ್ರಹಿಸುವ ಗುರಿ ನಿಗದಿಪಡಿಸಿಕೊಂಡಿದೆ.

2016–17ನೇ ಸಾಲಿನಲ್ಲಿ ನಿತ್ಯ ಸರಾಸರಿ 1.47 ಲಕ್ಷ ಲೀಟರ್‌ ಹಾಲು ಸಂಗ್ರಹಿಸಿದ್ದರೆ, 1.75 ಲಕ್ಷ ಲೀಟರ್‌ ಹಾಲನ್ನು ಒಂದು ದಿನ ಸಂಗ್ರಹಿಸಿತ್ತು. 2017–18ನೇ ಸಾಲಿನಲ್ಲಿ ನಿತ್ಯ 1.74 ಲಕ್ಷ ಸರಾಸರಿ ಹಾಲು ಸಂಗ್ರಹಿಸುವ ಗುರಿ ಹೊಂದಿದ್ದು, ಈ ಸುಗ್ಗಿಯಲ್ಲೇ ಒಂದು ದಿನ 2 ಲಕ್ಷ ಲೀಟರ್‌ ಹಾಲು ಸಂಗ್ರಹಿಸುವ ಗುರಿ ಹೊಂದಿದೆ ಎಂದು ಒಕ್ಕೂಟದ ಮೂಲಗಳು ತಿಳಿಸಿವೆ.

‘ಹಾಲಿನ ಸುಗ್ಗಿ ಆರಂಭಗೊಳ್ಳುತ್ತಿದ್ದಂತೆ ಒಕ್ಕೂಟದಿಂದ ನಿತ್ಯ ಸಂಗ್ರಹಿಸುವ ಹಾಲಿನ ಶೇಖರಣೆ ಪ್ರಮಾಣವೂ ಹೆಚ್ಚಿದೆ. ಪ್ರಸ್ತುತ 1.65 ಲಕ್ಷ ಲೀಟರ್ ಹಾಲು ಸಂಗ್ರಹಗೊಳ್ಳುತ್ತಿದ್ದು, ಅಕ್ಟೋಬರ್ ಅಂತ್ಯದೊಳಗೆ 1.80 ಲಕ್ಷ ಲೀಟರ್‌ ತಲುಪಲಿದೆ. ಡಿಸೆಂಬರ್‌ನಿಂದ ಜನವರಿ 15ರೊಳಗೆ ಒಂದು ದಿನ ನಿಗದಿತ ಗುರಿ ಮುಟ್ಟಲಾಗುವುದು’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ ತಿಳಿಸಿದರು.

ಹೊಸ ಸಂಘ ಸ್ಥಾಪನೆ: ‘2017–18ರಲ್ಲಿ ನೂತನವಾಗಿ 150 ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸುವ ಗುರಿ ಹೊಂದಿದ್ದು, ಈಗಾಗಲೇ ಅವಳಿ ಜಿಲ್ಲೆಯ ವಿವಿಧೆಡೆ 64 ಸೊಸೈಟಿ ಆರಂಭವಾಗಿವೆ. ಇವುಗಳಲ್ಲಿ ಕನಿಷ್ಠ 20 ಸೊಸೈಟಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಾಗಿವೆ’ ಎಂದು ಅಶೋಕ ಹೇಳಿದರು.

‘ಪ್ರಸ್ತುತ ಸಾಲಿನಲ್ಲಿ ನೂತನವಾಗಿ ಆರಂಭಿಸುವ ಸೊಸೈಟಿಗಳಿಗೆ ‘ರಾಷ್ಟ್ರೀಯ ಹೈನು ಯೋಜನೆ’ಯಡಿ ಅಂದಾಜು ₨ 2 ಲಕ್ಷ ಮೌಲ್ಯದ ಉಪಕರಣಗಳನ್ನು ನೀಡಲಾಗುತ್ತಿದೆ. ನಿತ್ಯದ ವಹಿವಾಟಿಗೆ ಅಗತ್ಯವಿರುವ ಕಂಪ್ಯೂಟರ್‌, ದಾಖಲೆ ನಿರ್ವಹಣೆಯ ಕಡತಗಳು, ಹಾಲು ತೂಕದ ಯಂತ್ರ, ಪರೀಕ್ಷೆ ಯಂತ್ರ, ಉಪಕರಣ ಸೇರಿದಂತೆ ನಿತ್ಯ ಸಂಗ್ರಹಿಸುವ ಕ್ಯಾನ್‌ಗಳನ್ನು ಸಂಘಗಳಿಗೆ ಉಚಿತವಾಗಿ ಪೂರೈಸಲಾಗುತ್ತಿದೆ.

ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಸೊಸೈಟಿ ಸ್ಥಾಪನೆಗೆ ಉತ್ಸುಕತೆ ತೋರುತ್ತಿರುವವರ ಸಂಖ್ಯೆ ಹೆಚ್ಚಿದೆ. ಸ್ಥಳೀಯವಾಗಿ ಸಮೀಕ್ಷೆ ನಡೆಸಿಯೇ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ನೂತನ ಸಂಘ ಸ್ಥಾಪನೆಯ ಸಂಖ್ಯೆಯಲ್ಲಿ ಮೂರನೇ ಒಂದರಷ್ಟು ಸಂಖ್ಯೆಯ ಸೊಸೈಟಿಗಳು ಮಹಿಳೆಯರಿಂದ ನಿರ್ವಹಣೆಗೊಳ್ಳುವಂತೆ ರಚಿಸಲಾಗುತ್ತಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹೆಚ್ಚಳಕ್ಕೆ ಕ್ರಮ: ‘ಹಾಲಿನ ಉತ್ಪಾದನೆ ಹೆಚ್ಚಿಸಲು ಒಕ್ಕೂಟ ಹಲವು ಕ್ರಮಗಳನ್ನು ಕೈಗೊಂಡಿದೆ. ಮೇವು ವ್ಯರ್ಥವಾಗುವುದನ್ನು ತಪ್ಪಿಸಲು ₨ 30000 ಮೌಲ್ಯದ ಚಾಪ್‌ ಕಟರ್‌ನ್ನು (ಮೇವು ಕತ್ತರಿಸುವ ಯಂತ್ರ) ಶೇ 50ರ ರಿಯಾಯಿತಿ ದರದಲ್ಲಿ ₨ 15000ಕ್ಕೆ 1100 ಹೈನುಗಾರರಿಗೆ ಈಗಾಗಲೇ ವಿತರಿಸಿದೆ. ಇದರಿಂದ ಮೇವಿನ ನಿರ್ವಹಣೆ ಸುಲಲಿತವಾಗಿ ನಡೆಯುತ್ತಿದೆ.

ಶೀಘ್ರದಲ್ಲೇ ಮೇವು ಬೆಳೆಯುವ ‘ಹೈಡ್ರೋಫೋನಿಕ್ಸ್‌’ ತಂತ್ರಜ್ಞಾನವನ್ನು ಉಚಿತವಾಗಿ 200 ಹೈನುಗಾರರಿಗೆ ಪರಿಚಯಿಸಲಾಗಿದೆ. ಇದರಿಂದ ನಿತ್ಯ 10 ಟನ್‌ ಹಸಿ ಮೇವು ನಿರಂತರವಾಗಿ ದೊರೆಯಲಿದೆ. ಹಸಿ ಮೇವು ತಿನ್ನುವ ಹಸುಗಳು ಯಥೇಚ್ಛವಾಗಿ ಹಾಲು ನೀಡಲಿದೆ’ ಎಂದು ಒಕ್ಕೂಟದಿಂದ ಕೈಗೊಂಡಿರುವ ಪ್ರಮುಖ ನಿರ್ಧಾರಗಳನ್ನು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದರು.

‘ಹಾಲಿ ಕಾರ್ಯಾಚರಿಸುತ್ತಿರುವ 464 ಸೊಸೈಟಿಗಳ ಪೈಕಿ 350ಕ್ಕೂ ಹೆಚ್ಚು ಸೊಸೈಟಿ ಸಿಬ್ಬಂದಿಗೆ, ಹಸುಗಳು ಬೆದೆಗೆ ಬಂದಾಗ ಕೃತಕ ಗರ್ಭಧಾರಣೆ ಮಾಡುವುದರ ಕುರಿತಂತೆ ಸೂಕ್ತ ತರಬೇತಿ ನೀಡಲಾಗಿದೆ. ಇದರಿಂದ ಹಸುಗಳು ಸಮಯಕ್ಕೆ ಸರಿಯಾಗಿ ಗರ್ಭ ಧರಿಸಿ, ಹಾಲು ನೀಡಲು ಸಹಕಾರಿಯಾಗಿದೆ’ ಎಂದು ಡಿ.ಅಶೋಕ ಹೇಳಿದರು.

ಅಂಕಿ–ಅಂಶ
464 ಸಹಕಾರ ಸಂಘಗಳು ಅವಿಭಜಿತ ಜಿಲ್ಲೆಯಲ್ಲಿ
57000 ಸದಸ್ಯರು ನೋಂದಾಯಿತ
26000 ಸದಸ್ಯರಿಂದ ಹಾಲು ಉತ್ಪಾದನೆ
ಶೇ 50 ಸದಸ್ಯರಿಂದ ಸಂಘಕ್ಕೆ ಹಾಲು ಪೂರೈಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT