ಮುಗಿಯದ ಬರ ಪರಿಹಾರ ಕಾಮಗಾರಿ: ಅಧಿಕಾರಿಗೆ ನೋಟಿಸ್

ಶುಕ್ರವಾರ, ಮೇ 24, 2019
33 °C

ಮುಗಿಯದ ಬರ ಪರಿಹಾರ ಕಾಮಗಾರಿ: ಅಧಿಕಾರಿಗೆ ನೋಟಿಸ್

Published:
Updated:

ಯಾದಗಿರಿ: ಜಿಲ್ಲೆಯಲ್ಲಿ ಬರಪರಿಹಾರ ಕಾಮಗಾರಿಗಳನ್ನು ಪೂರ್ಣಗೊಳಿಸದ ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಎಂಜಿನಿಯರ್‌ಗೆ ನೋಟಿಸ್ ಜಾರಿಗೊಳಿಸುವಂತೆ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರು ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ ನಾಯಕ ಅವರಿಗೆ ಸೂಚಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಂದಾಯ ಹಾಗೂ ಇತರೆ ಇಲಾಖೆಗಳ ಪ್ರಗತಿ ಪರಿಶೀಲಿಸಿದ ಅವರು ಸಮರ್ಪಕ ವರದಿ ಸಲ್ಲಿಸದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.

‘ಬೇಸಿಗೆ ಕಾಲಾವಧಿ ಎಷ್ಟಿರುತ್ತದೆ? ಬರ ಅಂದ್ರೆ ಗೊತ್ತಾ ನಿಮಗೆ? 45 ದಿನಗಳಲ್ಲಿ ಬರಪರಿಹಾರ ಕಾಮಗಾರಿ ಪೂರ್ಣಗೊಳಿಸುವಂತೆ ಸರ್ಕಾರದ ಆದೇಶ ಇದೆ ನೋಡಿದ್ದೀರಾ? ಜಿಲ್ಲೆಯಲ್ಲಿ ಬರ ಯಾವಾಗ ಬಂತು? ಸರ್ಕಾರ ಪರಿಹಾರ ಕೈಗೊಳ್ಳಲು ಸೂಚಿಸಿ ಎಷ್ಟು ದಿನಗಳಾದವು ಗೊತ್ತೇನ್ರಿ? ಕಾಮಗಾರಿಗಳಿಗೆ ಬಳಸಿದ ಹಣ ಏನಾಯಿತು ಎಂಬುದನ್ನು ವಿವರಿಸಬೇಕು. ಇಲ್ಲವೇ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ವರದಿ ಸಲ್ಲಿಸಬೇಕು. ಪೂರ್ಣಗೊಂಡಿರದಿದ್ದರೆ ಸಮರ್ಪಕ ಕಾರಣಗಳನ್ನು ನೀಡಬೇಕು. ಇನ್ನು 24 ಗಂಟೆಗಳಲ್ಲಿ ವರದಿ ಸಿದ್ಧಗೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಖಂಡಿತ’ ಎಂದು ಅಧಿಕಾರಿಗಳ ಮೇಲೆ ಚಾಟಿ ಬೀಸಿದರು.

‘13, 14ನೇ ಹಣಕಾಸು ಯೋಜನೆಗಳಲ್ಲಿ ಸಾಕಷ್ಟು ಅನುದಾನ ಇದ್ದರೂ ಬಳಸಿಲ್ಲ. ಬರ ಪರಿಹಾರ, ತುರ್ತು ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ವಿವೇಚನಾ ನಿಧಿ ಇಲ್ಲವೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಚನಾ ನಿಧಿಯಲ್ಲೂ  ಹಣಕಾಸು ದೊರೆಯುತ್ತದೆ. ಆದರೂ, ಕುಡಿಯುವ ನೀರಿನ ಸಣ್ಣಪುಟ್ಟ ಪೈಪ್‌ಲೈನ್‌ ಕಾಮಗಾರಿಗಳಿಗೆ ಜಿಲ್ಲಾಡಳಿತದಿಂದ ಅನುದಾನ ಪಡೆಯಲಾಗಿದೆ. ಪಡೆದ ಅನುದಾನ ಬಳಸಿದ ಬಗ್ಗೆ ಅಥವಾ ಕಾಮಗಾರಿ ಬಗ್ಗೆ ಜಿಲ್ಲಾಡಳಿತಕ್ಕೆ ಏಕೆ ಮಾಹಿತಿ ನೀಡಿಲ್ಲ’ ಎಂದು ಪ್ರಶ್ನಿಸಿದರು.

ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ಮುಖ್ಯ ಎಂಜಿನಿಯರ್ ಮಲ್ಲಿಕಾರ್ಜುನ ಜಿಲ್ಲಾಧಿಕಾರಿಯ ಪ್ರಶ್ನೆಗಳಿಗೆ ‘ಮಾಡುತ್ತೇನೆ, ವರದಿ ನೀಡುತ್ತೇನೆ’ ಎಂದಷ್ಟೇ ಉತ್ತರಿಸಿದರು.

ಬೆಳೆ ಪರಿಹಾರ ಎಷ್ಟು ಬಂದಿದೆ?: ಇಡೀ ಜಿಲ್ಲೆಯಲ್ಲಿ ಆಧಾರ್ ಜೋಡಣೆ ಆಗದ ರೈತರ ಸಂಖ್ಯೆ ಒಂದು ತಿಂಗಳ ಹಿಂದಷ್ಟೇ 7 ಸಾವಿರ ಇತ್ತು. ಈಗ ಬ್ಯಾಂಕುಗಳ ವರದಿ ಪ್ರಕಾರ 700 ಇದೆ. ಅಂದರೆ ಶೇ 99ರಷ್ಟು ರೈತರ ಆಧಾರ್ ಜೋಡಣೆ ಆಗಿದೆ. ಬೆಳೆ ಪರಿಹಾರ ವಿತರಣೆ ಕೇಳಿದಾಗಲೆಲ್ಲಾ ಆಧಾರ್ ಜೋಡಣೆ ಆಗಿಲ್ಲ ಎಂದು ಉತ್ತರಿಸುತ್ತಾ ಬಂದೀರಿ. ಈಗ ಹೇಳಿ ಎಷ್ಟು ಜನ ರೈತರಿಗೆ ಬೆಳೆಪರಿಹಾರ ವಿತರಣೆ ಆಗಿದೆ. ಎಷ್ಟು ಜನರಿಗೆ ಪರಿಹಾರ ಸಿಕ್ಕಿಲ್ಲ ಎಂದು ತಹಶೀಲ್ದಾರ್ ಅವರನ್ನು ಜಿಲ್ಲಾಧಿಕಾರಿ ಪ್ರಶ್ನಿಸಿದರು.

ತಹಶೀಲ್ದಾರ್ ಅವರಿಂದ ಸಮರ್ಪಕ ಉತ್ತರ ಬರದಿದ್ದಾಗ,‘ಹೋಗಲಿ ಹೆಕ್ಟೇರ್‌ ಗೆ ಸರ್ಕಾರ ಎಷ್ಟು ಬೆಳೆ ಪರಿಹಾರ ನಿಗದಿ ಮಾಡಿದೆ ಗೊತ್ತಾ?’ ಎಂದು ಪ್ರಶ್ನಿಸಿದರು. ಆಗಲೂ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬರದಿದ್ದಾಗ, ‘ಮಾಡುವ ಕೆಲಸ ಬಗ್ಗೆ ಪರಿಪೂರ್ಣ ಅರಿವು ಪಡೆಯದಿದ್ದರೆ ಕೆಲಸವಾದರೂ ಹೇಗೆ ಪೂರ್ಣವಾಗುತ್ತದೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಒಂದು ಹೆಕ್ಟೇರ್‌ಗೆ ಸರ್ಕಾರ ₹ 6,800 ಸೇರಿ ಒಬ್ಬ ರೈತರಿಗೆ ಎರಡು ಹೆಕ್ಟೇರಿಗೆ ಮಾತ್ರ ಪರಿಹಾರ ನೀಡುತ್ತದೆ. ಕೂಡಲೇ ಜಿಲ್ಲೆಯಲ್ಲಿರುವ 16 ಕಂದಾಯ ನಿರೀಕ್ಷಕರು ಎಷ್ಟು ಜನ ರೈತರಿಗೆ ಬೆಳೆಪರಿಹಾರ ಸಿಕ್ಕಿದೆ ಮತ್ತು ಸಿಗದಿದ್ದರೆ ಕಾರಣವೇನು? ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ 19 ಜನ ರೈತರ ಆತ್ಮಹತ್ಯೆ ಪ್ರಕರಣ: ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ 19 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪ್ರಕರಣ ದಾಖಲಾಗಿದೆ. ಆದರೆ, ಅದರಲ್ಲಿ 5 ಮಂದಿಗೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಒಂದು ಪ್ರಕರಣ ತಿರಸ್ಕೃತಗೊಂಡಿದೆ ಎಂದು ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ ನಾಯಕ ಸಭೆಗೆ ಮಾಹಿತಿ ಒದಗಿಸಿದರು.

ವರದಿ ಕುರಿತು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅತೃಪ್ತಿ ವ್ಯಕ್ತಪಡಿಸಿ, ‘ಉಳಿದ 13 ಮಂದಿ ರೈತರ ಆತ್ಮಹತ್ಯೆ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಬೇಕಿತ್ತು. ಸರ್ಕಾರಕ್ಕೆ ಶಿಫಾರಸು ವರದಿ, ಅಭಿವೃದ್ಧಿ ಕಾಮಗಾರಿಗಳ ಕುರಿತು ಕಳುಹಿಸಿರುವ ಪ್ರಸ್ತಾವಗಳ ಬಗ್ಗೆ ಸರ್ಕಾರದಿಂದ ಆಗಾಗ ವರದಿ ಪಡೆಯಬೇಕು’ ಎಂದು ಸೂಚಿಸಿದರು.

ಸಭೆಯಲ್ಲಿ ಕಂದಾಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry