ಜೀವನ, ವೃತ್ತಿ ಹಾಗೂ ಒತ್ತಡದೊಂದಿಗಿನ ಸಂಧಾನ

ಸೋಮವಾರ, ಜೂನ್ 24, 2019
26 °C

ಜೀವನ, ವೃತ್ತಿ ಹಾಗೂ ಒತ್ತಡದೊಂದಿಗಿನ ಸಂಧಾನ

Published:
Updated:
ಜೀವನ, ವೃತ್ತಿ ಹಾಗೂ ಒತ್ತಡದೊಂದಿಗಿನ ಸಂಧಾನ

ಗಿರೀಶ್‌ಗೆ 48 ವರ್ಷ, ಹೆಸರಾಂತ ಸಾಫ್ಟವೇರ್‌ ಕಂಪನಿಯ ಉದ್ಯೋಗಿಯಾಗಿದ್ದ. ಒಳ್ಳೆಯ ಪ್ಯಾಕೇಜ್ ಕೊಟ್ಟಿದ್ದರು. ಚಿಕ್ಕ ವಯಸ್ಸಿನಲ್ಲಿ ತಿಂಗಳಿಗೆ ಆರಂಕಿ ಸಂಬಳ, ಎ.ಸಿ. ಆಫೀಸು, ಹೋಗಿ ಬರಲು ಕ್ಯಾಬ್ ವ್ಯವಸ್ಥೆ, ವಾರಕ್ಕೆ ಎರಡು ದಿನ ರಜೆ... ಇನ್ನೇನು ಬೇಕು? ಸ್ವರ್ಗಕ್ಕೆ ಮೂರೇ ಗೇಣು. ಆದರೆ, ಕ್ರಮೇಣ ಆತನಿಗೆ ಕಾರ್ಪೊರೇಟ್ ಜಗತ್ತಿನ ಬಿಸಿ ತಟ್ಟಲಾರಂಭಿಸಿತು.

ಗಂಟೆಗಟ್ಟಲೇ ಕಂಪ್ಯೂಟರ್ ಸ್ಕ್ರೀನ್ ದಿಟ್ಟಿಸಿ ನೋಡಿ, ಸದಾ ಬುಸುಗುಡುತ್ತಿರುವ ಕಣ್ಣುಗಳು, ಸಮಯದಲ್ಲಿ ಮುಗಿಸಲು ಹೆಣಗಾಡುತ್ತಿರುವ ಪ್ರಾಜೆಕ್ಟಗಳು, ಸದಾ ಸಿಡುಕುವ ಮ್ಯಾನೇಜರ್‌ಗಳು, ದಿನಾಲೂ ಟ್ರಾಫಿಕ್‌ನಲ್ಲಿ 50 ಕಿ.ಮೀ. ಪ್ರಯಾಣ – ಇವೆಲ್ಲವುಗಳ ಮಧ್ಯೆ ಗಿರೀಶ ಕಳೆದುಹೋಗತೊಡಗಿದ್ದ. ನಿದ್ದೆ ಎನ್ನುವುದು ಮರೀಚಿಕೆಯಾಗತೊಡಗಿತು.

ಮನಸ್ಸು ಯಾವಾಗಲೂ ಕಸಿವಿಸಿಗೊಂಡಿರುತ್ತಿತ್ತು. ತಳಮಳ, ಆತಂಕಗಳು ಮನೆಮಾಡಿದವು. ತಾನೊಂದು ಪ್ರೆಶರ್ ಕುಕ್ಕರ್‌ನಲ್ಲಿ ಬದುಕುತ್ತಿರುವಂತೆ ಭಾಸವಾಗತೊಡಗಿತು. ಮ್ಯಾನೇಜರ್‌ನನ್ನು ರಜೆ ಕೇಳಿದರೆ, ರ‍್ಯಾನ್‌ಸಂವೇರ್ ಮಾಡಿದ ಫಜೀತಿಗಳು ಸರಿ ಹೋಗುವವರೆಗೂ ಯಾರಿಗೂ ರಜೆ ಇಲ್ಲವೆಂದು ಘೋಷಿಸಿಬಿಟ್ಟ. ಇದರಿಂದ ಗಿರೀಶನಿಗೆ ಇನ್ನಷ್ಟು ಸಂಕಟವಾಯಿತು.

ಗೊಂದಲ, ಕಸಿವಿಸಿ, ಆತಂಕಗಳನ್ನು ಮರೆಯಲು ಕುಡಿಯಲಾರಂಭಿಸಿದ. ಮೊದಮೊದಲು ವಾರಕ್ಕೊಮ್ಮೆ ಅಥವಾ ಎರಡು ಬಾರಿಯಾಗುವುದು, ಇತ್ತೀಚಿಗೆ ದಿನಾಲೂ ಶುರುವಾಯಿತು. ಕೆಲಸಕ್ಕೆ ಹೋದರೂ ಪ್ರೋಗ್ರಾಮ್ ಬರೆಯಲು ಆಸಕ್ತಿ ಇರಲಿಲ್ಲ. ಕೆಲಸದಲ್ಲಿ ತಪ್ಪುಗಳಾಗತೊಡಗಿದವು.

ಹಾಗೆ ಮಾಡಿದ ಎಡವಟ್ಟೊಂದು, ಪ್ರಾಜೆಕ್ಟ್‌ ಟೀಮ್‌ನ ರೆಪ್ಯೂಟೇಶನ್ ಹಾಳು ಮಾಡಿತು. ಗಿರೀಶನ ಬದಲಾದ ವರ್ತನೆ ಗಮನಿಸಿದ ಸಹೋದ್ಯೋಗಿಯೊಬ್ಬ ಆತನನ್ನು ಸೈಕಿಯಾಟ್ರಿಸ್ಟ್ ಬಳಿ ಕರೆದುಕೊಂಡು ಹೋದಾಗ, ಅವರು ಗಿರೀಶನಿಗೆ ಅತಿ ಒತ್ತಡದಿಂದ ಖಿನ್ನತೆ ಅಥವಾ ಡಿಪ್ರೆಶನ್ ಉಂಟಾಗಿದೆ ಎಂದು ಹೇಳಿದರು.

ಬಹುಶಃ, ಈ ಮೇಲಿನ ಕಥೆಯಲ್ಲಿ ಸಿಲಿಕಾನ್ ನಗರಿಯ ಸಾಫ್ಟ್‌ವೇರ್ ಹಾಗೂ ಇನ್ನಿತರ ಕಾರ್ಪೋರೇಟ್ ವಲಯದ ಉದ್ಯೋಗಿಗಳು ತಮ್ಮದೇ ಜೀವನದ ಒಂದು ತುಣುಕನ್ನು ಕಾಣುತ್ತಿರಬಹುದು. ಇಂದಿನ ’ಟಾರ್ಗೆಟ್’ ಯುಗದ ಔದ್ಯೋಗಿಕ ಕ್ಷೇತ್ರ, ನಮ್ಮನ್ನು ವ್ಯಾವಹಾರಿಕವಾಗಿ ಸಿರಿವಂತರನ್ನಾಗಿ ಮಾಡುವುದರ ಜೊತೆಗೆ, ಒತ್ತಡ, ಬರ್ನ್‌ಔಟ್ ಹಾಗೂ ಖಿನ್ನತೆಗಳ ವಿಷವರ್ತುಲಕ್ಕೆ ಸಿಕ್ಕಿಸುತ್ತಿದೆ.

ಒತ್ತಡ (stress) ಎನ್ನುವುದು ಮಾನವಜೀವನದ ನೈಸರ್ಗಿಕ ಅವಶ್ಯಕತೆ. ಆರೋಗ್ಯಕರ ಒತ್ತಡ ನಮ್ಮಲ್ಲಿನ ಅತ್ಯುನ್ನತ ಸಾಮರ್ಥ್ಯವನ್ನು ಹೊರತರಲು ಉತ್ತೇಜಿಸುತ್ತದೆ. ಆದರೆ ದೀರ್ಘಕಾಲದ ಮತ್ತು ಅತಿಯಾದ ಒತ್ತಡ ನಮ್ಮ ಮನಃಸ್ಥಿತಿಯನ್ನು ಕೆಡಿಸಿ, ಮನಸ್ಸು ಹಾಗೂ ದೇಹದ ಆರೋಗ್ಯವನ್ನು ಹಾಳು ಮಾಡುತ್ತದೆ.

ದೀರ್ಘಕಾಲದ ಒತ್ತಡವು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಅತಿಯಾದ ಒತ್ತಡ ಸ್ಥಿತಿಯಲ್ಲಿ ದೇಹದಲ್ಲಿ, ಹೈಪೊಥೆಲಮೊ - ಪಿಟ್ಯೂಟರಿ - ಅಡ್ರಿನಲ್ ಆಕ್ಷಿಸ್ (HPA Axis) ಉತ್ತೇಜಿತಗೊಂಡು, ದೇಹದಲ್ಲಿ ಕಾರ್ಟಿಸಾಲ್, ಆಡ್ರಿನಲಿನ್ ಹಾಗೂ ಇನ್ನಿತರ ಕ್ಷಿಪ್ರ ಕಾರ್ಯಾಚರಣೆಯ ಹಾರ್ಮೋನುಗಳ ಪ್ರಮಾಣ ಹೆಚ್ಚಿಸುತ್ತದೆ. ಈ ಹಾರ್ಮೋನುಗಳು, ತತ್‌ಕ್ಷಣವೇ ದೇಹವನ್ನು ಯದ್ಧದ ರೀತಿಯ ಪರಿಸ್ಥಿತಿಗೆ (Fight and Flight status) ಸನ್ನದ್ಧಗೊಳಿಸುತ್ತವೆ. ಇದರಿಂದ ಹೃದಯದ ಬಡಿತ ಹೆಚ್ಚುವುದು, ಉಸಿರಾಟ ಜೋರಾಗುವುದು, ಅತಿಯಾಗಿ ಬೆವರುವುದು, ಮಾಂಸಖಂಡಗಳ ಸಂಕುಚನ, ಹೆಚ್ಚಿದ ಮೆದುಳಿನ ಚುರುಕುತನ – ಹೀಗೆ ಯಾರಾದರೂ ಆಕ್ರಮಣ ಮಾಡಿದರೆ ಪ್ರತಿಕ್ರಿಯೆ ನೀಡಲು ಸನ್ನದ್ಧರಾಗುವಂತೆ ದೇಹವು ತನ್ನನ್ನು ತಾನು ಸಿದ್ಧಪಡಿಸಿಕೊಳ್ಳುತ್ತದೆ.

ಆದರೆ ಇದೇ ರೀತಿ ಒತ್ತಡವು ಸತತವಾಗಿ ಇದ್ದರೆ, ಈ ಮೇಲಿನ ಹಾರ್ಮೋನುಗಳ ಮಟ್ಟ ಯಾವಾಗಲೂ ಹೆಚ್ಚಿರುವುದರಿಂದ ದೇಹವು ಬಸವಳಿಯುತ್ತದೆ. ಬೇಗ ಸುಸ್ತಾಗುವುದು, ನಿದ್ರಾಹೀನತೆ, ತಲೆನೋವು ಹಾಗೂ ಇನ್ನಿತರ ದೈಹಿಕ ನೋವುಗಳು ಕಾಣಿಸಿಕೊಳ್ಳತ್ತವೆ.

ಭಯ, ಆತಂಕ, ಉದ್ವೇಗ, ಜೋರಾದ ಎದೆಬಡಿತ, ಏಕಾಗ್ರತೆ ಕೊರತೆ, ಮರೆವು, ನಿರ್ಧಾರ ತೆಗೆದುಕೊಳ್ಳಲು ಸಮಸ್ಯೆ, ಮುಂಗೋಪ, ಚಂಚಲತೆ ಹಾಗೂ ಗೊಂದಲದಂತಹ ಲಕ್ಷಣಗಳು ಕಾಣಿಸುತ್ತವೆ. ರೋಗ ನಿರೋಧಕಶಕ್ತಿ ಕುಗ್ಗುವುದರಿಂದ, ಪದೇ ಪದೇ ಇನ್‌ಫೆಕ್ಷನ್‌ಗಳಾಗುವುವು. ಅಜೀರ್ಣ, ಲೈಂಗಿಕ ನಿರಾಸಕ್ತಿಗಳೂ ಕೂಡ ದೀರ್ಘಕಾಲದ ಒತ್ತಡದ ಚಿಹ್ನೆಗಳು. ಈ ಲಕ್ಷಣಗಳಿಂದ ಮುಕ್ತವಾಗಲು ವ್ಯಕ್ತಿಯು ಮದ್ಯಪಾನ, ಧೂಮಪಾನ ಹಾಗೂ ಗಾಂಜಾಗಳಂತಹ ದುಶ್ಚಟಗಳಿಗೆ ಶರಣಾಗುತ್ತಾನೆ.

ಇದೇ ಅಲ್ಲದೇ ಖಿನ್ನತೆ, ಆತಂಕದ ಕಾಯಿಲೆಗಳು, ಮಧುಮೇಹ, ಹೆಚ್ಚಿದ ರಕ್ತದೊತ್ತಡ, ಹೃದ್ರೋಗಗಳು, ಬೊಜ್ಜು, ಸಂತಾನಹೀನತೆ ಹಾಗೂ ಇನ್ನಿತರ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಿಗೆ, ಒತ್ತಡವೇ ಮುಖ್ಯವಾದ ಕಾರಣವೆಂದು ಅನೇಕ ಸಂಶೋಧನೆಗಳು ತೋರಿಸಿಕೊಟ್ಟಿವೆ.

ಈ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡವು, ಅನೇಕ ಮನಸ್ಸಿನ ಹಾಗೂ ದೇಹದ ಸಮಸ್ಯೆಗಳಿಗೆ ಮುನ್ನುಡಿ ಹಾಡುತ್ತಿದೆ. ಈ ಒತ್ತಡದ ಮುಖ್ಯವಾದ ಮೂಲವೇ ಉದ್ಯೋಗದ ಸ್ಥಳ. ನಮ್ಮ ಜೀವಮಾನದ ಅತಿ ಹೆಚ್ಚು ಕಾಲವನ್ನು ನಾವು ಉದ್ಯೋಗದೊಂದಿಗೆ ಕಳೆಯುತ್ತೇವೆ. ಹೀಗಾಗಿ ಆ ಸಮಯದಲ್ಲಿ ಮನಸ್ಸು ಆರೋಗ್ಯಕರವಾಗಿರುವುದು ಅತ್ಯವಶ್ಯ. ಇದರ ಮಹತ್ವವನ್ನು ಒತ್ತಿ ಹೇಳಲೆಂದೆ, ’ಉದ್ಯೋಗ ಸ್ಥಳದಲ್ಲಿ ಮಾನಸಿಕ ಆರೋಗ’ವನ್ನು, ಈ ವರ್ಷದ ವಿಶ್ವ ಮಾನಸಿಕ ಆರೋಗ್ಯ ದಿನದ ವಿಷಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಉದ್ಯೋಗ ಸ್ಥಳದಲ್ಲಿ ಅತಿಯಾದ ಒತ್ತಡ: ನಮ್ಮ ದೇಶದಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ, ಬಹುಶಃ ’ಒತ್ತಡ’ ಹಾಗೂ ’ಬರ್ನಔಟ್’ಗಳೆಂಬ ಶಬ್ದಗಳಿಗೆ ಅರ್ಥ ಬಂದಿದ್ದೆ ಜಾಗತೀಕರಣ ಶುರುವಾದಾಗಿನಿಂದ. ನಾವು ನಮ್ಮ ಅಜ್ಜಿ-ತಾತಂದಿರು ‘ನಮಗೆ ಕೆಲಸದಲ್ಲಿ ಸಿಕ್ಕಾಪಟ್ಟೆ ಒತ್ತಡವಿತ್ತು. ಆದರೆ ನಿದ್ದೆ ಬರ್ತಿರ‍್ಲಿಲ್ಲ, ಊಟ ಸೇರ್ತಿರಲಿಲ್ಲ’ ಎಂದು ಎಂದೂ ಹೇಳಿದ ಉದಾಹರಣೆಗಳಿಲ್ಲ. ಅವರುಗಳು ತಮ್ಮ ಉತ್ತಮವಾದ ಆರೋಗ್ಯಕ್ಕೆ ಒತ್ತಡರಹಿತ ಜೀವನವೇ ಕಾರಣವೆಂದು ಹೇಳುತ್ತಿರುತ್ತಾರೆ.

ಕೆಲಸದ ಸ್ಥಳದಲ್ಲಿ ಅನಾರೋಗ್ಯಕರ ಒತ್ತಡಕ್ಕೆ ಕಾರಣಗಳೇನು?

ಕಾರ್ಪೋರೇಟ್ ವಲಯವು ವಿಶ್ವದ ಆರ್ಥಿಕ ಆಗುಹೋಗುಗಳ ಮೇಲೆ ಅವಲಂಬಿತವಾಗಿರುವುದರಿಂದ, ಉದ್ಯೋಗಿಗಳಿಂದ ತುಂಬ ಅಪೇಕ್ಷಿಸುತ್ತದೆ. ಹೀಗಾಗಿ ಉದ್ಯೋಗಿಯು ಒಂದು ರೀತಿಯ ಅಸುರಕ್ಷತೆಯ ಭಾವದೊಂದಿಗೆ ಜೀವಿಸುತ್ತಿರುತ್ತಾನೆ. ಸಮಯದ ನಿಬಂಧನೆಯೊಂದಿಗೆ ಗುರಿ (ಟಾರ್ಗೆಟ್) ಸಾಧನೆ, ಹೆಚ್ಚಿನ ಕೆಲಸದ ಹೊರೆ, ಸ್ವಾಯತ್ತತೆಯ ಕೊರತೆ, ತಮ್ಮ ಅರ್ಹತೆಗಿಂತ ಕಡಿಮೆಯಿರುವ ಕೆಲಸ, ಅಸಮರ್ಪಕ ಶ್ರೇಣಿ ವ್ಯವಸ್ಥೆ, ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆ ಹಾಗೂ ಅವಾಸ್ತವಿಕವಾದ ಹೆಚ್ಚಿದ ಅಪೇಕ್ಷೆ, ಸಹೋದ್ಯೋಗಿಗಳೊಂದಿಗೆ ಘರ್ಷಣೆಗಳು, ಕೆಲಸದ ಬಗ್ಗೆ ತೃಪ್ತಿ ಇಲ್ಲದಿರುವುದು – ಇಂಥ ಕಾರಣಗಳಿಂದ ಒತ್ತಡ ಹೆಚ್ಚಾಗುತ್ತದೆ.

ಸಮಯದ ಅಭಾವವೋ ಅಥವಾ ಸಮಯವನ್ನು ವ್ಯವಸ್ಥಿತವಾಗಿ ಯೋಜಿಸಿಕೊಳ್ಳಲಾಗದ್ದರಿಂದಲೋ, ವೈಯಕ್ತಿಕ ಜೀವನ ಹಾಗೂ ಕೆಲಸದಲ್ಲಿ ಸಮತೋಲನ ಬಿಗಡಾಯಿಸುತ್ತದೆ; ದಾಂಪತ್ಯ ಹಾಗೂ ಕೌಟುಂಬಿಕ ಮನಸ್ತಾಪಗಳು ಶುರುವಾಗುತ್ತವೆ.

ಉದ್ಯೋಗಸ್ಥಳದ ಒತ್ತಡದ ಪರಿಣಾಮಗಳು

ಕೆಲಸಕ್ಕೆ ಪದೇ ಪದೇ ಗೈರು ಹಾಜರಾಗುವುದು. ಪಾಶ್ಚಾತ್ಯದೇಶಗಳಲ್ಲಿ ನಡೆದ ಅಧ್ಯಯನಗಳ ಪ್ರಕಾರ, ಪ್ರತಿ ಬಾರಿ ಖಿನ್ನತೆಯುಂಟಾದಾಗ ವ್ಯಕ್ತಿಯು ಸರಾಸರಿ 36 ದಿನಗಳು ರಜೆ ಪಡೆಯುತ್ತಾನೆ. ಭಾರತದಲ್ಲಿ ಖಿನ್ನತೆ, ಒತ್ತಡಗಳನ್ನು ಗಂಭೀರ ಸಮಸ್ಯೆಗಳೆಂದು ಇನ್ನೂ ಸಮಾಜವು ಪರಿಗಣಿಸಿಲ್ಲವಾದ್ದರಿಂದ, ನಮ್ಮಲ್ಲಿ ಬಹುಶಃ ಖಿನ್ನತೆಗಾಗಿ ರಜೆಯನ್ನು ಪಡೆಯುವ ಉದಾಹರಣೆಗಳು ತುಂಬ ಕಡಿಮೆ.

ಏಕಾಗ್ರತೆಯ ಕೊರತೆ ಹಾಗೂ ಮರೆವಿನಿಂದ ಕೆಲಸದಲ್ಲಿ ತಪ್ಪುಗಳುಂಟಾಗುತ್ತವೆ. ಸಾಮರ್ಥ್ಯ ಕುಸಿಯುತ್ತದೆ. ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸುತ್ತವೆ.

ತಾಳ್ಮೆ ಕಡಿಮೆಯಾಗಿ, ಮುಂಗೋಪ, ಸಿಡುಕಿನ ಭಾವನೆ ಹೆಚ್ಚಾಗುವುದು. ಇದರಿಂದ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳ ಜೊತೆ ಘರ್ಷಣೆ ಉಂಟಾಗಿ ವಾತಾವರಣ ಕೆಡಬಹುದು. ಕೆಲವೊಮ್ಮೆ ಇಂತಹ ಘಟನೆಗಳು ಗಂಭೀರ ಸ್ವರೂಪ ಪಡೆದು ಹಿಂಸೆಯಲ್ಲಿ ಕೊನೆಗೊಳ್ಳಬಹುದು (ಪೋಲೀಸ್ ಇಲಾಖೆ ಹಾಗೂ ಸೇನೆಯಲ್ಲಿ ಸಹೋದ್ಯೋಗಿ ಹಾಗೂ ಮೇಲಧಿಕಾರಿಗಳ ಮೇಲೆ ಹಲ್ಲೆಯ ಉದಾಹರಣೆಗಳಿವೆ).

ಈ ಎಲ್ಲ ಕಾರಣಗಳಿಂದ ಉತ್ಪಾದಕತೆ ಕಡಿಮೆಯಾಗಿ, ಆರ್ಥಿಕ ಹೊರೆ ಹೆಚ್ಚುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ, ಉದ್ಯೋಗದ ಸ್ಥಳದಲ್ಲಿ, ಐವರಲ್ಲಿ ಒಬ್ಬರು ಖಿನ್ನತೆ ಹಾಗೂ ಇನ್ನಿತರ ಒತ್ತಡಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಈಗಾಗಲೇ ವಿಶ್ವದಲ್ಲಿ 30 ಕೋಟಿ ಜನ ಖಿನ್ನತೆಯಿಂದ ಬಳಲುತ್ತಿರುವ ಅಂದಾಜಿದೆ. ವರ್ಷಕ್ಕೆ ಎಂಟು ಲಕ್ಷ ಜನ ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಳ್ಳತ್ತಿದ್ದಾರೆ.

ವರ್ಲ್ಡ್‌ ಇಕಾನೊಮಿಕ್ ಫೋರಂ ಹಾಗೂ ಹಾರ್ವಡ್‌ನ ಸಾರ್ವಜನಿಕ ಆರೋಗ್ಯ ಅಧ್ಯಯನ ಶಾಲೆಯು ನಡೆಸಿದ ಸಮೀಕ್ಷೆಯ ಪ್ರಕಾರ ವಿಶ್ವವು 2011ರಿಂದ 2030ರ ಅವಧಿಯಲ್ಲಿ ಮನೋರೋಗಗಳಿಂದ ಸುಮಾರು 16.3 ಲಕ್ಷ ಕೋಟಿ ಡಾಲರ್‌ಗಳ ಆರ್ಥಿಕ ಉತ್ಪಾದನೆಯನ್ನು ಕಳೆದುಕೊಳ್ಳಲಿದೆ.

ಒತ್ತಡ ನಿರ್ವಹಣೆ ಹೇಗೆ?

ಒತ್ತಡವನ್ನು ಜೀವನದ ಅವಿಭಾಜ್ಯ ಅಂಗವೆಂದರೆ ತಪ್ಪಾಗಲಾರದು. ಆದರೆ ಅದರ ಜೊತೆಗೆ ಸಂಧಾನ ಮಾಡಿಕೊಂಡರೆ, ಅದರ ನಿರ್ವಹಣೆ ಅಷ್ಟೇನೂ ಕಷ್ಟಕರವೆನಿಸುವುದಿಲ್ಲ.

ದೈನಂದಿನ ನಡುವಳಿಕೆಯಲ್ಲಿ ಬದಲಾವಣೆ

ಮನಸ್ಸು ಒಂದು ಪ್ರೆಶರ್ ಕುಕ್ಕರ್‌ನಂತೆ. ಅದು ಒಂದು ಮಟ್ಟದವರೆಗೆ ಮಾತ್ರ ಒತ್ತಡವನ್ನು ಸಹಿಸಿಕೊಳ್ಳಬಹುದು. ಆ ಮಟ್ಟ ಮೀರಿದಾಗ ಅವಘಡಗಳುಂಟಾಗುತ್ತವೆ. ಕುಕ್ಕರ್‌ನಲ್ಲಿ, ಒತ್ತಡ ಹೆಚ್ಚಾದಾಗ ಹೇಗೆ ಅದನ್ನು ಬಿಡುಗಡೆ ಮಾಡುತ್ತದೆಯೋ, ಅದೇ ರೀತಿ ನಾವು ನಮ್ಮ ಮನಸ್ಸಿಗೆ ಒತ್ತಡ ಹೊರಹಾಕಲು ದಾರಿ ತೋರಬೇಕು. ದಿನದ ಆಗುಹೋಗುಗಳನ್ನು ತಮ್ಮ ಬಂಧುಮಿತ್ರರೊಂದಿಗೆ ಹಂಚಿಕೊಳ್ಳುವುದು, ದಿನಚರಿ ಬರೆಯುವುದು, ಹಾಸ್ಯಪ್ರಜ್ಞೆ ಹಾಗೂ ನಗು – ಇವು ಒತ್ತಡವನ್ನು ಹೊರಹಾಕಲು ಒಳ್ಳೆಯ ದಾರಿಗಳು. ಸಮಯದ ಸರಿಯಾದ ನಿರ್ವಹಣೆಯಿಂದ ಅನೇಕ ಒತ್ತಡ ತರುವ ಸನ್ನಿವೇಶಗಳನ್ನು ದೂರವಿಡಬಹುದು.

ಯೋಚನಾ ಶೈಲಿಯಲ್ಲಿ ಬದಲಾವಣೆ: ಘಟನೆಗಳನ್ನು ತರ್ಕಬದ್ಧವಾಗಿ ವಿಶ್ಲೇಷಿಸಿ. ಕಾರಣವಿಲ್ಲದೇ ಹತಾಶರಾಗುವುದು, ಆತಂಕಗೊಳ್ಳವುದು ಬೇಡ. ಧನಾತ್ಮಕ ಯೋಚನೆ ಹಾಗೂ ಮನಃಸ್ಥಿತಿಯನ್ನು ರೂಢಿಸಿಕೊಳ್ಳಿ. ನಿಮ್ಮ ಬೇಕು-ಬೇಡಗಳಲ್ಲಿ ಸ್ಪಷ್ಟತೆ ಇರಲಿ. ನಿಮ್ಮ ಕರ್ತವ್ಯ ಹಾಗೂ ಹಕ್ಕುಗಳ ಬಗ್ಗೆ ಗಮನವಿರಲಿ. ನಿಮ್ಮ ಪ್ರತಿಭೆ ಹಾಗೂ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಲಿ. ಆದರೆ, ವಾಸ್ತವಿಕ ಹಾಗೂ ಸಾಧಿಸಬಹುದಾದಂತಹ ಗುರಿಗಳನ್ನು ಹೊಂದಿ.

ಜೀವನಶೈಲಿಯಲ್ಲಿ ಬದಲಾವಣೆ: ಆರೋಗ್ಯಕರ ಆಹಾರಪದ್ಧತಿ (ಕೊಬ್ಬು, ಅತಿಯಾದ ಸಕ್ಕರೆ, ಕೃತಕ ಆಹಾರಗಳಿಂದ ದೂರವಿರುವುದು), ನಿಯಮಿತ ವ್ಯಾಯಾಮ, ನಿಯಮಿತ ಹಾಗೂ ಪರಿಪೂರ್ಣ ನಿದ್ದೆ, ವಿಶ್ರಾಂತಿಯನ್ನು ಪಡೆಯುವುದನ್ನು ರೂಢಿಸಿಕೊಳ್ಳಬೇಕು. ದುಶ್ಚಟಗಳನ್ನು ತ್ಯಜಿಸುವುದು ಒಳ್ಳೆಯದು. ಧ್ಯಾನ, ಯೋಗ, ಪ್ರಾಣಾಯಾಮ ಮುಂತಾದವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಒಳ್ಳೆಯ ಹವ್ಯಾಸಗಳನ್ನು ಬೆಳೆಸುಕೊಳ್ಳಿ. ಹವ್ಯಾಸಗಳಿಂದ ಮನೋಲ್ಲಾಸ ಹೆಚ್ಚಿ, ಒತ್ತಡ ಕಡಿಮೆಯಾಗುವುದರ ಜೊತೆಗೆ,  ಕಾರ್ಯಸಾಮರ್ಥ್ಯವೂ ಹೆಚ್ಚುತ್ತದೆ.

ಒತ್ತಡ ಅತಿಯಾಗಿ, ಅದನ್ನು ನಿರ್ವಹಿಸುವುದು ತುಂಬ ಕಷ್ಟವೆನ್ನಿಸತೊಡಗಿದಾಗ, ಕೂಡಲೇ ಮನೋರೋಗತಜ್ಞರನ್ನು ಕಾಣಿ. ಅವರು ಇನ್ನೂ ಅನೇಕ ರಿಲ್ಯಾಕ್ಸೇಶನ್ ಟೆಕ್ನಿಕ್‌ಗಳನ್ನು (breathing exercises, biofeedback, JMMR) ಹಾಗೂ ಆರೋಗ್ಯಕರ ಜೀವನಕ್ಕಾಗಿ ಅವಶ್ಯಕವಿರುವ ಜೀವನ ಕೌಶಲಗಳ ಬಗ್ಗೆಯೂ ತರಬೇತಿ ನೀಡುತ್ತಾರೆ. ಹೆಚ್ಚಿನ ಮಾಹಿತಿಯನ್ನು  www.jrneuropsych.com ಜಾಲತಾಣದಲ್ಲಿ ಪಡೆಯಬಹುದು.

‘If you do what you love, then it won’t be a job’- ಎಂದು ಹೇಳಲಾಗುತ್ತದೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕೆಲವು ಸಂದರ್ಭಗಳಿಂದಾಗಿ ಇಷ್ಟವಿರದ ಕೆಲಸಕ್ಕೆ ಸೇರಬೇಕಾಗುತ್ತದೆ. ಆಗ ನಾವು ಹತಾಶರಾಗಿ ಕೈ ಚೆಲ್ಲಿ ಕೂರುವುದಕ್ಕಿಂತ ಕೆಲವು ವಿಷಯಗಳನ್ನು ಪರಾಮರ್ಶಿಸಬೇಕು.

ನಮ್ಮ ವ್ಯಕ್ತಿತ್ವಕ್ಕೆ ಅನುಸಾರ, ನಮಗೆ ಯಾವ ಕ್ಷೇತ್ರದಲ್ಲಿ ಒಲವಿದೆ ಅಥವಾ ಯಾವ ಕ್ಷೇತ್ರ ಇಷ್ಟವೇ ಇಲ್ಲ ಎಂಬುದರ ಬಗ್ಗೆ ವಿಶ್ಲೇಷಿಸಿಕೊಳ್ಳಬೇಕು. ಅದರ ಪ್ರಕಾರ ಕೆಲಸವನ್ನೂ ಆಯ್ಕೆ ಮಾಡಿಕೊಳ್ಳಬೇಕು. ನಮಗೆ ಸಧ್ಯದ ಕೆಲಸವನ್ನು ಬಿಡಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ , ಕೆಲಸಕ್ಕೆ ಬೇಕಾಗಿರುವ ಹೆಚ್ಚಿನ ವ್ಯಾಸಂಗ, ಕೌಶಲ ಹಾಗೂ ಅನುಭವಗಳನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಆತ್ಮ ವಿಶ್ವಾಸ ಹಾಗೂ ಭವಿಷ್ಯದಲ್ಲಿ ಅವಕಾಶಗಳು ಹೆಚ್ಚುತ್ತವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry