ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದನೆಕಾಯಿಯ ಬಗೆ ಬಗೆ ಭಕ್ಷ್ಯ

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬದನೆಕಾಯಿಯನ್ನು ಕಂಡು ಮುಖ ಸಿಂಡರಿಸುವವರೂ ಈ ತಿನಿಸುಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನಬಹುದು. ಬದನೆಯ ಪ್ರಿಯರಿಗಾಗಿ ಕೆಲವು ವಿಶೇಷ ಅಡುಗೆಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ ಅಹಲ್ಯ ಎಂ.

ಬದನೆಕಾಯಿ ಗೊಜ್ಜು
ಬೇಕಾಗುವ ಸಾಮಗ್ರಿಗಳು: ಬದನೆಕಾಯಿ ಹೋಳುಗಳು – 1ಕಪ್, ಈರುಳ್ಳಿ ಚೂರು – 1/4ಕಪ್, ರುಚಿಗೆ –ಉಪ್ಪು, ಬೆಲ್ಲ – 1ಚೂರು, ಹುಣಿಸೆರಸ – 1/2ಚಮಚ, ಕಾಯಿತುರಿ – 2ಚಮಚ, ಅರಿಶಿಣಪುಡಿ – ಚಿಟಿಕೆ, ಧನಿಯಾ – 1/4ಚಮಚ, ಜೀರಿಗೆ – 1ಚಮಚ, ಮೆಣಸಿನಕಾಳು, ಮೆಂತೆ, ಸಾಸಿವೆ, ತಲಾ 5–6ಕಾಳು, ಕರಿಬೇವು – 5ಎಲೆ, ಎಣ್ಣೆ 2 – 3ಚಮಚ, ಕೆಂಪುಮೆಣಸು – 5, ಹುರಿಗಡಲೆ 1 ಚಮಚ.

ತಯಾರಿಸುವ ವಿಧಾನ: ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ, ಕರಿಬೇವು, ಈರುಳ್ಳಿ ಚೂರು, ಬದನೆಕಾಯಿ ಹೋಳುಗಳು ಹಾಗೂ ಅರಿಶಿಣಪುಡಿಯನ್ನು ಒಂದರ ನಂತರ ಒಂದನ್ನು ಹಾಕಿ; ಬದನೆಕಾಯಿಯ ಹೋಳುಗಳು ಮೆತ್ತಗಾಗುವ ತನಕ ಹುರಿಯಿರಿ. ಧನಿಯಾ, ಜೀರಿಗೆ, ಮೆಣಸಿನಕಾಳು, ಮೆಂತ್ಯ, ಸಾಸಿವೆ ಹಾಗೂ ಕೆಂಪುಮೆಣಸನ್ನು ಸೇರಿಸಿ ಚಿಟಿಕೆ ಎಣ್ಣೆಯಲ್ಲಿ ಹುರಿದು ಕಾಯಿತುರಿ, ಹುರಿಗಡಲೆಯನ್ನು ಸೇರಿಸಿ ರುಬ್ಬಿ ಬೆಂದ ಹೋಳುಗಳಿಗೆ ಸೇರಿಸಿ. ಅಗತ್ಯವಿದ್ದಷ್ಟು ನೀರನ್ನು ಹಾಕಿ ಕುದಿ ಬಂದ ನಂತರ ಹುಣಿಸೆನೀರು, ಬೆಲ್ಲ ಮತ್ತು ಉಪ್ಪನ್ನು ಹಾಕಿ ಕೆದಕಿ, ಕುದಿ ಬಂದ ನಂತರ ಇಳಿಸಿದರೆ, ಗೊಜ್ಜು ರೆಡಿ.

*


ಬದನೆಕಾಯಿ ಬಾತ್ 
ಬೇಕಾಗುವ ಸಾಮಗ್ರಿಗಳು: ಬದನೆಕಾಯಿ ಹೋಳುಗಳು – 1ಕಪ್,  ಅನ್ನ – 1ಕಪ್, ಕೆಂಪುಮೆಣಸು – 5, ಧನಿಯ – 1/2ಚಮಚ, ಉದ್ದಿನಬೇಳೆ ಮತ್ತು  ಕಡಲೆಬೇಳೆ  ಸೇರಿ –  3/4ಚಮಚ, ಅರಿಶಿಣಪುಡಿ – ಚಿಟಿಕೆ, ರುಚಿಗೆ – ಉಪ್ಪು, ನಿಂಬೆರಸ – 1ಚಮಚ, ಒಣಕೊಬ್ಬರಿತುರಿ – 1ಚಮಚ, ಎಣ್ಣೆ – 4ಚಮಚ, ಸಾಸಿವೆ – 1/4ಚಮಚ, ಕರಿಬೇವು – 1 ಕಡ್ಡಿ, ಗರಂ ಮಸಾಲಾ ಪೌಡರ್ ಸ್ವಲ್ಪ.

ತಯಾರಿಸುವ ವಿಧಾನ: ಬಾಣಲಿಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಕರಿಬೇವು, ಬದನೆಕಾಯಿಯ ಹೋಳುಗಳು ಹಾಗೂ ಅರಿಶಿಣಪುಡಿಯನ್ನು ಒಂದರ ನಂತರ ಒಂದನ್ನು ಸೇರಿಸಿ ಮೆತ್ತಗಾಗುವಂತೆ ಸಣ್ಣ ಉರಿಯಲ್ಲಿ ಹುರಿಯಬೇಕು. ಸ್ವಲ್ಪ ಎಣ್ಣೆಯಲ್ಲಿ ಉದ್ದಿನಬೇಳೆ, ಕಡಲೆಬೇಳೆಯನ್ನು  ಹುರಿದು ತರಿಯಾಗಿ ಪುಡಿ ಮಾಡಬೇಕು. ಸ್ವಲ್ಪ ಎಣ್ಣೆಯಲ್ಲಿ ಧನಿಯಾ, ಕೆಂಪುಮೆಣಸನ್ನು ಹುರಿದು ಪುಡಿ ಮಾಡಬೇಕು. ಅನ್ನ ತಣಿದ ನಂತರ ಪುಡಿ ಮಾಡಿದ ಮಿಶ್ರಣವನ್ನು ಬದನೆಹೋಳುಗಳಿಗೆ ಹಾಕಿ ಕೆದಕಿ ಒಣಕೊಬ್ಬರಿ ತುರಿಯನ್ನು ಹಾಕಿ ಕೆದಕಿ, ಸ್ವಲ್ಪ ಗರಂ ಮಸಾಲಾ ಪುಡಿಯನ್ನು ಸೇರಿಸಿ ಉಪ್ಪು ಮತ್ತು ನಿಂಬೆರಸವನ್ನು ಸೇರಿಸಿ ಕಲೆಸಿ ಅನ್ನಕ್ಕೆ ಹಾಕಿ ಬೆರೆಸಿದರೆ ರುಚಿಯಾದ ವಾಂಗಿಬಾತ್ ಅನ್ನ ಸವಿಯಲು ರೆಡಿ.

*


ಬದನೆಕಾಯಿ ಹುಳಿ ಬಜ್ಜಿ
ಬೇಕಾಗುವ ಸಾಮಗ್ರಿಗಳು:
ಬದನೆಕಾಯಿ – 2, ಕೆಂಪುಮೆಣಸು – 3, ಬೆಳ್ಳುಳ್ಳಿ ಎಸಳು – 2, ಈರುಳ್ಳಿ – 1/4ಕಪ್, ಜೀರಿಗೆ, ಕರಿಮೆಣಸಿನ ಪುಡಿ –ಸ್ವಲ್ಪ, ಹುಣಸೆನೀರು – 3/4ಚಮಚ, ಬೆಲ್ಲ – 1ಚೂರು, ಕರಿಬೇವು – 5ಎಲೆ, ಸಾಸಿವೆ – 1/4ಚಮಚ, ತುಪ್ಪ – 3/4ಚಮಚ, ರುಚಿಗೆ ಉಪ್ಪು.

ತಯಾರಿಸುವ ವಿಧಾನ: ಬದನೆಕಾಯಿಯನ್ನು ಸುಟ್ಟು ಸಿಪ್ಪೆ ತೆಗೆಯಿರಿ, ಬಾಣಲಿಯಲ್ಲಿ ತುಪ್ಪ ಬಿಸಿ ಮಾಡಿ ಸಾಸಿವೆ, ಬೆಳ್ಳುಳ್ಳಿ, ಕೆಂಪುಮೆಣಸಿನ ಚೂರು, ಕರಿಬೇವು, ಈರುಳ್ಳಿಚೂರು, ಜೀರಿಗೆ, ಮೆಣಸಿನ ಚೂರು ಒಂದರ ನಂತರ ಒಂದನ್ನು ಹಾಕಿ ಒಗ್ಗರಿಸಿ ಹುಣಸೆನೀರು, ಬೆಲ್ಲ, ಉಪ್ಪು ಹಾಕಿ ಜೊತೆಗೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿ ಕುದಿಸಿ. ಬೆಳ್ಳುಳ್ಳಿ, ಈರುಳ್ಳಿ ಮೆತ್ತಗಾದ ನಂತರ ಬದನೆಕಾಯಿಯ ಸಿಪ್ಪೆ ತೆಗೆದು ಹಿಸುಕಿ ಸೇರಿಸಿ. ಕುದಿ ಬಂದರೆ ರೆಡಿ, ಇದು ಅನ್ನಕ್ಕೆ ಹೊಂದುತ್ತದೆ.

*


ಬದನೆಕಾಯಿ ಮೊಸರು ಬಜ್ಜಿ
ಬೇಕಾಗುವ ಸಾಮಗ್ರಿಗಳು:
ಸುಟ್ಟಿರುವ ಬದನೆಕಾಯಿ – 2, ಹಸಿಮೆಣಸು – 5 ರಿಂದ 6, ಮೆಣಸಿನಚೂರು – 1/4ಚಮಚ, ಸಾಸಿವೆ –1/4ಚಮಚ, ಕರೀಬೇವು – 4ಎಲೆ, ಕಡಲೆಬೇಳೆ – 1/4ಚಮಚ, ಗಟ್ಟಿ ಮೊಸರು ಅಗತ್ಯವಿದ್ದಷ್ಟು, ರುಚಿಗೆ ಉಪ್ಪು, ತುಪ್ಪ ಸ್ವಲ್ಪ.

ತಯಾರಿಸುವ ವಿಧಾನ: ಸುಟ್ಟಿರುವ ಬದನೆಕಾಯಿಯ ಸಿಪ್ಪೆಯನ್ನು ತೆಗೆದು ಹಿಸುಕಬೇಕು. ಬದನೆಕಾಯಿ ಹಾಗೂ ಮೊಸರನ್ನು ಹೊರತು ಉಳಿದ ಎಲ್ಲ ಸಾಮಗ್ರಿಗಳನ್ನು ತುಪ್ಪದಲ್ಲಿ ಒಗ್ಗರಿಸಿ ಮೊಸರಿಗೆ ಹಾಕಿ ಬದನೆಕಾಯಿಯನ್ನು ಸೇರಿಸಿದರೆ ಮೊಸರು ಬಜ್ಜಿ ರೆಡಿ.

*


ಗುಂಡುಬದನೆ ಎಣ್ಣೆಗಾಯಿ
ಬೇಕಾಗುವ ಸಾಮಗ್ರಿಗಳು:
ಗುಂಡು ಬದನೆಕಾಯಿ 7–8, ಉದ್ದಿನಬೇಳೆ, ಕಡಲೆಬೇಳೆ – ತಲಾ 1/4ಚಮಚ, ಎಣ್ಣೆ – 6–7ಚಮಚ, ಸಾಸಿವೆ – 1/4ಚಮಚ, ಕರಿಬೇವು – 1ಕಡ್ಡಿ, ಬೆಳ್ಳುಳ್ಳಿ – 5ಎಸಳು, ಈರುಳ್ಳಿಚೂರು –  1/4ಕಪ್, ಕೆಂಪುಮೆಣಸು – 11–12, ಕಾಯಿತುರಿ – 1/4ಕಪ್, ರುಚಿಗೆ ತಕ್ಕಷ್ಟು ಉಪ್ಪು, ಹುಣಿಸೆಹಣ್ಣು – ನಿಂಬೆ ಗಾತ್ರ, ಬೆಲ್ಲ ಸ್ವಲ್ಪ, ಧನಿಯಾ  –1/4ಚಮಚ.

ತಯಾರಿಸುವ ವಿಧಾನ: ಕಡಲೆಬೇಳೆ, ಉದ್ದಿನಬೇಳೆ ಸ್ವಲ್ಪ ಎಣ್ಣೆಯಲ್ಲಿ ಹುರಿಯಬೇಕು. ಧನಿಯಾ ಕೆಂಪುಮೆಣಸನ್ನು ಸಹ ಎಣ್ಣೆಯಲ್ಲಿ ಹುರಿದು ನಂತರ ಕಾಯಿತುರಿ ಸೇರಿಸಿ ಕೆದಕಿ ತಣಿದ ನಂತರ ನುಣ್ಣಗೆ ರುಬ್ಬಿ. ಬಾಣಲಿಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಕರಿಬೇವು, ಈರುಳ್ಳಿಚೂರು, ಬೆಳ್ಳುಳ್ಳಿಯನ್ನು ಸೇರಿಸಿ ಹುರಿಯಬೇಕು. ಬದನೆಕಾಯಿಯನ್ನು ತೊಟ್ಟು ಸಹಿತ ನಾಲ್ಕು ಭಾಗ ಮಾಡಿ ತಯಾರಿಸಿದ ಮಿಶ್ರಣವನ್ನು ತುಂಬಿ ಹುರಿದಿರುವುದಕ್ಕೆ ಸೇರಿಸಿ. ಸ್ವಲ್ಪ ಹೊತ್ತು ಹುರಿದು ಉಳಿದ ಮಿಶ್ರಣವನ್ನು ಹಾಕಿ ಅಗತ್ಯವಿರುವಷ್ಟು ನೀರನ್ನು ಸೇರಿಸಿ ಸಣ್ಣ ಉರಿಯಲ್ಲಿ ಬೇಯಿಸಿ, ಸ್ವಲ್ಪ ಮೆತ್ತಗಾದ ನಂತರ ಹುಣಸೆನೀರು, ಉಪ್ಪು, ಬೆಲ್ಲವನ್ನು ಸೇರಿಸಿ ಬೇಯಿಸಿದರೆ ಸವಿಯಲು ಸಿದ್ಧ. ಇದು ಜೋಳದ ರೊಟ್ಟಿ ಹಾಗೂ ಚಪಾತಿಗೆ ಹೆಚ್ಚು ಹೊಂದುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT