‘ಹುಲಿರಾಯ’ ಹೇಳುವ ಬಹುಜನರ ಕಥೆ

ಬುಧವಾರ, ಜೂನ್ 26, 2019
25 °C

‘ಹುಲಿರಾಯ’ ಹೇಳುವ ಬಹುಜನರ ಕಥೆ

Published:
Updated:
‘ಹುಲಿರಾಯ’ ಹೇಳುವ ಬಹುಜನರ ಕಥೆ

ಸಿನಿಮಾ: ಹುಲಿರಾಯ

ನಿರ್ದೇಶನ: ಅರವಿಂದ್ ಕೌಶಿಕ್

ನಿರ್ಮಾಣ: ನಾಗೇಶ್ ಕೋಗಿಲು

ಸಂಗೀತ: ಅರ್ಜುನ್ ರಾಮು

ತಾರಾಗಣ: ಬಾಲು ನಾಗೇಂದ್ರ, ದಿವ್ಯಾ ಉರುಡುಗ, ಕುಲದೀಪ್, ಚಿರಶ್ರೀ ಅಂಚನ್

ಬೆಂಗಳೂರೆಂಬುದು ಮಹಾನಗರಿ. ಇಲ್ಲಿಗೆ ಬಂದು, ಕೆಲಸ ಹುಡುಕಿಕೊಂಡು ‘ದೊಡ್ಡ ಮನುಷ್ಯ’ ಆಗಬಹುದು ಎಂದು ಈ ನಗರಿಯ ಹೊರಗಿರುವವರಲ್ಲಿ ಹಲವರು ಭಾವಿಸಿರುತ್ತಾರೆ. ‘ನಾವಿರುವ ಊರು ಚೆನ್ನಾಗಿಲ್ಲ, ಇಲ್ಲಿದ್ದರೆ ದೊಡ್ಡ ಮನುಷ್ಯ ಆಗಲು ಸಾಧ್ಯವಿಲ್ಲ’ ಎಂದೂ ಅವರು ಅಂದುಕೊಂಡಿರುತ್ತಾರೆ. ಮನಸ್ಸಿನಲ್ಲಿ ಗಟ್ಟಿಯಾಗಿ ಬೇರುಬಿಡುವ ಇದು, ‘ನಾನು ಊರಿನಲ್ಲಿ ಇರಬಾರದು, ಬೆಂಗಳೂರು ಸೇರಿ ದೊಡ್ಡ ಮನುಷ್ಯ ಆಗಬೇಕು’ ಎನ್ನುವ ಬಯಕೆಯನ್ನು ಮುಗ್ಧ ಮನಸ್ಸಿನವರಲ್ಲಿ ಬೆಳೆಸಿಬಿಡುತ್ತದೆ.

ಇದೇ ಬಯಕೆಯನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡು ಬೆಂಗಳೂರಿಗೆ ಬರುತ್ತಾರೆ, ಕೆಲಸ ಹುಡುಕಲು ಮುಂದಾಗುತ್ತಾರೆ ದೂರದ ಊರುಗಳ ಯುವಕರು. ಕೆಲಸ ಸಿಗುತ್ತದೆಯೋ, ಇಲ್ಲವೋ – ಈ ನಗರ ಬೆಳೆಸಿಕೊಂಡಿರುವ ಸಂಸ್ಕೃತಿಯ ಕಾರಣದಿಂದಾಗಿ, ದೂರದ ಊರುಗಳಿಂದ ಬಂದವರಿಗೆ ಕೆಲಸ ಸಿಗುವ ಮೊದಲೇ ಉಸಿರು ಕಟ್ಟಿದಂತಹ ಅನುಭವ ಆಗುತ್ತದೆ. ಊರಿಗೆ ಮರಳಲು ಏನೋ ಅಳುಕು, ನಗರಕ್ಕೆ ಹೋಗಿ ದೊಡ್ಡ ವ್ಯಕ್ತಿಯಾಗಿ ಬರುವೆ ಎಂದು ಹೇಳಿ, ಅದನ್ನು ಸಾಧಿಸದೆಯೇ ಊರಿಗೆ ಮರಳುವುದು ಹೇಗೆ ಎಂಬ ಪ್ರಶ್ನೆ ಕಾಡುತ್ತದೆ.

ಉಸಿರಾಡಲೂ ಅವಕಾಶ ಇರದ ನಗರದಲ್ಲಿ ಇರಲಾರೆ, ‘ದೊಡ್ಡ ಮನುಷ್ಯ’ ಆಗದೆಯೇ ಚೆಂದದ ಹಳ್ಳಿಗೆ ಮರಳಲೂ ಆಗದು ಎಂಬ ಸಂಕಟದಲ್ಲಿ ಸಿಲುಕುವ ಯುವಕನ ಕಥೆಯನ್ನು ಕನ್ನಡ ಸಿನಿಮಾ ವೀಕ್ಷಕರಿಗೆ ಹೇಳುವುದು ಹೇಗೆ? ನೀವಿರುವ ಪುಟ್ಟ ಹಳ್ಳಿಯಲ್ಲೇ ಖುಷಿ ಕಂಡುಕೊಳ್ಳಬಹುದು ಎನ್ನುವುದನ್ನು ಅವರಿಗೆ ತಿಳಿಸುವುದು ಹೇಗೆ? ಈ ಪ್ರಶ್ನೆಗೆ, ‘ಹುಲಿರಾಯ’ ಸಿನಿಮಾದಲ್ಲಿ ಹೇಳುವ ಹಾಗೆ ಎಂದು ಚುಟುಕಾಗಿ ಉತ್ತರ ನೀಡಬಹುದು!

ಅರವಿಂದ್ ಕೌಶಿಕ್ ನಿರ್ದೇಶನದ, ಬಾಲು ನಾಗೇಂದ್ರ (ಸಿನಿಮಾದಲ್ಲಿ ಸುರೇಶ ಅಲಿಯಾಸ್ ಹುಲಿರಾಯ) ಅವರು ನಾಯಕ ನಟನಾಗಿ ಅಭಿನಯಿಸಿರುವ ‘ಹುಲಿರಾಯ’ ಸಿನಿಮಾ ನವಿರು ಧಾಟಿಯಲ್ಲಿ ಹೇಳುವುದು ಇವಿಷ್ಟು ಮಾತ್ರವೇ ಅಲ್ಲ. ಉಡುಪಿ ಜಿಲ್ಲೆಯ ಹೆಬ್ರಿ ಅಥವಾ ಶಿವಮೊಗ್ಗ ಜಿಲ್ಲೆಯ ಆಗುಂಬೆಯಂತಹ ರಮಣೀಯ ಪ್ರದೇಶದಲ್ಲಿ ಹುಟ್ಟಿ, ಬಾಲ್ಯವನ್ನು ಅಲ್ಲಿನ ಕಾಡಿನ ಮಡಿಲಲ್ಲಿ ಸ್ವಚ್ಛಂದವಾಗಿ ಕಳೆದ ವ್ಯಕ್ತಿ ಯೌವನಕ್ಕೆ ಕಾಲಿಟ್ಟಾಗ, ಬದುಕಿನ ಒತ್ತಡಗಳಿಗೆ ಸಿಲುಕಿ ನಗರಕ್ಕೆ ಬರಬೇಕಾದ ಸ್ಥಿತಿ ಎದುರಾದಾಗ ಅನುಭವಿಸುವ ಸಂಕಟಗಳನ್ನೂ ಈ ಸಿನಿಮಾ ಹೇಳುತ್ತದೆ.

ಹುಲಿರಾಯ ಅಲಿಯಾಸ್ ಸುರೇಶ್ ಹುಟ್ಟಿ ಬೆಳೆಯುವುದು ಕಾಡಿನ ಮಡಿಲಲ್ಲಿ. ಆತ ಅನುಭವಿಸುವ ಸಂಕಟ, ಯಾತನೆ, ಖುಷಿ ಇವೆಲ್ಲವೂ ಕಾಡಿನ ತಪ್ಪಲಿನ ಊರುಗಳ ಯುವಕರಿಗೆ ಮಾತ್ರ ಸೀಮಿತವಾದವುಗಳಲ್ಲ. ಬಯಲುಸೀಮೆ, ಕರಾವಳಿಯ ಯಾವುದೇ ಊರಿನ ವ್ಯಕ್ತಿಯ ಕಥೆ ಇದಾಗಿರಬಹುದು. ಈ ಹುಲಿರಾಯ ಪ್ರೀತಿಗೆ ಬಿದ್ದು, ಪ್ರೀತಿಯನ್ನು ತನ್ನದಾಗಿಸಿಕೊಳ್ಳಲು ಮಹಾನಗರಕ್ಕೆ ಬರುತ್ತಾನೆ. ಆದರೆ, ಮಹಾನಗರದ ಸಂಸ್ಕೃತಿಗೆ ಒಗ್ಗಿಕೊಳ್ಳಲಾಗದೆ ಪುನಃ ಹಳ್ಳಿಯ ಹಾದಿ ಹಿಡಿಯುತ್ತಾನೆ.

ನಗರಕ್ಕೆ ಮತ್ತೆ ಹೋಗಬೇಕು, ಹಣ ಸಂಪಾದಿಸಬೇಕು, ಆಗ ಮಾತ್ರ ಪ್ರೀತಿಯನ್ನು ಗೆದ್ದುಕೊಳ್ಳಲು ಸಾಧ್ಯ ಎಂಬ ಸಂದೇಶ ಅವನಿಗೆ ಹಳ್ಳಿಯಲ್ಲಿ ಸಿಗುತ್ತದೆ. ಹುಲಿರಾಯ ಇಷ್ಟವಿಲ್ಲದಿದ್ದರೂ ಮಹಾನಗರದ ಕಡೆ ಹೆಜ್ಜೆ ಹಾಕುತ್ತಾನೆ. ತಾನು ತನ್ನ ಪರಿಸರದಲ್ಲಿ ಕಲಿತ ಯಾವ ಕೌಶಲ ಬಳಸಿದರೂ ಹೆಚ್ಚು ಹಣ ಸಂಪಾದಿಸಲು ಸಾಧ್ಯವಿಲ್ಲ ಎಂಬುದು ಅರಿವಾಗಿ ನರಳುತ್ತಾನೆ. ನಂತರ, ಹಣ ಸಂಪಾದನೆಗೆ ನಗರದಲ್ಲಿ ಅಡ್ಡದಾರಿಯೊಂದನ್ನು ಹಿಡಿಯುತ್ತಾನೆ. ಮುಂದಿನದು ಸಸ್ಪೆನ್ಸ್‌!

ಹುಲಿರಾಯ ಏನಾಗುತ್ತಾನೆ, ನಗರ ಜೀವನಕ್ಕೇ ಒಗ್ಗಿಕೊಳ್ಳಲಾಗದವ ಅಡ್ಡ ಮಾರ್ಗವನ್ನು ದಕ್ಕಿಸಿಕೊಂಡಾನೆಯೇ, ಅವನ ಪ್ರೀತಿ ಏನಾಗುತ್ತದೆ, ನಗರದಲ್ಲೇ ಉಳಿದುಕೊಳ್ಳುತ್ತಾನೆಯೇ ಅಥವಾ ಕಾಡಿನ ಮಧ್ಯದ ಹಳ್ಳಿಗೆ ಮರಳುತ್ತಾನೆಯೇ ಎಂಬುದನ್ನೆಲ್ಲ ಸಿನಿಮಾ ನೋಡಿ ತಿಳಿಯಬಹುದು. ಅಂದಹಾಗೆ, ‘ಹುಲಿರಾಯ’ನು ಗಂಭೀರ ವಿಚಾರಗಳನ್ನು ಹಾಸ್ಯದ ಮೂಲಕವೇ ಹೇಳುತ್ತಾನೆ – ಮುಖ ಬಿಗಿದುಕೊಂಡು ಅಲ್ಲ.

ಅರ್ಜುನ್ ರಾಮು ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಸಿನಿಮಾ ಕಥೆಯ ಜೊತೆಜೊತೆಯಾಗಿ ಹಿತವಾಗಿ ಬರುತ್ತಿರುತ್ತವೆ. ಹಾಸ್ಯ, ಸಂದೇಶದ ಜೊತೆಯಲ್ಲೇ ಮಲೆನಾಡಿನ ಹಸಿರು, ನೀರು, ಬೆಟ್ಟ–ಗುಡ್ಡಗಳ ರಮ್ಯ ದೃಶ್ಯಗಳು ಈ ಸಿನಿಮಾ ಜೊತೆ ಬೋನಸ್ ರೂಪದಲ್ಲಿ ಸಿಗುತ್ತವೆ.

ನಗರಗಳು ಬೆಳೆಯುತ್ತಲೇ ಇವೆ. ಯುವಕರು ಕನಸುಗಳನ್ನು ಹೊತ್ತುಕೊಂಡು ಹಳ್ಳಿಗಳಿಂದ ನಗರಗಳಿಗೆ ಬರುವುದು ನಡೆಯುತ್ತಲೇ ಇದೆ. ಆದರೆ, ಕನಸುಗಳನ್ನು ನನಸು ಮಾಡಿಕೊಳ್ಳುವಷ್ಟು ಅವಕಾಶಗಳು ನಗರಗಳಲ್ಲಿ ಇವೆಯೇ, ಅವಕಾಶಗಳು ಇದ್ದರೂ ಅವುಗಳನ್ನು ಬಳಸಿಕೊಳ್ಳುವ ಕೌಶಲಗಳನ್ನು ಕಾಡಿನ ತಪ್ಪಲಲ್ಲಿ ಜನಿಸಿದ, ಹಳ್ಳಿಗಳಲ್ಲಿ ಬಾಲ್ಯ ಕಳೆದ ಯುವಕರಲ್ಲಿ ಈ ವ್ಯವಸ್ಥೆ ಬೆಳೆಸಿದೆಯೇ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡೂ ಈ ಸಿನಿಮಾ ವೀಕ್ಷಿಸಬಹುದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry