ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಿನೊಳಗೆ ಹೆಣ್ಣಿನ ಹೆಜ್ಜೆ

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹಿಂದಿನಿಂದಲೂ ನಟನೆ, ನೃತ್ಯ, ಯಕ್ಷಗಾನ ಮುಂತಾದ ಕಲೆಗಳೆಲ್ಲಾ ಗಂಡುಮಕ್ಕಳಿಗೆ ಮಾತ್ರ ಸೀಮಿತ ಎಂಬ ನಿಯಮವಿತ್ತು. ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಬಾರದು, ಅದರಲ್ಲೂ ಕಲಾ ಪ್ರಕಾರಗಳಲ್ಲಿ ಹೆಣ್ಣುಮಕ್ಕಳಿಗೆ ಸ್ಥಾನವಿಲ್ಲ ಎಂಬ ಕಾಲವಿತ್ತು. ಆಗ ಗಂಡಸರೇ ಹೆಣ್ಣಿನ ವೇಷ ಧರಿಸಿ ಯಕ್ಷಗಾನ, ಕೂಚಿಪುಡಿ ನೃತ್ಯಗಳಲ್ಲಿ ಭಾಗವಹಿಸುವ ಪರಂಪರೆ ಬೆಳೆದಿತ್ತು.

ಆ ಕಾಲದ ಕಲೆಗೆ ಮತ್ತೆ ಜೀವ ನೀಡುವ ಉದ್ದೇಶದಿಂದ ಕೆಲವರು ಇಂದಿಗೂ ಹೆಣ್ಣಿನ ವೇಷದಲ್ಲಿ ನೃತ್ಯವನ್ನು ಮಾಡುತ್ತಾರೆ. ಪರಂಪರೆ ಉಳಿಸುವ ನಿಟ್ಟಿನಲ್ಲಿ ಕಲಾರಾಧನೆಯಲ್ಲಿ ತೊಡಗಿಕೊಂಡವರಲ್ಲಿ ಪ್ರಮುಖರು ಸೂರ್ಯ ರಾವ್‌.

ಮಂಗಳೂರಿನ ಸುರತ್ಕಲ್ ಮೂಲದ ಇವರು ತಾಯಿಯ ಆಸೆಯಂತೆ ನೃತ್ಯಪಟುವಾದರು. ತನಗೆ ಹುಟ್ಟುವ ಮಗಳಿಗೆ ನೃತ್ಯ ಕಲಿಸಬೇಕು ಎಂಬುದು ಸೂರ್ಯ ಅವರ ತಾಯಿಯ ಮಹದಾಸೆ ಆಗಿತ್ತು. ಆದರೆ ಹುಟ್ಟಿದ್ದು ಗಂಡುಮಗು. ‘ನೃತ್ಯಕ್ಕೆ ಗಂಡು– ಹೆಣ್ಣು ಎಂಬ ಭೇದವಿಲ್ಲ. ಹೀಗಾಗಿ ಅಮ್ಮ ಅವರಾಸೆಯಂತೆ ನನಗೇ ನೃತ್ಯ ಕಲಿಸಿದರು’ ಎಂದು ವಿವರಿಸುತ್ತಾರೆ ಸೂರ್ಯ.

ತಮ್ಮ 4ನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಯಲು ಆರಂಭಿಸಿದ ಇವರು ನೃತ್ಯ ಸಂಯೋಜನೆಯಲ್ಲಿ ಬಿಎ ಪದವಿ ಪಡೆದಿದ್ದಾರೆ. ನೃತ್ಯಕಲೆ ಇವರಿಗೆ ಹಿರಿಕರಿಂದ ಬಳುವಳಿಯಾಗಿ ಬಂದಿರುವಂತಹದ್ದು. ಇವರ ಅಜ್ಜ, ಅಪ್ಪ ಇಬ್ಬರೂ ಯಕ್ಷಗಾನ ಕಲಾವಿದರು. ಸ್ವತಃ ಸೂರ್ಯ ಅವರು ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿಯಾಗಿದ್ದರು. ಇದೇ ಆಸಕ್ತಿಯಲ್ಲಿ ಕೂಚಿಪುಡಿಯನ್ನೂ ಕಲಿತರು.

ಕಳೆದ ಕೆಲ ವರ್ಷಗಳಿಂದ ನೃತ್ಯವನ್ನೇ ಜೀವನವನ್ನಾಗಿಸಿಕೊಂಡಿರುವ ಇವರು ಹನ್ನೆರಡು ವರ್ಷಗಳಿಂದೀಚೆಗೆ ಹೆಣ್ಣಿನ ಪಾತ್ರದಲ್ಲಿ ರಂಗವೇರಿ ನಾದಕ್ಕೆ ಹೆಜ್ಜೆ ಸೇರಿಸುತ್ತಾರೆ.

ನಿಮಗೇಕೆ ಹೀಗೆ ಹೆಣ್ಣಿನಂತೆ ನರ್ತಿಸಬೇಕು ಎಂದು ಅನ್ನಿಸಿತ್ತು ಎಂದು ಅವರಲ್ಲಿ ಕೇಳಿದರೆ ‘ಹಿಂದೆಲ್ಲಾ ಹೆಣ್ಣು ಮಕ್ಕಳಿಗೆ ಹೊರಗಡೆ ಹೋಗುವುದು, ನಾಟಕ, ನೃತ್ಯ, ಯಕ್ಷಗಾನಗಳಲ್ಲಿ ನಟಿಸುವುದು ನಿಷಿದ್ಧವಾಗಿತ್ತು, ಆ ಕಾಲದಲ್ಲಿ ಗಂಡು ಮಕ್ಕಳೇ ಹೆಣ್ಣು ವೇಷಧಾರಿಗಳಾಗಿ ನಟಿಸುವುದು ಸಾಮಾನ್ಯವಾಗಿತ್ತು, ಹಾಗಾಗಿ ಅಂದಿನ ಆ ಅಭಿರುಚಿಯನ್ನು ಇಂದು, ಮುಂದೂ ಉಳಿಸಿ, ಬೆಳೆಸಬೇಕು ಎಂಬ ಸದುದ್ದೇಶದಿಂದ ನಾನು ಭರತನಾಟ್ಯ ಹಾಗೂ ಕೂಚಿಪುಡಿಯಲ್ಲಿ ಹೆಣ್ಣಿನ ವೇಷಧಾರಿಯಾಗಿ ನರ್ತಿಸುತ್ತೇನೆ’ ಎನ್ನುತ್ತಾರೆ.

‘ನಾನು ನೃತ್ಯವನ್ನು ವೃತ್ತಿಪರವಾಗಿ ಆರಿಸಿಕೊಂಡವ. ಆದರೆ ಎಂದು ಹೆಣ್ಣಿನ ಪಾತ್ರ ಮಾಡಬೇಕು ಎಂದುಕೊಂಡೆನೊ, ಆ ನಿಟ್ಟಿನಲ್ಲಿ ಅಭ್ಯಾಸ ಪ್ರಾರಂಭಿಸಿದಾಗ ಅಂದು ನೃತ್ಯ ತುಂಬಾ ಸವಾಲಿನದ್ದು ಎನಿಸಲಾರಂಭಿಸಿತು. ಗಂಡು ಹೆಣ್ಣಿನಂತೆ ವೇಷ ಹಾಕಿ, ಆಕೆಯ ಹಾವಭಾವಗಳಲ್ಲಿ ನರ್ತಿಸುವುದು ತುಂಬಾ ಕಷ್ಟ. ಆದರೆ ನನಗೆ ಎದುರಾದ ಕಷ್ಟವನ್ನು ನಿವಾರಿಸಿಕೊಳ್ಳಲೇಬೇಕು ಎಂಬ ಜಿದ್ದಿಗೆ ಬಿದ್ದೆ.

ಹೆಣ್ಣಿನ ಪ್ರತಿ ಚಲನೆಯನ್ನೂ ಸೂಕ್ಷ್ಮವಾಗಿ ಅಭ್ಯಾಸ ಮಾಡಿ ಅಂತೆಯೇ ನರ್ತಿಸಲು ಅಣಿಯಾದೆ. ಅಲ್ಲಿಂದ ಹೆಣ್ಣಿನ ವೇಷ, ನೃತ್ಯ ಪ್ರಿಯವಾಯ್ತು. ಕಷ್ಟ ಎನ್ನುವ ಭಾವ ಮಾಯವಾಯ್ತು. ಹೆಣ್ಣಿನ ಆಂಗಿಕ ಹಾವ–ಭಾವಗಳನ್ನು ಗಂಡಿನಲ್ಲಿ ರೂಢಿಸಿಕೊಳ್ಳುವುದು ನಿಜಕ್ಕೂ ಕಷ್ಟವೇ. ಆದರೆ ಕಲಿಯಬೇಕು ಎಂಬ ಛಲ ಇದ್ದರೆ ಯಾವುದು ಅಸಾಧ್ಯವಲ್ಲ.

‘ನನಗೆ ಯಕ್ಷಗಾನ ಹಿನ್ನೆಲೆ ಇರುವುದರಿಂದ ಸ್ತ್ರೀವೇಷ ಧರಿಸುವುದು ಅಷ್ಟೊಂದು ಕಷ್ಟಕರ ಎನ್ನಿಸಲಿಲ್ಲ. ಆದರೆ ನಾಟ್ಯಕ್ಕೆ ಬೇಕಾದ ಹೆಣ್ಣಿನ ಪ್ರೌಢಿಮೆಯನ್ನು ಮೈಗೂಡಿಸಿಕೊಳ್ಳಲು ಎಲ್ಲಾ ರೀತಿಯಿಂದಲೂ ತಯಾರಿ ನಡೆಸಬೇಕು, ಮೊದಲು ಹೆಣ್ಣಾಗಿ ನಟಿಸಲು ಮೈ ಕಟ್ಟು ಮುಖ್ಯ, ನಂತರ ದೈಹಿಕ ಭಾಷೆ, ಇವೆಲ್ಲವೂ ಮುಖ್ಯವಾಗುತ್ತವೆ. ಹಿಂದೆಲ್ಲಾ ಗಂಡು ಹೆಣ್ಣಾಗಿ ನಟಿಸುವುದು ಸ್ವಾಭಾವಿಕವಾಗಿತ್ತು, ಇತ್ತೀಚೆಗೆ ಪರಂಪರೆ ಉಳಿಸುವ ಕಾರಣಕ್ಕೆ ಕೆಲವೇ ಕೆಲವರು ಹೆಣ್ಣಿನ ಪಾತ್ರದಲ್ಲಿ ನೃತ್ಯಾರಾಧನೆ ಮಾಡುತ್ತಿದ್ದಾರೆ.

ನಾನು ಹೆಣ್ಣು ವೇಷ ಧರಿಸಿ ದೇಶದಾದ್ಯಂತ 35 ಕಾರ್ಯಕ್ರಮಗಳನ್ನು ನೀಡಿದ್ದೇನೆ. ಪ್ರತಿಬಾರಿ ಕಾರ್ಯಕ್ರಮ ನೀಡಿದಾಗಲೂ ಒಳ್ಳೆಯ ಪ್ರತಿಕ್ರಿಯೆಗಳೇ ಸಿಕ್ಕಿವೆ, ಕಾರ್ಯಕ್ರಮ ನೋಡಿದವರು ಸಲಹೆಗಳನ್ನು ನೀಡುತ್ತಿದ್ದರು. ಕಾರ್ಯಕ್ರಮ ನೋಡಿದ ಹಿರಿಯರು ಹಾಗೇ ಮಾಡಬೇಕಿತ್ತು, ಹೀಗೆ ಮಾಡಿದರೆ ಚೆನ್ನಾಗಿತ್ತು ಎಂಬ ಸಲಹೆಗಳನ್ನು ನೀಡಿದ್ದಿದೆ. ಅವೆಲ್ಲವೂ ನನಗೆ ಕಲಿಕೆಯ ಮಾರ್ಗವಾಗಿ ಕಂಡಿದೆ. ಜೊತೆಗೆ ತಿದ್ದಿಕೊಳ್ಳಲು ಸಹಾಯಕವಾಗಿದೆ.

ಪ್ರಾರಂಭದಲ್ಲಿ ತುಂಬಾ ಕಷ್ಟ ಎನಿಸುತ್ತಿತ್ತು. ಆದರೆ ನಮ್ಮ ಗುರುಗಳು ಆತ್ಮವಿಶ್ವಾಸ ತುಂಬುತ್ತಿದ್ದರು. ಅವರ ಮಾರ್ಗದರ್ಶನದಿಂದ ಚೆನ್ನಾಗಿ ಕಲಿಯಲು ಸಾಧ್ಯವಾಯಿತು. ಮನೆಯವರ ಸಹಕಾರವೂ ತುಂಬಾ ಇತ್ತು. ನನ್ನ ಹೆಂಡತಿ ನನ್ನ ನೃತ್ಯಗಳಿಗೆ ಬಟ್ಟೆ ವಿನ್ಯಾಸ ಮಾಡುತ್ತಾರೆ. ಹೀಗೆ ನನ್ನ ಸುತ್ತಲಿನವರ ಸಲಹೆ ನನ್ನೊಳಗಿನ ನೃತ್ಯಗಾರ್ತಿಯ ಚೆಲುವನ್ನು ಹೆಚ್ಚಿಸುತ್ತವೆ.

ಸೂರ್ಯ ರಾವ್ ಸಂಪರ್ಕಕ್ಕೆ: 9620202378

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT