ಅಮೆರಿಕದಲ್ಲಿ ಬಂದೂಕು: ಸಂವಿಧಾನಾತ್ಮಕ ಹಕ್ಕು

ಬುಧವಾರ, ಜೂನ್ 26, 2019
28 °C

ಅಮೆರಿಕದಲ್ಲಿ ಬಂದೂಕು: ಸಂವಿಧಾನಾತ್ಮಕ ಹಕ್ಕು

Published:
Updated:
ಅಮೆರಿಕದಲ್ಲಿ ಬಂದೂಕು: ಸಂವಿಧಾನಾತ್ಮಕ ಹಕ್ಕು

ಬಂದೂಕು ಹೊಂದುವ ವಿಷಯಕ್ಕೆ ಬಂದರೆ ಈ ಅಮೆರಿಕವೇ ಬಹಳ ವಿಚಿತ್ರ. ಅಲ್ಲಿನ ಕಾನೂನು, ಸಂವಿಧಾನ ಕೂಡ ನಮಗೆ ಅಷ್ಟೇ ವಿಚಿತ್ರ ಎನಿಸುತ್ತದೆ. ಅಲ್ಲಿ ಯಾರು ಬೇಕಾದರೂ, ಎಷ್ಟು ಬೇಕಾದರೂ ಬಂದೂಕು, ಪಿಸ್ತೂಲುಗಳಂತಹ ವೈಯಕ್ತಿಕ ಸುರಕ್ಷತೆಯ ಆಯುಧಗಳನ್ನು ಕೊಳ್ಳಬಹುದು. ಜೊತೆಗೆ ತೆಗೆದುಕೊಂಡೇ ತಿರುಗಾಡಬಹುದು. ಆದರೆ ಹೀಗೆ ಬಂದೂಕು ಹೊಂದಿದ ಅನೇಕ ಬುದ್ಧಿಗೇಡಿಗಳು ಅದನ್ನು ಹೇಗೆಲ್ಲ, ಯಾರ ಮೇಲೆಲ್ಲ ಬಳಸಿದ್ದಾರೆ ಎಂಬುದನ್ನು ನೋಡಿದರೆ ದಿಗಿಲಾಗುತ್ತದೆ. ಶಾಲಾ ಮಕ್ಕಳು, ಕ್ಲಬ್‌ಗಳಲ್ಲಿ ಖುಷಿಯಾಗಿ ಪಾರ್ಟಿ ಮಾಡುವವರು, ದಾರಿಯಲ್ಲಿ ಹೋಗುವ ಅಮಾಯಕರು, ಸಂಗೀತಗೋಷ್ಠಿ ಕೇಳಲು ಬಂದವರು, ಕರ್ತವ್ಯದ ಮೇಲಿದ್ದ ಪೊಲೀಸ್‌ ಸಿಬ್ಬಂದಿ... ಹೀಗೆ ಗುಂಡಿನ ದಾಳಿಯಲ್ಲಿ ಸತ್ತವರ ದೀರ್ಘ ಪಟ್ಟಿಯೇ ಇದೆ.

ಅಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡಗಳನ್ನು ನೋಡಿದರೆ, ‘ಬಂದೂಕಿನಿಂದ ಯಾರ ಮೇಲೆ ಬೇಕಾದರೂ ಗುಂಡು ಹಾರಿಸಿ ಎಷ್ಟು ಜನರನ್ನು ಬೇಕಾದರೂ ಕೊಲ್ಲಬಹುದು; ಅದಕ್ಕೆ ಇಂತಹುದೇ ಕಾರಣ ಬೇಕು ಎಂದೇನಿಲ್ಲವೇನೋ’ ಎನಿಸುತ್ತದೆ. ಹೀಗೆ ಮನಬಂದಂತೆ ಗುಂಡು ಹಾರಿಸುವವರು ಒಂಟಿ ವ್ಯಕ್ತಿಗಳು. ಮೊನ್ನೆ ಮೊನ್ನೆ ಲಾಸ್‌ವೇಗಸ್‌ನಲ್ಲಿ ಮತಿಹೀನನೊಬ್ಬ ಮನಸೋ ಇಚ್ಚೇ ಗುಂಡು ಹಾರಿಸಿ 58ಕ್ಕೂ ಹೆಚ್ಚು ಮಂದಿಯನ್ನು ಕೊಂದು ಹಾಕಿದ್ದ.

ಹಾಗಿದ್ದರೆ‌ ಅಮೆರಿಕದಲ್ಲಿ ಬಂದೂಕು ಖರೀದಿ ಕಾನೂನುಬದ್ಧವೇ?

ಹೌದು. 1791ರಲ್ಲಿ ಅಮೆರಿಕದ ಸಂವಿಧಾನದಲ್ಲಿ ಅಳವಡಿಸಿದ ‘ಸೆಕೆಂಡ್‌ ಅಮೆಂಡ್‌ಮೆಂಟ್‌’ ಅಥವಾ ‘ಎರಡನೇ ತಿದ್ದುಪಡಿ’ ಪ್ರಕಾರ ‘ಶಸ್ತ್ರಾಸ್ತ್ರ ಹೊಂದುವುದು ನಾಗರಿಕರ ಹಕ್ಕು’. ಇಂತಹುದೇ ಹಕ್ಕು ಮೆಕ್ಸಿಕೊ ಮತ್ತು ಗ್ವಾಟೆಮಾಲಾ ಸಂವಿಧಾನಗಳಲ್ಲೂ ಇದೆ.

ಆತ್ಮರಕ್ಷಣೆಗಾಗಿ ಬಂದೂಕು ಹೊಂದಲು ನಾಗರಿಕರಿಗೆ ಇರುವ ಹಕ್ಕನ್ನು ಮೊಟಕು ಮಾಡುವುದು ಸಂವಿಧಾನ ಬಾಹಿರ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಅನೇಕ ಸಲ ತೀರ್ಪು ನೀಡಿದೆ.

* ನಮ್ಮ ದೇಶದಲ್ಲೂ ಅನೇಕರ ಬಳಿ ಬಂದೂಕು, ಪಿಸ್ತೂಲುಗಳು ಇವೆಯಲ್ಲ? ಹಾಗಿದ್ದರೆ ಅಮೆರಿಕಕ್ಕೂ ನಮಗೂ ಏನು ವ್ಯತ್ಯಾಸ?

ಹೌದು. ತುಂಬ ವ್ಯತ್ಯಾಸಗಳಿವೆ. ನಮ್ಮಲ್ಲಿ ಶಸ್ತ್ರಗಳನ್ನು ಯಾರು ಬೇಕಾದರೂ ಖರೀದಿಸುವಂತಿಲ್ಲ. ಜಿಲ್ಲಾಧಿಕಾರಿಯಿಂದ ಪರವಾನಗಿ ಪಡೆದುಕೊಳ್ಳಬೇಕು. ಅದಕ್ಕೆ ಹತ್ತೆಂಟು ನಿರ್ಬಂಧಗಳಿವೆ. ಕಠಿಣವಾದ ಪೂರ್ವಾಪರ ತಪಾಸಣೆಗಳಿವೆ. ಪರವಾನಗಿಯ ಷರತ್ತುಗಳಿಗೆ ಅನುಗುಣವಾಗಿ ಬಂದೂಕು ಅಥವಾ ರಿವಾಲ್ವರ್ ಇಟ್ಟುಕೊಳ್ಳಬಹುದು. ಅಂದರೆ ನಮ್ಮಲ್ಲಿ ಪರವಾನಗಿ ಇಲ್ಲದ ವ್ಯಕ್ತಿ ಶಸ್ತ್ರಾಸ್ತ್ರಗಳನ್ನು ಹೊಂದುವಂತೆಯೇ ಇಲ್ಲ. ಅದರ ಮೇಲೆ ಆತನಿಗೆ ಪೂರ್ಣಾಧಿಕಾರವೂ ಇಲ್ಲ. ಸರ್ಕಾರ ಸೂಚನೆ ಕೊಟ್ಟಾಗ ಅದನ್ನು ತಾತ್ಕಾಲಿಕವಾಗಿ ಪೊಲೀಸ್‌ ಠಾಣೆಗೆ ತಂದು ಒಪ್ಪಿಸಬೇಕು.

ಆದರೆ ಅಮೆರಿಕದಲ್ಲಿ ಹೀಗಿಲ್ಲ. ಪರವಾನಗಿಯೇ ಬೇಕಿಲ್ಲ. ಆದರೆ ರಾಜ್ಯದಿಂದ ರಾಜ್ಯಕ್ಕೆ ನಿಯಮಗಳು ಸ್ವಲ್ಪ ಬದಲಾಗುತ್ತವೆ. ಕೆಲ ರಾಜ್ಯಗಳಲ್ಲಿ ಯಾರೇ ಬೇಕಾದರೂ ನೇರವಾಗಿ ಅಂಗಡಿಗೆ ಹೋಗಿ ಆಟಿಗೆ ಸಾಮಾನಿನಂತೆ, ಮೊಬೈಲ್‌ ಕೊಳ್ಳುವಂತೆ ಬಂದೂಕು ಖರೀದಿಸಬಹುದು. ಇನ್ನು ಕೆಲ ರಾಜ್ಯಗಳಲ್ಲಿ, ಖರೀದಿಸುವವನ ಪೂರ್ವಾಪರ ಖಚಿತಪಡಿಸಿಕೊಳ್ಳುವುದು ಮಾತ್ರ ಮಾರಾಟಗಾರನ ಹೊಣೆ.

* ಕೈಯಲ್ಲಿ ಬಂದೂಕು ಇದ್ದರೆ ಆತ್ಮರಕ್ಷಣೆ ಸುಲಭ ಎಂಬ ಅಭಿಪ್ರಾಯ ಇದೆ. ಹೀಗಿರುವಾಗ ನಿರ್ಬಂಧ ಹೇರುವುದು ಯಾಕೆ?

ಅಮೆರಿಕದ ವಿಷಯಕ್ಕೇ ಬರುವುದಾದರೆ, ಅಲ್ಲಿ ಬಹುತೇಕ ಹತ್ಯೆಗಳು, ಆತ್ಮಹತ್ಯೆಗಳಿಗೆ ಮುಖ್ಯವಾದ ಕಾರಣ ಸುಲಭವಾಗಿ ಬಂದೂಕುಗಳ ಲಭ್ಯತೆ. ಅಂಕಿಅಂಶಗಳ ಪ್ರಕಾರ ಅಲ್ಲಿ 10 ಲಕ್ಷ ಜನಸಂಖ್ಯೆಗೆ 30 ಜನ ಒಂಟಿ ಬಂದೂಕುಧಾರಿಯ ಗುಂಡಿಗೆ ಬಲಿಯಾಗುತ್ತಿದ್ದಾರೆ. ಇದು ವಿಶ್ವದಲ್ಲಿಯೇ ಅತ್ಯಧಿಕ. 2012 ಡಿಸೆಂಬರ್‌ನಿಂದ ಈಚೆಗೆ ಅಲ್ಲಿ ಬಂದೂಕುಧಾರಿಗಳು 1500ಕ್ಕೂ ಹೆಚ್ಚು ಸಾಮೂಹಿಕ ಹತ್ಯಾಕಾಂಡ ನಡೆಸಿ, 1715ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆ. ಅಂದರೆ, ‘ನಮ್ಮ ಬಳಿ ಬಂದೂಕು ಇದ್ದರೆ ಬೇರೆಯವರು ಹೆದರುತ್ತಾರೆ; ಸ್ವರಕ್ಷಣೆ ಸುಲಭ’ ಎಂಬ ವಾದ ಪೊಳ್ಳು ಎಂದಾಯಿತು.

* ಬಂದೂಕು ಹೊಂದುವ ಹಕ್ಕಿನಿಂದ ಇಷ್ಟೆಲ್ಲ ಅನಾಹುತಗಳು ನಡೆಯುವುದಾದರೆ ಯಾಕೆ ಅಲ್ಲಿ ಅದನ್ನು ನಿಯಂತ್ರಿಸುತ್ತಿಲ್ಲ?

ಅದರ ಹಿಂದೆ ದೊಡ್ಡ ರಾಜಕೀಯ ಇದೆ. ಏಕೆಂದರೆ ಅಮೆರಿಕದಲ್ಲಿ ಬಂದೂಕು ಉದ್ಯಮ ಮತ್ತು ಅದರ ಲಾಬಿ ಬಹಳ ಪ್ರಬಲವಾಗಿವೆ. ಅವು ಜನಪ್ರತಿನಿಧಿಗಳಿಗೆ ಉದಾರವಾಗಿ ದೇಣಿಗೆ ಕೊಡುತ್ತವೆ. ತಮ್ಮನ್ನು ವಿರೋಧಿಸುವ ಅಭ್ಯರ್ಥಿಯ ಸೋಲಿಗೆ ಅಪಾರ ಹಣ ಸುರಿಯುತ್ತವೆ. ರಿಪಬ್ಲಿಕನ್‌ ಪಕ್ಷದ ಮೇಲಂತೂ ಅವುಗಳ ಪ್ರಭಾವ ಜೋರಾಗಿಯೇ ಇದೆ. ಹೀಗಾಗಿ ಬಂದೂಕು ಖರೀದಿ ನಿರ್ಬಂಧಿಸುವ ಯಾವುದೇ ಪ್ರಯತ್ನಕ್ಕೆ ಅಮೆರಿಕದ ಸಂಸತ್ತಿನಲ್ಲಾಗಲಿ, ರಾಜ್ಯಗಳ ಶಾಸನ ಸಭೆಗಳಲ್ಲಿ ಆಗಲಿ ಒಪ್ಪಿಗೆ ಸಿಗುವುದಿಲ್ಲ. ಒಬಾಮ ಅಧ್ಯಕ್ಷರಾಗಿದ್ದಾಗ ಬಂದೂಕು ಖರೀದಿ ಮೇಲೆ ನಿಯಂತ್ರಣ ಹೇರುವ ಅಗತ್ಯವನ್ನು ಪ್ರತಿಪಾದಿಸಿದ್ದರು. ಆದರೆ ಎದುರಾಳಿಗಳಿಂದ ಭಾರಿ ಟೀಕೆ ಬಂದು ತೆಪ್ಪಗಾದರು. ಅಲ್ಲದೆ ‘ಬಂದೂಕು ಹೊಂದುವ ನಮ್ಮ ಸಂವಿಧಾನಾತ್ಮಕ ಹಕ್ಕನ್ನು ಬಿಟ್ಟುಕೊಡುವುದಿಲ್ಲ’ ಎನ್ನುವ ನಾಗರಿಕರ ಸಂಖ್ಯೆ ಹೆಚ್ಚುತ್ತಲೇ ಇದೆ ಎನ್ನುವುದೂ ಅಚ್ಚರಿಯ ಸಂಗತಿ.

ಆದರೆ ಒಂದು ಕಾಲಕ್ಕೆ ಅಮೆರಿಕದಂತೆಯೇ ತಮ್ಮ ನಾಗರಿಕರಿಗೆ ಉದಾರವಾಗಿ ಬಂದೂಕು ಖರೀದಿ ಹಕ್ಕು ನೀಡಿದ್ದ ಬ್ರಿಟನ್‌, ಆಸ್ಟ್ರೇಲಿಯಾ, ಜರ್ಮನಿ, ಜಪಾನ್‌, ದಕ್ಷಿಣ ಕೊರಿಯಾಗಳಂತಹ ದೇಶಗಳಲ್ಲಿ ಈಗ ತುಂಬ ಕಟ್ಟುಪಾಡುಗಳನ್ನು ಹೇರಲಾಗಿದೆ. ಅದರ ಪರಿಣಾಮ ಎಂದರೆ ಗುಂಡಿಕ್ಕಿ ಸಾಯಿಸುವವರ, ಗುಂಡು ಹೊಡೆದುಕೊಂಡು ಸಾಯುವವರ ಸಂಖ್ಯೆ ಇಲ್ಲೆಲ್ಲ ತುಂಬ ಕಡಿಮೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry