ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ನಾಯಕರ ನಿರಾಸಕ್ತಿ: ಕಾಂಗ್ರೆಸ್‌ ವರಿಷ್ಠರಿಗೆ ಚಿಂತೆ

‘ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನ
Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದರೂ ರಾಜ್ಯ ಕಾಂಗ್ರೆಸ್‌ ನಾಯಕರು ಚುರುಕುಗೊಳ್ಳದಿರುವುದು ಪಕ್ಷದ ವರಿಷ್ಠರನ್ನು ಚಿಂತೆಗೀಡುಮಾಡಿದೆ.

ಶಾಸಕಾಂಗ ಪಕ್ಷ, ಕೆಪಿಸಿಸಿ ಪದಾಧಿಕಾರಿಗಳು ಮತ್ತು ವಿವಿಧ ಘಟಕಗಳ ಪ್ರಮುಖರ ಜೊತೆ ಶುಕ್ರವಾರ ಪ್ರತ್ಯೇಕ ಸಭೆ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಇವುಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಳಮಟ್ಟದಲ್ಲಿ ಪಕ್ಷ ಸಂಘಟಿಸಲು ಆರಂಭಿಸಿದ ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನ ಪರಿಣಾಮಕಾರಿಯಾಗಿ ನಡೆಯದಿರುವುದು ವೇಣುಗೋಪಾಲ್‌ ಕೋಪಕ್ಕೆ ಕಾರಣವಾಗಿದೆ. ‘ಪಕ್ಷದ ಶಾಸಕರು ಅಭಿಯಾನದಲ್ಲಿ ಕೈ ಜೋಡಿಸುತ್ತಿಲ್ಲ ಎಂಬ ದೂರುಗಳು ಬಂದಿವೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ.  ಬೂತ್‌ಮಟ್ಟದಲ್ಲಿರುವ 350 ಮನೆಗಳಿಗೆ ತೆರಳಲು ಸಾಧ್ಯ ಇಲ್ಲವೆಂದರೆ ಹೇಗೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿ ಪಕ್ಷಕ್ಕೆ ಪೂರಕ ವಾತಾವರಣ ಇದೆ. ಮುಖಂಡರು ಮತ್ತು ಕಾರ್ಯಕರ್ತರು ಚುರುಕಿನಿಂದ ಕೆಲಸ ಮಾಡಿದರೆ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ. ಎಲ್ಲ ಶಾಸಕರು ತಮ್ಮ ಕ್ಷೇತ್ರದಲ್ಲಿ ಕೈಗೊಂಡ ಮನೆ ಮನೆಗೆ ಅಭಿಯಾನದ ಬಗ್ಗೆ ವಾರದೊಳಗೆ ವರದಿ ನೀಡಬೇಕು’ ಎಂದು ಅವರು ತಾಕೀತು ಮಾಡಿದ್ದಾರೆ.

ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನದ ಮೂಲಕ ಅ. 15ರೊಳಗೆ ಎಲ್ಲ 224 ಕ್ಷೇತ್ರಗಳ 54 ಸಾವಿರ ಬೂತ್‌ಗಳನ್ನು ತಲುಪಲು ಪಕ್ಷ ಉದ್ದೇಶಿಸಿತ್ತು. ಅದರೆ, ಬೆಂಗಳೂರು ಸೇರಿದಂತೆ ರಾಜ್ಯ ಹಲವು ಭಾಗಗಳಲ್ಲಿ ಬೂತ್‌ ಮಟ್ಟದ ಸಮಿತಿ ರಚನೆಗೇ ಶಾಸಕರು ಆಸಕ್ತಿ ತೋರಿಸಿಲ್ಲ. ಹೀಗಾಗಿ ಕಾರ್ಯಕ್ರಮ ಹಳ್ಳ ಹಿಡಿದಿದೆ. ಮತ್ತೂ ಒಂದು ವಾರ ಅಭಿಯಾನದ ಗಡುವು ವಿಸ್ತರಿಸಲಾಗಿದ್ದು, ಅಷ್ಟರೊಳಗೆ ಪೂರ್ಣಗೊಳಿಸಬೇಕು ಎಂದು ವೇಣುಗೋಪಾಲ್‌ ಕಟ್ಟಪ್ಪಣೆ ಮಾಡಿದ್ದಾರೆ.

‘10ಕ್ಕೂ ಹೆಚ್ಚು ಜಿಲ್ಲಾ ಘಟಕಗಳಲ್ಲಿ ಒಳ ಜಗಳವಿದೆ. ಗೊಂದಲ ಪರಿಹರಿಸಲು ಈ ಜಿಲ್ಲೆಗಳಲ್ಲಿ ಸಮನ್ವಯ ಸಮಿತಿ ರಚಿಸಿದ್ದರೂ ಪ್ರಯೋಜನ ಆಗಿಲ್ಲ. ಈ ಮಧ್ಯೆ, ಸಾಮಾಜಿಕ ಜಾಲ ತಾಣ ಬಲಪಡಿಸುವ ಕುರಿತು ವೇಣುಗೋಪಾಲ್‌ ಸಭೆ ನಡೆಸುತ್ತಿರುವಾಗಲೇ ಚಿತ್ರದುರ್ಗ ಜಿಲ್ಲೆಯ ಕೆಲವು ನಾಯಕರು ವಿರೋಧಿ ಬಣದ ಬಗ್ಗೆ ದೂರು ನೀಡಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

3 ತಿಂಗಳಿಂದ ನಿಮ್ಮ ಸಾಧನೆ ಏನು?:

‘ಹೈಟೆಕ್ ಪೊಲಿಟಿಕ್ಸ್‌ಗೆ ಗುಡ್ ಬೈ ಹೇಳಿ; ಕೇಡರ್ ಬೇಸ್ ಕೆಲಸ ಶುರು ಮಾಡಿ’ ಎಂದೂ ವೇಣುಗೋಪಾಲ್‌ ಗುಡುಗಿದ್ದಾರೆ.

‘ಮೂರು ತಿಂಗಳಿಂದ ನಿಮ್ಮ ಸಾಧನೆ ಏನು’ ಎಂದು ವೇಣುಗೋಪಾಲ್‌, ಮಹಿಳಾ ಘಟಕ ಹಾಗೂ ಮುಂಚೂಣಿ ಘಟಕಗಳ ಕಾರ್ಯಕರ್ತರನ್ನು ‍ಪ್ರಶ್ನಿಸಿದ್ದಾರೆ.

ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ‘ಸಲಹೆ ಕೊಡುವುದೇ ಸಾಧನೆ ಅಲ್ಲ’ ಎಂದು ಕುಟುಕಿದ್ದಾರೆ. ‘ಮೂರು ತಿಂಗಳಿಂದ ಗ್ಯಾಸ್ ದರ ಏರಿಕೆ ಆಗಿದೆ. ನೀವು ಎಷ್ಟು ಬಾರಿ ಪ್ರತಿಭಟನೆ ಮಾಡಿದ್ದೀರಿ’ ಎಂದೂ ಕೇಳಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ಪಕ್ಷದ ಕಾರ್ಯಕ್ರಮ ಮತ್ತು ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಚುರುಕುಗೊಳಿಸಬೇಕು. ಇನ್ನು ಮುಂದೆ, ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಕ್ಷದ ಶಾಸಕರು, ಸಚಿವರು ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳಬೇಕು. ಜತೆಗೆ ಪಕ್ಷದ ಕಾರ್ಯಕ್ರಮಗಳಿಗೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ವೇಣುಗೋಪಾಲ್‌ ಸೂಚಿಸಿದ್ದಾರೆ’ ಎಂದರು.

ಕಾನೂನು ಸುವ್ಯವಸ್ಥೆ: ಮಾಹಿತಿ ಪಡೆದ ವೇಣುಗೋಪಾಲ್

ಬೆಂಗಳೂರು: ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಕಾಂಗ್ರೆಸ್ ಪಕ್ಷದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್  ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಮಾಹಿತಿ ಪಡೆದಿದ್ದಾರೆ.

ಕುಮಾರಕೃಪಾ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿರುವ ವೇಣುಗೋಪಾಲ್‌, ಶುಕ್ರವಾರ ಬೆಳಿಗ್ಗೆಯೇ ರೆಡ್ಡಿ ಅವರನ್ನು ಕರೆಸಿಕೊಂಡರು.

ಅರ್ಧಗಂಟೆಗೂ ಹೆಚ್ಚು ಹೊತ್ತು ಇಬ್ಬರೇ ಸಮಾಲೋಚನೆ ನಡೆಸಿದರು. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಇಲ್ಲಿಯವರೆಗೆ ನಡೆದ ತನಿಖೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆಗಳು ಹಾಗೂ ಬಂಧಿತ ಆರೋಪಿಗಳ ಬಗ್ಗೆ ರೆಡ್ಡಿ ಅವರು ಉಸ್ತುವಾರಿಗೆ ವಿವರ ನೀಡಿದರು ಎಂದು ಗೊತ್ತಾಗಿದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಜನರಿಗೆ ಆಗಿರುವ ತೊಂದರೆಗಳು, ಸರ್ಕಾರದಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಅವರು, ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿನ ರಾಜಕೀಯ ಸ್ಥಿತಿ, ಕಾಂಗ್ರೆಸ್‌ ಸಂಘಟನೆ ಬಗ್ಗೆ ವಿವರ ಪಡೆದರು ಎಂದು ತಿಳಿದುಬಂದಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT