ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವರೂಪ ವಿರೂಪ

ಭಾನುವಾರ, ಜೂನ್ 16, 2019
22 °C
ವಿಚಾರ

ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವರೂಪ ವಿರೂಪ

Published:
Updated:
ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವರೂಪ ವಿರೂಪ

ಮನುಷ್ಯ ತನ್ನ ಮನಸ್ಸಿನಲ್ಲಿ ಮೂಡಿದ ಯೋಚನೆ, ಭಾವನೆ, ಕಲ್ಪನೆ, ವಿಚಾರ ಇತ್ಯಾದಿಗಳನ್ನು ಮಾತು, ಬರಹ, ಚಿತ್ರ, ಶಿಲ್ಪ, ನೃತ್ಯ, ಸಂಗೀತ ಮುಂತಾದವುಗಳ ಮೂಲಕ ಪ್ರಕಟಿಸುತ್ತಾನೆ. ಇವೆಲ್ಲವನ್ನೂ ಮನುಷ್ಯನ ಅಭಿವ್ಯಕ್ತಿ ಎನ್ನಲಾಗುತ್ತದೆ. ಮನುಷ್ಯನೆಂಬ ಪ್ರಾಣಿ ಮಾನವ ಎನಿಸಿಕೊಂಡು ಭೂಮಿಯ ಮೇಲೆ ಕಾಣಿಸಿಕೊಂಡಂದಿನಿಂದಲೇ ಈ ಅಭಿವ್ಯಕ್ತಿ ಆರಂಭವಾಗಿದೆ. ಅಭಿವ್ಯಕ್ತಿ ಎಂಬ ಶಬ್ದಕ್ಕೆ ಸ್ವಾತಂತ್ರ್ಯ ಎಂಬ ಶಬ್ದ ಸೇರಿಕೊಂಡದ್ದು ಬಹಳ ಕಾಲದ ಮೇಲೆ. ಯಾವಾಗ ಎಂದರೆ, ಅಭಿವ್ಯಕ್ತಿಗೆ ಅಡ್ಡಿ ಅಥವಾ ಪ್ರತಿಬಂಧ ಉಂಟಾಗತೊಡಗಿದ ನಂತರ. ಅದಕ್ಕೆ ಮೊದಲು ಅಭಿವ್ಯಕ್ತಿಯ ಜೊತೆಗೆ ಸ್ವಾತಂತ್ರ್ಯ ಎಂಬ ಶಬ್ದದ ಅಗತ್ಯ ಇರಲಿಲ್ಲ. ಯಾವುದೇ ರೀತಿಯ ಬಂಧನ, ನಿರ್ಬಂಧ ಇಲ್ಲದಿದ್ದರೆ ಅಭಿವ್ಯಕ್ತಿ ಸ್ವಾಭಾವಿಕವಾಗಿ ಮುಕ್ತವಾಗಿಯೇ ಇರುತ್ತದೆ. ಮನುಷ್ಯ ಅಥವಾ ದೇಶ ಯಾವುದೋ ಬಗೆಯ ಬಂಧನದಲ್ಲಿದ್ದರೆ, ಅದು ಬಂಧನದಿಂದ ಮುಕ್ತವಾದಾಗ ಅದಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎನ್ನಲಾಗುತ್ತದೆ. ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭವಾದ ದಿನದಿಂದಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಹೋರಾಟದ ಮುಖ್ಯ ಅಸ್ತ್ರವಾಗಿತ್ತು ಎಂಬ ಐತಿಹಾಸಿಕ ಸತ್ಯವನ್ನು ನಾವು ನೆನಪಿಸಿಕೊಳ್ಳಬೇಕು. ಅಂದಿನ ಧೀಮಂತ ಜನನಾಯಕರು ಒಬ್ಬರು ಇನ್ನೊಬ್ಬರನ್ನು ನಿಂದಿಸಲಿಲ್ಲ, ಹಳಿಯಲಿಲ್ಲ, ಮಾತ್ರವಲ್ಲ, ಭಾರತವನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದ ಇಂಗ್ಲೆಂಡಿನ ಜನನಾಯಕರನ್ನು ಸಹ ಹಳಿಯಲಿಲ್ಲ.

ಪ್ರಜಾಸತ್ತೆ ಅಥವಾ ಪ್ರಜೆಗಳ ಆಡಳಿತ ಎನ್ನುವುದರಲ್ಲಿ ಪ್ರಜೆಗೆ ಎಲ್ಲ ಬಗೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಇಲ್ಲದಿದ್ದರೆ ಅದು ಪ್ರಜಾಪ್ರಭುತ್ವ ಅಲ್ಲ. ಅಭಿವ್ಯಕ್ತಿಯನ್ನು ನಿರ್ಬಂಧಿಸುವುದು ನಿರಂಕುಶ ಪ್ರಭುತ್ವದ ಲಕ್ಷಣ. ಅಭಿವ್ಯಕ್ತಿಯಲ್ಲಿ ಮುಖ್ಯವಾದದ್ದು ಮಾತು. ಯಾಕೆಂದರೆ, ವಿದ್ಯೆ ಅಥವಾ ಯಾವುದೇ ಕಲಿಕೆಯಿಲ್ಲದವನು ತನ್ನ ಭಾವನೆಯನ್ನು ಮಾತಿನ ಮೂಲಕವಷ್ಟೇ ಅಭಿವ್ಯಕ್ತಿಸಬಲ್ಲ. ವಿಸ್ತೃತವಾದ ಅರ್ಥದಲ್ಲಿ ಎಲ್ಲಾ ಬಗೆಯ ಅಭಿವ್ಯಕ್ತಿ ಅರ್ಥಾತ್ ಪ್ರಕಟಪಡಿಸುವಿಕೆ ಮನುಷ್ಯನ ಮಾತೇ ಆಗಿರುತ್ತದೆ. ಪುಸ್ತಕ, ಚಿತ್ರ, ಉಪನ್ಯಾಸ, ಪತ್ರಿಕೆ ಮುಂತಾದವುಗಳ ಮೂಲಕ ಮನುಷ್ಯ ತನ್ನ ಅಭಿಪ್ರಾಯವನ್ನು, ವಿಚಾರಗಳನ್ನು ವ್ಯಕ್ತಪಡಿಸುತ್ತಾನೆ. ರೇಡಿಯೊ, ಟಿ.ವಿ. ಮುಂತಾದ ಮಾಧ್ಯಮಗಳು ಕೂಡ ಅದೇ ಸಾಲಿನಲ್ಲಿ ಬರುತ್ತವೆ. ಇದರಲ್ಲಿ ಯಾವುದನ್ನು ಪ್ರತಿಬಂಧಿಸಿದರೂ ಅದು ಪ್ರಜಾಸತ್ತೆಯ ಹತ್ಯೆಯೇ ಆಗುತ್ತದೆ. ಪ್ರಜಾಪ್ರಭುತ್ವದಲ್ಲಿ ಮಾತೂ ಸೇರಿದಂತೆ ಆವುದೇ ಅಭಿವ್ಯಕ್ತಿಯ ಮೇಲೆ ನಿರ್ಬಂಧ ಹೇರುವುದು ಎಂದರೆ ಪ್ರಜಾಸತ್ತೆಯೇ ಆತ್ಮಹತ್ಯೆ ಮಾಡಿಕೊಂಡಂತೆ. ಪ್ರಜಾಸತ್ತೆಯಲ್ಲಿ ಸರ್ಕಾರದ– ಆಡಳಿತದ ವಿಮರ್ಶೆ, ವಿಶ್ಲೇಷಣೆ, ಟೀಕೆ ನಡೆಯಲೇಬೇಕು. ಅದು ನೇರವಾದ ಮಾತಿನಿಂದ ನಡೆಯಬಹುದು, ಪತ್ರಿಕೆ ಅಥವಾ ಟಿ.ವಿ. ಮೂಲಕ ನಡೆಯಬಹುದು. ಜನರದೇ ಆಗಿರುವ ಪ್ರಭುತ್ವ ಅದನ್ನು ಅರಗಿಸಿಕೊಳ್ಳಲೇಬೇಕು. ಅದು ಎಷ್ಟು ಕಠೋರವಾಗಿದ್ದರೂ ಅದನ್ನು ಪ್ರಭುತ್ವ ಸ್ವಾಗತಿಸಬೇಕು, ಅದರಿಂದ ಕಲಿಯಬೇಕು. ಜನರ ದನಿಗೆ ಉರಿದೇಳುವ ಅಥವಾ ಸ್ಪಂದಿಸದ ಪ್ರಜಾಸತ್ತೆ ದುರ್ಬಲ ಪ್ರಜಾಸತ್ತೆ. ಅದು ನಿರಂತರ ಒಂದಲ್ಲ ಒಂದು ವಿಧದ ಕಾಯಿಲೆಯಿಂದ ನರಳುತ್ತಾ ಬಳಲುತ್ತಾ ಇರುತ್ತದೆ. ಸರ್ಕಾರದ ಕೃಪೆಯಿಂದ ಪ್ರಜೆಗಳಿಗೆ ರಾಮರಾಜ್ಯ ಬರುವುದು ಬೇಡ. ನಿಜವಾದ ರಾಮರಾಜ್ಯ ಹೇಗಿತ್ತು ಎಂದು ಯಾರು ಬಲ್ಲರು? ಆ ಕಾಲದ ಆಡಳಿತ ಈ ಕಾಲಕ್ಕೆ ಒಗ್ಗಲಿಕ್ಕಿಲ್ಲ.

ಇವತ್ತು ರಸ್ತೆ ಸ್ವಚ್ಛತೆಗಿಂತಲೂ ಮುಖ್ಯವಾಗಿ ಅಭಿವ್ಯಕ್ತಿ ಸ್ವಚ್ಛತೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ. ಒಬ್ಬ ಜನಪ್ರತಿನಿಧಿ ಇನ್ನೊಬ್ಬ ಜನಪ್ರತಿನಿಧಿಯನ್ನು ವಾಚಾಮಗೋಚರ ಬೈಯುವುದು, ನಿಂದಿಸುವುದು ಇವತ್ತು ರಾಜಕಾರಣದ ಒಂದು ಆಯಾಮ ಎನಿಸಿಕೊಂಡಿದೆ. ಅದು ಎಂಥ ಸಾಧನೆ? ಈ ವರ್ತನೆ ಮತ್ತು ಮಾತು ಪ್ರಜಾಪ್ರಭುತ್ವಕ್ಕೆ ಮಾತ್ರವಲ್ಲ, ನಮ್ಮ ಸಂಸ್ಕೃತಿಗೂ ಮಾಡುವ ಅಪಚಾರವಾಗಿದೆ. ಭಾರತಕ್ಕಿಂತ ಬಹಳ ಹಿಂದೆಯೇ ಪ್ರಜಾತಂತ್ರವನ್ನು ರೂಪಿಸಿ ಬಳಸಲಾರಂಭಿಸಿದ ಇಂಗ್ಲೆಂಡ್, ಅಮೆರಿಕೆಯನ್ನು ನೋಡಿಯಾದರೂ ನಮ್ಮ ರಾಜಕಾರಣಿಗಳು ಈ ಅಸಹ್ಯ ನಡೆ ನುಡಿಯನ್ನು ನಿಲ್ಲಿಸಬೇಕು. ಪ್ರಜೆಗಳು ಮನಸ್ಸು ಮಾಡಿದರೆ, ಎಲ್ಲಾ ರಾಜಕಾರಣಿಗಳ, ಕೊನೆಯ ಪಕ್ಷ, ಅವರವರ ಸಭಾಕ್ಷೇತ್ರದ ಪ್ರತಿನಿಧಿಯ ನಾಲಿಗೆಯನ್ನು ಸ್ವಚ್ಛಗೊಳಿಸಬಹುದು.

ಶಾಸಕ ಅಥವಾ ಸಂಸದ ಆದೊಡನೆ ಸಿಂಹಾಸನ ದಕ್ಕಿಸಿಕೊಂಡ ನಿರಂಕುಶ ಪ್ರಭುವಿನಂತೆ ಹೇಗೆ ಬೇಕಾದರೂ ನಡೆದುಕೊಳ್ಳಬಹುದು, ಏನು ಬೇಕಾದರೂ ಮಾತಾಡಬಹುದು, ಎಷ್ಟು ಹಣ ಬೇಕಾದರೂ ಮಾಡಬಹುದು ಎಂದು ಭಾವಿಸುವ ರಾಜಕಾರಣಿಯ ಗುಣ ಎಂಥದು ಎಂದು ಅರ್ಥಮಾಡಿಕೊಳ್ಳುವ ಪ್ರಜ್ಞೆ ಆತನಿಗೆ ವೋಟು ಹಾಕುವ ಮತದಾರರರಿಗೆ ಇರಬೇಕು. ಆ ಪ್ರಜ್ಞೆ ಮತದಾರರಲ್ಲಿ ಉಂಟಾಗುವವರೆಗೆ ನಮಗೆ ಸ್ವಚ್ಛ ಆಡಳಿತ, ಸ್ವಚ್ಛ ಪ್ರಜಾಪ್ರಭುತ್ವ ದೊರೆಯುವುದಿಲ್ಲ.

ಯಾವ ಅರ್ಹತೆಯ ಆಧಾರದಲ್ಲಿ ಇವತ್ತು ಒಬ್ಬ ಜನಪ್ರತಿನಿಧಿಯ ಆಯ್ಕೆ ಆಗುತ್ತದೆ, ಯಾವ ಉದ್ದೇಶ ಇಟ್ಟುಕೊಂಡು ಆತ ಜನರ ಪ್ರತಿನಿಧಿಯಾಗಲು ಬಯಸುತ್ತಾನೆ ಎನ್ನುವುದನ್ನು ಜನರು ತಿಳಿದುಕೊಳ್ಳಬೇಕು.

ಶಾಸಕ, ಸಂಸದ ಅಥವಾ ಮಂತ್ರಿ ಆಗಿರುವ ಭ್ರಷ್ಟ ರಾಜಕಾರಣಿಯನ್ನು ಇವತ್ತು ಅವನ ಪಕ್ಷ ಮತ್ತು ಸರ್ಕಾರ ರಕ್ಷಿಸುವ ರೀತಿ ಜನರಿಗೆ ಗೊತ್ತಿರುವಂಥದೇ. ಅಂಥವನನ್ನು ಹಿಂದೆ ಕರೆಸುವ ಶಕ್ತಿ ಅರ್ಥಾತ್ ಹಕ್ಕು ಆತನನ್ನು ಆಯ್ಕೆ ಮಾಡುವವರಿಗೆ ಇರಬೇಕು ಎಂದು ಕ್ರಿಸ್ತಶಕ ಐದನೇ ಶತಮಾನದಲ್ಲಿ ಗ್ರೀಸಿನಲ್ಲಿ ಹುಟ್ಟಿದ ಪ್ರಜಾಸತ್ತೆ ಹೇಳುತ್ತದೆ.

ಇಷ್ಟು ಕಾಲ ಜನನಾಯಕರೆನಿಸಿಕೊಂಡವರ ಆಚಾರವಿಲ್ಲದ ನಾಲಿಗೆಯಿಂದ ಹೊರಡುವ ಅನಾಗರಿಕ ಮಾತುಗಳನ್ನು ಮೋಜು ಎಂದು ಜನರು ಒಪ್ಪಿಕೊಂಡಿರುವುದು ಆಶ್ಚರ್ಯಕರ. ಈ ಮೋಜು ಪ್ರಜಾತಂತ್ರವನ್ನು ಕರಗಿಸುತ್ತಿದೆ. ಈ ಮೋಜು ಪ್ರಜಾಪ್ರಭುತ್ವಕ್ಕೆ ಶೋಭಿಸುತ್ತದೆಯೇ? ಇದು ಸುಮಧುರ ಭಾಷಿಣಿ ಎಂದು ಕೊಂಡಾಡಲಾಗುವ ಭಾರತಕ್ಕೆ ಶೋಭಿಸುತ್ತದೆಯೇ? ಈ ಮೋಜು ನಮ್ಮ ಸಮಾಜಕ್ಕೆ ಶೋಭಿಸುತ್ತದೆಯೇ?

ಸನ್ನುಡಿಯ ಹಿಂದೆ ಹೇಗೆ ಸತ್ಚಿಂತಕ ಮನಸ್ಸು ಇರುತ್ತದೆಯೋ ಹಾಗೆಯೇ ಹೇಯವಾದ ಮಾತಿನ ಹಿಂದೆ ಹೇಯವಾದ ಮನಸ್ಸು ಇರಲೇಬೇಕಲ್ಲವೇ? ಈ ಸತ್ಯದ ಅರಿವು ಮಾತಿನ ದುರ್ಬಳಕೆ ಮಾಡುವವನಿಗೆ ಇಲ್ಲವೇ?

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry