ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ತೇರದಾಳದಿಂದ ಸ್ಪರ್ಧೆಗೆ ನಿಶ್ಚಯಿಸಿದ್ದು ನಿಜ’

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಲು ನಿಶ್ಚಯಿಸಿದ್ದು ನಿಜ. ಆದರೆ, ತಮಗೆ ರಾಜಕೀಯ ಅಸ್ತಿತ್ವ ನೀಡಿದ ಶಿಕಾರಿಪುರ ತಾಲ್ಲೂಕಿನ ಜನರ ಒತ್ತಾಸೆಗೆ ಮಣಿದು ಆ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತೇರದಾಳ, ಬಾಗಲಕೋಟೆ ಇಲ್ಲವೇ ವಿಜಯಪುರದಲ್ಲಿ ಸ್ಪರ್ಧೆ ನಡೆಸಲು ಒಮ್ಮೆ ಈ ಭಾಗದ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿತ್ತು. ಆದರೆ ಶಿಕಾರಿಪುರದಲ್ಲಿ ಎರಡು ಕಡೆ ನಡೆಸಿದ ಬೂತ್‌ಮಟ್ಟದ ಸಮಾವೇಶಗಳಲ್ಲಿ ಕ್ಷೇತ್ರದ ಜನ ನನ್ನ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು. ‘ಇಲ್ಲಿ ನಾಮಪತ್ರ ಸಲ್ಲಿಸಿ, ನೀವು ಬೇರೆ ಕಡೆ ಚುನಾವಣೆ ಪ್ರಚಾರಕ್ಕೆ ತೆರಳಿ. ನಿಮ್ಮನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುವ ಜವಾಬ್ದಾರಿ ನಮ್ಮದು’ ಎಂದರು. ಶಿಕಾರಿಪುರ ಕ್ಷೇತ್ರ ಬಿಟ್ಟು ಕಳುಹಿಸಲು ಯಾರೊಬ್ಬರೂ ಸಿದ್ಧರಿಲ್ಲ. ಹಾಗಾಗಿ ಅದನ್ನು ಬಿಟ್ಟು ಬರುವುದಿಲ್ಲ’ ಎಂದರು.

‘ತೇರದಾಳದಲ್ಲಿ ಸಿದ್ದು ಸವದಿ ಸ್ಪರ್ಧಿಸಲಿದ್ದಾರೆ. ಈ ನಿರ್ಧಾರದಲ್ಲಿ ಯಾವುದೇ ಗೊಂದಲ ಇಲ್ಲ. ಮತ್ತೊಮ್ಮೆ ಪರಿಶೀಲಿಸುವ ಪ್ರಮೇಯವೇ ಇಲ್ಲ’ ಎಂದರು.

‘ಎಸಿಬಿ ದಾಳಿಗೆ ಸಂಚು: ಮೂರ್ಖತನದ ಪರಮಾವಧಿ’

‘ಐ.ಟಿ ಅಧಿಕಾರಿಗಳ ಮನೆಯ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿಗೆ ಯೋಜಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ಖತನದ ಪರಮಾವಧಿ’ ಎಂದು ಲೇವಡಿ ಮಾಡಿದ ಯಡಿಯೂರಪ್ಪ, ಎಸಿಬಿ ಎಂಬುದು ಸಿದ್ದರಾಮಯ್ಯ ಅವರನ್ನು ರಕ್ಷಣೆ ಮಾಡುವ ಸಂಸ್ಥೆ ಎಂದರು.

‘ಸರ್ಕಾರದ ಇನ್ನೂ ಕೆಲವು ಸಚಿವರ ಮನೆಯ ಮೇಲೆ ದಾಳಿಯಾಗುವ ಸಾಧ್ಯತೆ ಇದೆ. ಆ ಭಯದಿಂದ ಸಿದ್ದರಾಮಯ್ಯ ಎಸಿಬಿ ಬಳಸಿಕೊಂಡು ಈ ಕೆಲಸ ಮಾಡಲು ಹೊರಟಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಸರ್ಕಾರದ ಗುರುತರ ಹಗರಣವೊಂದರ ದಾಖಲೆಯನ್ನು ವಿಧಾನಪರಿಷತ್ ಸದಸ್ಯ ಪುಟ್ಟಸ್ವಾಮಿ ಬಿಡುಗಡೆ ಮಾಡಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT