ಸಾಮರಸ್ಯಕ್ಕೆ ಏಕತೆಯ ಮಂತ್ರ

ಸೋಮವಾರ, ಜೂನ್ 17, 2019
22 °C

ಸಾಮರಸ್ಯಕ್ಕೆ ಏಕತೆಯ ಮಂತ್ರ

Published:
Updated:
ಸಾಮರಸ್ಯಕ್ಕೆ ಏಕತೆಯ ಮಂತ್ರ

ಸಾವಿರಾರು ವರ್ಷಗಳ ಹಿಂದಿನ ಕಾಲದ ವೇದ ಇಂದು ನಮ್ಮ ಪ್ರಯೋಜನಕ್ಕೆ ಹೇಗೆ ಒದಗುತ್ತದೆ? ಇಂಥದೊಂದು ಪ್ರಶ್ನೆ ಎದುರಾಗುವುದು ಸಹಜ. ವೇದಮಂತ್ರಗಳಿಗೆ ಮೂರು ಹಂತದ ಅರ್ಥಗಳಿವೆ ಎನ್ನುತ್ತದೆ ಪರಂಪರೆ.

ಹೀಗಾಗಿ ವೇದದ ರಹಸ್ಯಾರ್ಥವನ್ನೂ ಧ್ವನಿಯನ್ನೂ ಗ್ರಹಿಸಲು ನಮ್ಮ ಅಧ್ಯಯನಕ್ಕೆ ಹಲವು ಸಲಕರಣೆಗಳ ನೆರವು ಬೇಕಾಗುತ್ತದೆ. ವೇದದಲ್ಲಿ ಎಲ್ಲವೂ ಇದೆ ಅಥವಾ ಏನೂ ಇಲ್ಲ – ಈ ಎರಡು ರೀತಿಯ ಅತಿವಾದವೂ ಸಲ್ಲದು. ವೇದಗಳಿಗೂ ಮಿಥ್‌ಗಳಿಗೂ ಅವಿನಾಭಾವ ಸಂಬಂಧವಿದೆ. ಮಿಥ್‌ ಎಂದರೇನು? ನಮ್ಮ ಜೀವನಕ್ಕೂ ಅರಿವಿಗೂ ಮಿಥ್‌ಗಳಿಗೂ ಇರುವ ನಂಟು ಎಂಥದು? ಇಂಥ ಗಂಭೀರವಾದ ಪ್ರಶ್ನೆಗಳನ್ನು ನಾವು ಹಾಕಿಕೊಂಡು, ಅನ್ವೇಷಿಸದ ಹೊರತು ವೇದದ ಪ್ರಸ್ತುತತೆ ಏನು ಎನ್ನುವುದು ಅರ್ಥವಾಗದು. ಸದ್ಯಕ್ಕೆ ವೇದದ ಒಂದೆರಡು ಮಂತ್ರಗಳನ್ನು ನೋಡೋಣ. ಅವುಗಳ ಮೊದಲ ಹಂತದ ಅರ್ಥ, ಎಂದರೆ ವಾಚ್ಯಾರ್ಥ ನಮಗೇನಾದರೂ ಪ್ರಯೋಜನಕ್ಕೆ ಬರಬಹುದೆ – ಎಂದು ನೋಡೋಣ.

ಸಂ ಗಚ್ಛಧ್ವಂ ಸಂ ವದಧ್ವಂ ಸಂ ವೋ ಮನಾಂಸಿ ಜಾನತಾಂ|

ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||

‘ಒಟ್ಟಿಗೆ ಸೇರಿ, ಒಟ್ಟಿಗೆ ಕಲೆತು ಮಾತನಾಡಿ, ನಿಮ್ಮೆಲ್ಲರ ಮನಸ್ಸಿನ ಇಂಗಿತವೂ – ಹಿಂದೆ ದೇವತೆಗಳು ಎಲ್ಲರೂ ಒಪ್ಪಿ ತಮ್ಮ ತಮ್ಮ ಹವಿರ್ಭಾಗಗಳನ್ನು ಪಡೆಯುತ್ತಿದ್ದಂತೆ – ಒಂದೇ ಆಗಲಿ.

ಸಮಾನೀ ವ ಅಕೂತಿಃ ಸಮಾನಾ ಹೃದಯಾನಿ ವ |

ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ||

‘ನಿಮ್ಮ ಉದ್ದೇಶ ಒಂದೇ ಆಗಿರಲಿ; ನಿಮ್ಮ ಹೃದಯದ ಬಯಕೆ ಒಂದೇ ಆಗಿರಲಿ; ನಿಮ್ಮಲ್ಲಿ ಪೂರ್ಣವಾದ ಒಗ್ಗಟ್ಟು ಇರುವಂತೆ ನಿಮ್ಮ ಆಲೋಚನೆಗಳೆಲ್ಲ ಒಂದೇ ಆಗಲಿ.’

ಇಂದು ನಮ್ಮ ಜೀವನದ ದೊಡ್ಡ ಸಮಸ್ಯೆ ಎಂದರೆ ವ್ಯಷ್ಟಿರೂಪದಲ್ಲಿಯೂ ಸಮಷ್ಟಿರೂಪದಲ್ಲಿಯೂ ಕಾಡುತ್ತಿರುವ ಒಡಕುಗಳು. ವೈಯಕ್ತಿಕ ಮಟ್ಟದಲ್ಲಿ ನಮಗೆ ನಾವೇ ವಿರೋಧಿಗಳಾಗುತ್ತಿದ್ದೇವೆ; ಇನ್ನು ಹೊರಗಿನ ಪ್ರಪಂಚವನ್ನಂತೂ ಸದಾ ಯುದ್ಧಕ್ಕೆ ಸಿದ್ಧವಾಗಿರುವ, ತೊಡಗಿರುವ ಶತ್ರುವಿನಂತೆಯೇ ಕಾಣುತ್ತೇವೆ. ಹೀಗಾಗಿಯೇ ನಮ್ಮ ಒಟ್ಟು ವ್ಯಕ್ತಿತ್ವವೇ ಒತ್ತಡದಲ್ಲಿ ಸಿಲುಕಿ ಜೀವನದ ಸೌಂದರ್ಯವನ್ನೂ ಸಂತೋಷವನ್ನೂ ಸವಿಯದಂಥ ಕ್ಷೋಭೆಗೆ ಸಿಲುಕಿದ್ದೇವೆ. ನಮ್ಮ ಒಳಗೂ ಹೊರಗೂ ಹೇಗೆ ಸಾಮರಸ್ಯವನ್ನೂ ಹಿತವನ್ನೂ ಸಾಧಿಸಿಕೊಳ್ಳಬಹುದು ಎನ್ನುವುದನ್ನು ವೇದಗಳು ಹಲವು ನೆಲೆಗಳಲ್ಲಿ ಮಾರ್ಗದರ್ಶನವನ್ನು ಮಾಡುತ್ತವೆ.

ಮೇಲಿನ ಮಂತ್ರಗಳ ವಾಚ್ಯಾರ್ಥವೇ ಇದಕ್ಕೆ ಸಾಕ್ಷಿಯಾಗಿವೆ. ಒಗ್ಗಟ್ಟು ಎಂದರೆ ಅದು ಹೊರಗಿನ ನಾಲ್ಕು ಜನರ ಜೊತೆ ಸಾಧಿಸುವ ಹೊಂದಾಣಿಕೆ ಮಾತ್ರವೇ ಅಲ್ಲ; ನಮ್ಮ ಅಂತರಂಗದ ಹಲವು ಭಾವಗಳಲ್ಲಿಯೂ ಸಾಧಿಸಬೇಕಾಗಿರುವ ನೆಮ್ಮದಿಯ ಸ್ಥಿತಿಯಲ್ಲವೆ? ವೇದ ಒಟ್ಟು ಸೃಷ್ಟಿಯ ಜೊತೆಗೆ ನಾವು ಸಾಧಿಸಬೇಕಾದ ಹೊಂದಾಣಿಕೆಯ ಮಾದರಿಗಳನ್ನು ವಿವರಿಸುತ್ತದೆ. ವೇದ ‍ಪ್ರತಿಪಾದಿಸುವ ಕುಟುಂಬ ಎಂದರೆ ಅದು ವಿಶ್ವಕುಟುಂಬವೇ ಹೌದು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry