ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಮುಂದುವರಿದ ಮಳೆ; ಖಾಲಿಯಾಗದ ನೀರು: ರಸ್ತೆಯಲ್ಲಿ ಓಡಾಡಲು ಬೋಟ್‌ ಖರೀದಿ

Published:
Updated:
ಮುಂದುವರಿದ ಮಳೆ; ಖಾಲಿಯಾಗದ ನೀರು: ರಸ್ತೆಯಲ್ಲಿ ಓಡಾಡಲು ಬೋಟ್‌ ಖರೀದಿ

ಬೆಂಗಳೂರು: ನಗರದಲ್ಲಿ ಶುಕ್ರವಾರವೂ ಮಳೆ ಸುರಿದಿದ್ದು, ಕೆಲ ಪ್ರದೇಶಗಳು ಜಲಾವೃತಗೊಂಡವು. ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ಅಲ್ಲೆಲ್ಲ ಸಂಚಾರ ದಟ್ಟಣೆ ಕಂಡುಬಂತು.

ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಚಾಮರಾಜಪೇಟೆ, ರಾಜರಾಜೇಶ್ವರಿನಗರ, ಕೋರಮಂಗಲ, ಮಡಿವಾಳ, ಎಚ್.ಎಸ್‌.ಆರ್ ಲೇಔಟ್‌, ಬಿ.ಟಿ.ಎಂ ಲೇಔಟ್‌, ದಯಾನಂದ ನಗರ ಹಾಗೂ ಸುತ್ತಮುತ್ತ ಮಳೆಯಾಗಿದೆ.

ಗುರುವಾರ ಸುರಿದಿದ್ದ ಮಳೆಯ ಆರ್ಭಟಕ್ಕೆ ಕೋರಮಂಗಲ, ಎಚ್‌.ಎಸ್‌.ಆರ್‌ ಲೇಔಟ್‌ನ 6 ಹಾಗೂ 7ನೇ ಹಂತದಲ್ಲಿ ನಿಂತಿದ್ದ ನೀರು, ಶುಕ್ರವಾರವೂ ಕಡಿಮೆಯಾಗಲಿಲ್ಲ. ಪುನಃ ಮಳೆ ಸುರಿದಿದ್ದರಿಂದ ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆಗೂ ಅಡ್ಡಿ ಉಂಟಾಗಿತ್ತು. ತಡರಾತ್ರಿ ನೀರಿನ ಪ್ರಮಾಣ ಕಡಿಮೆಯಾದರೂ ಅಲ್ಲಲ್ಲಿ ನೀರು ನಿಂತಿದ್ದು ಕಂಡುಬಂತು.

ಲಾಲ್‌ಬಾಗ್‌ ಮುಖ್ಯರಸ್ತೆ, ಶಿವಾನಂದ ವೃತ್ತ, ವಿಂಡ್ಸರ್‌ ಮ್ಯಾನರ್‌ ಸೇತುವೆ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯಿತು. ಆ ನೀರಿನಲ್ಲಿ ವಾಹನಗಳು ಸಂಚರಿಸಿದವು. ಕೆಲವು ವಾಹನಗಳು ಕೆಟ್ಟು ನಿಂತಿದ್ದವು. ಸ್ಥಳೀಯರ ನೆರವಿನಿಂದ ಚಾಲಕರು ಅಂಥ ವಾಹನಗಳನ್ನು ನೀರಿನಿಂದ ಹೊರಗೆ ತೆಗೆದರು.

ಓಡಾಡಲು ಬೋಟ್‌ ಖರೀದಿಸಿದ ಮಹಿಳೆ: ನಿರಂತರವಾಗಿ ಮಳೆ ಸುರಿಯುತ್ತಿದ್ದರಿಂದ ಕೋರಮಂಗಲದ ಹಲವು ರಸ್ತೆಗಳು ಜಲಾವೃತ್ತಗೊಂಡಿದ್ದು, ಎರಡು ವಾರದಿಂದ ಸ್ಥಳೀಯ ನಿವಾಸಿಗಳು ಅಲ್ಲೆಲ್ಲ ಓಡಾಡಲು ಕಷ್ಟವಾಗುತ್ತಿದೆ. ಇದರಿಂದ ಬೇಸತ್ತ ನಿವಾಸಿ ಶಾಲಿನಿ ಮೋದಿ ಎಂಬುವರು ಬೋಟ್‌ ಖರೀದಿ ಮಾಡಿದ್ದಾರೆ. ಅದರಲ್ಲಿ ಅವರು ಹಾಗೂ ಅವರ ಮಕ್ಕಳು ಸಂಚರಿಸುತ್ತಿದ್ದಾರೆ.

‘ನಿತ್ಯವೂ ಮಳೆ ಬರುತ್ತಿದ್ದಂತೆ ಮನೆಯಿಂದ ಹೊರಗೆ ಬರಲು ಆಗುವುದಿಲ್ಲ. ಬೆಳಿಗ್ಗೆ ಕಚೇರಿಗೆ ಹೋಗಲು ತೊಂದರೆಯಾಗುತ್ತದೆ. ಹೀಗಾಗಿ ಬೋಟ್‌ ಇಟ್ಟುಕೊಂಡಿದ್ದೇವೆ. ಟ್ಯೂಬ್‌ನಿಂದ ನಿರ್ಮಿಸಲಾದ ಈ ಬೋಟ್‌ ಅನ್ನು ಸುಲಭವಾಗಿ ಚಲಾಯಿಸುತ್ತೇವೆ’ ಎಂದು ಶಾಲಿನಿ ಸುದ್ದಿಗಾರರಿಗೆ ತಿಳಿಸಿದರು.

Post Comments (+)