ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿ ಮುಚ್ಚಲು ಪೈಥಾನ್‌ ಯಂತ್ರಕ್ಕೆ ₹4.5 ಕೋಟಿ ವೆಚ್ಚ

ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ರಸ್ತೆಗಳು ಆಗಿಲ್ಲ ಗುಂಡಿಮುಕ್ತ
Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿಯು ‘ಪೈಥಾನ್‌–5000’ ಯಂತ್ರಕ್ಕೆ ವಾರ್ಷಿಕ ₹4.5 ಕೋಟಿ ವ್ಯಯಿಸುತ್ತಿದೆ. ಆದರೆ, ರಸ್ತೆಗಳನ್ನು ಗುಂಡಿಮುಕ್ತ ಮಾಡಲು ಸಾಧ್ಯವಾಗಿಲ್ಲ.

ಈ ಕಾಮಗಾರಿಯ ಗುತ್ತಿಗೆಯನ್ನು ಅಮೆರಿಕ ರಸ್ತೆ ತಂತ್ರಜ್ಞಾನ ಮತ್ತು ಪರಿಹಾರ ಸಂಸ್ಥೆ (ಆರ್ಟ್ಸ್) ಪಡೆದಿದೆ. ಕೆನಡಾದಿಂದ ತರಿಸಿದ್ದ ಪೈಥಾನ್‌ ಯಂತ್ರದ ಕಾರ್ಯಾಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 2013ರಲ್ಲಿ ಚಾಲನೆ ನೀಡಿದ್ದರು.

ಗುಂಡಿ ಮುಚ್ಚಲು ಎರಡು ಪ್ಯಾಕೇಜ್‌ಗಳಲ್ಲಿ ಟೆಂಡರ್‌ ನೀಡಲಾಗಿದೆ. ನಗರದ ಕೇಂದ್ರ ಭಾಗದ ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯದ 116 ಕಿ.ಮೀ. ರಸ್ತೆಗಳ ನಿರ್ವಹಣೆ ಹಾಗೂ ನಗರ ಹೊರವಲಯದ ಐದು ವಲಯಗಳ 184 ಕಿ.ಮೀ. ರಸ್ತೆಗಳ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದೆ. ಒಂದು ಕಿ.ಮೀ. ರಸ್ತೆಯ ನಿರ್ವಹಣೆಗೆ ವರ್ಷಕ್ಕೆ ₹1.50 ಲಕ್ಷ ನೀಡಲಾಗುತ್ತಿದೆ. 116 ಕಿ.ಮೀ. ರಸ್ತೆಗೆ ₹1.74 ಕೋಟಿ, 184 ಕಿ.ಮೀ. ರಸ್ತೆಗೆ ₹2.76 ಕೋಟಿ ವ್ಯಯಿಸಲಾಗುತ್ತಿದೆ.

ಇದಲ್ಲದೆ, ವಾರ್ಡ್‌ ಮಟ್ಟದ ಕಾಮಗಾರಿಗಳ ಪಟ್ಟಿಯಲ್ಲಿ ಶೇ 20ರಷ್ಟು ಅನುದಾನವನ್ನು ಗುಂಡಿ ಮುಚ್ಚಲೆಂದೇ ಮೀಸಲಿಡಲಾಗಿದೆ. ಎಲ್ಲ ವಾರ್ಡ್‌ಗಳಲ್ಲಿ ಗುಂಡಿ ಮುಚ್ಚಲು ಒಟ್ಟು ₹42 ಕೋಟಿ ನೀಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಪೈಥಾನ್‌ ಯಂತ್ರವೂ ಗುಂಡಿ ಮುಚ್ಚುತ್ತಿದ್ದರೆ, ಇನ್ನೊಂದೆಡೆ ಗುಂಡಿ ಮುಚ್ಚಲು ಪಾಲಿಕೆಯೂ ಹಣ ಬಿಡುಗಡೆ ಮಾಡುತ್ತಿದೆ.

‘ಪೈಥಾನ್‌ ಯಂತ್ರಕ್ಕೆ ನೀಡುತ್ತಿರುವ ಕೋಟ್ಯಂತರ ರೂಪಾಯಿ ವ್ಯರ್ಥವಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ದೂರುತ್ತಾರೆ.

‘ದಿನಕ್ಕೆ 4–5 ಗುಂಡಿಗಳನ್ನೂ ಮುಚ್ಚುವಷ್ಟು ಸಾಮರ್ಥ್ಯ ಈ ಯಂತ್ರಕ್ಕಿಲ್ಲ. ಪ್ರಭಾವಿಯೊಬ್ಬರ ಶಿಫಾರಸಿನ ಮೇರೆಗೆ ಇದರ ಗುತ್ತಿಗೆ ನೀಡಲಾಗಿತ್ತು. ಎರಡನೇ ಅವಧಿಗೂ ಅದೇ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆರ್ಟ್ಸ್ ಸಂಸ್ಥೆಗೆ ಸೇರಿದ ಘಟಕವು ಅರಮನೆ ಮೈದಾನದ ಬಳಿ ಇದೆ. ಇಲ್ಲಿಂದಲೇ ಪೈಥಾನ್‌ ಯಂತ್ರಗಳು ಡಾಂಬರು ಮಿಶ್ರಣವನ್ನು ತುಂಬಿಕೊಂಡು ಹೋಗಬೇಕು. ಮಹದೇವಪುರ, ಬನ್ನೇರುಘಟ್ಟ ರಸ್ತೆಗೆ ಹೋಗಬೇಕಾದರೆ ಸಾಕಷ್ಟು ಸಮಯ ಹಿಡಿಯುತ್ತದೆ. ದಿನಕ್ಕೆ ಎರಡು ಬಾರಿ ಡಾಂಬರು ಮಿಶ್ರಣವನ್ನು ತೆಗೆದುಕೊಂಡು ಹೋದರೆ 10 ಕ್ಯುಬಿಕ್‌ ಮೀಟರ್‌ ಡಾಂಬರು ಹಾಕಬಹುದು. ಇದರಿಂದ ಎಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತದೆ’ ಎಂದು ಪ್ರಶ್ನಿಸಿದರು.

‘ಪೈಥಾನ್‌ ಯಂತ್ರವನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಗುಂಡಿ ಮುಚ್ಚುವ ಕುರಿತು ಅಧಿಕಾರಿಗಳು ಮೇಲ್ವಿಚಾರಣೆಯನ್ನೂ ನಡೆಸುತ್ತಿಲ್ಲ. ಇದರಿಂದ ಪಾಲಿಕೆಯ ಹಣ ಪೋಲಾಗುತ್ತಿದೆ’ ಎಂದರು.

**

‘ಮಳೆಯಿಂದಾಗಿ ಕಾಮಗಾರಿ ಕುಂಠಿತ’

‘ನಗರದ 300 ಕಿ.ಮೀ. ರಸ್ತೆಗಳನ್ನು ಪೈಥಾನ್‌ ಯಂತ್ರದ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ನಗರದ ಹೃದಯ ಭಾಗದ ರಸ್ತೆಗಳಲ್ಲಿ ಹಗಲಿನ ವೇಳೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಈ ಅವಧಿಯಲ್ಲಿ ಯಂತ್ರದ ಮೂಲಕ ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆಯಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಧಾರಾಕಾರ ಮಳೆ ಬೀಳುತ್ತಿರುವುದರಿಂದ ಕಾಮಗಾರಿ ಕುಂಠಿತಗೊಂಡಿದೆ’ ಎಂದು ಬಿಬಿಎಂಪಿ ಟ್ರಾಫಿಕ್‌ ಎಂಜಿನಿಯರಿಂಗ್‌ ಕೋಶದ ಸಹಾಯಕ ಎಂಜಿನಿಯರ್‌ ಸುಂದರೇಶ್‌ ತಿಳಿಸಿದರು.

‘ಈ ಯಂತ್ರವು ರಸ್ತೆ ಗುಂಡಿಯಲ್ಲಿರುವ ನೀರು, ಮಣ್ಣನ್ನು ಶುಚಿಗೊಳಿಸಿ ಡಾಂಬರು ಮಿಶ್ರಣ ತುಂಬುತ್ತದೆ. ಬಳಿಕ, ಯಂತ್ರದಲ್ಲಿರುವ ರೋಲರ್‌ ಡಾಂಬರು ಮಿಶ್ರಣವನ್ನು ಗುಂಡಿಗೆ ಭದ್ರವಾಗಿ ಒತ್ತುತ್ತದೆ. ಅದು ಗಟ್ಟಿಯಾಗಿ ಕಚ್ಚಿಕೊಳ್ಳಲು ಸ್ವಲ್ಪ ಸಮಯ ಬೇಕು. ಆದರೆ, ಡಾಂಬರು ಹಾಕಿದ ತಕ್ಷಣ ವಾಹನಗಳು ಸಂಚರಿಸುವುದರಿಂದ ಅದು ಸರಿಯಾಗಿ ಕಚ್ಚಿಕೊಳ್ಳುತ್ತಿಲ್ಲ’ ಎಂದರು.

**

ಅಕ್ರಮದ ಬಗ್ಗೆ ವರದಿ ನೀಡಿದ್ದ ಟಿವಿಸಿಸಿ

‌ಪೈಥಾನ್‌–5000 ಯಂತ್ರದ ಮೂಲಕ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಕುರಿತು ಆಯುಕ್ತರ ತಾಂತ್ರಿಕ ಜಾಗೃತಿ ಕೋಶವು (ಟಿವಿಸಿಸಿ) ತನಿಖೆ ನಡೆಸಿತ್ತು. ಹಣ ಪೋಲಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು 2016ರ ಜೂನ್‌ನಲ್ಲಿ ಶಿಫಾರಸು ಮಾಡಿತ್ತು.

‘ನಗರದ 1,940 ಕಿ.ಮೀ. ಉದ್ದ ರಸ್ತೆ ಗುಂಡಿಗಳನ್ನು ಮುಚ್ಚಲು ಮೂರು ವರ್ಷಗಳ ಹಿಂದೆ ಆರ್ಟ್ಸ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಅಂದಾಜು ಪಟ್ಟಿಯನ್ನು ತಯಾರಿಸದೆ ಟೆಂಡರ್‌ ಕರೆದಿದ್ದರಿಂದ ಮೂಲ ಅಂದಾಜಿನ ಅರಿವಿಲ್ಲದೆ ಪಾಲಿಕೆ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಸಂಸ್ಥೆಗಳ ತಾಂತ್ರಿಕ ಬಿಡ್‌ನ ಮೌಲ್ಯಮಾಪನ ವರದಿ ಕಡತದಲ್ಲಿಲ್ಲ. ತಾಂತ್ರಿಕ ಬಿಡ್‌ಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ. ಈ ಪ್ರಕ್ರಿಯೆ ನಡೆಸದೆ ಆರ್ಥಿಕ ಬಿಡ್‌ ತೆರೆದಿರುವುದು ಕಾರ್ಯಪಾಲಕ ಎಂಜಿನಿಯರ್‌ ಅವರ ಕರ್ತವ್ಯಲೋಪ’ ಎಂದು ವರದಿಯಲ್ಲಿ ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT