ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಷ್ಟ್ರೀಯತೆ ಭಾವ ಮರೆಯಾಗುತ್ತಿದೆ’

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ವಾತಂತ್ರ್ಯಪೂರ್ವದಲ್ಲಿ ಶಿಕ್ಷಣ ಸಂಸ್ಥೆಗಳು ‘ರಾಷ್ಟ್ರೀಯ’, ‘ಭಾರತೀಯ’ ಎಂದು ಹೆಸರಿಡುವುದು ಹೆಮ್ಮೆ ಎಂದು ತಿಳಿದಿದ್ದವು. ಆದರೆ, ಈಗಿನ ಶಾಲೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಹಾತೊರೆಯುತ್ತಿವೆ’ ಎಂದು ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ಬೇಸರ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬ್ರೈಲ್‌ ಲಿಪಿ ಪುಸ್ತಕಗಳ ವಿತರಣೆ ಹಾಗೂ ನಾಲ್ಕು ಲೇಖಕರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಲೇಜು ಶಿಕ್ಷಣದಲ್ಲಂತೂ ನಾಡು, ನುಡಿ ಕುರಿತು ಜ್ಞಾನ ಹಾಗೂ ಅಭಿಮಾನ ಮೂಡಿಸುವ ಯಾವುದೇ ವಿಷಯಗಳು ಇಲ್ಲ. ಈ ಬಗ್ಗೆ ಯಾರೂ ಮಾತನಾಡುವುದೂ ಇಲ್ಲ. ಅಧಿಕಾರ ಸ್ಥಾನದಲ್ಲಿರುವ ಬುದ್ಧಿ ಜೀವಿಗಳಾದರೂ ಈ ಬಗ್ಗೆ ಗಮನಹರಿಸಬೇಕು’ ಎಂದು ಹೇಳಿದರು.

‘ಈಗಿನ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಆಸಕ್ತಿಯೇ ಇಲ್ಲ. ಅಂತರರಾಷ್ಟ್ರೀಯ ಶಾಲೆಯಲ್ಲಿ ಓದುವ ಮಕ್ಕಳು ಇಂಗ್ಲಿಷ್‌ ಸಾಹಿತ್ಯವನ್ನು ಓದುತ್ತಾರೆ. ಆದರೆ, ಕನ್ನಡ ಸಾಹಿತ್ಯ ಓದುವವರೇ ಇಲ್ಲದಂತಾಗಿದೆ. ಕುವೆಂಪು ಯಾರೆಂದು ಈಗಿನ ಮಕ್ಕಳಿಗೆ ತಿಳಿದಿಲ್ಲ. ಹೀಗಾದರೆ ಕನ್ನಡ ಭಾಷೆಯ ಭವಿಷ್ಯ ನೆನಪಿಸಿಕೊಂಡರೆ ಭಯವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ‘ದೇಶವನ್ನು ಸುಭದ್ರವಾಗಿ ಕಟ್ಟುವಲ್ಲಿ ಪುಸ್ತಕಗಳು ವಿಶಿಷ್ಟ ಪಾತ್ರ ವಹಿಸುತ್ತವೆ. ಜನತೆಯಲ್ಲಿ ಪುಸ್ತಕದ ಕುರಿತು ಆಸಕ್ತಿಯನ್ನು ಉಂಟು ಮಾಡಲು ಪ್ರಾಧಿಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ’ ಎಂದು ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಅಂಧ ಶಾಲೆಗಳ ಪ್ರತಿನಿಧಿಗಳಿಗೆ ಬ್ರೈಲ್ ಲಿಪಿ ಪುಸ್ತಕಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT