ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಶ್ಚಿಮ ಘಟ್ಟಕ್ಕೆ ಮತ್ತಷ್ಟು ಹಾನಿ ಮಾಡದಿರಿ’

ಪಶ್ಚಿಮ ಘಟ್ಟಕ್ಕೆ ಮತ್ತಷ್ಟು ಹಾನಿ ಮಾಡದಿರಿ ಕಸ್ತೂರಿರಂಗನ್‌
Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪಶ್ಚಿಮಘಟ್ಟ ಅತ್ಯಂತ ಅಪಾಯದ ಸ್ಥಿತಿ ತಲುಪಿದೆ. ಇದಕ್ಕೆ ಇನ್ನಷ್ಟು ಹಾನಿ ಉಂಟಾಗದಂತೆ ತಡೆಯುವ ತುರ್ತು ಅಗತ್ಯ ಇದೆ’ ಎಂದು ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್‌ ಅಭಿಪ್ರಾಯಪಟ್ಟರು.

ಸೆಂಟರ್‌ ಫಾರ್‌ ಇಕಾನಮಿಕ್ಸ್‌, ಎನ್‌ವಿರಾನ್‌ಮೆಂಟ್‌ ಆ್ಯಂಡ್‌ ಸೊಸೈಟಿ (ಸೀಸ್‌) ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಕೆ.ಎನ್‌.ನೈನಾನ್‌ ಸಂಪಾದಿಸಿರುವ ‘ಬಿಲ್ಡಿಂಗ್‌ ಎ ಕ್ಲೈಮೇಟ್‌ ರೆಸಿಲಿಎಂಟ್‌ ಇಕಾನಮಿ ಆ್ಯಂಡ್‌ ಸೊಸೈಟಿ– ಚಾಲೆಂಜಸ್‌ ಆ್ಯಂಡ್‌ ಅಪರ್ಚುನಿಟೀಸ್‌’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

’ಪಶ್ಚಿಮಘಟ್ಟದ ವನ್ಯಜೀವಿ ಹಾಗೂ ಸಸ್ಯ ಸಂಪತ್ತು ಅಮೂಲ್ಯವಾದುದು. ಹೂಬಿಡುವ ಸಸ್ಯಗಳಲ್ಲಿ 4,000ದಷ್ಟು ಪ್ರಭೇದಗಳು ಇಲ್ಲಿ ಮಾತ್ರ ಕಾಣಸಿಗುತ್ತವೆ. ಆರು ರಾಜ್ಯಗಳಲ್ಲಿ, 1.64 ಲಕ್ಷ ಚದರ ಕಿಲೋ ಮೀಟರ್‌ಗಳಲ್ಲಿ ವ್ಯಾಪಿಸಿರುವ ಈ ಘಟ್ಟ ಶ್ರೇಣಿ ಒಟ್ಟು 1600 ಕಿ.ಮೀ ಉದ್ದವಿದೆ. ಇದರಲ್ಲಿ ಶೇ 37 ರಷ್ಟು ಪ್ರದೇಶದಲ್ಲಿ ಮಾತ್ರ ಸೂಕ್ಷ್ಮ ಪರಿಸರ ವ್ಯವಸ್ಥೆ ಉಳಿದುಕೊಂಡಿದೆ. ಈಗಾಗಲೇ ಆಘಾತಕಾರಿ ಹಂತ ತಲುಪಿರುವ ಇಲ್ಲಿನ ಜೈವಿಕ ಹಾಗೂ ಭೌಗೋಳಿಕ ವ್ಯವಸ್ಥೆಗಳನ್ನು ಸಂರಕ್ಷಿಸದಿದ್ದರೆ, ಪರಿಣಾಮ ಭೀಕರವಾಗಲಿದೆ’ ಎಂದು ಅವರು ಎಚ್ಚರಿಸಿದರು.

‘ಈ ಘಟ್ಟ ಶ್ರೇಣಿಯಲ್ಲಿ 5 ಕೋಟಿ ಜನ ವಾಸಿಸುತ್ತಿದ್ದಾರೆ. ಹಾಗಾಗಿ ಪರಿಸರ ವಿಜ್ಞಾನದ ಆಯಾಮದ ಜೊತೆಗೆ ಸಾಮಾಜಿಕ ಆಯಾಮ ಹಾಗೂ ಪರಿಸರ ಅರ್ಥವ್ಯವಸ್ಥೆಯ ಆಯಾಮವನ್ನೂ ಪರಿಗಣಿಸಿ ಇದರ ಸಂರಕ್ಷಣೆಗೆ ಒತ್ತು ನೀಡಬೇಕು’ ಎಂದರು.

ಇಲ್ಲಿನ ಸಣ್ಣಪುಟ್ಟ ಬದಲಾವಣೆಯ ಬಗ್ಗೆಯೂ ನಿಗಾ ಇಡಬೇಕು. ಇದು ಇನ್ನಷ್ಟು ಹದಗೆಡುವುದನ್ನು ತಪ್ಪಿಸಲು ಹಾಗೂ ಇದರ ಪುನರುಜ್ಜೀವನಕ್ಕೆ ಸ್ಪಷ್ಟ ಕಾರ್ಯಕ್ರಮಗಳನ್ನು ರೂಪಿಸಿ, ಹಣಕಾಸಿನ ನೆರವನ್ನೂ ಒದಗಿಸಬೇಕು. ಇದಕ್ಕೆ ಲಭ್ಯ ತಂತ್ರಜ್ಞಾನವನ್ನು ಬಳಸಿಕೊಂಡು ಸಮಗ್ರ ಕಾರ್ಯತಂತ್ರ ರೂಪಿಸಬೇಕು ಎಂದು ಸಲಹೆ ನೀಡಿದರು.

‘ಪ್ಯಾರಿಸ್‌ ಒಪ್ಪಂದದ ಪ್ರಕಾರ ಜಾಗತಿಕ ತಾಪಮಾನವನ್ನು ಕನಿಷ್ಠ ಪಕ್ಷ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಗೊಳಿಸಬೇಕಾದರೆ ಸಮರೋಪಾದಿಯ ಪ್ರಯತ್ನಗಳು ನಡೆಯಬೇಕು. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಅಂತಹ ಆಶಾವಾದ ಕಾಣಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಹವಾಮಾನ ವೈಪರೀತ್ಯ ಹಾಗೂ ಪ್ರಕೃತಿ ವಿಕೋಪಗಳ ಬಗ್ಗೆ ನಿಖರ ಮುನ್ಸೂಚನೆ ನೀಡಲು ಉಪಗ್ರಹ ತಂತ್ರಜ್ಞಾನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.

**

ಪುಸ್ತಕದ ಬೆಲೆ: ₹ 7,698

ಪುಟ: 336

ಪ್ರಕಾಶನ ಸಂಸ್ಥೆ: ಎಡ್ವರ್ಡ್‌ ಎಲ್ಗರ್‌

***

ಹವಾಮಾನ ವೈಪರೀತ್ಯದಿಂದ ಜಿಡಿಪಿ ಕುಸಿತ

‘ಈಗಿನ ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಹವಾಮಾನ ವೈಪರೀತ್ಯವು ಭಾರತದ ಸಮಗ್ರ ಆಂತರಿಕ ಉತ್ಪನ್ನವು (ಜಿಡಿಪಿ)  ಶೇ 1.8ರಿಂದ ಶೇ 4ರಷ್ಟು ಕುಸಿಯುವುದಕ್ಕೆ ಕಾರಣವಾಗಲಿದೆ. 2100ರ ವೇಳೆಗೆ ಕೃಷಿ ಉತ್ಪಾದನೆ ಶೇ 10ರಿಂದ ಶೇ 40ರಷ್ಟು ಕಡಿಮೆ ಆಗಲಿದೆ. 2030ರ ವೇಳೆಗೆ ನೀರಿನ ಲಭ್ಯತೆ 30 ಸಾವಿರ ಕೋಟಿ ಕ್ಯೂಬಿಕ್‌ ಮೀಟರ್‌ನಷ್ಟು ಕಡಿಮೆ ಆಗಲಿದೆ‌ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ವರದಿ ಹೇಳಿದೆ’  ಎಂದು ಕೃತಿಯ ಸಂಪಾದಕ ಪ್ರೊ.ಕೆ.ಎನ್‌.ನೈನಾನ್‌ ತಿಳಿಸಿದರು.

‘ರೋಗಕಾರಕಗಳಿಂದ ಹರಡುವ ಮಲೇರಿಯಾ, ಡೆಂಗಿಯಂತಹ ಕಾಯಿಲೆಗಳ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಾಗಲಿದೆ. 2030ರ ವೇಳೆಗೆ ಭಾರತದಲ್ಲಿ  33 ಲಕ್ಷದಷ್ಟು ಜನ ಮಲೇರಿಯಾದಿಂದ ಹಾಗೂ 2.5 ಕೋಟಿ ಜನ ಡಯೇರಿಯಾದಿಂದ ಸಾಯಲಿದ್ದಾರೆ. ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳನ್ನು ತಡೆಯಲು ಸಮರ್ಥ ವ್ಯವಸ್ಥೆಯನ್ನು ರೂಪಿಸುವ ಅಗತ್ಯ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

**

ಸದ್ಗುರು ಅವರು ನದಿಗಳನ್ನು ರಕ್ಷಿಸಲು ಅಭಿಯಾನ ನಡೆಸಿದರು. ಪ್ರವಾಹದಿಂದ ಬೆಂಗಳೂರಿನ ರಸ್ತೆಗಳನ್ನು ರಕ್ಷಿಸಲು ಅಭಿಯಾನ ನಡೆಸುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ
–ಪ್ರೊ.ಕೆ.ಎನ್‌.ನೈನಾನ್‌, ಕೃತಿಯ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT