ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುರಾಷ್ಟ್ರೀಯ ಕಂಪೆನಿಗಳ ನಿದ್ದೆ ಕೆಡಿಸಿದ ‘ಪತಂಜಲಿ’!

Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೈಯಲ್ಲಿ ಕವಡೆ ಕಾಸಿಲ್ಲದೆ ಹತ್ತು ಸಾವಿರ ಕೋಟಿ ರೂಪಾಯಿ ವಹಿವಾಟಿನ ಆಯುರ್ವೇದ ಸರಕು ಉತ್ಪಾದನೆಯ ಸಾಮ್ರಾಜ್ಯ ಕಟ್ಟಿದ್ದಾರೆ ಬಾಬಾ ರಾಮದೇವ್. ಹಿಂದುಸ್ತಾನಿಗಳ ಹಣ ಹಿಂದುಸ್ತಾನಿ ಕಂಪೆನಿಗಳಿಗೆ ಸಲ್ಲಬೇಕೇ ವಿನಾ ಬಹುರಾಷ್ಟ್ರೀಯ ವಿದೇಶಿ ಕಂಪೆನಿಗಳಿಗೆ ಯಾಕೆ ಹೋಗಬೇಕು ಎಂಬುದು ಅವರ ‘ದೇಶಪ್ರೇಮಿ’ ಪ್ರಶ್ನೆ...

ಇಲ್ಲಿಯವರೆಗೆ ಯಾರೂ ಮುಟ್ಟದೆ ಉಳಿದಿದ್ದ ಆಯುರ್ವೇದ ಮಾರುಕಟ್ಟೆ ತಮಗಾಗೇ ಕಾಯುತ್ತಿತ್ತು ಎನ್ನುವ ರೀತಿಯಲ್ಲಿ ಅದನ್ನು ಮುಟ್ಟಿ ತಟ್ಟಿ ಕಟ್ಟಿ ಬೆಳೆಸಿದೆ ಬಾಬಾ ರಾಮದೇವ್ ಮತ್ತು ಅವರ ಅನುಯಾಯಿ ಆಚಾರ್ಯ ಬಾಲಕೃಷ್ಣ ಅವರ ಜೋಡಿ. ರಾಮದೇವ್ ಅವರೇ ಪತಂಜಲಿಯ ಪರಿಣಾಮಕಾರಿ ಬ್ರ್ಯಾಂಡ್ ರಾಯಭಾರಿ. ಮಾರುಕಟ್ಟೆ ಕುರಿತ ಈ ಜೋಡಿಯ ತಿಳಿವಳಿಕೆ ಅಸಾಧಾರಣವಾದದ್ದು. ದೈವ- ದೇಶಪ್ರೇಮ- ಪರಂಪರೆ- ಸಂಸ್ಕೃತಿ- ದೇಶೀವಾದದ ಕಟು ಮಿಶ್ರಣದ ಮಾರುಕಟ್ಟೆಯನ್ನು ರೂಪಿಸಿರುವ ಜೋಡಿಯಿದು. 2020ರ ಹೊತ್ತಿಗೆ ವಹಿವಾಟು ₹ 50 ಸಾವಿರ ಕೋಟಿಗೆ ಬೆಳೆಸಬೇಕು, ಹಿಂದುಸ್ತಾನ್ ಯೂನಿಲಿವರ್ ಕಂಪೆನಿಯನ್ನು ಹಿಂದಿಕ್ಕಬೇಕು ಎಂಬ ಕನಸು ಇವರದು.

ಸೌಂದರ್ಯವರ್ಧಕಗಳು, ಶಾಂಪೂ, ಸೋಪು, ನೂಡಲ್ಸ್, ಉಪ್ಪಿನಿಂದ ಹಿಡಿದು ಹಿಟ್ಟಿನ ತನಕ ನೂರಾರು ಪತಂಜಲಿ ಗ್ರಾಹಕ ಸರಕುಗಳು ಆಯುರ್ವೇದದ ಸ್ಪರ್ಶ ಪಡೆದು ಮಾರುಕಟ್ಟೆಗೆ ಮುತ್ತಿಗೆ ಹಾಕಿವೆ. ಕಾಲ್ಗೇಟ್ ಮತ್ತು ಹಿಂದುಸ್ತಾನ್ ಯೂನಿಲಿವರ್ ನಂತಹ ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳ ನಿದ್ದೆಗೆಡಿಸಿವೆ.

2016-17ರ ಹಣಕಾಸು ವರ್ಷದಲ್ಲಿ ಪತಂಜಲಿಯ ವಹಿವಾಟು ಶೇ 111 ಪಟ್ಟು ಹೆಚ್ಚಿದ್ದು, ₹ 10,561 ಕೋಟಿ ದಾಖಲೆ ಮೊತ್ತವನ್ನು ಮುಟ್ಟಿತು. 2017-18ರ ಹಣಕಾಸು ವರ್ಷದಲ್ಲಿ ಈ ಮೊತ್ತವನ್ನು ₹ 20 ಸಾವಿರ ಕೋಟಿ ಎತ್ತರಕ್ಕೆ ಮುಟ್ಟಿಸುವ ಗುರಿ ರಾಮದೇವ್ ಅವರದು.

ಕಂಪೆನಿ ಆರಂಭದಲ್ಲಿ ದೊಡ್ಡ ಬ್ಯಾಂಕುಗಳಿಂದ ಕಾರ್ಯಬಂಡವಾಳವನ್ನು ಮತ್ತು ದೀರ್ಘಾವಧಿ ಸಾಲಗಳನ್ನು ಪಡೆದಿದೆ. ಕೆಲವು ಬ್ಯಾಂಕುಗಳು ಬಂಡವಾಳವನ್ನೂ ಹೂಡಿವೆ ಎಂದು ಮಾರುಕಟ್ಟೆ ಮೂಲಗಳು ಹೇಳುತ್ತವೆ. ಈ ಅಂಶ ಕುರಿತು ಹೆಚ್ಚು ವಿವರಗಳು ಲಭ್ಯವಿಲ್ಲ.

ಆಯುರ್ವೇದ ಉತ್ಪನ್ನಗಳ ಶ್ರೇಣಿಯ ಮಾರುಕಟ್ಟೆಯ ಮೇಲೆ ಬಾಬಾ ರಾಮದೇವ್ ಅವರ ಪತಂಜಲಿ ಉತ್ಪನ್ನಗಳು ಹೆಚ್ಚು ಕಡಿಮೆ ಸಾರಾಸಗಟು ಏಕಸ್ವಾಮ್ಯ ಸಾಧಿಸಿಬಿಟ್ಟಿವೆ. ಅಂಕಿ ಅಂಶಗಳು ಈ ಮಾತಿಗೆ ಪುಷ್ಟಿ ನೀಡುತ್ತವೆ. ಈ ಉತ್ಪನ್ನಗಳ ಶ್ರೇಣಿಯಲ್ಲಿ ಇಷ್ಟು ವೇಗದಿಂದ ಮಾರುಕಟ್ಟೆಯನ್ನು ಕೈವಶ ಮಾಡಿಕೊಂಡಿರುವ ಪತಂಜಲಿಯಂತಹ ಮತ್ತೊಂದು ಉದಾಹರಣೆ ಹುಡುಕಿದರೂ ಕಾಣಸಿಗುವುದಿಲ್ಲ. ದೇಶದ ಶೇ 77ರಷ್ಟು ಮನೆಗಳಿಗೆ ಒಂದಲ್ಲ ಒಂದು ರೂಪದಲ್ಲಿ ಆಯುರ್ವೇದ ಉತ್ಪನ್ನಗಳು ತಲುಪುತ್ತಿವೆಯಂತೆ. ಎರಡು ವರ್ಷಗಳ ಹಿಂದೆ ಈ ಪ್ರಮಾಣ ಶೇ 69ರಷ್ಟಿತ್ತು. ಪತಂಜಲಿಯ ಯಶಸ್ಸಿನಿಂದ ಎಚ್ಚೆತ್ತುಕೊಂಡಿರುವ ಹಿಂದುಸ್ತಾನ್ ಯೂನಿಲಿವರ್ ಮತ್ತು ಕಾಲ್ಗೇಟ್ ಪಾಮೋಲಿವ್ ಕೂಡ ನೈಸರ್ಗಿಕ ಉತ್ಪನ್ನಗಳನ್ನು ಉತ್ಪಾದಿಸಿ ಅವುಗಳ ‘ಆಕ್ರಮಣಕಾರಿ’ ಮಾರಾಟಕ್ಕೆ ಮುಂದಾಗಿವೆ. ಪತಂಜಲಿ ಮತ್ತು ಡಾಬರ್ ಕಂಪೆನಿಗಳು ತಮ್ಮ ಮಾರುಕಟ್ಟೆಗೆ ಲಗ್ಗೆ ಹಾಕದಂತೆ ಟೊಂಕ ಕಟ್ಟತೊಡಗಿವೆ.

ಹಾಂಕಾಂಗ್ ಕೇಂದ್ರಿತವಾದ ಕಾರ್ಪೊರೇಟ್ ಸೇವೆಗಳ ಪ್ರತಿಷ್ಠಿತ ಜಾಗತಿಕ ಕಂಪೆನಿ ಸಿ.ಎಲ್.ಎಸ್.ಎ. ಎರಡು ವರ್ಷಗಳಷ್ಟು ಹಿಂದೆಯೇ ಪತಂಜಲಿಯ ವ್ಯಾಪಾರ ಮಾದರಿಯ ಗುಣಗಾನ ಮಾಡಿ ಲೇಖನ ಬರೆಯಿತು. ಖರೀದಿದಾರರ ವರ್ತನೆ ಕುರಿತ ಜಾಗತಿಕ ಪರಿಣತ ಸಂಸ್ಥೆಯಾದ ಕ್ಯಾಂಟಾರ್ ವರ್ಲ್ಡ್ ಪ್ಯಾನೆಲ್‌ನ ಅಂಕಿ ಅಂಶಗಳ ಪ್ರಕಾರ ಕಳೆದ ಮಾರ್ಚ್ ತಿಂಗಳಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಆಯುರ್ವೇದ ಉತ್ಪನ್ನಗಳ ಬಿಕರಿಯ ದರ ಶೇ 60ರ ಪ್ರಮಾಣದಲ್ಲಿ ಬೆಳೆದಿದೆ. ಆದರೆ ತ್ವರಿತ ಬಿಕರಿ ಗ್ರಾಹಕ ಸರಕುಗಳ (ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್) ಪ್ರಮಾಣ ಶೇ 6ನ್ನು ಮೀರಿಲ್ಲ. ಈ ತ್ರೈಮಾಸಿಕದಲ್ಲಿ ತ್ವರಿತ ಬಿಕರಿ ಗ್ರಾಹಕ ಸರಕುಗಳ ಕ್ಷೇತ್ರವು ಹೊಸದಾಗಿ 28 ಲಕ್ಷ ಮನೆಗಳಿಗೆ ತಲುಪಿತು. ಆದರೆ ಆಯುರ್ವೇದ ಬ್ರ್ಯಾಂಡ್‌ಗಳು ಹೊಸದಾಗಿ 2.3 ಕೋಟಿ ಮನೆಗಳನ್ನು ತಲುಪಿದವು. ಈ ಭಾರೀ ಬೆಳವಣಿಗೆಯನ್ನು ಸಾಧ್ಯ ಮಾಡಿದ ಶ್ರೇಯಸ್ಸು ರಾಮದೇವ್ ಅವರ ಪತಂಜಲಿ ಆಯುರ್ವೇದ ಕಂಪೆನಿಗೇ ಸಲ್ಲಬೇಕು ಎಂದು ತಜ್ಞರು ಹೇಳುತ್ತಾರೆ. ಇಂತಹ ಅಸಾಧಾರಣ ವಿದ್ಯಮಾನವೇ ಈ ಕ್ಷೇತ್ರದ ಇತರೆ ಬಹುರಾಷ್ಟ್ರೀಯ ಕಂಪೆನಿಗಳು ಕೂಡ ನೈಸರ್ಗಿಕ ಉತ್ಪನ್ನಗಳ ತಯಾರಿಕೆಗೆ ಕೈ ಹಾಕುವಂತೆ ಕಡ್ಡಾಯ ಮಾಡಿದೆ.

ನೈರ್ಮಲ್ಯ, ಅಂದಚೆಂದ, ಆರೋಗ್ಯಕ್ಕೆ ಸಂಬಂಧಿಸಿದ ಆಯುರ್ವೇದ ಉತ್ಪನ್ನಗಳು ಮನೆ ಮನಗಳಿಗೆ ನುಗ್ಗುತ್ತಿರುವ ಪ್ರಮಾಣ ಶೇ 65ರಷ್ಟಿದ್ದರೆ, ಗೃಹಬಳಕೆಯ ಉತ್ಪನ್ನಗಳದು ಶೇ 9ಕ್ಕೆ ಸೀಮಿತ. ಇನ್ನು ಆಯುರ್ವೇದ ಆಹಾರ ಉತ್ಪನ್ನಗಳ ಇಂತಹುದೇ ಪ್ರಮಾಣ ಶೇ 1ರಷ್ಟು ಮಾತ್ರ ಎನ್ನುತ್ತವೆ ಕ್ಯಾಂಟಾರ್ ಅಂಕಿ ಅಂಶಗಳು.

ದೇಶದ ತ್ವರಿತ ಬಿಕರಿ ಗ್ರಾಹಕ ಸರಕುಗಳ ಕ್ಷೇತ್ರದ ಮಾರುಟ್ಟೆಯ ಮುಂದಾಳುವಿನ ಪಟ್ಟ ಈಗಲೂ ಹಿಂದುಸ್ತಾನ್ ಯೂನಿಲಿವರ್‌ಗೇ ಮೀಸಲು. ಆದರೆ ರಾಮದೇವ್ ಅವರ ಕಂಪೆನಿಯು ಹಿಂದುಸ್ತಾನ್ ಯೂನಿಲಿವರ್ ನಂತರದ ಎರಡನೆಯ ಸ್ಥಾನಕ್ಕೆ ಜಿಗಿದು ಎದ್ದು ಕುಳಿತು ಗಮನಿಸಬೇಕಾದಂತಹ ಸುದ್ದಿ ಮಾಡಿದೆ. ಅತಿ ಹೆಚ್ಚು ಬಿಕರಿಯಾದ (ಮಾರುಕಟ್ಟೆಯ ಶೇ 14ರಷ್ಟು ಪಾಲು) ಪತಂಜಲಿ ತ್ವರಿತ ಸರಕು ‘ಹಸುವಿನ ತುಪ್ಪ’. ಎರಡನೆಯದು ಟೂತ್ ಪೇಸ್ಟ್ (ಶೇ 9) ಹಾಗೂ ತಲೆಕೂದಲಿಗೆ ಹಚ್ಚುವ ಎಣ್ಣೆ (ಶೇ 8).

10,561 ಕೋಟಿ ರೂಪಾಯಿಗಳ ವಹಿವಾಟನ್ನು 2017-18ರ ಹಣಕಾಸು ವರ್ಷದಲ್ಲಿ ದುಪ್ಪಟ್ಟು ಮಾಡುವುದಾಗಿ ರಾಮದೇವ್ ನಾಲ್ಕು ತಿಂಗಳ ಹಿಂದೆ ಹೇಳಿದ್ದುಂಟು. ಕಾರಣಾಂತರಗಳಿಂದ ಈ ಗುರಿ ಸಾಧನೆ ಕೈಗೂಡುತ್ತಿಲ್ಲ, ಒಂದೂವರೆ ಪಟ್ಟು ಹೆಚ್ಚಳ ನಿಶ್ಚಿತ ಎಂದು ಪತಂಜಲಿ ಯೋಗಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಚಾರ್ಯ ಬಾಲಕೃಷ್ಣ ಇತ್ತೀಚೆಗೆ ಹರಿದ್ವಾರಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ಗೆ ತಿಳಿಸಿದರು.

ಯೋಗ ಪ್ರಚಾರದ ಜೊತೆ ಜೊತೆಗೆ ಭ್ರಷ್ಟಾಚಾರ-ಕಾಳಧನ ವಿರೋಧದ ಜನಪ್ರಿಯ ನಿಲುವನ್ನು ನಿರಂತರ ಬೆರೆಸುತ್ತಲೇ ಬಂದವರು ರಾಮದೇವ್. ನರೇಂದ್ರ ಮೋದಿಯವರ ಪರಮ ಬೆಂಬಲಿಗರು. 2012ರ ಗುಜರಾತ್ ವಿಧಾನಸಭಾ ಚುನಾವಣೆ ಮತ್ತು 2014ರ ಲೋಕಸಭಾ ಚುನಾವಣೆ ಎರಡರಲ್ಲೂ ಮೋದಿಯವರನ್ನು ಸಕ್ರಿಯವಾಗಿ ಬೆಂಬಲಿಸಿದವರು. ಮೋದಿಯವರು ಬಡಿದೆಬ್ಬಿಸಿ ಬಾಚಿಕೊಂಡ ಜನಪ್ರಿಯತೆಯಲ್ಲಿ ರಾಮದೇವ್ ಉನ್ನತಿಯೂ ಅಡಗಿತ್ತು. ಭ್ರಷ್ಟಾಚಾರ-ಕಾಳಧನ-ವಿದೇಶಿ ಬಂಡವಾಳವಾದದ ಕೆಸರಿನಲ್ಲಿ ಅರಳಿದ ಹಿಂದೂ ಸ್ವದೇಶಿ ಅಸ್ಮಿತೆ. ಪತಂಜಲಿ ಯೋಗಪೀಠಕ್ಕೆ ಇತ್ತೀಚೆಗೆ ತೆರಿಗೆ ವಿನಾಯಿತಿಯ ಸೌಲಭ್ಯವೂ ದೊರೆಯಿತು.

(ಆಚಾರ್ಯ ಬಾಲಕೃಷ್ಣ ಮತ್ತು ಬಾಬಾ ರಾಮದೇವ್)

ಮೋದೀಜಿ ತಮ್ಮ ಆಪ್ತಮಿತ್ರರು, 2014ರಲ್ಲಿ ನಡೆದ ಭಾರೀ ರಾಜಕೀಯ ಬದಲಾವಣೆಗಳಿಗೆ ಭೂಮಿಕೆ ಸಿದ್ಧಪಡಿಸಿದ್ದು ತಾವೇ ಎಂದು ರಾಮದೇವ್ ಹೇಳಿಕೊಂಡಿರುವುದುಂಟು. ರಾಯಿಟರ್ಸ್ ವರದಿಯೊಂದರ ಪ್ರಕಾರ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭೂಸ್ವಾಧೀನವೊಂದರಲ್ಲೇ ಕನಿಷ್ಠ ಪಕ್ಷ ₹ 300 ಕೋಟಿ ರಿಯಾಯಿತಿ ಪತಂಜಲಿಗೆ ದೊರೆತಿದೆ. ಕಾಗದ ಪತ್ರಗಳು ದಾಖಲೆ ದಸ್ತಾವೇಜುಗಳ ಪ್ರಕಾರ ಬಾಲಕೃಷ್ಣ ಅವರೇ ಪತಂಜಲಿಯ ನಿಜವಾದ ಮಾಲೀಕ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ (ಸಿಇಒ) ಹುದ್ದೆ ಹೊಂದಿರುವ ಅವರು ಪತಂಜಲಿಯ ಶೇ 90ಕ್ಕೂ ಹೆಚ್ಚು ಷೇರುದಾರರು. 5000 ಪತಂಜಲಿ ಕ್ಲಿನಿಕ್ ಗಳ ಉಸ್ತುವಾರಿ ಅವರದೇ. ಪತಂಜಲಿ ಯೋಗ ವಿಶ್ವವಿದ್ಯಾಲಯ ಮತ್ತು ಯೋಗ-ಆಯುರ್ವೇದ ಸಂಶೋಧನಾ ಸಂಸ್ಥೆಯನ್ನೂ ಅವರೇ ನೋಡಿಕೊಳ್ಳುತ್ತಾರೆ. ಪತಂಜಲಿಯ ಲಾಭವೆಲ್ಲ ಹತ್ತು ಹಲವು ಟ್ರಸ್ಟ್‌ಗಳು ಮತ್ತು ದತ್ತಿ ಸಂಸ್ಥೆಗಳಿಗೆ ದೇಣಿಗೆಯಾಗಿ ಸಲ್ಲುತ್ತದಂತೆ.

ಯೋಗ, ಧರ್ಮ, ರಾಜಕಾರಣ, ವ್ಯಾಪಾರ, ಹುಸಿ ಅಧ್ಯಾತ್ಮ, ಸ್ವಾಸ್ಥ್ಯ, ಶಿಕ್ಷಣ ಹಾಗೂ ಹಿಂದುತ್ವವಾದಿ ರಾಷ್ಟ್ರೀಯತೆ ಬೆರೆತ ಎರಕವೊಂದು ಇತ್ತೀಚಿನ ದಶಕಗಳಲ್ಲಿ ತಯಾರಾಗಿದೆ. ಹಿಂದೂ ಆರ್ಥಿಕ- ರಾಜಕಾರಣದ ಪುನರುತ್ಥಾನವೆಂದು ಕರೆಯಲಾಗುವ ಈ ಎರಕವನ್ನು ಕೋಟ್ಯಂತರ ಅಮಾಯಕ ಭಾರತೀಯರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ಟೀಕೆಯನ್ನು ಪತಂಜಲಿ ಯೋಗಪೀಠ ಎದುರಿಸಿದೆ. ಬಹುರಾಷ್ಟ್ರೀಯ ಕಂಪೆನಿ ‘ನೆಸ್ಲೆ’ಯ ಮ್ಯಾಗಿ ನೂಡಲ್ಸ್ ಅಪಾಯಕಾರಿ ರಾಸಾಯನಿಕವನ್ನು ಮಿತಿ ಮೀರಿದ ಪ್ರಮಾಣದಲ್ಲಿ ಹೊಂದಿದೆ ಎಂದು ಈ ಉಣಿಸು ಬಹುಕಾಲ ಮಾರುಕಟ್ಟೆಯಿಂದಲೇ ಮರೆಯಾಗಿತ್ತು. ಈ ಅವಧಿಯಲ್ಲಿ ಪತಂಜಲಿ ನೂಡಲ್ಸ್ ಮಾರುಕಟ್ಟೆ ಪ್ರವೇಶಿಸಿದ್ದು ಆಕಸ್ಮಿಕ ಅಥವಾ ಕಾಕತಾಳೀಯ ಎಂದು ನಂಬುವುದು ಕಷ್ಟ.

ವಿದೇಶಿ ಕಂಪೆನಿಗಳ ಸರಕು ಖರೀದಿಸಿ ಅವುಗಳ ಜೇಬುಗಳನ್ನೇಕೆ ಭರ್ತಿ ಮಾಡುತ್ತೀರಿ? ಈ ಬಹುರಾಷ್ಟ್ರೀಯ ಕಂಪೆನಿಗಳು ಭಾರತವನ್ನು ಲೂಟಿ ಹೊಡೆಯುತ್ತಿವೆ. ಭಾರತೀಯರ ಹಣ ಭಾರತೀಯ ಕಂಪೆನಿಗಳಿಗೆ ಸಲ್ಲಬೇಕು ಎಂಬ ದೇಶಭಕ್ತಿಯನ್ನು ಸಾರುವ ಪತಂಜಲಿ ಜಾಹೀರಾತುಗಳು, ಪ್ರಚಾರ ಒಂದು ವರ್ಗದ ಜನಸಮುದಾಯಕ್ಕೆ ಪ್ರಿಯವೆನಿಸಿರುವುದು ಹೌದು.

ಪತಂಜಲಿ ಆಯುರ್ವೇದ, ಷೇರು ಮಾರುಕಟ್ಟೆಗೆ ಇಳಿಯದಿರುವ ಕಂಪೆನಿ. ವ್ಯಕ್ತಿಗಳ ಗುಂಪಿನ ಒಡೆತನದ ಉದ್ಯಮ. ಈ ಕಂಪೆನಿಯ ಆಡಿಟ್ ಮಾಡಿದ ಹಣಕಾಸು ವಿವರಗಳು ಸುಲಭ ಲಭ್ಯ ಅಲ್ಲ. ಇತ್ತೀಚೆಗೆ ಹರಿದ್ವಾರದ ಪತಂಜಲಿ ಯೋಗಪೀಠಕ್ಕೆ ಭೇಟಿ ನೀಡಿದ್ದ ‘ಪ್ರಜಾವಾಣಿ’ ಕೋರಿದ ಈ ವಿವರಗಳನ್ನು ಬಾಲಕೃಷ್ಣ ಅವರ ಕಚೇರಿ ನಿರಾಕರಿಸಲಿಲ್ಲ. ಹಾಗೆಂದು ಕೊಡಲೂ ಇಲ್ಲ. ಎಲ್ಲ ವಿವರಗಳಿವೆ ಎಂದು ನೀಡಿದ ಕಂತೆಯಲ್ಲಿ ಯೋಗ ಮತ್ತು ಆಯುರ್ವೇದ ಕುರಿತ ಪುಸ್ತಕಗಳಿದ್ದವೇ ವಿನಾ ಹಣಕಾಸು ವಹಿವಾಟು ಮತ್ತು ಉತ್ಪನ್ನಗಳ ಕುರಿತ ವಿವರಗಳ ಹೊತ್ತಿಗೆ ಒಂದೂ ಇರಲಿಲ್ಲ.

ಗೋಧಿ ಹಿಟ್ಟು, ಎಣ್ಣೆ, ಉಪ್ಪು, ಆಕಳತುಪ್ಪ, ಜೇನುತುಪ್ಪ, ಟೂತ್ ಪೇಸ್ಟ್, ಚಹಾದಿಂದ ಮೊದಲುಗೊಂಡು ಸೋಪು, ಶಾಂಪೂ, ಮಾರ್ಜಕಗಳು ಸೇರಿದಂತೆ ಹತ್ತಿರ ಹತ್ತಿರ 400 ಆಯುರ್ವೇದ ಮತ್ತಿತರೆ ಉತ್ಪನ್ನಗಳ ಹೊಳೆಯನ್ನೇ ಹರಿಸಿಬಿಟ್ಟಿದೆ ಪತಂಜಲಿ. ಬಹುರಾಷ್ಟ್ರೀಯ ಕಂಪೆನಿಗಳು ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಸರಕುಗಳನ್ನು (ಎಫ್.ಎಂ.ಸಿ.ಜಿ) ಈ ಭಾರೀ ಸಂಖ್ಯೆಯಲ್ಲಿ ಉತ್ಪಾದಿಸಿ ಮಾರಾಟ ಮಾಡುತ್ತಿಲ್ಲ. ಕಾಲ್ಗೇಟ್ ಟೂತ್ ಪೇಸ್ಟ್ ಹೊಂದಿರುವ ಶೇ 55ರ ಮಾರುಕಟ್ಟೆ ಪಾಲನ್ನು ತಲುಪಲು, ಶೇ 5ರ ಮಾರುಕಟ್ಟೆ ಪಾಲನ್ನು ಸಾಧಿಸಿರುವ ಪತಂಜಲಿಯ ‘ದಂತಕಾಂತಿ’ ಸಾಗಬೇಕಿರುವ ದಾರಿ ಇನ್ನೂ ಬಹು ದೂರವಿದೆ. ಈ ಕ್ಷೇತ್ರದ ದೈತ್ಯ ಕಂಪೆನಿಗಳನ್ನು ಪತಂಜಲಿ ಇನ್ನೂ ನಿಜ ಅರ್ಥದಲ್ಲಿ ಬೆದರಿಸುವಷ್ಟು ಬೆಳೆದಿಲ್ಲ. ಹೀಗಾಗಿ ಪತಂಜಲಿಯಿಂದ ಅಪಾಯ ಎದುರಿಸಿರುವುದು ಇಮಾಮಿ, ಡಾಬರ್, ಅಮೂಲ್‌ನಂತಹ ಭಾರತೀಯ ಕಂಪೆನಿಗಳೇ ವಿನಾ ಬಹುರಾಷ್ಟ್ರೀಯ ಕಂಪೆನಿಗಳಲ್ಲ ಎಂಬ ವಾದವೂ ಇದೆ. ಆಯುರ್ವೇದದ ಹೆಸರು ಬೆಳಗಿಸಿರುವ ಪತಂಜಲಿಯು ಇಲ್ಲಿಯವರೆಗೆ ಸಾಧಿಸಿರುವ ಬೆಳವಣಿಗೆಯನ್ನು ಮುಂಬರುವ ವರ್ಷಗಳಲ್ಲಿಯೂ ಉಳಿಸಿಕೊಳ್ಳಲಿದೆಯೇ ಎಂಬ ಪ್ರಶ್ನೆಯನ್ನು ಸುಲಭವಾಗಿ ತಳ್ಳಿ ಹಾಕಲು ಬರುವುದಿಲ್ಲ.

ತ್ವರಿತ ಬಿಕರಿ ಗ್ರಾಹಕ ಸರಕುಗಳ (ಎಫ್.ಎಂ.ಸಿ.ಜಿ.) ಜಾಗತಿಕ ಉತ್ಪಾದನಾ ವಲಯಕ್ಕೆ ಕಡಿಮೆ ವೆಚ್ಚದ ರಾಸಾಯನಿಕ ಮಿಶ್ರಣಾಂಶಗಳನ್ನು ಪೂರೈಸುವ ಸುಸಜ್ಜಿತ ಜಾಲ ಸರಪಳಿ ಈಗಾಗಲೇ ರೂಪುಗೊಂಡಿದೆ. ಆದರೆ ಆಯುರ್ವೇದ ತಯಾರಿಕೆಗಳಿಗೆ ಇಂತಹ ಅನುಕೂಲಗಳು ಇಲ್ಲ. ಸಾವಯವ ಮತ್ತು ನೈಸರ್ಗಿಕ ಮಿಶ್ರಣಾಂಶಗಳನ್ನು ಭಾರೀ ಪ್ರಮಾಣದಲ್ಲಿ ಮುಂಬರುವ ದಿನಗಳಲ್ಲಿಯೂ ರೂಢಿಸಿಕೊಳ್ಳುವ ಚಿಂತೆ ಇಂದಲ್ಲ ನಾಳೆ ಪತಂಜಲಿಗೆ ಎದುರಾಗುವುದು ನಿಶ್ಚಿತ ಎನ್ನುತ್ತಾರೆ ವಿಶ್ಲೇಷಕರು. ಈ ನಿರ್ದಿಷ್ಟ ಕಾರಣಗಳಿಂದಲೇ ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಗಿಡಮೂಲಿಕೆ ಮತ್ತು ನೈಸರ್ಗಿಕ ಉತ್ಪನ್ನಗಳ ಆಸೆಯನ್ನು ಹಿಮಾಲಯ ಮತ್ತು ಝಂಡುವಿನಂತಹ ಕಂಪೆನಿಗಳು ಕೈಬಿಡಬೇಕಾಯಿತು ಎನ್ನಲಾಗಿದೆ. ಈಗ ತಾನು ನೀಡುತ್ತಿರುವ ಶೇ 10ರಿಂದ ಶೇ 30ರಷ್ಟು ರಿಯಾಯಿತಿಯನ್ನು ಪತಂಜಲಿ ನಿರಂತರ ಮುಂದುವರೆಸುವುದು ಸಾಧ್ಯವಿಲ್ಲ. ಆಗಲೂ ಮಾರಾಟ ಈಗಿನಂತೆಯೇ ಮುಂದುವರೆಯುವುದು ಕಠಿಣ. ಬಂಡವಾಳ ಹೂಡಿಕೆದಾರರ ವಿಶ್ವಾಸ ಗಳಿಸಿ ತನ್ನ ಆರ್ಥಿಕ ಸಂಪನ್ಮೂಲದ ನೆಲೆಯನ್ನು ಭದ್ರ ತಳಹದಿಯ ಮೇಲೆ ವಿಸ್ತರಿಸಿಕೊಳ್ಳಬೇಕಿದ್ದರೆ ಬಹುರಾಷ್ಟ್ರೀಯ ಕಂಪೆನಿಗಳಂತೆ ಪತಂಜಲಿ ಕೂಡ ಸಾರ್ವಜನಿಕ ಬಂಡವಾಳ ಪೇಟೆಯನ್ನು ಪ್ರವೇಶಿಸಬೇಕು ಎಂಬ ಅಭಿಪ್ರಾಯ ವ್ಯಾಪಕವಾಗಿ ಕೇಳಿಬಂದಿದೆ.

ಹಣಕಾಸು ವಿಷಯ ಕುರಿತ ಇಂಗ್ಲಿಷ್ ದಿನಪತ್ರಿಕೆಯೊಂದಕ್ಕೆ ‘ಧರ್ಮವೆಂಬ ವ್ಯಾಪಾರ’ ಕುರಿತು ವರದಿ ಮಾಡಿದ ಬಾತ್ಮೀದಾರೆ ಪ್ರಿಯಾಂಕ. ದೈವಸಾಕ್ಷಾತ್ಕಾರದ ಹಂಬಲದ ಹಾದಿಯಲ್ಲಿ ರಾಜಕಾರಣ, ಹಣ, ಧರ್ಮ ಒಂದನ್ನೊಂದು ಹೇಗೆಲ್ಲ ಹೆಣೆದುಕೊಂಡಿವೆ ಎಂಬುದನ್ನು ಕುರಿತು ವರದಿಗಳನ್ನು ಬರೆದವರು. ರಾಮದೇವ್ ಬದುಕನ್ನು ಕುರಿತು ಅವರು ದಾಖಲಿಸಿರುವ ‘ಗಾಡ್ ಮ್ಯಾನ್ ಟು ಟೈಕೂನ್’ ಎಂಬ ಪುಸ್ತಕದ ಮಾರಾಟಕ್ಕೆ ಪತಂಜಲಿ ಕಂಪೆನಿ, ನ್ಯಾಯಾಲಯದಿಂದ ತಂದಿರುವ ತಡೆಯಾಜ್ಞೆ ಸದ್ಯ ಭವಿಷ್ಯದಲ್ಲಿ ತೆರವಾಗುವ ಸೂಚನೆಗಳಿಲ್ಲ. ಆಚಾರ್ಯ ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದಂತೆ ಪ್ರಿಯಾಂಕ ಅವರನ್ನೂ ನ್ಯಾಯಾಲಯಕ್ಕೆ ಎಳೆಯುವ ಆಲೋಚನೆ ಇದೆ. ಪ್ರಿಯಾಂಕ ಹತ್ತು ವರ್ಷಗಳ ಹಿಂದೆಯೇ ಬಾಬಾ ಕುರಿತು ಬರೆದಿದ್ದರು. ಅವರ ಬದುಕಿನ ಕತೆಯನ್ನು, ತಗ್ಗು ತಿಟ್ಟುಗಳನ್ನು, ತೀವ್ರ ತಿರುವುಗಳನ್ನು ಖುದ್ದು ಬಾಬಾ ಬಾಯಿಂದಲೇ ಕೇಳಿದರೂ ಅವರಿಗೆ ಸಮಾಧಾನ ಆಗಿರಲಿಲ್ಲ. ಬಾಬಾ ಅವರೊಡನೆ ಒಡನಾಡಿದ, ಅವರನ್ನು ಕಂಡುಂಡ ಜನರ ನೆನಪುಗಳು, ಅನುಭವಗಳಲ್ಲಿ ನೈಜ ಕತೆ ಹುದುಗಿದೆ ಎಂದು ಅವರು ಕೆದಕತೊಡಗಿದರಂತೆ. ಅದೇನೂ ಅಷ್ಟು ಸುಲಭದ ಕೆಲಸ ಆಗಿರಲಿಲ್ಲ.

ಪ್ರಿಯಾಂಕ ಪ್ರಕಾರ ಬಾಬಾ ಕತ್ತಿಯ ಅಲಗಿನ ಮೇಲೆ ನಡೆಯುತ್ತಿದ್ದಾರೆ. ತಮ್ಮ ಉದ್ಯಮ ಸಾಮ್ರಾಜ್ಯ ನಡೆಸಲು ಯಾರನ್ನು ನಂಬುತ್ತಾರೆ ಯಾರನ್ನು ನಂಬುವುದಿಲ್ಲ, ಯಾರನ್ನು ದೂರವಿಡುತ್ತಾರೆ, ಯಾರನ್ನು ಹತ್ತಿರ ಕರೆದುಕೊಳ್ಳುತ್ತಾರೆ ಎಂಬುದನ್ನು ಅವಲಂಬಿಸಿದೆ ಪತಂಜಲಿಯ ಭವಿತವ್ಯ.

*

ಜೀನ್ಸ್ ತಯಾರಿಕೆಗೆ ಕೈ ಹಾಕುವ ಘೋಷಣೆಯನ್ನು ಬಾಬಾ ಈಗಾಗಲೇ ಮಾಡಿದ್ದಾರೆ. ಸಾವಯವ ಹತ್ತಿಯಿಂದ ಜೀನ್ಸ್ ಮಾತ್ರವಲ್ಲದೆ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಹತ್ತಿ ಉಡುಪುಗಳ ಶ್ರೇಣಿಯನ್ನೇ ಭಾರತೀಯ ಮಾರುಕಟ್ಟೆಗೆ ಪರಿಚಯಸಲಿದ್ದೇವೆ. ಜೀನ್ಸ್ ವಿದೇಶಿ ಇರಬಹುದು. ತೊಡುವವರು ಮತ್ತು ತಯಾರಿಸುವವರು ಇಬ್ಬರೂ ಸ್ವದೇಶಿ. ಕಾಲಧರ್ಮಕ್ಕೆ ಅನುಗುಣವಾಗಿ ಜೀನ್ಸ್‌ನ ಸ್ವದೇಶೀಕರಣ ಮಾಡಬಾರದೇಕೆ. ಇಂತಹ ಕಾಯಿಲೆಗೆ ಇಂತಹ ಬಟ್ಟೆ ಬಳಕೆ ಎಂಬ ಲೆಕ್ಕದಲ್ಲಿ ತಯಾರಿಕೆ ಸಾಧ್ಯ ಎನ್ನುತ್ತಾರೆ ಪತಂಜಲಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಚಾರ್ಯ ಬಾಲಕೃಷ್ಣ.

ಹುರುನ್ ಜಾಗತಿಕ ವರದಿಯ ಪ್ರಕಾರ ರಾಮದೇವ್ ಅವರ ಅನುಯಾಯಿ ಬಾಲಕೃಷ್ಣ ಭಾರತದ ಎಂಟನೆಯ ಅತಿ ಸಿರಿವಂತ ವ್ಯಕ್ತಿ. ಮೊನ್ನೆ ಫೋಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ಬಾಲಕೃಷ್ಣ ಅವರು 49ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಜಿಗಿದಿದ್ದಾರೆ. ರಾಮದೇವ್ ಹಾಗೂ ಬಾಲಕೃಷ್ಣ ಇಬ್ಬರೂ ಹರಿಯಾಣದ ಗುರುಕುಲವೊಂದರಲ್ಲಿ ಒಬ್ಬರನ್ನೊಬ್ಬರು ಸಂಧಿಸಿದವರು. ರಾಮದೇವ್ ಕೊಂಚ ಕಾಲ ಬಾಲಕೃಷ್ಣಗೆ ಗುರುವಾಗಿದ್ದರು. ತಾಂತ್ರಿಕವಾಗಿ ಬಾಲಕೃಷ್ಣ ಅವರೇ ಪತಂಜಲಿಗೆ ಮುಖ್ಯಸ್ಥರು. ಆದರೆ ರಾಮದೇವ್ ಅವರೇ ಕಂಪೆನಿಯ ಚಾಲಕ ಶಕ್ತಿ. ಆಚಾರ್ಯ ಬಾಲಕೃಷ್ಣ ಶೇ 90ಕ್ಕೂ ಹೆಚ್ಚು ಷೇರುದಾರರು.

ದಿನಕ್ಕೆ 250 ಟನ್‌ಗಳಷ್ಟು ಹಸುವಿನ ಬೆಣ್ಣೆಯನ್ನು ಕರಗಿಸಿ ಪರಂಪರಾಗತ ಪದ್ಧತಿಯಲ್ಲಿ ತುಪ್ಪ ಮಾಡುತ್ತದೆ ಹರಿದ್ವಾರದ ಪತಂಜಲಿ ತುಪ್ಪ ತಯಾರಿಕೆ ಘಟಕ. ಸ್ವಚ್ಛತೆಯನ್ನು ಕಾಪಾಡಿಕೊಂಡ ಅತ್ಯಾಧುನಿಕ ಸ್ವಯಂಚಾಲಿತ ಘಟಕವಿದು. ಇಂತಹ ಭಾರೀ ಪ್ರಮಾಣದಲ್ಲಿ ಹಸುವಿನ ಹಾಲು ಸಿಗುವುದು ಕಷ್ಟ. ಈ ತುಪ್ಪ ಎಮ್ಮೆಯದೂ ಆಗಿರಬಹುದು ಎಂಬ ಸಂದೇಹವಾದವನ್ನು ಬಾಲಕೃಷ್ಣ ತಳ್ಳಿ ಹಾಕಿದರು.

ಕರ್ನಾಟಕವೂ ಸೇರಿದಂತೆ ದಕ್ಷಿಣ ರಾಜ್ಯಗಳ ಡೈರಿಗಳು ಹಸುವಿನ ಮತ್ತು ಎಮ್ಮೆಯ ಹಾಲನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತವೆ. ಈ ಡೈರಿಗಳು ಮಾಡಿಕೊಡುವ ಹಸುವಿನ ಬೆಣ್ಣೆಯನ್ನೇ ಪತಂಜಲಿ ಹರಿದ್ವಾರಕ್ಕೆ ಸಾಗಿಸಿ ತುಪ್ಪ ಮಾಡುತ್ತಿದೆ ಎಂದರು. ಪತಂಜಲಿ ಜೇನು ತುಪ್ಪವೂ ಮಾರುಕಟ್ಟೆಯನ್ನು ಆವರಿಸಿರುವ ಉತ್ಪನ್ನ. ಹಸುವಿನ ತುಪ್ಪ ಮತ್ತು ಜೇನು ಹೆಪ್ಪುಗಟ್ಟುವುದು ಸಹಜ ಕ್ರಿಯೆ ಎಂದು ಸಮರ್ಥಿಸಿಕೊಂಡ ಅವರು ಪತಂಜಲಿಯ ಕೆಲ ಉತ್ಪನ್ನಗಳ ಗುಣಮಟ್ಟ ಅಷ್ಟು ಸರಿ ಇಲ್ಲ ಎಂಬ ಟೀಕೆಯನ್ನು ಒಪ್ಪಲಿಲ್ಲ.

ಭಾರತದಲ್ಲಿ ವ್ಯವಹಾರ ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸ್ಥಳೀಯ ಸಂಸ್ಕೃತಿ, ಪರಂಪರೆ ಕುರಿತು ಯಾವ ಗೌರವವೂ ಇಲ್ಲ. ತಾಯಿ, ಮಗಳು, ತಂಗಿಯರನ್ನು ಮಾರಲೂ ಈ ಕಂಪೆನಿಗಳು ಹೇಸುವುದಿಲ್ಲ. ಇವುಗಳಿಂದಾಗಿ ನಮ್ಮ ಭವ್ಯ ಸಂಸ್ಕೃತಿ ಧ್ವಸ್ತವಾಗಿ ಹೋಗಿದೆ. ಇದೀಗ ದೇಶದಲ್ಲಿ ಯೋಗ ಮತ್ತು ಆಯುರ್ವೇದದ ಶಕ್ತಿ ಮರಳಿ ಬರುತ್ತಿದೆ. ಜಾತಿ, ಪ್ರಾಂತ, ಭಾಷೆಯ ಭೇದ ಮರೆತು ಲಕ್ಷಾಂತರ ಮಂದಿ ಬಯಲುಗಳಲ್ಲಿ ಯೋಗ ಮಾಡಲು ಕಲೆಯುತ್ತಿದ್ದಾರೆ. ಸಮಾಜ, ಸಂಸ್ಕೃತಿ, ಮನೆ, ಮನಗಳನ್ನು ಯೋಗ ಜೋಡಿಸತೊಡಗಿದೆ ಎಂಬುದು ಅವರು ‘ಪ್ರಜಾವಾಣಿ’ಯ ಜೊತೆ ಹಂಚಿಕೊಂಡ ಆಲೋಚನೆ.

ಅತ್ಯಾಧುನಿಕವಾಗಿ ನಿರ್ಮಿಸಲಾಗಿರುವ ಪತಂಜಲಿ ಆಯುರ್ವೇದ ಸಂಶೋಧನಾಲಯ, ಗಿಡಮೂಲಿಕೆಗಳ ಬಲು ದೊಡ್ಡ ವಸ್ತುಸಂಗ್ರಹಾಲಯ, ಹನ್ನೆರಡು ಸಾವಿರ ಮಂದಿ ಒಟ್ಟಿಗೆ ಯೋಗಾಭ್ಯಾಸ ಮಾಡಬಹುದಾದ ಸುಸಜ್ಜಿತ ಬೃಹತ್ ಸಭಾಂಗಣ, ಯೋಗ ಶಿಬಿರಗಳಲ್ಲಿ ಭಾಗವಹಿಸಲು ಬರುವವರಿಗೆಂದು ನಿರ್ಮಿಸಲಾಗಿರುವ ಬೃಹತ್ ವಸತಿ ಸಮುಚ್ಚಯಗಳು, ಪತಂಜಲಿ ಉತ್ಪನ್ನಗಳನ್ನು ತಯಾರಿಸುವ ಆಧುನಿಕ ತಂತ್ರಜ್ಞಾನ ಹೊಂದಿಂದ ಕಾರ್ಖಾನೆಗಳು, ಗೋಶಾಲೆಗೆಳಿಗೆ ಭೇಟಿ ನೀಡುವ ಅವಕಾಶವನ್ನು ‘ಪ್ರಜಾವಾಣಿ’ಗೆ ಅವರು ಕಲ್ಪಿಸಿದರು.

**

ಶೀಘ್ರದಲ್ಲೇ ಜೀನ್ಸ್‌ ತಯಾರಿಕೆ

ಜೀನ್ಸ್ ತಯಾರಿಕೆಗೆ ಕೈ ಹಾಕುವ ಘೋಷಣೆಯನ್ನು ಬಾಬಾ ಈಗಾಗಲೇ ಮಾಡಿದ್ದಾರೆ. ಸಾವಯವ ಹತ್ತಿಯಿಂದ ಜೀನ್ಸ್ ಮಾತ್ರವಲ್ಲದೆ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಹತ್ತಿ ಉಡುಪುಗಳ ಶ್ರೇಣಿಯನ್ನೇ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದ್ದೇವೆ. ಜೀನ್ಸ್ ವಿದೇಶಿ ಇರಬಹುದು. ತೊಡುವವರು ಮತ್ತು ತಯಾರಿಸುವವರು ಇಬ್ಬರೂ ಸ್ವದೇಶಿ. ಕಾಲಧರ್ಮಕ್ಕೆ ಅನುಗುಣವಾಗಿ ಜೀನ್ಸ್‌ನ ಸ್ವದೇಶೀಕರಣ ಮಾಡಬಾರದೇಕೆ? ಇಂತಹ ಕಾಯಿಲೆಗೆ ಇಂತಹ ಬಟ್ಟೆ ಬಳಕೆ ಎಂಬ ಲೆಕ್ಕದಲ್ಲಿ ತಯಾರಿಕೆ ಸಾಧ್ಯ ಎನ್ನುತ್ತಾರೆ ಪತಂಜಲಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಚಾರ್ಯ ಬಾಲಕೃಷ್ಣ.

ಹುರುನ್ ಜಾಗತಿಕ ವರದಿಯ ಪ್ರಕಾರ ರಾಮದೇವ್ ಅವರ ಅನುಯಾಯಿ ಬಾಲಕೃಷ್ಣ ಭಾರತದ ಎಂಟನೆಯ ಅತಿ ಸಿರಿವಂತ ವ್ಯಕ್ತಿ. ಮೊನ್ನೆ ಫೋಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ ಭಾರತದ 100 ಸಿರಿವಂತರ ಪಟ್ಟಿಯಲ್ಲಿ ಬಾಲಕೃಷ್ಣ ಅವರು 49ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಜಿಗಿದಿದ್ದಾರೆ. ರಾಮದೇವ್ ಹಾಗೂ ಬಾಲಕೃಷ್ಣ ಇಬ್ಬರೂ ಹರಿಯಾಣದ ಗುರುಕುಲವೊಂದರಲ್ಲಿ ಒಬ್ಬರನ್ನೊಬ್ಬರು ಸಂಧಿಸಿದವರು. ರಾಮದೇವ್ ಕೊಂಚ ಕಾಲ ಬಾಲಕೃಷ್ಣಗೆ ಗುರುವಾಗಿದ್ದರು.

ದಿನಕ್ಕೆ 250 ಟನ್‌ಗಳಷ್ಟು ಹಸುವಿನ ಬೆಣ್ಣೆಯನ್ನು ಕರಗಿಸಿ ಪರಂಪರಾಗತ ಪದ್ಧತಿಯಲ್ಲಿ ತುಪ್ಪ ಮಾಡುತ್ತದೆ ಹರಿದ್ವಾರದ ಪತಂಜಲಿ ತುಪ್ಪ ತಯಾರಿಕೆ ಘಟಕ. ಸ್ವಚ್ಛತೆಯನ್ನು ಕಾಪಾಡಿಕೊಂಡ ಅತ್ಯಾಧುನಿಕ ಸ್ವಯಂಚಾಲಿತ ಘಟಕವಿದು. ಇಂತಹ ಭಾರೀ ಪ್ರಮಾಣದಲ್ಲಿ ಹಸುವಿನ ಹಾಲು ಸಿಗುವುದು ಕಷ್ಟ. ಈ ತುಪ್ಪ ಎಮ್ಮೆಯದೂ ಆಗಿರಬಹುದು ಎಂಬ ಸಂದೇಹವಾದವನ್ನು ಬಾಲಕೃಷ್ಣ ತಳ್ಳಿ ಹಾಕಿದರು.

ಕರ್ನಾಟಕವೂ ಸೇರಿದಂತೆ ದಕ್ಷಿಣ ರಾಜ್ಯಗಳ ಡೈರಿಗಳು ಹಸುವಿನ ಮತ್ತು ಎಮ್ಮೆಯ ಹಾಲನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತವೆ. ಈ ಡೈರಿಗಳು ಮಾಡಿಕೊಡುವ ಹಸುವಿನ ಬೆಣ್ಣೆಯನ್ನೇ ಪತಂಜಲಿ ಹರಿದ್ವಾರಕ್ಕೆ ಸಾಗಿಸಿ ತುಪ್ಪ ಮಾಡುತ್ತಿದೆ ಎಂದರು. ಪತಂಜಲಿ ಜೇನು ತುಪ್ಪವೂ ಮಾರುಕಟ್ಟೆಯನ್ನು ಆವರಿಸಿರುವ ಉತ್ಪನ್ನ. ಹಸುವಿನ ತುಪ್ಪ ಮತ್ತು ಜೇನು ಹೆಪ್ಪುಗಟ್ಟುವುದು ಸಹಜ ಕ್ರಿಯೆ ಎಂದು ಸಮರ್ಥಿಸಿಕೊಂಡ ಅವರು ಪತಂಜಲಿಯ ಕೆಲ ಉತ್ಪನ್ನಗಳ ಗುಣಮಟ್ಟ ಅಷ್ಟು ಸರಿ ಇಲ್ಲ ಎಂಬ ಟೀಕೆಯನ್ನು ಒಪ್ಪಲಿಲ್ಲ.

ಭಾರತದಲ್ಲಿ ವ್ಯವಹಾರ ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಸ್ಥಳೀಯ ಸಂಸ್ಕೃತಿ, ಪರಂಪರೆ ಕುರಿತು ಗೌರವ ಇಲ್ಲ. ಇವುಗಳಿಂದಾಗಿ ನಮ್ಮ ಭವ್ಯ ಸಂಸ್ಕೃತಿ ಧ್ವಸ್ತವಾಗಿ ಹೋಗಿದೆ. ಇದೀಗ ದೇಶದಲ್ಲಿ ಯೋಗ ಮತ್ತು ಆಯುರ್ವೇದದ ಶಕ್ತಿ ಮರಳಿ ಬರುತ್ತಿದೆ. ಜಾತಿ, ಪ್ರಾಂತ, ಭಾಷೆಯ ಭೇದ ಮರೆತು ಲಕ್ಷಾಂತರ ಮಂದಿ ಬಯಲುಗಳಲ್ಲಿ ಯೋಗ ಮಾಡಲು ಕಲೆಯುತ್ತಿದ್ದಾರೆ. ಸಮಾಜ, ಸಂಸ್ಕೃತಿ, ಮನೆ, ಮನಗಳನ್ನು ಯೋಗ ಜೋಡಿಸತೊಡಗಿದೆ ಎಂಬುದು ಅವರು ‘ಪ್ರಜಾವಾಣಿ’ಯ ಜೊತೆ ಹಂಚಿಕೊಂಡ ಆಲೋಚನೆ.

ಅತ್ಯಾಧುನಿಕವಾಗಿ ನಿರ್ಮಿಸಲಾಗಿರುವ ಪತಂಜಲಿ ಆಯುರ್ವೇದ ಸಂಶೋಧನಾಲಯ, ಗಿಡಮೂಲಿಕೆಗಳ ಬಲು ದೊಡ್ಡ ವಸ್ತುಸಂಗ್ರಹಾಲಯ, ಹನ್ನೆರಡು ಸಾವಿರ ಮಂದಿ ಒಟ್ಟಿಗೆ ಯೋಗಾಭ್ಯಾಸ ಮಾಡಬಹುದಾದ ಸುಸಜ್ಜಿತ ಬೃಹತ್ ಸಭಾಂಗಣ, ಯೋಗ ಶಿಬಿರಗಳಲ್ಲಿ ಭಾಗವಹಿಸಲು ಬರುವವರಿಗೆಂದು ನಿರ್ಮಿಸಲಾಗಿರುವ ಬೃಹತ್ ವಸತಿ ಸಮುಚ್ಚಯಗಳು, ಆಧುನಿಕ ತಂತ್ರಜ್ಞಾನ ಹೊಂದಿಂದ ಕಾರ್ಖಾನೆಗಳು, ಗೋಶಾಲೆಗೆಳಿಗೆ ಭೇಟಿ ನೀಡುವ ಅವಕಾಶವನ್ನು ‘ಪ್ರಜಾವಾಣಿ’ಗೆ ಅವರು ಕಲ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT