ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯೆಯೇ ಧರ್ಮದ ಮೂಲ

Last Updated 31 ಜುಲೈ 2018, 16:27 IST
ಅಕ್ಷರ ಗಾತ್ರ

ಕಾವ್ಯಸ್ವಾರಸ್ಯದ ದೃಷ್ಟಿಯಿಂದ ರಾಮಾಯಣದ ಉಳಿದ ಕಾಂಡಗಳಲ್ಲಿರುವಂಥ ರಸಸ್ಥಾನಗಳು ಬಾಲಕಾಂಡ ಮತ್ತು ಉತ್ತರಕಾಂಡದಲ್ಲಿ ಕಡಿಮೆ ಎಂದೇ ಹೇಳಬೇಕು. ಬಾಲಕಾಂಡದ ಆನಂತರದ ಕಾಂಡವಾದ ಅಯೋಧ್ಯಾಕಾಂಡದಿಂದಲೇ ರಾಮಾಯಣದ ದಿಟವಾದ ಸೊಗಸು ಕಾಣಿಸಿಕೊಳ್ಳುವುದು. ಹೀಗಿದ್ದರೂ ಬಾಲಕಾಂಡದ ಆರಂಭ, ರಾಮಾಯಣರಚನೆಯ ಸಂದರ್ಭ, ರಾಮಕಥೆಯ ನಿರೂಪಣೆ, ಕಥೆಯ ಓಟ, ಉಪಕಥೆಗಳ ನಿರೂಪಣೆಗಳು ರಾಮಾಯಣ ಭಿತ್ತಿಯಲ್ಲಿ ತುಂಬ ಮಹತ್ವದ ವಿವರಗಳೇ ಹೌದು. ಅದರಲ್ಲೂ ರಾಮಾಯಣದ ಹುಟ್ಟಿನ ಹಿನ್ನೆಲೆಯಾಗಿ ಬರುವ ವಾಲ್ಮೀಕಿ–ನಾರದ ಸಂವಾದ ಮತ್ತು ಕ್ರೌಂಚಪಕ್ಷಿಗಳ ಪ್ರಸಂಗಗಳು ರಾಮಾಯಣದ ದೃಷ್ಟಿಯಿಂದ ಮಾತ್ರವಲ್ಲದೆ, ಭಾರತೀಯ ಕಾವ್ಯಮೀಮಾಂಸೆ–ಕಲಾಮೀಮಾಂಸೆಗಳ ದೃಷ್ಟಿಯಿಂಲೂ ಅತ್ಯಂತ ಮೌಲಿಕವಾದವು. ನಾವು ಈಗ ಆ ಭಾಗದ ವಿವರಣೆಯಲ್ಲಿದ್ದೇವೆ.

ಕ್ರೌಂಚಪಕ್ಷಿಯ ಮಿಥುನದಲ್ಲಿ ಗಂಡುಹಕ್ಕಿ ಈಗ ಬೇಡನ ಬಾಣಕ್ಕೆ ತುತ್ತಾಗಿ ಸತ್ತಿದೆ; ಆ ಬೇಡ ವಾಲ್ಮೀಕಿಮಹರ್ಷಿಯ ಶಾಪಕ್ಕೆ ತುತ್ತಾಗಿದ್ದಾನೆ.

ಇಲ್ಲೊಂದು ಪ್ರಶ್ನೆ ಎದುರಾಗುತ್ತದೆ. ಪ್ರಾಣಿ–ಪಕ್ಷಿಗಳನ್ನು ಬೇಟೆಯಾಡಿ ಕೊಲ್ಲುವುದು ಬೇಡನ ವೃತ್ತಿ; ಅದೇ ಅವನ ಧರ್ಮ ಕೂಡ. ಹೀಗಿರುವಾಗ ಪಕ್ಷಿಯನ್ನು ಕೊಂದ ಬೇಡನನ್ನು ವಾಲ್ಮೀಕಿಯು ಶಪಿಸಿದ್ದು ಎಷ್ಟು ಸರಿ? ರಾಮಾಯಣದಲ್ಲಿ ಮುಂದೆ ಎದುರಾಗುವ ಧರ್ಮಜಿಜ್ಞಾಸೆಯ ಹಲವು ಪ್ರಸಂಗಗಳಲ್ಲಿ ಇದು ಮೊದಲನೆಯದು ಎಂದು ಒಕ್ಕಣಿಸಬಹುದು. ಹೌದು, ಪ್ರಾಣಿ–ಪಕ್ಷಿಗಳನ್ನು ಬೇಟೆಯ ಮೂಲಕ ಕೊಲ್ಲುವುದು ಬೇಡನ ವೃತ್ತಿ; ಅದೇ ಅವನ ಜೀವನ ಕೂಡ. ಆದರೆ ಆ ವೃತ್ತಿಗೂ ಕೂಡ, ಎಲ್ಲ ವೃತ್ತಿಗಳಿಗಿರುವಂತೆ, ಧರ್ಮದ ಕಟ್ಟುಪಾಡುಗಳು ಅನ್ವಯವಾಗುತ್ತವೆ. ಒಂದು ಪ್ರಾಣಿಯನ್ನೋ ಅಥವಾ ಪಕ್ಷಿಯನ್ನೋ ಯಾವಾಗ ಕೊಲ್ಲಬಾರದು – ಎಂಬ ನೀತಿಸಂಹಿತೆ ಬೇಟೆಗೂ ಅನ್ವಯವಾಗುತ್ತದೆ. ಮೃಗಪಕ್ಷಿಗಳನ್ನು ಕೊಲ್ಲುವುದು ವ್ಯಾಧನ ಸ್ವಧರ್ಮ. ಆದರೆ ಅವು ಕಾಮಭೋಗದಲ್ಲಿರುವಾಗ ಅವನ್ನು ಕೊಲ್ಲತಕ್ಕದ್ದಲ್ಲ. ಹಾಗೆ ಕೊಂದದ್ದೇ ಆದರೆ ಅದು ಅಧರ್ಮವೇ ಆಗುತ್ತದೆ. ಇದು ನೀತಿಸಂಹಿತೆ.

ಪ್ರಪಂಚದ ಅಸ್ತಿತ್ವ ನಿಂತಿರುವುದೇ ಸೃಷ್ಟಿನಿಯಮವಾದ ಹುಟ್ಟು–ಸಾವುಗಳ ಚಕ್ರದ ಸುತ್ತಾಟದಲ್ಲಿ. ಈ ಚಕ್ರದ ಗತಿಶೀಲತೆಗೆ ಮುಖ್ಯವಾಗಿರುವುದು ಸಂತತಿ. ಹೆಣ್ಣು–ಗಂಡುಗಳ ಮಿಲನವೇ ಸಂತತಿಗಾಗಿ ನಡೆಯುವ ಜೀವಯಜ್ಞ. ಈ ಯಜ್ಞದ ಸಂದರ್ಭದಲ್ಲಿ ಅಡ್ಡಿಯಾಗುವುದು ಋತವ್ಯವಸ್ಥೆಯನ್ನೇ ಭಂಗ ಮಾಡಿದಂತೆ. ಅದು ಸಲ್ಲದು. ತೈತ್ತಿರೀಯೋಪನಿಷತ್ತಿನಲ್ಲಿ ಶಿಷ್ಯನಿಗೆ ಗುರೂಪದೇಶದ ಸಂದರ್ಭವೊಂದಿದೆ. ವಿದ್ಯಾರ್ಥಿಯು ಶಿಕ್ಷಣವನ್ನು ಮುಗಿಸಿ ಮನೆಗೆ ಹಿಂದಿರುಗುವಾಗ ಅವನಿಗೆ ಹೇಳುವ ಮಾತುಗಳು ಉಪನಿಷತ್ತಿನ ಈ ಭಾಗದಲ್ಲಿರುವುದು ಎನ್ನುವುದು ವಿದ್ವಾಂಸರ ಅಭಿಪ್ರಾಯ. ಇದನ್ನು ನಮ್ಮ ಇಂದಿನ ವಿಶ್ವವಿದ್ಯಾಲಯಗಳ 'convocation day' - ಪದವಿ ದಿನದ ಸಂದೇಶಕ್ಕೆ ಹೋಲಿಸಬಹುದು. ಅಲ್ಲಿ ಉಪದೇಶವಾಗಿ ಬರುವ ಮಾತು: ‘ಪ್ರಜಾತಂತುಂ ಮಾ ವ್ಯವಚ್ಛೇತ್ಸೀಃ’ ‌; ಎಂದರೆ, ‘ಪ್ರಜಾತಂತುವನ್ನು – ಸಂತತಿಯನ್ನು ಕಡಿದುಹೋಗಲೀಯದಿರು.’ ಬೇಡ ಆ ಪಕ್ಷಿಯನ್ನು ಕೊಂದ ಸಂದರ್ಭವೇ ಇಲ್ಲಿ ಅವನನ್ನು ಶಾಪಾರ್ಹವಾಗಿಸಿದ್ದು. ಪಕ್ಷಿಗಳ ಹಕ್ಕನ್ನೂ ಕರ್ತವ್ಯವನ್ನೂ ಅವನು ಭಂಗಗೊಳಿಸಿದ್ದ. (ಈ ಪ್ರಸಂಗದ ನೆರಳೋ ಎನ್ನುವಂತೆ ಮಹಾಭಾರತದಲ್ಲೂ ಇಂಥದೊಂದು ವಿದ್ಯಮಾನದ ನಿರೂಪಣೆಯಿದೆ. ಋಷಿದಂಪತಿ ಪ್ರಾಣಿಶರೀರದಲ್ಲಿ ಕ್ರೀಡಿಸುತ್ತಿದ್ದಾಗ ಪಾಂಡುವಿನ ಬಾಣಕ್ಕೆ ತುತ್ತಾಗಿ ಸಾವನ್ನಪ್ಪುತ್ತಾರೆ. ಆಗ ಪಾಂಡುವೂ ಕೂಡ ಶಾಪಕ್ಕೆ ಒಳಗಾಗುತ್ತಾನೆ.)

ಹೆಣ್ಣುಹಕ್ಕಿಯ ರೋದನದಿಂದ ವಾಲ್ಮೀಕಿಯ ಮನಸ್ಸು ಕರಗಿದ್ದು ಸಹಜವೂ ಹೌದು. ‘ದಯೆಯೇ ಧರ್ಮದ ಮೂಲ’ ಎಂಬ ಮಾತಿನ ಮೂಲವನ್ನು ಅವರ ಶೋಕದಲ್ಲಿ ಗುರುತಿಸಬಹುದು. ದಯೆ ಎಂದರೇನು? ಹರದತ್ತ ಎಂಬ ವ್ಯಾಖ್ಯಾನಕಾರನೊಬ್ಬನ ಈ ಮಾತುಗಳು ಉಲ್ಲೇಖಾರ್ಹ:

ಆತ್ಮವತ್ಸರ್ವಭೂತೇಷು ಯದ್ಧಿತಾಯ ಶಿವಾಯ ಚ |

ವರ್ತತೇ ಸತತಂ ಹೃಷ್ಟಃ ಕೃತ್ಸ್ನಾ ಹ್ಯೇಷಾ ದಯಾ ಸ್ಮೃತಾ ||

‘ಎಲ್ಲ ಜಡ ಮತ್ತು ಚೇತನ ವಸ್ತುಗಳನ್ನು ತನ್ನಂತೆಯೇ ಎಂದು ತಿಳಿದು, ಅವುಗಳ ಹಿತಕ್ಕಾಗಿಯೂ ಶ್ರೇಯಸ್ಸಿಗಾಗಿಯೂ ಮಂಗಳಕ್ಕಾಗಿಯೂ ಆನಂದದಿಂದ ಎಲ್ಲ ಕಾಲದಲ್ಲೂ ಪೂರ್ಣ ಮನಸ್ಸಿನಿಂದ ನಡೆದುಕೊಳ್ಳುವುದೇ ದಯೆ.’

‘ಹಿತ’, ‘ಶ್ರೇಯಸ್ಸು’ ಮತ್ತು ‘ಮಂಗಳ’ – ಇವನ್ನು ‘ಹೀಗೆ’ ಎಂದು ನಿರ್ಣಾಯಕವಾಗಿ ಹೇಳಲು ಆಗದು. ಇವು ಒಬ್ಬರಿಂದ ಇನ್ನೊಬ್ಬರಿಗೆ, ಕಾಲದಿಂದ ಕಾಲಕ್ಕೆ ಬದಲಾಗುವ ವಿವರಣೆಗಳು. ಇನ್ನೊಬ್ಬರ ಹಿತವನ್ನೂ ಶ್ರೇಯಸ್ಸನ್ನೂ ಶುಭವನ್ನೂ ಗ್ರಹಿಸಿ, ಅವನ್ನು ಕಾಪಾಡುವಂತೆ ನಡೆದುಕೊಳ್ಳುವುದೇ ದಯೆ. ದಯೆ ಎಂಬುದು ಬೇಡನಲ್ಲಿ ಇರಬಾರದ ಗುಣವೇನಲ್ಲವಷ್ಟೆ! ‘ದಯಾಮರಣ’ ಎಂಬ ಪದವನ್ನು ನಾವು ಬಳಸುವುದುಂಟು. ಮರಣವೂ ದಯೆಯಿಂದ ಕೂಡಿರಲು ಸಾಧ್ಯ ಅಲ್ಲವೆ? ವಾಲ್ಮೀಕಿಮಹರ್ಷಿಯಲ್ಲಿದ್ದ ದಯಾಗುಣ ಆ ಬೇಡನಲ್ಲಿ ಇಲ್ಲವಾಗಿತ್ತು. ಇಲ್ಲೊಂದು ಸ್ವಾರಸ್ಯ ಉಂಟು. ವಾಲ್ಮೀಕಿಮಹರ್ಷಿಯು ಋಷಿಯಾಗುವ ಮೊದಲು ವ್ಯಾಧನೇ ಆಗಿದ್ದವನಂತೆ! ದಯೆಯಿಲ್ಲದೆ ಪ್ರಾಣಿ–ಪಕ್ಷಿಗಳನ್ನು ಬೇಟೆಯಾಡುತ್ತಿದ್ದವನಂತೆ!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT