ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳಿಗೆ ಮಾವಳ್ಳಿಪುರ ಕಸದ ವಿಷ ಪ್ರಾಶನ

ಕಣ್ಣುಮುಚ್ಚಿ ಕುಳಿತ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ: ಆರೋಪ
Last Updated 6 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟದ ಮಾವಳ್ಳಿಪುರ ಗ್ರಾಮದಲ್ಲಿರುವ ಘನತಾಜ್ಯ ನಿರ್ವಹಣಾ ಘಟಕದಿಂದ ಕಲುಷಿತ ನೀರು ಹೊರ ಬರುತ್ತಿದ್ದು, ಮಳೆ ನೀರಿನೊಂದಿಗೆ ಬೆರೆತು ಸಮೀಪದ ಕೆರೆಗಳಿಗೆ ಸೇರುತ್ತಿದೆ. ಜಲಮೂಲದ ನೀರು ಮಲಿನಗೊಂಡು ಜಲಚರ, ಪ್ರಾಣಿ, ಪಕ್ಷಿಗಳ ಜೀವಹರಣವಾಗುತ್ತಿದೆ.

‘ಇಲ್ಲಿನ ಘಟಕದಲ್ಲಿ 44 ಲಕ್ಷ ಟನ್ ಕಸ ವೈಜ್ಞಾನಿಕವಾಗಿ ವಿಲೇವಾರಿಯಾಗದೆ ಉಳಿದಿದೆ. ಕಸ ಕೊಳೆತು ದುರ್ನಾತ ಬೀರುತ್ತಿದೆ. ಕೊಳೆತ ಕಸದಿಂದ ಹೊರಬರುತ್ತಿರುವ ವಿಷಯುಕ್ತ ನೀರು, ಗ್ರಾಮದ ಸುತ್ತಮುತ್ತಲಿನ ಕೆರೆಗಳಿಗೆ ಸೇರುತ್ತಿದೆ. ಜಲಚರಗಳು ಮತ್ತು ಈ ಜಲಮೂಲದ ನೀರು ಸೇವಿಸುವ ಪಕ್ಷಿಗಳು ಜೀವ ಕಳೆದುಕೊಳ್ಳುತ್ತಿವೆ’ ಎನ್ನುತ್ತಾರೆ ಗ್ರಾಮದ ನಿವಾಸಿ ಶ್ರೀನಿವಾಸ್.

‘ರಾಮ್ಕಿ ಸಂಸ್ಥೆ 2006ರಿಂದ ಇಲ್ಲಿ ಕಸ ಸುರಿಯುತ್ತಿತ್ತು. ಸಂಸ್ಥೆಯು ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡಲಿಲ್ಲ. ಈ ಜವಾಬ್ದಾರಿ ತೆಗೆದುಕೊಂಡಿರುವ ಮಹಾನಗರ ಪಾಲಿಕೆಯೂ ವೈಜ್ಞಾನಿಕವಾಗಿ ಘನ ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ. ತ್ಯಾಜ್ಯ ಕೊಳೆತು, ಹೊರಬರುತ್ತಿರುವ ವಿಷಯುಕ್ತ ನೀರು ಜಲಮೂಲಗಳನ್ನು ಮಲಿನಗೊಳಿಸುತ್ತಿದೆ. ಕೊಳವೆಬಾವಿಗಳ ನೀರು ಕಲುಷಿತಗೊಂಡಿದೆ. ರೈತರು ಮತ್ತು ಈ ಭಾಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ’ ಎನ್ನುತ್ತಾರೆ ಅವರು.

‘ಪರಿಸರ ಮಾಲಿನ್ಯ ಉಂಟಾಗುವುದನ್ನು ಕಂಡು, ಗ್ರಾಮದಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಬಂಧ ಹೇರಿತ್ತು. ಕೆಲ ಕಾಲ ಇಲ್ಲಿ ಕಸ ವಿಲೇವಾರಿ ಸ್ಥಗಿತಗೊಂಡಿತ್ತು. ಆದರೆ, ಆರ್.ಅಶೋಕ ಅವರು ಉಪಮುಖ್ಯಮಂತ್ರಿಯಾಗಿದ್ದಾಗ, ಗ್ರಾಮದಲ್ಲಿ ಕಸ ವಿಲೇವಾರಿಗೆ ಮತ್ತೆ  ಅವಕಾಶ ಕಲ್ಪಿಸಲಾಯಿತು’ ಎನ್ನುವುದು ಗ್ರಾಮಸ್ಥರ ಆರೋಪ.

‘ಈ ನಿರ್ಧಾರದಿಂದ ಸುತ್ತಮುತ್ತಲಿನ ಕೆರೆಗಳಿಗಷ್ಟೇ ಅಲ್ಲ, ಬೆಂಗಳೂರು ಜನತೆಗೂ ವಿಷ ಪ್ರಾಶನ ಮಾಡಿಸಿದಂತಾಗಿದೆ. ಮಳೆ ಹೆಚ್ಚು ಸುರಿಯುತ್ತಿರುವುದರಿಂದ ಇಲ್ಲಿನ ವಿಷಯುಕ್ತ ನೀರು ಕೆರೆಕುಂಟೆಗಳನ್ನು ದಾಟಿ, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುತ್ತಿದೆ. ಮಾಲಿನ್ಯ ತಡೆಯಬೇಕಿದ್ದ ಬಿಬಿಎಂಪಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಜಾಣಕುರುಡು ಪ್ರದರ್ಶಿಸುತ್ತಿವೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

**

ತಿಪ್ಪಗೊಂಡನಹಳ್ಳಿ ಜಲಾಶಯದ ನೀರು ಕಲುಷಿತವಾಗದಂತೆ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ.
-ಲಕ್ಷ್ಮಣ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

**

ಮಾವಳ್ಳಿಪುರದ ಘಟಕದಿಂದ ಹೊರ ಬರುತ್ತಿರುವ ವಿಷಯುಕ್ತ ನೀರು, ಕೆರೆಕಟ್ಟೆಗಳನ್ನಷ್ಟೇ ಅಲ್ಲ, ಜನರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿದೆ.
–ಚೊಕ್ಕನಹಳ್ಳಿ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT