ರಾಜ್ಯದ ಅರ್ಚನಾ ಕಾಮತ್‌ಗೆ ಎರಡು ಪದಕ

ಬುಧವಾರ, ಜೂನ್ 19, 2019
22 °C
ಐ.ಟಿ.ಟಿ.ಎಫ್‌ ಸರ್ಬಿಯಾ ಜೂನಿಯರ್‌ ಓಪನ್‌ ಟೇಬಲ್‌ ಟೆನಿಸ್ ಟೂರ್ನಿ

ರಾಜ್ಯದ ಅರ್ಚನಾ ಕಾಮತ್‌ಗೆ ಎರಡು ಪದಕ

Published:
Updated:
ರಾಜ್ಯದ ಅರ್ಚನಾ ಕಾಮತ್‌ಗೆ ಎರಡು ಪದಕ

ಬೆಂಗಳೂರು: ಅಪೂರ್ವ ಸಾಮರ್ಥ್ಯ ತೋರಿದ ಕರ್ನಾಟಕದ ಅರ್ಚನಾ ಕಾಮತ್‌ ಅವರು ಸರ್ಬಿಯಾದ ಬೆಲ್‌ಗ್ರೇಡ್‌ನಲ್ಲಿ ನಡೆದ ಐ.ಟಿ.ಟಿ.ಎಫ್‌  ಸರ್ಬಿಯಾ ಜೂನಿಯರ್‌ ಓಪನ್‌ ಟೇಬಲ್‌ ಟೆನಿಸ್‌ ಟೂರ್ನಿಯಲ್ಲಿ ಎರಡು ಪದಕ ಗೆದ್ದಿದ್ದಾರೆ.

18 ವರ್ಷದೊಳಗಿನವರ ಜೂನಿಯರ್‌ ವಿಭಾಗದ ಸಿಂಗಲ್ಸ್‌ನಲ್ಲಿ ಬೆಳ್ಳಿ ಜಯಿಸಿರುವ ಅರ್ಚನಾ, ಡಬಲ್ಸ್‌ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಗುರುವಾರ ರಾತ್ರಿ ನಡೆದ ಸಿಂಗಲ್ಸ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಅರ್ಚನಾ 11–9, 4–11, 7–11, 13–11, 11–3, 7–11, 8–11ರಲ್ಲಿ ಸರ್ಬಿಯಾದ ಎರಡನೇ ಶ್ರೇಯಾಂಕಿತೆ ಸಬಿನಾ ಸುರ್ಜಾನ್‌ ವಿರುದ್ಧ ಸೋತರು.

ಮೊದಲ ಸೆಟ್‌ನಲ್ಲಿ ಗೆದ್ದು ಭರವಸೆ ಮೂಡಿಸಿದ್ದ ಕರ್ನಾಟಕದ ಆಟಗಾರ್ತಿ, ನಂತರದ ಎರಡು ಸೆಟ್‌ಗಳಲ್ಲಿ ನಿರಾಸೆ ಕಂಡು 1–2ರ ಹಿನ್ನಡೆ ಅನುಭವಿಸಿದರು. ಇದರಿಂದ ಎಳ್ಳಷ್ಟೂ ವಿಶ್ವಾಸ ಕಳೆದುಕೊಳ್ಳದ ಅವರು ನಾಲ್ಕು ಮತ್ತು ಐದನೇ ಸೆಟ್‌ಗಳಲ್ಲಿ ಗೆದ್ದು 3–2ರ ಮುನ್ನಡೆ ಗಳಿಸಿದರು.

ಆರನೇ ಸೆಟ್‌ನಲ್ಲಿ ಸಬಿನಾ ತಿರುಗೇಟು ನೀಡಿದ್ದರಿಂದ ಏಳನೇ ಮತ್ತು ನಿರ್ಣಾಯಕ ಸೆಟ್‌ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಈ ಸೆಟ್‌ನಲ್ಲೂ ಸಬಿನಾ ಮೋಡಿ ಮಾಡಿದರು.

ಸೆಮಿಫೈನಲ್‌ ಪಂದ್ಯದಲ್ಲಿ ಅರ್ಚನಾ 12–10, 11–5, 11–3, 11–6ರಲ್ಲಿ ಸರ್ಬಿಯಾದ ಲೌರಾ ಕೊಜೊಕಾರ್‌ ಎದುರು ಗೆದ್ದಿದ್ದರು.

ಕ್ವಾರ್ಟರ್‌ ಫೈನಲ್‌ನಲ್ಲಿ 11–3, 16–18, 11–5, 12–10, 11–4ರಲ್ಲಿ ಸರ್ಬಿಯಾದ ತಿಹಾನ ಜೊಕಿಚ್‌ ಅವರನ್ನು ಸೋಲಿಸಿದ್ದರು.

ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಸರ್ಬಿಯಾದ ಡ್ರಾಗನ ವಿಗ್‌ಜೆವಿಚ್‌ ಜೊತೆಗೂಡಿ ಆಡಿದ್ದ ಅರ್ಚನಾ ಕಂಚಿಗೆ ತೃಪ್ತಿಪಟ್ಟರು.

ಸೆಮಿಫೈನಲ್‌ನಲ್ಲಿ ಅರ್ಚನಾ ಮತ್ತು ಡ್ರಾಗನ ಜೋಡಿ 5–11, 11–7, 11–8, 6–11, 5–11ರಲ್ಲಿ ಜರ್ಮನಿಯ ಸೋಫಿ ಕ್ಲೀ ಮತ್ತು ಯೂಕಿ ಸುತ್ಸುಯಿ ವಿರುದ್ಧ ನಿರಾಸೆ ಕಂಡಿತು.

ಜೂನಿಯರ್‌ ಬಾಲಕಿಯರ ವಿಭಾಗದಲ್ಲಿ 9 ರಾಷ್ಟ್ರಗಳ 28 ಆಟಗಾರ್ತಿಯರು ಕಣದಲ್ಲಿ ಇದ್ದರು.

ಬಾಲಕರ ವಿಭಾಗದಲ್ಲಿ ಭಾರತದ ಮಾನವ್‌ ಟಕ್ಕರ್‌ ಎರಡು ಬೆಳ್ಳಿಯ ಪದಕಗಳನ್ನು ಗೆದ್ದುಕೊಂಡರು.

ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಮಾನವ್‌ 3–4ರಿಂದ ಅಮೆರಿಕದ ಶೆರಾನ್‌ ಅಲಗುಯೆಟ್ಟಿ ವಿರುದ್ಧ ಸೋತರು.ಮಾನವ್ ಅಪೂರ್ವ ಆಟದಿಂದ ಗಮನಸೆಳೆದರು. ಪಂದ್ಯದ ಕೊನೆಯ ಹಂತದಲ್ಲೂ ಸುಲಭದಲ್ಲಿ ಎದುರಾಳಿಯನ್ನು ಹಿಮ್ಮೆಟ್ಟಿಸಿದರು.

ಡಬಲ್ಸ್‌ ವಿಭಾಗದಲ್ಲಿ ಮಾನುಷ್‌ ಸಹಾ ಜೊತೆಯಾಗಿ ಆಡಿದ ಅವರು ಫೈನಲ್‌ನಲ್ಲಿ 2–3ರಿಂದ ಕೆನಡಾದ ಜೆರೆಮಿ ಹಾಜಿನ್‌ ಮತ್ತು ರುಮೇನಿಯಾದ ಪಾಲ್‌ ಮ್ಲಾಡಿನ್‌ ವಿರುದ್ಧ ಪರಾಭವಗೊಂಡರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry