ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ಸರಕು, ಸೇವೆಗಳ ತೆರಿಗೆ ದರ ಇಳಿಕೆಗೆ ಜಿಎಸ್‌ಟಿ ಸಭೆ ನಿರ್ಧಾರ

Last Updated 6 ಅಕ್ಟೋಬರ್ 2017, 20:30 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಮಂಡಳಿ ಸಭೆಯು ವರ್ತಕರು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಹಲವು ಸುಧಾರಣೆಗಳನ್ನು ಪ್ರಕಟಿಸಿದೆ. ಒಟ್ಟು 27 ಸರಕುಗಳು ಮತ್ತು ಸೇವೆಗಳ ತೆರಿಗೆ ದರವನ್ನು ಇಳಿಸಲಾಗಿದೆ. ರಫ್ತುದಾರರ ಅನುಕೂಲಕ್ಕಾಗಿ ತೆರಿಗೆ ಮರುಪಾವತಿಯನ್ನು ತ್ವರಿತಗೊಳಿಸಲು ನಿರ್ಧರಿಸಲಾಗಿದೆ.

ಮಾರ್ಬಲ್‌ ಮತ್ತು ಗ್ರಾನೈಟ್‌ ಬಿಟ್ಟು ನೆಲಕ್ಕೆ ಹಾಸಲು ಬಳಸುವ ಕಲ್ಲುಗಳು, ಲೇಖನ ಸಾಮಗ್ರಿ, ಚಪಾತಿ ಮತ್ತು ಕಕ್ರಾ, ಡೀಸೆಲ್‌ ಎಂಜಿನ್‌ ಬಿಡಿಭಾಗಗಳು ಮತ್ತು ಪಂಪ್‌ಗಳು, ಬ್ರಾಂಡ್‌ರಹಿತ ಕುರುಕಲು ತಿಂಡಿ, ಬ್ರಾಂಡ್‌ರಹಿತ ಆಯುರ್ವೇದ ಔಷಧಗಳು, ಕೈಮಗ್ಗದ ಬಟ್ಟೆ, ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯ (ಐಸಿಡಿಎಸ್‌) ಆಹಾರ ಪೊಟ್ಟಣಗಳು, ರಬ್ಬರ್‌, ಕಾಗದ ಮತ್ತು ಪ್ಲಾಸ್ಟಿಕ್‌ ತ್ಯಾಜ್ಯ ವಸ್ತುಗಳ ತೆರಿಗೆ ದರವನ್ನು ಶೇ 5ಕ್ಕೆ ಇಳಿಸಲಾಗಿದೆ. ಕೆಲವು ಸೇವೆಗಳು ಮತ್ತು ಕೈಕೆಲಸಗಳನ್ನೂ ಈ ವ್ಯಾಪ್ತಿಗೆ ತರಲಾಗಿದೆ. ಜರಿ ಕಟ್ಟುವುದು, ಗಿಲೀಟು ಆಭರಣಗಳು, ಮುದ್ರಣ ಕೆಲಸಗಳೂ ಶೇ 5ರ ತೆರಿಗೆ ವಿಭಾಗಕ್ಕೆ ಸೇರಲಿವೆ.

ಹೆಚ್ಚು ಕಾರ್ಮಿಕರನ್ನು ಬಳಸಿ ನಡೆಸುವ ಸರ್ಕಾರದ ನಿರ್ಮಾಣ ಯೋಜನೆಗಳ ಗುತ್ತಿಗೆಗಳನ್ನು ಶೇ 5ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ನೀರಾವರಿ ಯೋಜನೆಗಳಂತಹ ದೊಡ್ಡ ಕಾಮಗಾರಿ ಇದರಲ್ಲಿ ಸೇರುತ್ತದೆ.

ರಾಜಿ ತೆರಿಗೆ ಪದ್ಧತಿಯ (ಕಾಂಪೊಸಿಷನ್‌ ಸ್ಕೀಮ್‌) ಮಿತಿಯನ್ನು ₹75 ಲಕ್ಷದಿಂದ ₹1 ಕೋಟಿಗೆ ಏರಿಸಲಾಗಿದೆ. ಈ ಪದ್ಧತಿ ವ್ಯಾಪ್ತಿಯಲ್ಲಿ ಬರುವವರು ಜಿಎಸ್‌ಟಿ ಲೆಕ್ಕ ಸಲ್ಲಿಕೆಯ ಸುದೀರ್ಘ ಪ್ರಕ್ರಿಯೆಯನ್ನು ಅನುಸರಿಸುವ ಅಗತ್ಯ ಇಲ್ಲ. ಬದಲಿಗೆ ವಹಿವಾಟಿನ ಶೇ 1ರಿಂದ 5ರಷ್ಟು ತೆರಿಗೆ ಪಾವತಿಸಿದರೆ ಸಾಕು. ವರ್ತಕರಿಗೆ ಶೇ 1, ತಯಾರಕರಿಗೆ ಶೇ 2 ಮತ್ತು ಹೋಟೆಲುಗಳಿಗೆ ಶೇ 5ರಷ್ಟು ತೆರಿಗೆ ಅನ್ವಯವಾಗುತ್ತದೆ. ಆದರೆ ಸೇವೆ ಒದಗಿಸುವವರು ರಾಜಿ ತೆರಿಗೆ ಪದ್ಧತಿ ವ್ಯಾಪ್ತಿಗೆ ಬರುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT