ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿ.ವಿ ತಂಡಕ್ಕೆ ಸುಲಭ ಗೆಲುವು

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಕೊಕ್ಕೊ ಚಾಂಪಿಯನ್‌ಷಿಪ್‌
Last Updated 6 ಅಕ್ಟೋಬರ್ 2017, 19:51 IST
ಅಕ್ಷರ ಗಾತ್ರ

ಮೈಸೂರು: ಎಂ.ವೀಣಾ ಅವರ ಚುರುಕಿನ ಆಟದ ನೆರವಿನಿಂದ ಆತಿಥೇಯ ಮೈಸೂರು ವಿಶ್ವವಿದ್ಯಾಲಯ ತಂಡದವರು ದಕ್ಷಿಣ ಭಾರತ ಅಂತರ ವಿ.ವಿ ಕೊಕ್ಕೊ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಮೊದಲ ಲೀಗ್‌ ಪಂದ್ಯದಲ್ಲಿ ಜಯ ಸಾಧಿಸಿದರು.

ಮೈಸೂರು ವಿ.ವಿ ಸ್ಪೋರ್ಟ್ಸ್‌ ಪೆವಿಲಿಯನ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೈಸೂರು ವಿ.ವಿ ತಂಡ ಇನಿಂಗ್ಸ್‌ ಹಾಗೂ ಆರು ಪಾಯಿಂಟ್‌ಗಳಿಂದ ಮಂಗಳೂರು ವಿ.ವಿ ತಂಡವನ್ನು ಮಣಿಸಿತು. ಮೊದಲ ಇನಿಂಗ್ಸ್‌ನಲ್ಲಿ ಎದುರಾಳಿಗಳನ್ನು 4 ನಿಮಿಷ 30 ಸೆಕೆಂಡುಗಳ ಕಾಲ ಆಟವಾಡಿಸಿದ ವೀಣಾ ಅವರು ಎರಡನೇ ಇನಿಂಗ್ಸ್‌ನಲ್ಲಿ 5 ನಿಮಿಷ 50 ಸೆಕೆಂಡುಗಳ ಕಾಲ ಔಟಾಗದೆ ಉಳಿದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಲೀಗ್‌ನ ಮತ್ತೊಂದು ಪಂದ್ಯದಲ್ಲಿ ಕೇರಳದ ಕ್ಯಾಲಿಕಟ್‌ ವಿ.ವಿ ತಂಡ ತನ್ನದೇ ರಾಜ್ಯದ ಕೇರಳ ವಿ.ವಿ ವಿರುದ್ಧ 11–8 ಪಾಯಿಂಟ್‌ಗಳಿಂದ ಜಯ ಸಾಧಿಸಿತು. ಆರ್‌.ರವೀನಾ ಮತ್ತು ವರ್ಷಾ ಅವರು ವಿಜಯಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು.

ಈ ನಾಲ್ಕೂ ತಂಡಗಳು ಇದಕ್ಕೂ ಮುನ್ನ ನಡೆದಿದ್ದ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಲೀಗ್‌ಗೆ ಅರ್ಹತೆ ಪಡೆದುಕೊಂಡಿದ್ದವು. ಡಿಸೆಂಬರ್‌ ತಿಂಗಳಲ್ಲಿ ಗುಜರಾತ್‌ನಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಟೂರ್ನಿಯಲ್ಲಿ ಆಡುವ ಅರ್ಹತೆಯನ್ನೂ ಈ ತಂಡಗಳು ಗಿಟ್ಟಿಸಿಕೊಂಡವು.

ಲೀಗ್‌ನ ಅಂತಿಮ ಪಂದ್ಯಗಳು ಶನಿವಾರ ನಡೆಯಲಿವೆ. ಪ್ರತಿ ತಂಡಗಳು ಮೂರು ಪಂದ್ಯಗಳನ್ನು ಆಡಬೇಕಿದ್ದು, ಹೆಚ್ಚು ಗೆಲುವು ದಾಖಲಿಸುವ ತಂಡ ಟ್ರೋಫಿ ತನ್ನದಾಗಿಸಿಕೊಳ್ಳಲಿದೆ. ಮೈಸೂರು ವಿ.ವಿ ತಂಡ ಕೊನೆಯ ಎರಡು ಲೀಗ್‌ ಪಂದ್ಯಗಳಲ್ಲಿ ಕ್ಯಾಲಿಕಟ್‌ ಮತ್ತು ಕೇರಳ ವಿ.ವಿ ತಂಡಗಳನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್‌ ಕ್ಯಾಲಿಕಟ್‌ ವಿ.ವಿ ತಂಡ ಆತಿಥೇಯರಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆಯಿದೆ. ಮೈಸೂರು ವಿ.ವಿ ಕಳೆದ ಸಲ ಮೂರನೇ ಸ್ಥಾನ ಪಡೆದುಕೊಂಡಿತ್ತು.

ಬೆಂಗಳೂರು ವಿ.ವಿಗೆ ನಿರಾಸೆ: ಬೆಂಗಳೂರು ವಿ.ವಿ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಕ್ಯಾಲಿಕಟ್‌ ವಿ.ವಿ ತಂಡದ ಎದುರು 20–2 ರಲ್ಲಿ (ಇನಿಂಗ್ಸ್‌ ಹಾಗೂ 18 ಪಾಯಿಂಟ್‌) ಸೋತು ಟೂರ್ನಿಯಿಂದ ಹೊರಬಿದ್ದಿತು. ಚುರುಕಿನ ಪ್ರದರ್ಶನ ತೋರಿದ ಕ್ಯಾಲಿಕಟ್‌ ತಂಡದ ಆಟಗಾರ್ತಿಯರಿಗೆ ತಕ್ಕ ಪೈಪೋಟಿ ನೀಡಲು ಬೆಂಗಳೂರು ವಿ.ವಿ ವಿಫಲವಾಯಿತು.

ಮೈಸೂರು ವಿ.ವಿ ತಂಡ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 17–5 ರಲ್ಲಿ ಸೇಲಂನ ಪೆರಿಯಾರ್‌ ವಿ.ವಿ ವಿರುದ್ಧ ಭರ್ಜರಿ ಜಯ ದಾಖಲಿಸಿತು. ಎಂಟರ ಘಟ್ಟದ ಇತರ ಪಂದ್ಯಗಳಲ್ಲಿ ಕೇರಳ ವಿ.ವಿ 13–3 ರಲ್ಲಿ ಮದುರೈ ಕಾಮರಾಜ್‌ ವಿ.ವಿ ವಿರುದ್ಧವೂ, ಮಂಗಳೂರು ವಿ.ವಿ 10–8 ರಲ್ಲಿ ಚೆನ್ನೈನ ಅಣ್ಣಾ ವಿ.ವಿ ಮೇಲೂ ಗೆಲುವು ಪಡೆದವು. ಅಣ್ಣಾ ವಿ.ವಿ ತಂಡ ಕಳೆದ ಸಲ ‘ರನ್ನರ್‌ ಅಪ್‌’ ಸ್ಥಾನ ಪಡೆದುಕೊಂಡಿತ್ತು.

ಬೆಳಿಗ್ಗೆ ನಡೆದ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಬೆಂಗಳೂರು ವಿ.ವಿ 7–6 ರಲ್ಲಿ ಕಲಬುರ್ಗಿ ವಿ.ವಿ ವಿರುದ್ಧವೂ, ಮದುರೈ ಕಾಮರಾಜ್‌ ವಿ.ವಿ 9–8 ರಲ್ಲಿ ಚೆನ್ನೈನ ಮದ್ರಾಸ್‌ ವಿ.ವಿ ಮೇಲೂ, ಪೆರಿಯಾರ್‌ ವಿ.ವಿ 9–6 ರಲ್ಲಿ ಕಣ್ಣೂರು ವಿ.ವಿ ವಿರುದ್ಧವೂ, ಮಂಗಳೂರು ವಿ.ವಿ 9–1 ರಲ್ಲಿ ಬೆಳಗಾವಿಯ ವಿ.ಟಿ.ಯು ಎದುರೂ ಗೆಲುವು ಪಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT