ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ ಯೋಜನೆಗೆ ಷರತ್ತುಬದ್ಧ ಒಪ್ಪಿಗೆ

ಹಸಿರು ಪೀಠದಿಂದ ಷರತ್ತುಗಳ ವಿವರ ಸೋಮವಾರ ಬಹಿರಂಗ ಸಾಧ್ಯತೆ
Last Updated 6 ಅಕ್ಟೋಬರ್ 2017, 19:52 IST
ಅಕ್ಷರ ಗಾತ್ರ

ನವದೆಹಲಿ: ಬರಪೀಡಿತ ಜಿಲ್ಲೆಗಳ ಜನರಿಗೆ ನೇತ್ರಾವತಿ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡಲು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಮಹತ್ವದ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು ಶುಕ್ರವಾರ ಷರತ್ತುಬದ್ಧ ಒಪ್ಪಿಗೆ ಸೂಚಿಸಿದೆ.

ಪರಿಸರವಾದಿ ಕೆ.ಎನ್‌. ಸೋಮಶೇಖರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕಳೆದ ಸೆಪ್ಟೆಂಬರ್‌ 21ರಂದು ಪೂರ್ಣಗೊಳಿಸಿ ತೀರ್ಪು ಕಾದಿರಿಸಿದ್ದ ನ್ಯಾಯಮೂರ್ತಿ ಡಾ.ಜವಾದ್‌ ರಹೀಂ ನೇತೃತ್ವದ ಪೀಠವು, ಯೋಜನೆಗಾಗಿ ವಿಧಿಸಿರುವ ಷರತ್ತು ಮತ್ತು ನಿರ್ದೇಶನಗಳ ಕುರಿತು ಮುಂದಿನ ಸೋಮವಾರ ವಿವರಣೆ ನೀಡುವ ಸಾಧ್ಯತೆ ಇದೆ.

ಕಾನೂನಿನ ಅನ್ವಯ ವಿಧಿಸಲಾಗುವ ಷರತ್ತುಗಳು ಮತ್ತು ನಿರ್ದೇಶನಗಳನ್ನು ಪಾಲಿಸುವಂತೆ ಸೂಚಿಸಿ, ಮೊದಲ ಹಂತದ ಯೋಜನೆಗೆ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ್ದಾಗಿ ಪೀಠವು ತೀರ್ಪಿನಲ್ಲಿ ತಿಳಿಸಿದೆ.

‘ಯೋಜನೆಗಾಗಿ ಪಶ್ಚಿಮಘಟ್ಟದ ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸಲು ಪರಿಸರ ಮತ್ತು ಅರಣ್ಯ ಅನುಮತಿ ಪಡೆಯದೆಯೇ ನಿಯಮ ಉಲ್ಲಂಘಿಸಲಾಗಿದೆ. ಯೋಜನೆಯಿಂದ ಪಶ್ಚಿಮ ಘಟ್ಟದ ಪರಿಸರ ಮತ್ತು ಜೀವವೈವಿಧ್ಯಕ್ಕೆ ಧಕ್ಕೆ ಆಗುತ್ತದೆ ಮತ್ತು ರಾಜ್ಯ ಸರ್ಕಾರ ತಿಳಿಸಿರುವಷ್ಟು ಪ್ರಮಾಣದ ನೀರು ನದಿಯಲ್ಲಿ ಲಭ್ಯವಿಲ್ಲ’ ಎಂಬುದು ಅರ್ಜಿದಾರರ ವಾದವಾಗಿತ್ತು.

ಈ ವಾದವನ್ನು ಅಲ್ಲಗಳೆದಿದ್ದ ರಾಜ್ಯ ಸರ್ಕಾರ, ಕುಡಿಯುವ ನೀರಿನ ಯೋಜನೆಗೆ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ ಪಡೆಯುವ ಅಗತ್ಯವಿಲ್ಲ ಎಂಬುದನ್ನು ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಅಗತ್ಯ ನೀರಿನ ಲಭ್ಯತೆಯ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿದ ನಂತರವೇ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿತ್ತು.

ಸದಾ ಬರಗಾಲದಿಂದ ತತ್ತರಿಸಿರುವ ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆಯನ್ನು ಅರಿಯುವ ಮೂಲಕವೇ ಅರಣ್ಯ ಪ್ರದೇಶದಲ್ಲಿ ಹರಿಯುವ ನದಿ, ಹಳ್ಳ, ತೊರೆಗಳಿಂದ ನೀರು ಪಡೆಯುವುದಕ್ಕೆ ನಿಯಮ ರೂಪಿಸಿ ಅನುಕೂಲ ಕಲ್ಪಿಸಲಾಗಿದೆ. ಕುಡಿಯುವ ನೀರು ಪೂರೈಕೆಯ ಯೋಜನೆಗಳನ್ನು ಉದ್ದೇಶಪೂರ್ವವಾಗಿಯೇ ಅರಣ್ಯ ನೀತಿಯಿಂದ ಹೊರಗಿರಿಸಲಾಗಿದೆ ಎಂದು ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲ ಅಶೋಕ್‌ ದೇವರಾಜ್‌ ನ್ಯಾಯಪೀಠಕ್ಕೆ ಮನವರಿಕೆ ಮಾಡಿದ್ದರು.

ಅಲ್ಲದೆ, ಭಾರಿ ಪ್ರಮಾಣದ ಫ್ಲೋರೈಡ್‌ ಅಂಶವಿರುವ ಅಂತರ್ಜಲದಿಂದಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಅನುಕೂಲ ಕಲ್ಪಿಸಲೆಂದೇ ನೇತ್ರಾವತಿ ನದಿಯಲ್ಲಿ ಲಭ್ಯವಿರುವ 24 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ವಾರ್ಷಿಕವಾಗಿ ಬಳಕೆ ಮಾಡಲು ಈ ಯೋಜನೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದರು.

ಪಶ್ಚಿಮ ಘಟ್ಟದಲ್ಲಿ ಸುರಿಯುವ ಮಳೆ ಮತ್ತು ಲಭ್ಯವಿರುವ ವಾರ್ಷಿಕ ನೀರಿನ ಪ್ರಮಾಣದ ಬಗ್ಗೆ ವರದಿ ನೀಡಿರುವ ಕೇಂದ್ರ ಜಲ ಆಯೋಗ, ಯೋಜನೆ ಕೈಗೆತ್ತಿಕೊಂಡ ಪ್ರದೇಶದಲ್ಲಿ 24 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ದೊರೆಯುವ ಸಾಧ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದೆ ಎಂದು ಅರ್ಜಿದಾರರ ಪರ ವಕೀಲ ಋತ್ವಿಕ್‌ ದತ್ತಾ ವಾದ ಮಂಡಿಸಿದ್ದರು.

ಕರ್ನಾಟಕ ಸರ್ಕಾರವು ಸಾಕಷ್ಟು ಮರಗಳನ್ನು ಕಡಿದು ಕಾಮಗಾರಿ ಆರಂಭಿಸಿದೆ. ಯೋಜನೆಗಾಗಿ ಎಷ್ಟು ಪ್ರಮಾಣದ ಅರಣ್ಯ ಭೂಮಿ ಮುಳುಗಡೆಯಾಗಲಿದೆ ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ಮುಖ್ಯವಾಗಿ ನೀರೇ ಲಭ್ಯವಿಲ್ಲದಿರುವುದರಿಂದ ಭಾರಿ ವೆಚ್ಚದ ಈ ಯೋಜನೆಯ ಉದ್ದೇಶ ಈಡೇರದು ಎಂದು ಅವರು ಹೇಳಿದ್ದರು.

ಸುದೀರ್ಘ ವಾದವನ್ನು ಆಲಿಸಿದ್ದ ಪೀಠವು, ಯೋಜನೆಯ ಮೊದಲ ಹಂತಕ್ಕೆ ಷರತ್ತುಬದ್ಧ ಒಪ್ಪಿಗೆ ನೀಡಿ ತೀರ್ಪು ಪ್ರಕಟಿಸಿದೆ.

ಮೇಲ್ಮನವಿಗೆ ಚಿಂತನೆ:

ಎನ್‌ಜಿಟಿ ತೀರ್ಪು ಪ್ರಕಟವಾದ ಬಳಿಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅರ್ಜಿದಾರ ಸೋಮಶೇಖರ್, ಯೋಜನೆಗೆ ವಿಧಿಸಿರುವ ಷರತ್ತುಗಳು ಎಂಥವು ಎಂಬುದನ್ನು ಅರಿತ ನಂತರ ವಕೀಲರೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದರು.

‘ಅವೈಜ್ಞಾನಿಕ ಮತ್ತು ನಿಯಮಬಾಹಿರವಾದ ಈ ಯೋಜನೆಯನ್ನು ರದ್ದು ಮಾಡಬೇಕು ಎಂಬ ಮನವಿಯನ್ನು ಪೀಠ ಪುರಸ್ಕರಿಸಿಲ್ಲ. ಆದರೆ, ಷರತ್ತುಬದ್ಧ ಒಪ್ಪಿಗೆ ನೀಡಿರುವುದರಿಂದ ಪರಿಸರ ಸಂಬಂಧೀ ಸಮಸ್ಯೆಗಳ ಕುರಿತು ಗಮನ ಸೆಳೆದಿರುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದೆ ಎಂಬುದು ನಮ್ಮ ನಂಬಿಕೆ’ ಎಂದು ಅವರು ಹೇಳಿದರು.

ತಾನು ವಿಧಿಸಲಿರಿರುವ ಷರತ್ತುಗಳು ಮತ್ತು ನಿರ್ದೇಶನಗಳ ಪಾಲನೆ ಕುರಿತು ನಿಗಾವಹಿಸಲು ಪೀಠವು ಪ್ರತ್ಯೇಕ ಸಮಿತಿಯೊಂದನ್ನು ನೇಮಕ ಮಾಡುವ ಸಾಧ್ಯತೆಯೂ ಇದೆ. ಷರತ್ತುಗಳ ಸ್ವರೂಪ ಎಂಥದ್ದು ಎಂಬುದು ತಿಳಿದ ನಂತರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಕುರಿತು ನಿರ್ಧರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಇನ್ನೂ ಎರಡು ಅರ್ಜಿ:

ಚೆನ್ನೈನಲ್ಲಿರುವ ಎನ್‌ಜಿಟಿಯ ದಕ್ಷಿಣದ ಪೀಠದೆದುರು ಮೊದಲು ಅರ್ಜಿ ಸಲ್ಲಿಸಿದ್ದ ಸೋಮಶೇಖರ್‌, ಪ್ರಕರಣದ ವಿಚಾರಣೆಯನ್ನು ದೆಹಲಿಯ ಕೇಂದ್ರ ಪೀಠಕ್ಕೆ ಹಸ್ತಾಂತರಿಸುವಂತೆ ಕೋರಿದ್ದರಿಂದ, ಇಲ್ಲಿನ ಪೀಠದಲ್ಲಿ ವಿಚಾರಣೆ ನಡೆದಿತ್ತು.

ಯೋಜನೆಗೆ ಅನುಮತಿಯನ್ನೇ ಪಡೆದಿಲ್ಲ ಹಾಗೂ ಯೋಜನೆಯಿಂದಾಗಿ ನದಿಯ ಕೆಳಹಂತದ ಬಳಕೆದಾರರಿಗೆ ತೀವ್ರ ತೊಂದರೆಯಾಗಲಿದೆ ಎಂದು ದೂರಿ ಪುರುಷೋತ್ತಮ ಚಿತ್ರಾಪುರ ಹಾಗೂ ಕಿಶೋರ್‌ಕುಮಾರ್‌ ಎಂಬುವವರೂ ಎನ್‌ಜಿಟಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಸ್ವತಂತ್ರಕುಮಾರ್‌ ಹಾಗೂ ಡಾ.ಜವಾದ್‌ ರಹೀಂ ಅವರ ನೇತೃತ್ವದ ಪೀಠಗಳು ವಿಚಾರಣೆ ನಡೆಸುತ್ತಿವೆ.

ಫೆಬ್ರುವರಿಗೆ ಮೊದಲ ಹಂತ ಪೂರ್ಣ

ಬೆಂಗಳೂರು: ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶದಿಂದ ಎತ್ತಿನಹೊಳೆ ಯೋಜನೆಗೆ ಇದ್ದ ದೊಡ್ಡ ಆತಂಕ ನಿವಾರಣೆಯಾಗಿದೆ. ಹೀಗಾಗಿ ಯೋಜನೆಯ ಮೊದಲ ಹಂತವನ್ನು 2018ರ ಫೆಬ್ರುವರಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT