ಶನಿವಾರ, ಸೆಪ್ಟೆಂಬರ್ 21, 2019
24 °C
ವಿಶ್ವಾಸದಲ್ಲಿ ಕೊಹ್ಲಿ ಬಳಗ

ವಿರಾಟ್‌ ಪಡೆಗೆ ಚುಟುಕು ಸರಣಿ ಜಯದ ಕನಸು: ಶುಭಾರಂಭದ ನಿರೀಕ್ಷೆಯಲ್ಲಿ ಸ್ಟೀವನ್‌ ಸ್ಮಿತ್‌ ಪಡೆ

Published:
Updated:
ವಿರಾಟ್‌ ಪಡೆಗೆ ಚುಟುಕು ಸರಣಿ ಜಯದ ಕನಸು: ಶುಭಾರಂಭದ ನಿರೀಕ್ಷೆಯಲ್ಲಿ ಸ್ಟೀವನ್‌ ಸ್ಮಿತ್‌ ಪಡೆ

ರಾಂಚಿ: ಏಕದಿನ ಸರಣಿ ಗೆದ್ದು ಬೀಗು ತ್ತಿರುವ ಭಾರತ ತಂಡದವರು ಈಗ ಟಿ–20 ಸರಣಿಯಲ್ಲೂ ಆಸ್ಟ್ರೇಲಿಯಾ ತಂಡದ ಎದುರು ಆಧಿಪತ್ಯ ಸಾಧಿಸಲು ಸನ್ನದ್ಧರಾಗಿದ್ದಾರೆ.

ಶನಿವಾರ ಉಭಯ ತಂಡಗಳ ನಡುವಣ ಮೊದಲ ಪಂದ್ಯ ನಡೆಯಲಿದ್ದು, ಈ ಹೋರಾಟಕ್ಕೆ ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.

ಏಕದಿನ ಸರಣಿಯಲ್ಲಿ ಆಟದ ಎಲ್ಲಾ ವಿಭಾಗಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿ ತವರಿನ ಅಭಿಮಾನಿಗಳ ಮನ ಗೆದ್ದಿರುವ ವಿರಾಟ್‌ ಕೊಹ್ಲಿ ಬಳಗ, ಚುಟುಕು ಮಾದರಿಯಲ್ಲೂ ರನ್‌ ಮಳೆ ಸುರಿಸಿ ಪ್ರೇಕ್ಷಕರನ್ನು ಸಂಭ್ರಮದ ಹೊಳೆಯಲ್ಲಿ ಮಿಂದೇಳುವಂತೆ ಮಾಡಲು ಕಾತರಿಸುತ್ತಿದೆ.

ಟಿ–20 ಮಾದರಿಯಲ್ಲಿ ಉಭಯ ತಂಡಗಳು 12 ಬಾರಿ ಮುಖಾಮುಖಿಯಾಗಿದ್ದು ಕೊಹ್ಲಿ ಪಡೆ 8–4ರ ಗೆಲುವಿನ ದಾಖಲೆ ಹೊಂದಿದೆ. ಹೋದ ವರ್ಷದ ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆ ದಿದ್ದ 3 ಪಂದ್ಯಗಳ ಸರಣಿಯಲ್ಲಿ ಭಾರತ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿತ್ತು.

ಎರಡೂ ತಂಡಗಳು ಇದು ವರೆಗೂ ಐದು ಸರಣಿಗಳಲ್ಲಿ ಮುಖಾಮುಖಿ ಯಾಗಿವೆ. ಈ ಪೈಕಿ ಭಾರತ ನಾಲ್ಕರಲ್ಲಿ ಗೆದ್ದಿದ್ದರೆ, ಆಸ್ಟ್ರೇಲಿಯಾ ಒಮ್ಮೆ ಟ್ರೋಫಿ ಎತ್ತಿಹಿಡಿದಿದೆ.

ವೈಯಕ್ತಿಕ ಕಾರಣಗಳಿಂದಾಗಿ ಏಕದಿನ ಸರಣಿಯಿಂದ ಹಿಂದೆ ಸರಿದಿದ್ದ ಶಿಖರ್‌ ಧವನ್‌ ತಂಡಕ್ಕೆ ಮರಳಿದ್ದು, ಉಪನಾಯಕ ರೋಹಿತ್‌ ಶರ್ಮಾ ಜೊತೆ ಇನಿಂಗ್ಸ್‌ ಆರಂಭಿಸಲಿದ್ದಾರೆ.

ಸ್ಫೋಟಕ ಆಟಕ್ಕೆ ಹೆಸರಾಗಿರುವ ಎಡಗೈ ಬ್ಯಾಟ್ಸ್‌ಮನ್‌ ಧವನ್‌ ಮತ್ತು ರೋಹಿತ್‌, ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಏಕದಿನ ಸರಣಿಯಲ್ಲಿ (296ರನ್‌) ಗುಡುಗಿದ್ದ ಶರ್ಮಾ, ಟಿ–20ಯಲ್ಲೂ ಕಾಂಗರೂಗಳ ನಾಡಿನ ಬೌಲರ್‌ಗಳ ಎದುರು ಲೀಲಾಜಾಲವಾಗಿ ರನ್‌ ಹೆಕ್ಕಬಲ್ಲರು.

ಎರಡನೇ ಕ್ರಮಾಂಕದಲ್ಲಿ ಕಣಕ್ಕಿಳಿ ಯುವ ಕೊಹ್ಲಿ ಕೂಡ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಲು ಉತ್ಸುಕರಾಗಿದ್ದಾರೆ. ಟಿ–20 ಬ್ಯಾಟ್ಸ್‌ಮನ್‌ಗಳ ವಿಶ್ವಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅವರು ಸ್ಮಿತ್‌ ಪಡೆಯ ಬೌಲರ್‌ಗಳ ಮೇಲೆ ಸವಾರಿ ಮಾಡಲು ಕಾಯುತ್ತಿದ್ದಾರೆ.

ಮಹಿ ಮೋಡಿಗೆ ಅಭಿಮಾನಿಗಳ ಕಾತರ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಮಹೇಂದ್ರ ಸಿಂಗ್‌ ದೋನಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಆಡಿ ಬೆಳೆದ ಅಂಗಳದಲ್ಲಿ ಮೋಡಿ ಮಾಡಲು ಮಹಿ ತುದಿಗಾಲಿನಲ್ಲಿ ನಿಂತಿದ್ದಾರೆ.

ರ್ನಾಟಕದ ಮನೀಷ್‌ ಪಾಂಡೆ, ಕೆ.ಎಲ್‌.ರಾಹುಲ್‌, ಕೇದಾರ್‌ ಜಾಧವ್‌ ಮತ್ತು ದಿನೇಶ್‌ ಕಾರ್ತಿಕ್‌ ಅವರು ಮಧ್ಯಮ ಕ್ರಮಾಂಕದಲ್ಲಿ ತಂಡದ ಬ್ಯಾಟಿಂಗ್‌ ಬೆನ್ನೆಲುಬಾಗಿದ್ದಾರೆ. ಬರೋಡಾದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಬಲವೂ ತಂಡಕ್ಕಿದೆ.

ಏಕದಿನ ಸರಣಿಯಲ್ಲಿ ಹಾರ್ದಿಕ್‌ ಐದು ಪಂದ್ಯಗಳಿಂದ 55.50ರ ಸರಾಸರಿಯಲ್ಲಿ 222ರನ್‌ ಮತ್ತು ಆರು ವಿಕೆಟ್‌ ಉರುಳಿಸಿ ‘ಸರಣಿ ಶ್ರೇಷ್ಠ’ ಗೌರವಕ್ಕೆ ಭಾಜನರಾಗಿದ್ದರು.

ಚೆನ್ನೈನಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಅವರು 66 ಎಸೆತಗಳಲ್ಲಿ 83ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಬೌಲಿಂಗ್‌ನಲ್ಲೂ ಭಾರತ ತಂಡ ಬಲಿಷ್ಠವಾಗಿದೆ. 38 ವರ್ಷದ ಆಶಿಶ್‌ ನೆಹ್ರಾ ತಂಡಕ್ಕೆ ಮರಳಿರುವುದರಿಂದ ವೇಗದ ವಿಭಾಗಕ್ಕೆ ಇನ್ನಷ್ಟು ಬಲ ಬಂದಿದೆ.

ಎಡಗೈ ವೇಗಿ ನೆಹ್ರಾ ‘ಸ್ವಿಂಗ್‌’ ಎಸೆತಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬುಗೊಳಿಸಬಲ್ಲರು. ‘ಡೆತ್‌ ಓವರ್‌’ ಪರಿಣತ ಎಂದೇ ಗುರುತಿಸಿ ಕೊಂಡಿರುವ ಅವರು 26 ಟಿ–20 ಪಂದ್ಯಗಳನ್ನು ಆಡಿದ್ದು 34 ವಿಕೆಟ್‌ ಉರುಳಿಸಿದ್ದಾರೆ.

ಭುವನೇಶ್ವರ್‌ ಕುಮಾರ್‌ ಮತ್ತು ಜಸ್‌ಪ್ರೀತ್‌ ಬೂಮ್ರಾ ಅವರು ಸ್ಮಿತ್‌ ಪಡೆಯ ಆಟಗಾ ರರಿಗೆ ಸಿಂಹಸ್ವಪ್ನವಾಗಬಲ್ಲರು. ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಅವರು ಆತಿಥೇಯರ ಸ್ಪಿನ್‌ ಅಸ್ತ್ರಗಳಾಗಿದ್ದಾರೆ.

ತಿರುಗೇಟು ನೀಡುವ ಛಲ: ಏಕದಿನ ಸರಣಿ ಸೋತು ಗಾಯಗೊಂಡ ಹುಲಿಯಂತಾಗಿರುವ ಆಸ್ಟ್ರೇಲಿಯಾ ತಂಡ ಟಿ–20 ಸರಣಿಯಲ್ಲಿ ಪ್ರಶಸ್ತಿ ಜಯಿಸಿ ಹಿಂದಿನ ನಿರಾಸೆ ಮರೆಯುವ ಗುರಿ ಹೊಂದಿದೆ. ರಾಂಚಿಯಲ್ಲಿ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಶನಿವಾರವೂ ವರುಣನ ಆಟ ನಡೆಯುವ ಸಾಧ್ಯತೆ ಇದೆ.

**

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ (ಉಪ ನಾಯಕ), ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ, ಕೇದಾರ್‌ ಜಾಧವ್‌, ದಿನೇಶ್‌ ಕಾರ್ತಿಕ್‌, ಮಹೇಂದ್ರ ಸಿಂಗ್‌ ದೋನಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ಕುಲದೀಪ್‌ ಯಾದವ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬೂಮ್ರಾ, ಭುವನೇಶ್ವರ್‌ ಕುಮಾರ್‌, ಆಶಿಶ್‌ ನೆಹ್ರಾ ಮತ್ತು ಅಕ್ಷರ್‌ ಪಟೇಲ್‌.

ಆಸ್ಟ್ರೇಲಿಯಾ: ಸ್ಟೀವ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌ (ಉಪ ನಾಯಕ), ಜೇಸನ್‌ ಬೆಹರೆನ್‌ಡೊರ್ಫ್‌, ಡೇನ್‌ ಕ್ರಿಸ್ಟಿಯನ್‌, ನೇಥನ್‌ ಕೌಲ್ಟರ್‌ ನೈಲ್‌, ಪ್ಯಾಟ್ರಿಕ್‌ ಕಮಿನ್ಸ್‌, ಆ್ಯರನ್‌ ಫಿಂಚ್‌, ಟ್ರಾವಿಸ್‌ ಹೆಡ್‌, ಟ್ರಾವಿಸ್‌ ಹೆಡ್‌, ಮೊಯಿಸಸ್‌ ಹೆನ್ರಿಕ್ಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಟಿಮ್‌ ಪೇನ್‌, ಕೇನ್‌ ರಿಚರ್ಡ್‌ಸನ್‌ ಮತ್ತು ಆ್ಯಡಮ್‌ ಜಂಪಾ.

ಆರಂಭ: ರಾತ್ರಿ 7.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌.

**

ಟಿ–20ಯಲ್ಲಿ 8–4ರ ಗೆಲುವಿನ ದಾಖಲೆ ಹೊಂದಿರುವ ಭಾರತ

ಕರ್ನಾಟಕದ ಮನೀಷ್‌ ಪಾಂಡೆ ಮತ್ತು ಕೆ.ಎಲ್‌.ರಾಹುಲ್‌ ತಂಡದಲ್ಲಿದ್ದಾರೆ

ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ

Post Comments (+)