ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರೋಲ್ ಮೇಲೆ ತೆರಳಿದ ಶಶಿಕಲಾ

* ಚೆನ್ನೈ ತೆರಳಿದ ಚಿನ್ನಮ್ಮ * ಜೈಲಿನ ಬಳಿ ಅಭಿಮಾನಿಗಳ ದಂಡು
Last Updated 6 ಅಕ್ಟೋಬರ್ 2017, 20:11 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಸಜಾಬಂದಿಯಾಗಿರುವ ಎಐಎಡಿಎಂಕೆ ನಾಯಕಿ ಶಶಿಕಲಾ ವಿ.ನಟರಾಜನ್ ಅವರು 'ತುರ್ತು ಪೆರೋಲ್' ಪಡೆಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದು, ಅನಾರೋಗ್ಯಪೀಡಿತ ಪತಿಯನ್ನು ನೋಡಲು ಶುಕ್ರವಾರ ಚೆನ್ನೈಗೆ ತೆರಳಿದರು.

‘ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೆಂಡತಿಯಾಗಿ ಈ ಸಂದರ್ಭದಲ್ಲಿ ಅವರ ಜತೆಗಿರುವುದು ನನ್ನ ಕರ್ತವ್ಯ. ಹೀಗಾಗಿ, 15 ದಿನ ಪೆರೋಲ್ ರಜೆ ನೀಡಬೇಕು’ ಎಂದು ಕೋರಿ ಶಶಿಕಲಾ ಎರಡು ಬಾರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.

ಭದ್ರತೆ ದೃಷ್ಟಿಯಿಂದಾಗಿ ರಜೆ ಮಿತಿಯನ್ನು ಐದು ದಿನಗಳಿಗೆ ಇಳಿಸಿದ ಅಧಿಕಾರಿಗಳು, ಅ.7 ರಿಂದ ಅ.11ರವರೆಗೆ ಷರತ್ತುಬದ್ಧ ಪೆರೋಲ್ ಮಂಜೂರು ಮಾಡಿದರು. ಈ ಮೂಲಕ ಒಂಬತ್ತು ತಿಂಗಳ ಸೆರೆವಾಸದಿಂದ ಅವರಿಗೆ ತಾತ್ಕಾಲಿಕ ಮುಕ್ತಿ ಸಿಕ್ಕಿತು.

2 ದಿನ ವಿನಾಯ್ತಿ: ‘ಪ್ರಯಾಣ ಮಾಡುವ ದಿನಗಳನ್ನು ಪೆರೋಲ್ ವ್ಯಾಪ್ತಿಯಿಂದ ಹೊರಗಿಡಲಾಗುತ್ತದೆ. ಅಂದರೆ, ಅ.7ರಿಂದ ರಜೆ ಮಂಜೂರಾಗಿದ್ದರೂ, ಹಿಂದಿನ ದಿನವೇ ಶಶಿಕಲಾ ತೆರಳಲು ಅವಕಾಶವಿದೆ. ಆ ದಿನವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗೆಯೇ ಅ.11ರವರೆಗೆ ರಜೆ ನೀಡಲಾಗಿದ್ದರೂ, ಕಾರಾಗೃಹಕ್ಕೆ ಮರಳಲು ಮರುದಿನ ಮಧ್ಯಾಹ್ನ 12 ಗಂಟೆವರೆಗೆ ಅವರಿಗೆ ಕಾಲಾವಕಾಶವಿರುತ್ತದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಭಿಮಾನಿಗಳ ದಂಡು: ಶಶಿಕಲಾ ಅವರಿಗೆ ಪೆರೋಲ್ ಮಂಜೂರಾದ ಸುದ್ದಿ ತಿಳಿದು ‍ಪಕ್ಷದ ಕಾರ್ಯಕರ್ತರು ಹಾಗೂ ಶಶಿಕಲಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರಾಗೃಹದ ಬಳಿ ಜಮಾಯಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಎರಡು ಕೆಎಸ್‌ಆರ್‌ಪಿ ತುಕಡಿ ಹಾಗೂ 50 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಪೆರೋಲ್ ಪ್ರಕ್ರಿಯೆ ಪೂರ್ಣಗೊಳಿಸಿ ಮಧ್ಯಾಹ್ನ 2.45ರ ಸುಮಾರಿಗೆ ಸೆರೆಮನೆಯಿಂದ ಹೊರಬಂದ ಶಶಿಕಲಾ ಅವರನ್ನು ಎಐಎಡಿಎಂಕೆ ಪಕ್ಷದ ಬಂಡಾಯ ನಾಯಕ ಟಿಟಿವಿ ದಿನಕರನ್‌ ಬರಮಾಡಿಕೊಂಡರು. ಎಲ್ಲರಿಗೂ ಕೈ ಮುಗಿದು ವಂದಿಸಿದ ಶಶಿಕಲಾ, ನಂತರ ಕಾರಿನೊಳಗೆ ಕುಳಿತುಕೊಂಡರು. ಈ ವೇಳೆ ಅಭಿಮಾನಿಗಳು ಅವರ ಪರ ಘೋಷಣೆಗಳನ್ನು ಕೂಗಿದರು.

ಪಕ್ಷದ ಕಾರ್ಯಕರ್ತರು ಶಶಿಕಲಾ ಅವರನ್ನು ಚೆನ್ನೈಗೆ ಕರೆದೊಯ್ಯಲು ಸಂಜೆ 4.30ರ ವಿಮಾನಕ್ಕೆ ಟಿಕೆಟ್ ಕಾಯ್ದಿರಿಸಲು ನಿರ್ಧರಿಸಿದ್ದರು. ಆದರೆ, ಶಶಿಕಲಾ ಸಜಾಬಂದಿಯಾಗಿದ್ದ ಕಾರಣ ಅವರ ಹೆಸರಿನಲ್ಲಿ ಟಿಕೆಟ್ ಕಾಯ್ದಿರಿಸಲು ನಾಗರಿಕ ವಿಮಾನಯಾನ ಸಚಿವಾಲಯದ ಅನುಮತಿ ಕಡ್ಡಾಯವೆಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದರು. ಹೀಗಾಗಿ, ಕೊನೆ ಕ್ಷಣದಲ್ಲಿ ಆ ಯೋಜನೆ ಕೈಬಿಟ್ಟು ಎಸ್‌ಯುವಿಯಲ್ಲೇ ತವರಿಗೆ ಕರೆದುಕೊಂಡು ಹೋದರು.

ಶಶಿಕಲಾ ಅವರಿದ್ದ ಎಸ್‌ಯುವಿಯ ಹಿಂದೆ ಹಾಗೂ ಮುಂದೆ 18 ಎಸ್‌ಯುವಿಗಳಿದ್ದವು. ಪೊಲೀಸ್ ಬೆಂಗಾವಲಿನ ಜತೆಗೆ ಖಾಸಗಿ ಭದ್ರತೆ ಸಹ ಜೋರಾಗಿತ್ತು. ಕೃಷ್ಣಗಿರಿ, ವೆಲ್ಲೂರು, ಆರ್ಕಾಟ್ ಸೇರಿದಂತೆ ಮಾರ್ಗದುದ್ದಕ್ಕೂ ಶಶಿಕಲಾ ಅಭಿಮಾನಿಗಳು ರಸ್ತೆ ಬದಿ ನಿಂತು ಎಂದಿನ ಶೈಲಿಯಲ್ಲೇ ಕೈಮುಗಿದು ವಂದಿಸಿದರು. ರಾತ್ರಿ 7.30ರ ಸುಮಾರಿಗೆ ಚಿನ್ನಮ್ಮ ಚೆನ್ನೈ ತಲುಪಿದರು.

ಚಿನ್ನಮ್ಮ ಮೇಲೆ ತೀವ್ರ ನಿಗಾ: ಸೆರೆಮನೆಯಿಂದ ಹೊರಬಂದಿರುವ ಶಶಿಕಲಾ ಚಲನವಲನಗಳ ಮೇಲೆ ರಾಜ್ಯ ಪೊಲೀಸರು ಮಾತ್ರವಲ್ಲದೆ, ತಮಿಳುನಾಡು ಹಾಗೂ ಕೇಂದ್ರದ ಗುಪ್ತದಳ ಅಧಿಕಾರಿಗಳು ಸಹ ನಿಗಾ ವಹಿಸಲಿದ್ದಾರೆ.

ಶಶಿಕಲಾ ಜೈಲು ಸೇರಿದ ಬಳಿಕ ತಮಿಳುನಾಡು ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗಿವೆ. ತಾವೇ ಮುಖ್ಯಮಂತ್ರಿ ಗಾದಿಗೆ ಹೆಸರು ಸೂಚಿಸಿದ್ದ ನಿಷ್ಠ ಬೆಂಬಲಿಗ ಪಳನಿಸ್ವಾಮಿ ಬಂಡಾಯ ಸಾರಿದ್ದಾರೆ. ಅಲ್ಲದೆ, ಅವರು ಪನ್ನೀರಸೆಲ್ವಂ ಜತೆ ಸೇರಿ ಶಶಿಕಲಾ ಹಾಗೂ ದಿನಕರನ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ.

ಹೀಗಾಗಿ, ಆಡಳಿತರೂಢ ಎಂಐಎಡಿಎಂಕೆ ಪ‍ಕ್ಷದ ಆಂತರಿಕ ಕಲಹ ಹಾಗೂ ನಟ ಕಮಲ್‌ಹಾಸನ್ ಅವರ ರಾಜಕೀಯ ಪ್ರವೇಶದ ಹೇಳಿಕೆ ಸಂದರ್ಭದಲ್ಲೇ ಶಶಿಕಲಾ ಸೆರೆಮನೆಯಿಂದ ಹೊರಬಂದಿರುವುದು ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ. ಈ ಕಾರಣಗಳಿಂದಾಗಿ ಶಶಿಕಲಾ ಅವರು ಪೆರೋಲ್ ಅವಧಿಯಲ್ಲಿ ರಾಜಕೀಯ ಸಭೆಗಳನ್ನು ನಡೆಸುವ ಸಾಧ್ಯತೆ ಇದೆ. ಹಾಗೆ ಮಾಡಿದರೆ, ಪೆರೋಲ್ ಷರತ್ತು ಉಲ್ಲಂಘಿಸಿದಂತಾಗುತ್ತದೆ. ಹೀಗಾಗಿ, ಅವರ ಚಲನವಲನಗಳ ಮೇಲೆ ಗುಪ್ತದಳದ ಅಧಿಕಾರಿಗಳು ಹದ್ದಿನ ಕಣ್ಣಿಡಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

**

ಶಶಿಕಲಾಗೆ ನಾಲ್ಕು ಷರತ್ತುಗಳು

* ನಿಮ್ಮ ಮನೆ ಹಾಗೂ ಪತಿ ದಾಖಲಾಗಿರುವ ಆಸ್ಪತ್ರೆಯ ವಿಳಾಸಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಪೆರೋಲ್ ಅವಧಿಯಲ್ಲಿ ನೀವು ಆ ವಿಳಾಸದ ಮನೆ ಅಥವಾ ಆಸ್ಪತ್ರೆಯಲ್ಲಿ ಮಾತ್ರ ಇರಬೇಕು. ಬೇರೆ ಎಲ್ಲಿಗೂ ಹೋಗುವಂತಿಲ್ಲ.

* ಈ ಐದು ದಿನ ನೀವು ಯಾವುದೇ ಸಂದರ್ಶಕರನ್ನು ಭೇಟಿ ಮಾಡಕೂಡದು. ಕುಟುಂಬ ಸದಸ್ಯರ ಹೊರತುಪಡಿಸಿ, ಅನ್ಯರ ಜತೆ ಫೋನ್‌ನಲ್ಲೂ ಸಂಪರ್ಕದಲ್ಲಿರಬಾರದು.

* ರಾಜಕೀಯ ಹಾಗೂ ಸಾರ್ವಜನಿಕ ಚಟುವಟಿಕೆಗಳಲ್ಲಿ ತೊಡಗಬಾರದು. ಪಕ್ಷದ ವತಿಯಿಂದ ನಡೆಯುವ ಸಭೆಗಳಿಗೆ ಹೋಗಬಾರದು.

* ಮಾಧ್ಯಮಗಳಿಗೆ ಯಾವುದೇ ಹೇಳಿಕೆಗಳನ್ನು ನೀಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT