ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಳೆಗೆ ಎಲೆ ಚುಕ್ಕೆ, ಗಡ್ಡೆ ಕೊಳೆ ರೋಗ ಬಾಧೆ

Last Updated 7 ಅಕ್ಟೋಬರ್ 2017, 5:14 IST
ಅಕ್ಷರ ಗಾತ್ರ

ಅರಭಾವಿ (ಮೂಡಲಗಿ): ‘ಬಾಳೆ ಬೆಳೆಗೆ ಸಿಗಾಟೋಕ ಎಲೆ ಚುಕ್ಕೆ ಮತ್ತು ಗಡ್ಡೆ ಕೊಳೆ ರೋಗಗಳು ಬಾಧಿಸುತ್ತಿದ್ದು, ರೈತರು ಕೂಡಲೇ ಎಚ್ಚರ ವಹಿಸಬೇಕು’ ಎಂದು ಅರಭಾವಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ವಿಜ್ಞಾನಿ ಡಾ. ಕಾಂತರಾಜು ವಿ. ಮತ್ತು ಡಾ. ಸುಹಾಸಿನಿ ಜಾಲವಾದಿ ರೈತರಿಗೆ ಸೂಚಿಸಿದರು.

ಇಲ್ಲಿಯ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆ, ಭಾರತೀಯ ಕೃಷಿ ಅನುಸಂದಾನ ಪರಿಷತ್‌ ಇವುಗಳ ಸಹಯೋಗದಲ್ಲಿ ಬೆಳಗಾವಿ, ಬಾಗಲಕೋಟೆ, ಧಾರವಾಡ ಹಾಗೂ ವಿಜಯಪುರ ಜಿಲ್ಲೆಗಳ ವಿವಿಧ ಗ್ರಾಮಗಗಳಲ್ಲಿ ಬೆಳೆದ ಬಾಳೆ ತೋಟಗಳಿಗೆ ಭೇಟಿ ನೀಡಿ ಹೆಚ್ಚಾಗಿ ಕಂಡುಬಂದಿರುವ ಸಿಗಾಟೋಕ ಎಲೆ ಚುಕ್ಕೆ ಮತ್ತು ಗಡ್ಡೆ ಕೊಳೆ ರೋಗಗಳಿಗೆ ರೈತರಿಗೆ ಸ್ಥಳದಲ್ಲಿ ಸೂಕ್ತ ಸಲಹೆ ನೀಡಿದರು.

ಬಾಳೆ ತಳಿಗಳಾದ ಗ್ರ್ಯಾಂಡ್‌ ನೈನ್‌ (ಜಿ–9) ಮತ್ತು ರಾಜಾಪುರ (ಜವಾರಿ) ತಳಿಗಳಿಗೆ ರೋಗವು ಹೆಚ್ಚಾಗಿ ಕಂಡು ಬಂದಿದ್ದು, ಮೊದಲಿಗೆ ಗಿಡದ ಹಳೆಯ ಎಲೆಗಳ ಮೇಲೆ ಹಳದಿ ಚುಕ್ಕೆಗಳು ಕಾಣಿಸಿಕೊಂಡು ನಂತರ ಕೆಂಪನೆಯ ಉದ್ದನೆಯ ಗೆರೆಗಳಾಗಿ ಪರಿವರ್ತನೆಗೊಂಡು ಕಂದುಬಣ್ಣಕ್ಕೆ ತಿರುಗುತ್ತದೆ. ನಂತರ ಕಪ್ಪನೆಯ ಚುಕ್ಕೆಗಳಾಗಿ ಮಾರ್ಪಟ್ಟು, ಈ ಚುಕ್ಕೆಗಳು ಕ್ರಮೇಣ ದೊಡ್ಡದಾಗುತ್ತವೆ ಎಂದು ತಿಳಿಸಿದರು.

ಹೀಗೆ ಸೃಷ್ಟಿಯಾದ ಚುಕ್ಕೆಗಳು ಒಂದಕ್ಕೊಂದು ಸೇರಿಕೊಂಡು ಎಲೆಗಳು ಒಣಗಲು ಪ್ರಾರಂಭವಾಗುತ್ತವೆ. ಇದರಿಂದ ಗೊನೆಗಳು ಬೆಳವಣಿಗೆ ಆಗದೇ ಗೊನೆಯ ಗಾತ್ರ ಕಡಿಮೆಯಾಗುತ್ತದೆ. ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳ ಕೆಲ ಭಾಗಗಳಲ್ಲಿ ರೈತರು ಹೆಚ್ಚು ಸಂಖ್ಯೆಯಲ್ಲಿ ಕೂಳೆ ಬೆಳೆಗಳನ್ನು ತೆಗೆಯುವುದರಿಂದ ವಾತಾವರಣದಲ್ಲಿ ಹೆಚ್ಚಿನ ಆರ್ದ್ರತೆ ಮತ್ತು ಮಳೆ ಆಗುತ್ತಿರುವುದರಿಂದ ರೋಗದ ತೀವ್ರತೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.

ನಿರ್ವಹಣೆ ಕ್ರಮಗಳು: ನೀರು ಚೆನ್ನಾಗಿ ಬಸಿದು ಹೋಗುವ ಮಣ್ಣನಲ್ಲಿ ಗಿಡಗಳನ್ನು ನಾಟಿ ಮಾಡಬೇಕು. ಶಿಫಾರಸು ಮಾಡಿದ ಅಂತರದಲ್ಲಿ ನಾಟಿ ಮಾಡಬೇಕು. ರೋಗಕ್ಕೆ ತುತ್ತಾದ ಒಣಗಿದ ಮತ್ತು ಕೆಳಗೆ ಬಿದ್ದ ಎಲೆಗಳನ್ನು ಎರಡು ಮತ್ತು ಮೂರು ತಿಂಗಳಿಗೊಮ್ಮೆ ನಾಶ ಪಡಿಸಬೇಕು. ಈಗಾಗಲೇ ರೋಗ ಕಂಡುಬಂದ ತೋಟಗಳಲ್ಲಿ ರೈತು ಪ್ರೊಪಿಕೊನೆಝೋಲ್‌ ಅರ್ಧ ಮಿ.ಲೀ. ಮತ್ತು ಪೆಟ್ರೋಲಿಯಂನಿಂದ ಕೂಡಿದ ಮಿನರಲ್‌ ಎಣ್ಣೆಯನ್ನು ನೀರಿಗೆ ಮಿಶ್ರಣ ಮಾಡಿ ರೋಗದ ತೀವ್ರತೆಗೆ ಅನುಗುಣವಾಗಿ 20 ದಿನಗಳಿಗೊಮ್ಮೆ ಮೂರು ಸಲ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡಾ. ಕಾಂತರಾಜು ವಿ. ಅವರ ಮೊ. 9448584749 ಸಂಪರ್ಕಿಸಲು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT