ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ರಸ್ತೆ ತುಂಬ ಗುಂಡಿಗಳ ದರ್ಬಾರ್‌..

Last Updated 7 ಅಕ್ಟೋಬರ್ 2017, 5:22 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ಪ್ರಮುಖ ರಸ್ತೆಯಾಗಿರುವ ಕಾಂಗ್ರೆಸ್‌ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿದ್ದು, ಸುಮಾರು 2.5 ಕಿ.ಮೀ ಉದ್ದದ ಈ ರಸ್ತೆಯಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ.

ರೈಲ್ವೆ ನಿಲ್ದಾಣದ ಬಳಿಯ ಗೋಗಟೆ ವೃತ್ತದಿಂದ 3ನೇ ರೈಲ್ವೆ ಗೇಟ್‌ವರೆಗೆ ಸಾಗುವ ಈ ರಸ್ತೆಯಲ್ಲಿ ಹಲವು ಗುಂಡಿಗಳು ಬಿದ್ದಿವೆ. ರಸ್ತೆಯ ಅಕ್ಕಪಕ್ಕದಲ್ಲಿಯೂ ಗುಂಡಿಗಳು ಬಿದ್ದಿವೆ. ಕೆಲವೆಡೆ ರಸ್ತೆಯ ಮೇಲ್ಮೈ ಕಿತ್ತುಹೋಗಿದ್ದು, ನಯವಾದ ವಾಹನ ಚಾಲನೆ ಸಾಧ್ಯವಾಗುತ್ತಿಲ್ಲ. ಕಾರು, ಬಸ್‌ಗಿಂತಲೂ ಬೈಕ್‌, ಸ್ಕೂಟರ್‌ ಹಾಗೂ ಆಟೊಗಳ ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಖಾನಾಪುರ, ಗೋವಾದಿಂದ ಆಗಮಿಸುವ ವಾಹನಗಳು ಈ ರಸ್ತೆಯ ಮೂಲಕವೇ ಬೆಳಗಾವಿ ನಗರವನ್ನು ಪ್ರವೇಶಿಸುತ್ತವೆ. ಭಾರಿ ಗಾತ್ರದ ವಾಹನಗಳು ಕೂಡ ಗಮನಾರ್ಹ ಸಂಖ್ಯೆಯಲ್ಲಿರುತ್ತವೆ. ಟಿಂಬರ್‌, ಮೆಟಲ್‌ಗಳು ಹಾಗೂ ಭಾರಿ ಗಾತ್ರದ ಯಂತ್ರೋಪಕರಣಗಳನ್ನು ಹೊತ್ತ ವಾಹನಗಳು ಈ ರಸ್ತೆಯ ಮೂಲಕವೇ ಸಂಚರಿಸುತ್ತವೆ. ಸ್ಥಳೀಯ ವಾಹನಗಳೂ ಸೇರಿದಂತೆ ಪ್ರತಿದಿನ ಸರಾಸರಿಯಾಗಿ 40,000 ವಾಹನಗಳು ಸಂಚರಿಸುತ್ತವೆ.

ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ– ಕಾಲೇಜುಗಳಿವೆ. ಶಾಪಿಂಗ್‌ ಕಾಂಪ್ಲೆಕ್ಸ್‌ಗಳಿವೆ. ರೈಲ್ವೆ ನಿಲ್ದಾಣವಿದೆ. ಇದರಿಂದ ಸಹಜವಾಗಿ ಜನ ಸಂಚಾರ ಹಾಗೂ ವಾಹನಗಳ ಸಂಚಾರ ಹೆಚ್ಚಾಗಿದೆ.

‘ಸಾವಿರಾರು ವಾಹನಗಳ ಸಂಚಾರದಿಂದ ಒತ್ತಡ ತಾಳದೇ ರಸ್ತೆ ಹಾಳಾಗಿದೆ. ಗುಂಡಿಗಳು ಬಿದ್ದಿವೆ. ಇದಲ್ಲದೇ ಕಳೆದ 2– 3 ತಿಂಗಳು ಸುರಿದ ಮಳೆಯಿಂದಾಗಿಯೂ ಗುಂಡಿಗಳು ಬಿದ್ದಿವೆ. ಗುಂಡಿಗಳ ನಡುವೆ ಬೈಕ್‌, ಸ್ಕೂಟರ್‌ ಓಡಿಸಲು ನಾವು ಸರ್ಕಸ್‌ ಮಾಡಬೇಕಾದಂತಹ ಪರಿಸ್ಥಿತಿ ಬಂದಿದೆ’ ಎಂದು ಬೈಕ್‌ ಸವಾರ ಅಜಿತ ಜಾಧವ ಅಭಿಪ್ರಾಯ ವ್ಯಕ್ತಪಡಿಸಿದರು.

ಧೂಳು: ‘ರಸ್ತೆ ಹಾಳಾಗಿರುವುದರಿಂದ ಧೂಳು ಎದ್ದಿದೆ. ಬೆಳಿಗ್ಗೆ 10 ಗಂಟೆ ಹಾಗೂ ಸಂಜೆ 5 ಗಂಟೆ ಸಮಯದಲ್ಲಿ ಅತಿ ಹೆಚ್ಚು ವಾಹನಗಳ ದಟ್ಟಣೆ ಇರುತ್ತದೆ. ಆ ವೇಳೆ ಧೂಳು ಹಾಗೂ ವಾಹನಗಳು ಹೊರಸೂಸುವ ಹೊಗೆ ಮುಖಕ್ಕೆ ರಾಚುತ್ತದೆ. ಸಂಜೆ ಮನೆಗೆ ಹೋಗಿ ಮುಖ ತೊಳೆದರೆ ನೀರಿಗೆ ಬಣ್ಣ ಬಂದಿರುತ್ತದೆ’ ಎಂದು ಬ್ಯಾಂಕ್‌ ಉದ್ಯೋಗಿ ಸುಷ್ಮಾ ಪಾಟೀಲ ಹೇಳಿದರು.

ಕಿತ್ತುಬರುತ್ತಿರುವ ಪೇವರ್ಸ್‌: ‘ರಸ್ತೆಯ ಕೆಲವು ಗುಂಡಿಗಳನ್ನು ಮುಚ್ಚಲು ಪೇವರ್ಸ್‌ಗಳನ್ನು ಹಾಕಲಾಗಿದೆ. ಆದರೆ, ಸತತ ವಾಹನಗಳ ಸಂಚಾರದಿಂದ ಇವು ಕೂಡ ಕಿತ್ತು ಬರುತ್ತಿವೆ. ಇವುಗಳ ಅಕ್ಕಪಕ್ಕದಲ್ಲಿ ಮಳೆ ನೀರು ನಿಲ್ಲುತ್ತಿದ್ದು, ಗುಂಡಿಯ ಆಳ–ಅಗಲ ವಿಸ್ತಾರವಾಗುತ್ತ ಸಾಗಿದೆ. ಈ ಗುಂಡಿಗಳನ್ನು ತಪ್ಪಿಸಲು ಹೋಗಿ ಕೆಲವೊಮ್ಮೆ ವಾಹನಗಳು ಅಪಘಾತಕ್ಕೀಡಾಗಿವೆ’ ಎನ್ನುತ್ತಾರೆ ರಸ್ತೆಯ ಪಕ್ಕದಲ್ಲಿ ಹಣ್ಣಿನ ರಸ ಮಾರಾಟ ಮಾಡುತ್ತಿರುವ ರಫೀಕ್‌.

ಇನ್ನೂ ಹೆಚ್ಚಾಗಬಹುದು: ಪ್ರಸ್ತುತ ರೈಲ್ವೆ ನಿಲ್ದಾಣದ ಬಳಿಯಿರುವ ಮೇಲ್ಸೇತುವೆ ತೆರವುಗೊಳಿಸುವ ಬಗ್ಗೆ ಚರ್ಚೆ ನಡೆದಿದೆ. ಇದನ್ನು ತೆರವುಗೊಳಿಸಿದರೆ ಅನಗೋಳ, ಹಿಂದವಾಡಿ, ಶಹಾಪುರ, ವಡಗಾಂವ, ಖಾಸಬಾಗ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳಬೇಕಾದ ವಾಹನಗಳು ಕೂಡ ಕಾಂಗ್ರೆಸ್‌ ರಸ್ತೆಯನ್ನೇ ಅವಲಂಬಿಸಬೇಕಾಗುತ್ತದೆ. ಆಗ ವಾಹನಗಳ ದಟ್ಟಣೆ ಇನ್ನೂ ಹೆಚ್ಚಾಗಲಿದೆ ಎನ್ನುವ ಆತಂಕವನ್ನು ವಾಹನ ಸವಾರರು ಹೊರಗೆಡವಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT