ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಬಿಟ್ಟು ಮೆಕ್ಕೆಜೋಳ ಬೆಳೆದರು..!

Last Updated 7 ಅಕ್ಟೋಬರ್ 2017, 5:28 IST
ಅಕ್ಷರ ಗಾತ್ರ

ಸಿರುಗುಪ್ಪ: ಭತ್ತದ ಕಣಜವೆಂದೇ ಪ್ರಸಿದ್ಧಿಯಾದ ಸಿರುಗುಪ್ಪ ತಾಲ್ಲೂಕಿನಲ್ಲಿ ಮಳೆಯ ಅಭಾವ ಮತ್ತು ನೀರಿನ ಕೊರತೆಯಿಂದ ಹಲವು ರೈತರು ಪರ್ಯಾಯ ಬೆಳೆಗಳತ್ತ ಒಲವು ತೋರುತ್ತಿದ್ದಾರೆ.ತಾಲ್ಲೂಕಿನ ಹೆರಕಲ್‌ ಗ್ರಾಮದ ಯುವ ರೈತ ಬಿ.ಎಂ.ಬಸವರಾಜಸ್ವಾಮಿ ಭತ್ತ ಬಿಟ್ಟು ಮೆಕ್ಕೆಜೋಳ ಬೆಳೆದು ಗಮನ ಸೆಳೆದಿದ್ದಾರೆ.

ಎಸ್‌ಎಸ್‌ಎಲ್‌ಸಿ ಓದಿರುವ ಅವರು ಜೀವನ ನಿರ್ವಹಣೆಗೆ ಪಟ್ಟಣಕ್ಕೆ ವಲಸೆ ಬಂದು ಕುಡಿಯುವ ನೀರಿನ ಯಂತ್ರಗಳ ದುರಸ್ತಿ ಮಾಡುವ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು, ಆದರೆ ಲಾಭ ಮತ್ತು ತೃಪ್ತಿ ಕಾಣದೇ ಕೃಷಿಯತ್ತ ಒಲವು ತೋರಿ ತಮಗಿರುವ 4.80 ಎಕರೆಯಲ್ಲಿ ಬೆಳೆಸಿರುವ ಅಂಜೂರ ತೋಟವನ್ನು ನೋಡಿಕೊಳ್ಳಲೆಂದು ವಾಪಸು ಬಂದರು.

‘ಅಂಜೂರದ ಗಿಡಗಳು 11 ವರ್ಷ ಹಳೆಯದಾದ ಕಾರಣ ಇಳುವರಿ ಗಣನೀಯವಾಗಿ ಕುಸಿದಿತ್ತು. ಜೊತೆಗೆ ಖರ್ಚು ಹೆಚ್ಚಾಗುತ್ತಿರುವುದನ್ನು ಮನಗಂಡು, ಯಾವ ಬೆಳೆ ಬೆಳೆದರೆ ಸೂಕ್ತ ಎಂದು ಸಿರುಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಬಸವಣ್ಣೆಪ್ಪ ಅವರನ್ನು ಸಂಪರ್ಕಿಸಿದೆ. ಅವರು ಮೆಕ್ಕೆ ಜೋಳ ಬೆಳೆಯುವಂತೆ ಸಲಹೆ ನೀಡಿದರು’ ಎಂದು ಬಸವರಾಜ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎನ್.ಕೆ -6240 ಮತ್ತು ಹೈಟೆಕ್‌ 5101 ಅನ್ನು ಅಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಿದೆ. ನಂತರ ಕಳೆ ನಾಶಕವನ್ನು ಬಳಸಿದೆ. ಯೂರಿಯಾ, ಡಿ.ಎ.ಪಿ ಮತ್ತು ಕಾಂಪ್ಲೆಕ್ಸ್‌ ರಸಗೊಬ್ಬರವನ್ನು ಮೂರು ಸಲ ಪೂರೈಸಿದೆ. ಉತ್ತಮ ಇಳುವರಿ ದೊರಕುವ ನಿರೀಕ್ಷೆ ಇದೆ’ ಎಂದರು. ಅವರ ಜಮೀನಿಗೆ ಸುತ್ತಮುತ್ತಲಿನ ರೈತರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಪರ್ಯಾಯ ಬೆಳೆ: ‘ಭತ್ತಕ್ಕೆ ಪರ್ಯಾಯವಾದ ಬೆಳೆಗಳತ್ತ ರೈತರು ಗಮನ ಹರಿಸಲೇಬೇಕಾದ ಕಾಲ ಘಟ್ಟ ಇದು.ಮಳೆಯ ಅನಿಶ್ಚಿತತೆ ಮತ್ತು ಕಾಲುವೆ ನೀರು ಸಕಾಲಕ್ಕೆ ದೊರಕದ ಸನ್ನಿವೇಶದಲ್ಲಿ ರೈತರು ಹೆಚ್ಚಿ ಜಾಣರಾಗಬೇಕು. ಪ್ರಾಯೋಗಿಕ ನೆಲೆಯಲ್ಲಿ ಚಿಂತಿಸಿ ಮುಂದುವರಿಯಬೇಕು’ ಎಂಬುದು ಡಾ. ಬಸವಣ್ಣೆಪ್ಪ ಅವರ ಸಲಹೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT