ಕರೆನ್ಸಿ ಖರ್ಚಾಯ್ತು, ಅಡುಗೆ ಉಳಿದೋಯ್ತು!

ಗುರುವಾರ , ಜೂನ್ 20, 2019
26 °C

ಕರೆನ್ಸಿ ಖರ್ಚಾಯ್ತು, ಅಡುಗೆ ಉಳಿದೋಯ್ತು!

Published:
Updated:
ಕರೆನ್ಸಿ ಖರ್ಚಾಯ್ತು, ಅಡುಗೆ ಉಳಿದೋಯ್ತು!

ಚಿಕ್ಕಬಳ್ಳಾಪುರ: ‘ಗರ್ಭಿಣಿಯರು ಮತ್ತು ಬಾಣಂತಿಯರಿಗೆ ದುಂಬಾಲು ಬಿದ್ದರೂ ಊಟಕ್ಕೆ ಬರುತ್ತಿಲ್ಲ. ಕರೆ ಮಾಡಿ, ಮಾಡಿ ನಮ್ಮ ಮೊಬೈಲ್‌ ಕರೆನ್ಸಿ ಖರ್ಚಾಗುತ್ತಿದೆ ಹೊರತು ಸಿದ್ಧಪಡಿಸಿದ ಅಡುಗೆ ಉಣ್ಣುವವರಿಲ್ಲದೆ ತಿಪ್ಪೆಗೆಸೆಯುವ ಸ್ಥಿತಿ ಬಂದಿದೆ’. –ಇದು ‘ಮಾತೃಪೂರ್ಣ’ ಯೋಜನೆ ಕುರಿತು ಜಿಲ್ಲೆಯ ಬಹುತೇಕ ಅಂಗನವಾಡಿ ಕಾರ್ಯಕರ್ತೆಯರ ಅಳಲು.

ಪ್ರತಿ ಅಂಗನವಾಡಿ ವ್ಯಾಪ್ತಿಯಲ್ಲಿ ಕನಿಷ್ಠ 20 ರಿಂದ 30 ಜನ ಯೋಜನೆಯ ಫಲಾನುಭವಿಗಳಿದ್ದಾರೆ. ಆದರೆ ಅಂಗನವಾಡಿಗೆ ಬಂದು ಊಟ ಮಾಡುವವರ ಸಂಖ್ಯೆ 5ರ ಗಡಿ ದಾಟುತ್ತಿಲ್ಲ. ಹೀಗಾಗಿ ಅವರ ಮನವೊಲಿಸುವ ಕೆಲಸ ಅಂಗನವಾಡಿ ಕಾರ್ಯಕರ್ತೆಯರ ಹೆಗಲೇರಿದೆ.

‘ನನ್ನ ಕೇಂದ್ರದ ವ್ಯಾಪ್ತಿಯಲ್ಲಿ 17 ಗರ್ಭಿಣಿಯರು, 11 ಬಾಣಂತಿಯರು ಇದ್ದಾರೆ. ಅವರಲ್ಲಿ ನಿತ್ಯ 4 ಜನ ಊಟಕ್ಕೆ ಬಂದರೆ ಹೆಚ್ಚು. ಇವರಿಗೂ ನಾನೇ ಫೋನ್‌ ಮಾಡಿ ಬಲವಂತ ಮಾಡಬೇಕು. ಇಲ್ಲವಾದರೆ ಅವರೂ ಬರುವುದಿಲ್ಲ. ಮಾಡಿಸಿದ ಅಡುಗೆಯೂ ಖರ್ಚಾಗುತ್ತಿಲ್ಲ. ಹೀಗಾಗಿ ಫಲಾನುಭವಿಗಳು ಊಟಕ್ಕೆ ಬರುವುದನ್ನು ಖಾತ್ರಿಪಡಿಸಿಕೊಂಡು ಅಡುಗೆ ಮಾಡಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದ ಕೆಳಗಿನ ತೋಟದ ಅಂಗನವಾಡಿ ಕಾರ್ಯಕರ್ತೆ ಚಂದ್ರಮ್ಮ.

‘ಅನೇಕರು ಸಂಕೋಚದಿಂದ ಊಟಕ್ಕೆ ಬರಲು ಒಪ್ಪುತ್ತಿಲ್ಲ. ಕೆಲಸಕ್ಕೆ ಹೋಗುವವರಂತೂ ನಮ್ಮನ್ನೂ ಕರೆಯಬೇಡಿ ಎನ್ನುತ್ತಿದ್ದಾರೆ. ಹೀಗಾದರೆ ನಾವು ಅಡುಗೆ ಮಾಡಿಟ್ಟು ಏನು ಮಾಡೋಣ. ಮಾಡಿದ ಅಡುಗೆಯನ್ನು ತಿಪ್ಪೆಗೆ ಚೆಲ್ಲುವ ಸ್ಥಿತಿ ಬಂದಿದೆ’ ಎಂದು ತಿಪ್ಪೆನಹಳ್ಳಿ ಅಂಗನವಾಡಿ ಕೇಂದ್ರವೊಂದರ ಕಾರ್ಯಕರ್ತೆ ಬೇಸರ ವ್ಯಕ್ತಪಡಿಸಿದರು.

ಪಡಿತರ ಅಕ್ಕಿ ಊಟಕ್ಕೆ ಬರ್ತಾರಾ?: ‘ಎಷ್ಟೇ ಬಡವರಾದರೂ ಬಾಣಂತಿಯರಿಗೆ ಸಣ್ಣಕ್ಕಿ ಅಥವಾ ಗುಣಮಟ್ಟದ ಅಕ್ಕಿಯಿಂದ ಮಾಡಿದ ಅನ್ನ ನೀಡುತ್ತಾರೆ. ಅಂತಹದ್ದರಲ್ಲಿ ಪಡಿತರ ಅಕ್ಕಿಯಿಂದ ಮಾಡಿದ ಊಟಕ್ಕೆ ಯಾರು ತಾನೇ ಬಂದಾರು? ಒಬ್ಬ ಫಲಾನುಭವಿಗೆ ಸರ್ಕಾರ 50 ಗ್ರಾಂ ತರಕಾರಿ ನಿಗದಿ ಮಾಡಿದೆ. ಅಂದರೆ ಅರ್ಧ ಕೆ.ಜಿ.ತರಕಾರಿಯಲ್ಲಿ 10 ಜನರಿಗೆ ಊಟ ಸಿದ್ಧಪಡಿಸಬೇಕು.

ಇದ್ಯಾವ ಸೀಮೆಯ ಲೆಕ್ಕ? ಅಡುಗೆ ರುಚಿಯಾದರೆ ತಾನೇ ಫಲಾನುಭವಿಗಳು ಎರಡನೇ ಬಾರಿ ಊಟಕ್ಕೆ ಬರುವುದು. ಬೇಡದ ಯೋಜನೆ ತಂದು ಫಲಾನುಭವಿಗಳಿಗೆ ಇರುಸುಮುರುಸು ಉಂಟು ಮಾಡುತ್ತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತೆ ಅನಿತಾ ಅಸಮಾಧಾನ ವ್ಯಕ್ತಪಡಿಸಿದರು.

’ಶುದ್ಧ ಕುಡಿಯುವ ನೀರು, ಸ್ಥಳಾವಕಾಶ, ಶೌಚಾಲಯದಂತಹ ಮೂಲಸೌಕರ್ಯಗಳದೇ ದೊಡ್ಡ ಸಮಸ್ಯೆಯಾಗಿದೆ. ಪಾತ್ರೆ, ಪಡಿತರ ಪೂರೈಸದೆ, ತರಕಾರಿ, ಮೊಟ್ಟೆಗೆ ಹಣ ನೀಡದೆ, ಊಟದ ವಿವರದ ಪಟ್ಟಿ ಕೂಡ ನೀಡದೆ ತರಾತುರಿಯಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ.ಅನೇಕ ಕಡೆಗಳಲ್ಲಿ ಊಟಕ್ಕೆ ಕುಳಿತುಕೊಳ್ಳಲು ಕೂಡ ಸ್ಥಳವಿಲ್ಲ.

ನೆರೆಹೊರೆಯವರಲ್ಲಿ ಕಾಡಿಬೇಡಿ ನೀರು ಸಂಗ್ರಹಿಸಿಕೊಳ್ಳುತ್ತಿದ್ದೇವೆ. ಕೆಲವು ಕಡೆಗಳಲ್ಲಿ ಜಮೀನು, ತೋಟಗಳಿಗೆ ತೆರಳಿ ನೀರು ತರುತ್ತಿದ್ದಾರೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry